
ಪಿಟಿಐ ನವದೆಹಲಿ: ಪಹಲ್ಗಾಂ ದಾಳಿ ವಿಚಾರ ಮುಂದಿಟ್ಟುಕೊಂಡು ರಾಜ್ಯ ಸಭೆಯಲ್ಲಿ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರ ಸರ್ಕಾ ರ ಹಾಗೂ ಪ್ರಧಾನಿ ಮೋದಿ ಅವರ ವಿರುದ್ಧ ತೀವ್ರ ಹರಿಹಾಯ್ದಿದ್ದಾರೆ. 'ನಾವು ಪಾಕಿಸ್ತಾನವನ್ನು ಖಂಡಿಸುತ್ತಿದ್ದರೆ ನೀವು ಅವರನ್ನು ಅಪ್ಪಿಕೊಳ್ಳುತ್ತೀರಿ' ಎಂದು ಕಿಡಿಕಾರಿದ ಖರ್ಗೆ, 'ಪಹಲ್ಲಾಂ ದಾಳಿಗೆ ಕಾರಣವಾದ ಭದ್ರತಾ ವೈಫಲ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ಹೊಣೆ ಹೊರಬೇಕು ಮತ್ತು ಈ ಸಂಬಂಧ ಉತ್ತರದಾಯಿತ್ವ ನಿಗದಿ ಯಾಗಬೇಕು' ಎಂದು ಆಗ್ರಹಿಸಿದ್ದಾರೆ.
ಆಪರೇಷನ್ ಸಿಂದೂರ ಕುರಿತು ರಾಜ್ಯ ಸಭೆಯಲ್ಲಿ ಮಂಗಳವಾರ ನಡೆದ ವಿಶೇಷ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಹರಿಹಾಯ್ದ ಅವರು 2015ರ ಪ್ರಧಾನಿ ಮೋದಿ ಅವರ ಪೂರ್ವನಿಯೋಜಿತವಲ್ಲದ ಪಾಕಿಸ್ತಾನ ಭೇಟಿ ಕುರಿತೂ ಕಿಡಿಕಾರಿದರು.
'ಇಡೀ ದೇಶದ ಜತೆಗೆ ಈ (ಪಹಲ್ಗಾಂ) ಬರ್ಬರ ದಾಳಿ ಹಾಗೂ ಪಾಕಿಸ್ತಾನ ಭಯೋತ್ಪಾದನೆಗೆ ನೀಡುತ್ತಿರುವ ಬೆಂಬಲವನ್ನೂ ಖಂಡಿಸುತ್ತೇನೆ. ನಾವು ಹಿಂದೆಯೂ ಪಾಕಿಸ್ತಾನವನ್ನು ಖಂಡಿಸಿದ್ದೇವೆ. ಆದರೆ ಇಲ್ಲಿ ನಾವು ಪಾಕಿಸ್ತಾವನ್ನು ಖಂಡಿಸುತ್ತಿದ್ದರೆ,ನೀವು (ಮೋದಿ) ಅವರು ಆಯೋಜಿಸಿದ್ದ ಔತಣಕೂಟದಲ್ಲಿ ಪಾಲ್ಗೊಂಡು ಅಪ್ಪುಗೆ ನೀಡುತ್ತೀರಿ. ನಿಮಗೆ ಕರೆಯದೆ ಹೋಗುವ ಅಭ್ಯಾಸವೇ ಇದೆ. ಈ ಸದನದಲ್ಲಿ ಉಪಸ್ಥಿತರಿರುವ ಯಾವ ಸದಸ್ಯರು ಪಾಕಿಸ್ತಾನಕ್ಕೆ ಹೋಗಿಲ್ಲ. ಆದರೆ ವಿಶ್ವಗುರುಮಾತ್ರ ಅಲ್ಲಿಗೆ ಹೋಗಿ ಬಂದಿದ್ದಾರೆ' ಎಂದು ಕಾಲೆಳೆದರು.
ದಾಳಿ ಬಗ್ಗೆ ಮೊದಲೇ ಗೊತ್ತಿತ್ತೇ?: ಖರ್ಗೆ
'ಪಹಲ್ಲಾಂ ದಾಳಿಯ ಮೂರು ದಿನಗಳ ಮೊದಲು ಮೋದಿ ಅವರ ಕಾಶ್ಮೀರ ಭೇಟಿ ರದ್ದು ಮಾಡಲಾಗಿತ್ತು. ಈ ವಿಚಾರದ ಕುರಿತು ನಾನು ಹಿಂದೆಯೂ ಪ್ರಸ್ತಾಪಿಸಿದ್ದೆ. ಆದರೂ ನನಗೆ ಉತ್ತರ ಸಿಕ್ಕಿಲ್ಲ. ಕೇಂದ್ರ ಸರ್ಕಾರಕ್ಕೆ ಉಗ್ರ ದಾಳಿಯ ಸೂಚನೆ ಮೊದಲೇ ಸಿಕ್ಕಿತ್ತೇ? ಒಂದು ವೇಳೆ ಸಿಕ್ಕಿತ್ತಾದರೆ ಕಾಶ್ಮೀರಕ್ಕೆ ತೆರಳುತ್ತಿದ್ದ ಪ್ರವಾಸಿಗರನ್ನು ಯಾಕೆ ತಡೆಯಲಿಲ್ಲ' ಎಂದು ಪ್ರಶ್ನಿಸಿದರು.
ಶಾ ವಿರುದ್ಧ ಕಿಡಿ: ಪಹಲ್ಗಾಂ ದಾಳಿ ಘಟನೆ ಕುರಿತ ಎಲ್ಲಾ ಹೊಣೆಯನ್ನು ತಾನೇ ವಹಿಸಿಕೊಳ್ಳುವುದಾಗಿ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಹೇಳಿದ್ದಾರೆ. ಆದರೆ, ಭದ್ರತಾ ವೈಫಲ್ಯಕ್ಕೆ ಗೃಹ ಸಚಿವರು ಕಾರಣವೇ ಹೊರತು ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಅಲ್ಲ. ಈ ಕುರಿತ ಉತ್ತರದಾಯಿತ್ವ ನಿಗದಿಯಾಗಬೇಕು ಎಂದು ಖರ್ಗೆ ಆಗ್ರಹಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ