
ಪಿಟಿಐ ನವದೆಹಲಿ (ಜುಲೈ.30): ಭಾರತವು ಪಾಕಿಸ್ತಾನದ ಮೇಲೆ ನಡೆಸಿದ ಆಪರೇಷನ್ ಸಿಂದೂರವನ್ನು ಬಲವಾಗಿ ಸಮರ್ಥಿಸಿಕೊಂಡು ಪಾಕಿಸ್ತಾನ ಹಾಗೂ ಪ್ರತಿಪಕ್ಷಗಳ ಮೇಲೆ ಹರಿತ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, ‘ಭಯೋತ್ಪಾದನೆ ವಿರುದ್ಧ ಭಾರತ ತನ್ನ ರಕ್ಷಣೆಗೆ ಕ್ರಮ ಕೈಗೊಳ್ಳುವುದನ್ನು ಜಗತ್ತಿನ ಯಾವುದೇ ದೇಶ ತಡೆದಿಲ್ಲ’ ಎಂದಿದ್ದಾರೆ.
ಈ ಮೂಲಕ ಪಾಕಿಸ್ತಾನ ಮನವಿ ಮಾಡಿದ ನಂತರ ಮೇ 1 ರಂದು ಕದನ ವಿರಾಮಕ್ಕೆ ಒಪ್ಪಿಗೆ ನೀಡಲಾಯಿತು ಎಂಬ ಸರ್ಕಾರದ ನಿಲುವನ್ನು ಪುನರುಚ್ಚರಿಸಿದ್ದಾರೆ ಹಾಗೂ ‘ನಾನು ಯುದ್ಧ ನಿಲ್ಲಿಸಲು ಮಧ್ಯಸ್ಥಿಕೆ ವಹಿಸಿದ್ದೆ’ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿರುವ 27 ಹೇಳಿಕೆಗಳನ್ನು ಪರೋಕ್ಷವಾಗಿ ತಿರಸ್ಕರಿಸಿದ್ದಾರೆ. ಇದೇ ವೇಳೆ, ಟ್ರಂಪ್ ಹೇಳಿಕೆಯನ್ನು ಮುಂದಿಟ್ಟುಕೊಂಡು ಸ್ಪಷ್ಟನೆಗೆ ಆಗ್ರಹಿಸುತ್ತಿದ್ದ ಕಾಂಗ್ರೆಸ್ ಹಾಗೂ ಇತರ ವಿಪಕ್ಷಗಳಿಗೂ ಎದಿರೇಟು ನೀಡಿದ್ದಾರೆ.
ಆಪರೇಷನ್ ಸಿಂದೂರದ ಮೇಲೆ 2 ದಿನದಿಂದ ಲೋಕಸಭೆಯಲ್ಲಿ ನಡೆದ ಸುದೀರ್ಘ ಚರ್ಚೆಗೆ ಉತ್ತರಿಸಿ ಮಾತನಾಡಿದ ಮೋದಿ, ‘ಆಪರೇಷನ್ ಸಿಂದೂರಕ್ಕೆ ಇಡೀ ವಿಶ್ವದಿಂದ ಬೆಂಬಲ ಸಿಕ್ಕಿತು. ಆದರೆ ಕಾಂಗ್ರೆಸ್ ದೇಶದ ಸೈನಿಕರ ಶೌರ್ಯದ ಹಿಂದೆ ನಿಲ್ಲಲಿಲ್ಲ. ಕಾಂಗ್ರೆಸ್ ಈಗ ಮಾತ್ರ ಅಲ್ಲ, ಕಾರ್ಗಿಲ್ ಯುದ್ಧದಲ್ಲಿ ಭಾರತ ಗೆದ್ದಾಗಲೂ ಸಂಭ್ರಮಿಸಿರಲಿಲ್ಲ’ ಎಂದು ಕಿಡಿಕಾರಿದರು.
ಯಾವುದೇ ದೇಶ ತಡೆದಿಲ್ಲ:
‘ಭಯೋತ್ಪಾದನೆಯ ವಿರುದ್ಧದ ರಕ್ಷಣೆಗಾಗಿ ಭಾರತ ಯಾವುದೇ ಕ್ರಮ ಕೈಗೊಳ್ಳುವುದನ್ನು ದೇಶ ತಡೆದಿಲ್ಲ. ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ಪರವಾಗಿ ಕೇವಲ 3 ದೇಶಗಳು ಮಾತನಾಡಿವೆ. ಭಾರತಕ್ಕೆ ಇಡೀ ಪ್ರಪಂಚದ ಬೆಂಬಲ ಸಿಕ್ಕಿತು. ಮೇ 9ರ ರಾತ್ರಿ, ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ನನ್ನೊಂದಿಗೆ ಮಾತನಾಡಿದರು. ಪಾಕಿಸ್ತಾನ ದೊಡ್ಡ ದಾಳಿಯನ್ನು ಯೋಜಿಸುತ್ತಿದೆ ಎಂದು ಅವರು ನನಗೆ ಹೇಳಿದರು. ಇದು ಪಾಕಿಸ್ತಾನದ ಉದ್ದೇಶವಾಗಿದ್ದರೆ, ಅದು ಭಾರೀ ಬೆಲೆ ತೆರಬೇಕಾಗುತ್ತದೆ ಎಂಬುದು ನನ್ನ ಉತ್ತರವಾಗಿತ್ತು. ಪಾಕಿಸ್ತಾನ ಭಾರತದ ಮೇಲೆ ದಾಳಿ ಮಾಡಿದರೆ, ನಮ್ಮ ದಾಳಿ ಇನ್ನೂ ದೊಡ್ಡದಾಗಿರುತ್ತದೆ. ಏಕೆಂದರೆ ನಾವು ಗುಂಡುಗಳಿಗೆ ಫಿರಂಗಿಗಳಿಂದ ಪ್ರತಿಕ್ರಿಯಿಸುತ್ತೇವೆ ಎಂದು ಅಮೆರಿಕದ ಉಪಾಧ್ಯಕ್ಷರಿಗೆ ಹೇಳಿದ್ದೆವು’ ಎಂದರು.
‘ಬಳಿಕ ನಾವು ಪಾಕ್‌ಗೆ ದಿಟ್ಟ ಉತ್ತರ ನೀಡಿದೆವು. ಅವರ ಉಗ್ರ ನೆಲೆಗಳನ್ನು ನಾಶಪಡಿಸಿದೆವು. ಅವರ 1000 ಕ್ಷಿಪಣಿ/ಡ್ರೋನ್‌ಗಳನ್ನು ನಮ್ಮ ಕ್ಷಿಪಣಿ ನಾಶಕ ವ್ಯವಸ್ಥೆಗಳು ಧ್ವಂಸಪಡಿಸಿದವು. ಭಾರಿ ನಷ್ಟವನ್ನು ಅನುಭವಿಸಿದ ನಂತರ, ಪಾಕ್ ಡಿಜಿಎಂಒ (ಮಿಲಿಟರಿ ಮಹಾನಿರ್ದೇಶಕರು) ಬಂದು ‘ನಮ್ಮ ಮೇಲೆ ಇನ್ನು ದಾಳಿ ಮಾಡಬೇಡಿ. ಇನ್ನು ತಡೆದುಕೊಳ್ಳಲು ಆಗದು’ ಎಂದು ಬೇಡಿಕೊಂಡರು. ಆಗ ಭಾರತ ದಾಳಿ ನಿಲ್ಲಿಸಿತು. ಯಾವುದೇ ದೇಶದ ಯಾವುದೇ ನಾಯಕರು ಭಾರತದ ಬಳಿ ಕಾರ್ಯಾಚರಣೆಯನ್ನು ನಿಲ್ಲಿಸುವಂತೆ ಕೇಳಿಲ್ಲ’ ಎಂದು ಮೋದಿ ಸ್ಪಷ್ಟಪಡಿಸಿದರು.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ:
‘ಆದರೆ ಕಾಂಗ್ರೆಸ್ ನಮ್ಮ ಸೈನಿಕರ ಶೌರ್ಯವನ್ನು ಬೆಂಬಲಿಸದಿರುವುದು ದುರದೃಷ್ಟಕರ. ಕಾಂಗ್ರೆಸ್ ನಾಯಕರು ರಾಜಕೀಯ ಲಾಭಕ್ಕಾಗಿ ನನ್ನನ್ನು ಗುರಿಯಾಗಿಸಿಕೊಂಡರು. ಅಲ್ಲದೆ, ಪಹಲ್ಗಾಂ ದಾಳಿಕೋರರನ್ನು ಹತ್ಯೆಗೈದ ಆಪರೇಷನ್ ಮಹಾದೇವದ ಸಮಯವನ್ನೂ ಕೆಲವು ವಿಪಕ್ಷ ನೇತಾರರು (ಅಖಿಲೇಶ್ ಯಾದವ್) ಪ್ರಶ್ನಿಸಿದರು. ಆದರೆ ಅವರ ಕ್ಷುಲ್ಲಕ ಹೇಳಿಕೆಗಳು ನಮ್ಮ ಧೈರ್ಯಶಾಲಿ ಸೈನಿಕರನ್ನು ನಿರುತ್ಸಾಹಗೊಳಿಸಿದವು’ ಎಂದು ಅವರು ಬೇಸರಿಸಿದರು.
‘ನಮ್ಮ ಕಾರ್ಯಾಚರಣೆಗಳು ಸಿಂಧೂರ್‌ನಿಂದ ಸಿಂಧೂ (ಸಿಂಧೂ ಜಲ ಒಪ್ಪಂದ) ವರೆಗೆ ಇವೆ. ಯಾವುದೇ ದುಸ್ಸಾಹಸಕ್ಕೆ ತಾನು ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ಪಾಕಿಸ್ತಾನಕ್ಕೆ ತಿಳಿದಿದೆ. ಈ ಮುನ್ನ ಭಯೋತ್ಪಾದಕ ದಾಳಿಗಳನ್ನು ನಡೆಸಲಾಗಿತ್ತು ಮತ್ತು ತಮಗೆ ಏನೂ ಆಗುವುದಿಲ್ಲ ಎಂದು ದಾಳಿಯ ಸೂತ್ರಧಾರಿಗಳಿಗೆ ತಿಳಿದಿತ್ತು. ಆದರೆ ಈಗ ಭಾರತ ಅವರ ಮೇಲೆ ದಾಳಿ ಮಾಡುತ್ತದೆ ಎಂದು ಅವರಿಗೆ ತಿಳಿದಿದೆ’ ಎಂದ ಮೋದಿ, ‘ಕಾಂಗ್ರೆಸ್ ಅವಧಿಯಲ್ಲಿ ಉಗ್ರ ದಾಳಿಗಳ ವಿರುದ್ಧ ಪ್ರತೀಕಾರ ಕ್ರಮ ಕೈಗೊಂಡಿರಲಿಲ್ಲ’ ಎಂದು ಪರೋಕ್ಷವಾಗಿ ನುಡಿದರು.
ಪಾಕ್ ವಾಯುನೆಲೆ ಇನ್ನೂ ಐಸಿಯುನಲ್ಲಿ:
‘ಏ.22ರ ಪಹಲ್ಗಾಂ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ನಾವು ಪಾಕಿಸ್ತಾನದೊಳಗಿನ ಭಯೋತ್ಪಾದಕ ತಾಣಗಳನ್ನು 22 ನಿಮಿಷಗಳಲ್ಲಿ ನಾಶಪಡಿಸಿದೆವು. ಭಾರತದ ಕ್ರಮದ ಬಗ್ಗೆ ಪಾಕಿಸ್ತಾನಕ್ಕೆ ಸ್ವಲ್ಪ ಸೂಚನೆ ಇತ್ತು ಮತ್ತು ಅದು ಪರಮಾಣು ಬೆದರಿಕೆಗಳನ್ನು ನೀಡಲು ಪ್ರಾರಂಭಿಸಿತ್ತು. ಆದರೆ ಭಯೋತ್ಪಾದಕ ಗುರಿಗಳ ಮೇಲೆ ದಾಳಿಯಾದಾಗ ಅದಕ್ಕೆ ಏನೂ ಮಾಡಲು ಸಾಧ್ಯವಾಗಲಿಲ್ಲ’ ಎಂದು ಮೋದಿ ಅಭಿಪ್ರಾಯಪಟ್ಟರು.
‘ಭಾರತ ನಿರ್ಮಿತ ಡ್ರೋನ್‌ಗಳು ಮತ್ತು ಕ್ಷಿಪಣಿಗಳು ಸೇನಾ ಕಾರ್ಯಾಚರಣೆ ವೇಳೆ ಪಾಕಿಸ್ತಾನದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳ ಸಾಮರ್ಥ್ಯಗಳನ್ನು ಬಹಿರಂಗಪಡಿಸಿದವು. ಅವರ 1000 ಡ್ರೋನ್‌ಗಳನ್ನು ನಮ್ಮ ಕ್ಷಿಪಣಿ ನಾಶಕ ವ್ಯವಸ್ಥೆಗಳು ನಾಶ ಮಾಡಿದವು. ಆಪರೇಷನ್ ಸಿಂದೂರದ ಸಮಯದಲ್ಲಿ ಜಗತ್ತು ‘ಸ್ವಾವಲಂಬಿ ಭಾರತದ ಶಕ್ತಿ’ಯನ್ನು ಕಂಡಿತು’ ಎಂದರು.
‘ಭಾರತದ ದಾಳಿಗೊಳಗಾದ ಪಾಕಿಸ್ತಾನಿ ವಾಯುನೆಲೆಗಳು ಇನ್ನೂ ಐಸಿಯುನಲ್ಲಿವೆ ಮತ್ತು ಏ.22ರ ಉಗ್ರ ದಾಳಿಯ ಮಾಸ್ಟರ್ ಮೈಂಡ್‌ಗಳು ಇನ್ನೂ ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆಯುತ್ತಿದ್ದಾರೆ’ ಎಂದು ಪಾಕಿಸ್ತಾನಕ್ಕೆ ಕುಟುಕಿದರು.
‘ಪಾಕಿಸ್ತಾನದ ಪರಮಾಣು ವಂಚನೆಯನ್ನು ಭಾರತ ಖಂಡಿಸಿದೆ ಮತ್ತು ನಾವು ಪರಮಾಣು ಬೆದರಿಕೆಗೆ ಮಣಿಯುವುದಿಲ್ಲ ಎಂದು ಜಗತ್ತಿಗೆ ತೋರಿಸಿದೆ’ ಎಂದು ಪ್ರಧಾನಿ ಹೇಳಿಕೊಂಡರು.
‘ಪಹಲ್ಗಾಂ ದಾಳಿಯು ಭಾರತದಲ್ಲಿ ಗಲಭೆಗಳನ್ನು ಪ್ರಚೋದಿಸುವ ಮತ್ತು ದೇಶದ ಏಕತೆ ಆ ಪ್ರಯತ್ನವನ್ನು ವಿಫಲಗೊಳಿಸುವ ಪಿತೂರಿಯಾಗಿತ್ತು. ಈ ಸಂಸತ್ತಿನ ಅಧಿವೇಶನವನ್ನು ವಿಜಯೋತ್ಸವ (ವಿಜಯದ ಆಚರಣೆ) ಎಂದು ನಾನು ಹೇಳಬೇಕಿದೆ. ಏಕೆಂದರೆ ಭಯೋತ್ಪಾದನೆಯ ಪ್ರಧಾನ ಕಚೇರಿಯನ್ನು ನಾವು ನಾಶಪಡಿಸಿದೆವು’ ಎಂದು ಅವರು ಹೇಳಿದರು.
ಸೇನೆಗೆ ಸ್ವಾತಂತ್ರ್ಯ:
‘ನಮ್ಮ ಸಶಸ್ತ್ರ ಪಡೆಗಳ ಸಾಮರ್ಥ್ಯದ ಬಗ್ಗೆ ನಮಗೆ ಸಂಪೂರ್ಣ ನಂಬಿಕೆ ಇದೆ ಮತ್ತು ಅವರಿಗೆ ಪ್ರತಿಕ್ರಿಯಿಸಲು ಮುಕ್ತ ಹಸ್ತ ನೀಡಲಾಯಿತು. ನಮ್ಮ ಪಡೆಗಳು ಯಾವ ರೀತಿ ಪಾಠ ಕಲಿಸಿದವು ಎಂದರೆ ಭಯೋತ್ಪಾದನೆಯ ಮಾಸ್ಟರ್‌ಗಳಿಗೆ ಈಗಲೂ ನಿದ್ದೆ ಬರುತ್ತಿಲ್ಲ. ಆ ರೀತಿ ಅವರ ಕಲ್ಪನೆಗೂ ಮೀರಿದ ಸೂಕ್ತ ಪಾಠವನ್ನು ಕಲಿಸಿದೆವು’ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ