
ನವದೆಹಲಿ(ಸೆ.10) ಭಾರತದ ಅಧ್ಯಕ್ಷತೆಯಲ್ಲಿ ನಡೆದ ಜಿ20 ಶೃಂಗಸಭೆಯ ಸಮಾರೋಪ ಸಮಾರಂಭ ದೆಹಲಿಯಲ್ಲಿ ನಡೆದಿದೆ. 2 ದಿನದ ಶೃಂಗಸಭೆ ಮೂಲಕ 2023ರ ಶೃಂಗಸಭೆ ಅಂತ್ಯಗೊಂಡಿದೆ. ಈ ಬಾರಿಯ ಶೃಂಗಸಭೆಯ 73 ಘೋಷಣೆಗಳಿಗೆ ವಿಶ್ವನಾಯಕರಿಂದ ಅಂಗೀಕಾರ ಸಿಕ್ಕಿದೆ. ಈ ಘೋಷಣೆ, ಶಿಫಾರಸುಗಳ ಪ್ರಗತಿ ತಿಳಿಯಲು ಇದೀಗ ನವೆಂಬರ್ ತಿಂಗಳಲ್ಲಿ ವರ್ಚುವಲ್ ಶೃಂಗಸಭೆ ನಡೆಸಲು ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾಪ ಮುಂದಿಟ್ಟಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಇಟ್ಟಿರುವ ಪ್ರಸ್ತಾಪಕ್ಕೆ ವಿಶ್ವನಾಯಕರು ಸಂತಸ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಶೃಂಗಸಭೆಯ ಘೋಷಣೆ ಹಾಗೂ ಶಿಫಾರಸು ಪರಿಪೂರ್ಣವಾಗುವಂತೆ ನೋಡಿಕೊಳ್ಳಲು ವರ್ಚುವಲ್ ಸಭೆ ಅವಶ್ಯಕ ಅನ್ನೋ ಅಭಿಪ್ರಾಯ ವ್ಯಕ್ತವಾಗಿದೆ.
ಭಾರತದ ಅಧ್ಯಕ್ಷತೆ ವಹಿಸಿದ ಜಿ20 ಶೃಂಗಸಭೆ ನವೆಂಬರ್ ತಿಂಗಳವರೆಗೆ ಇರಲಿದೆ. ಹೀಗಾಗಿ ನವೆಂಬರ್ ತಿಂಗಳಲ್ಲಿ ವರ್ಚುವಲ್ ಸಭೆ ನಡೆಸಿ ಜಿ20 ಶೃಂಗಸಭೆಯಲ್ಲಿ ತೆಗೆದುಕೊಂಡು ನಿರ್ಣಯಗಳು, ಘೋಷಣೆಗಳ ಪ್ರಗತಿ ಪರಿಶೀಲನೆ ನಡೆಸಲು ಮೋದಿ ಉದ್ದೇಶಿಸಿದ್ದಾರೆ. ಈ ಮೂಲಕ ಭಾರತದ ಅಧ್ಯಕ್ಷತೆಯಲ್ಲಿ ನಡೆದ ಜಿ20 ಸಭೆ ಅರ್ಥಪೂರ್ಣವಾಗುವಂತೆ ಮಾಡಲು ಮೋದಿ ನಿರ್ಧರಿಸಿದ್ದಾರೆ. ಇದಕ್ಕೆ ವಿಶ್ವನಾಯಕರು ಸಮ್ಮತಿ ಸೂಚಿಸಿದ್ದಾರೆ. ಶೀಘ್ರದಲ್ಲೇ ನವೆಂಬರ್ ತಿಂಗಳ ವರ್ಚುವಲ್ ಸಭೆ ಖಾಯಂ ಆಗುವ ಸಾಧ್ಯತೆ ಇದೆ.
G20 ಶೃಂಗಸಭೆ ಯಶಸ್ವಿಯಾಗಿ ಅಂತ್ಯ: ಬ್ರೆಜಿಲ್ ಅಧ್ಯಕ್ಷರಿಗೆ ಅಧ್ಯಕ್ಷತೆ ಹಸ್ತಾಂತರಿಸಿದ ಪ್ರಧಾನಿ ಮೋದಿ
ಕಳೆದ 1 ವರ್ಷದ ತನ್ನ ಅಧ್ಯಕ್ಷತೆಯ ಅವಧಿಯಲ್ಲಿ ದೇಶಾದ್ಯಂತ ಸುಮಾರು 220ಕ್ಕೂ ಸಭೆಗಳನ್ನು ಭಾರತ ನಡೆಸಿದೆ. ಜಿ20 ಒಕ್ಕೂಟದಲ್ಲಿ ಭಾರತದ ಅಧ್ಯಕ್ಷತೆ ನ.30ಕ್ಕೆ ಮುಕ್ತಾಯವಾಗಲಿದೆ. ಸಮಾರೋಪ ಸಮಾರಂಭದಲ್ಲಿ ಪ್ರಧಾನಿ ಮೋದಿ ಮುಂದಿನ ವರ್ಷದ ಜಿ20 ಶೃಂಗಸಭೆ ಅಧ್ಯಕ್ಷತೆಯನ್ನು ಬ್ರೆಜಿಲ್‌ಗೆ ಹಸ್ತಾಂತರಿಸಿದ್ದಾರೆ. ಈ ವರ್ಷದ ಸಭೆಗಳಲ್ಲಿ ತೆಗೆದುಕೊಂಡ ನಿರ್ಧಾರಗಳನ್ನು ಯಶಸ್ವಿಯಾಗಿ ಜಾರಿಗೊಳಿಸಲು ಮುಂದಿನ 1 ವರ್ಷಗಳ ಕಾಲ ಭಾರತ ಸಹ ಬ್ರೆಜಿಲ್ ಜೊತೆ ಕೆಲಸ ಮಾಡಲಿದೆ. 2024ರಲ್ಲಿ ರಿಯೋ ಡಿ ಜನೈರೋದಲ್ಲಿ ನಡೆಯುವ ಶೃಂಗಸಭೆಯವರೆಗೆ ಭಾರತ, ಬ್ರೆಜಿಲ್ ಹಾಗೂ ದಕ್ಷಿಣ ಆಫ್ರಿಕಾಗಳು ಪ್ರಮುಖ 3 ರಾಷ್ಟ್ರಗಳಾಗಿ ಕಾರ್ಯ ನಿರ್ವಹಿಸಲಿವೆ.
ಮಹಾತ್ಮ ಗಾಂಧಿ ಸಮಾಧಿಗೆ ವಿಶ್ವ ಗಣ್ಯರಿಂದ ನಮನ: ಖಾದಿ ಶಾಲು ಹಾಕಿ ಸ್ವಾಗತ ಕೋರಿದ ಮೋದಿ
ಭಾರತ ಅಧ್ಯಕ್ಷತೆಯಲ್ಲಿ ನಡೆದ ಜಿ20 ಸಭೆಯಲ್ಲಿ ಆಫ್ರಿಕಾ ಒಕ್ಕೂಟ ರಾಷ್ಟ್ರಗಳಿಗೆ ಖಾಯಂ ಸದಸ್ಯತ್ವ ನೀಡುವ ಪ್ರಧಾನಿ ಮೋದಿ ಪ್ರಸ್ತಾಪವನ್ನು ವಿಶ್ವನಾಯಕರು ಸಮ್ಮತಿಸಿದ್ದಾರೆ. ಈ ಮೂಲಕ ಮೋದಿ ಮಾತಿಗೆ ವಿಶ್ವ ನೀಡುವ ಮನ್ನಣೆಹಾಗೇ ಇದೆ ಅನ್ನೋದು ಮತ್ತೆ ಸಾಬೀತಾಗಿದೆ. ಜಿ20 ಕುಟುಂಬಕ್ಕೆ ಖಾಯಂ ಸದಸ್ಯನಾಗಿ ಆಫ್ರಿಕನ್ ಒಕ್ಕೂಟವನ್ನು ಸ್ವಾಗತಿಸಲು ಸಂತೋಷವಾಗುತ್ತಿದೆ. ಇದು ಜಾಗತಿಕ ಮಟ್ಟದಲ್ಲಿ ದಕ್ಷಿಣದ ಧ್ವನಿಗೆ ಮತ್ತಷ್ಟುಬಲ ನೀಡಲಿದೆ’ ಎಂದು ಹೇಳಿದ್ದಾರೆ. ಸಭೆಯ ಆರಂಭಕ್ಕೂ ಮುನ್ನ ಆಫ್ರಿಕನ್ ಒಕ್ಕೂಟದ ಅಧ್ಯಕ್ಷ ಅಜಾಲಿ ಅಸೌಮನಿ ಅವರನ್ನು ವೇದಿಕೆಗೆ ಆಹ್ವಾನಿಸಿದ ಮೋದಿ, ಸಬ್ ಕಾ ಸಾಥ್ ಎಂಬ ಕಲ್ಪನೆಗೆ ಅನುಗುಣವಾಗಿ ಆಫ್ರಿಕನ್ ಒಕ್ಕೂಟಕ್ಕೆ ಖಾಯಂ ಸದಸ್ಯತ್ವ ನೀಡಬೇಕು ಎಂದು ಭಾರತ ಪ್ರಸ್ತಾಪಿಸಿತ್ತು. ಇದಕ್ಕೆ ನಾವೆಲ್ಲರೂ ಒಪ್ಪಿಗೆ ನೀಡಿದ್ದೇವೆ ಎಂದು ನಾನು ನಂಬುತ್ತೇನೆ ಎಂದು ಪ್ರಧಾನಿ ಮೋದಿ ಅವರು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ