ಕೋವಿಡ್ ಲಸಿಕೆಯಿಂದ ಮೋದಿ ಫೋಟೋ ಮಾಯ, ವಿವಾದ ಬೆನ್ನಲ್ಲೇ ಸ್ಪಷ್ಟನೆ ನೀಡಿದ ಸಚಿವಾಲಯ!

By Suvarna NewsFirst Published May 2, 2024, 5:08 PM IST
Highlights

ಇಷ್ಟು ದಿನ ಕೋವಿಡ್ ಲಸಿಕೆ ಪ್ರಮಾಣಪತ್ರದಲ್ಲಿ ಪ್ರಧಾನಿ ಮೋದಿ ಫೋಟೋ  ಹಾಕಲಾಗಿತ್ತು. ಆದರೆ ಇದೀಗ ಡೌನ್ಲೋಡ್ ಮಾಡುವ ಕೋವಿಡ್ ಪ್ರಮಾಣಪತ್ರದಲ್ಲಿ ಮೋದಿ ಫೋಟೋ ತೆಗೆದು ಹಾಕಲಾಗಿದೆ. ಕೋವೀಶೀಲ್ಡ್ ಅಡ್ಡ ಪರಿಣಾಮ ವರದಿ ಬಳಿಕ ಮೋದಿ ಫೋಟೋ ಮಾಯವಾಗಿದೆ ಅನ್ನೋ ವಿವಾದ ಹೆಚ್ಚಾಗುತ್ತಿದ್ದಂತೆ ಆರೋಗ್ಯ ಸಚಿವಾಲಯ ಸ್ಪಷ್ಟನೆ ನೀಡಿದೆ. 
 

ನವದೆಹಲಿ(ಮೇ.02) ಕೋವಿಡ್ ಲಸಿಕೆ ಪಡೆದ ಬಳಿಕ ಪ್ರಮಾಣ ಪತ್ರ ಡೌನ್ಲೋಡ್ ಮಾಡುವುದು ಅದಕ್ಕಿಂತ ಮುಖ್ಯ. ಈ ಪ್ರಮಾಣಪತ್ರವಿಲ್ಲದೆ ಹಲವರು ಪರದಾಡಿದ ಉದಾಹರಣೆಗಳಿವೆ. ಇಷ್ಟು ದಿನ ಕೋವಿಡ್ ಲಸಿಕೆ ಪ್ರಮಾಣಪತ್ರದಲ್ಲಿ ಪ್ರಧಾನಿ ಮೋದಿ ಫೋಟೋ ಹಾಕಲಾಗಿತ್ತು. ಆದರೆ ಈಗ ಡೌನ್ಲೋಡ್ ಮಾಡುವ ಲಸಿಕೆ ಪ್ರಮಾಣಪತ್ರದಲ್ಲಿ ಪ್ರಧಾನಿ ಮೋದಿ ಫೋಟೋಗೆ ಕೊಕ್ ನೀಡಲಾಗಿದೆ. ಇದು ಕೋವೀಶೀಲ್ಡ್ ಅಡ್ಡಪರಿಣಾಮದ ಬಳಿಕ ಕೇಂದ್ರ ಬಿಜೆಪಿ ಸರ್ಕಾರ ಈ ರೀತಿ ಮಾಡಿದೆ ಅನ್ನೋ ಆರೋಪ ಕೇಳಿಬಂದ ಬೆನ್ನಲ್ಲೇ ವಿವಾದಕ್ಕೆ ಸ್ಪಷ್ಟನೆ ನೀಡಲಾಗಿದೆ. ಲೋಕಸಭಾ ಚುನಾವಣೆ ನೀತಿ ಸಂಹಿತೆ ಕಾರಣ ಪ್ರಮಾಣಪತ್ರ, ವೆಬ್‌ಸೈಟ್ ಸೇರಿದಂತೆ ಅಲ್ಲೆಡೆಯಿಂದ ಫೋಟೋಗಳನ್ನು ತೆಗೆದು ಹಾಕಲಾಗಿದೆ ಎಂದು ಆರೋಗ್ಯ ಇಲಾಖೆ ಸ್ಪಷ್ಟನೆ ನೀಡಿದೆ.

ಕೋವಿನ್ ಮೂಲಕ ಡೌನ್ಲೋಡ್ ಮಾಡಿಕೊಳ್ಳುವ ಕೋವಿಡ್ ಲಸಿಕೆ ಪ್ರಮಾಣಪತ್ರದಲ್ಲಿ ಸದ್ಯ ಪ್ರಧಾನಿ ಮೋದಿ ಫೋಟೋ ಇರುವುದಿಲ್ಲ. ಲೋಕಸಭಾ ಚುನಾವಣೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ನೀತಿ ಸಂಹಿತೆ ಜಾರಿಯಾಗಿದೆ. ನೀತಿ ಸಂಹಿತೆ ಪ್ರಕಾರ ಸರ್ಕಾರದ ಎಲ್ಲಾ ವೆಬ್‌ಸೈಟ್, ಆ್ಯಪ್‌ಗಳಿಂದ ಪ್ರಧಾನಿ ಮೋದಿ, ಆಯಾ   ಸಚಿವಾಲಯದ ಸಚಿವರ ಫೋಟೋಗಳನ್ನು ತೆಗೆದು ಹಾಕಲಾಗಿದೆ. ಫೋಟೋ ತೆಗೆದು ಹಾಕಿದ್ದ ಹಿಂದೆ ಬೇರೆ ಯಾವುದೇ ಉದ್ದೇಶವಾಗಲಿ,ವಿವಾದವಾಗಲಿ ಇಲ್ಲ ಎಂದು ಕೇಂದ್ರ ಆರೋಗ್ಯ ಇಲಾಖೆ ಸ್ಪಷ್ಟನೆ ನೀಡಿದೆ.

ಕೋವಿಶೀಲ್ಡ್‌ ಪಡೆದ 10 ಲಕ್ಷ ಜನರಲ್ಲಿ 8 ಮಂದಿಗೆ ಮಾತ್ರ ಅಡ್ಡಪರಿಣಾಮ ಸಂಭವ: ಡಾ.ರಮಣ್‌ ಗಂಗಾಖೇಡ್ಲರ್‌

ವಿಧಾನಸಭಾ ಚುನಾವಣೆ ವೇಳೆ ಆಯಾ ರಾಜ್ಯಗಳಲ್ಲೂ ಪ್ರಧಾನಿ ಮೋದಿ ಫೋಟೋವನ್ನು ಕೋವಿಡ್ ಲಸಿಕೆ ಪ್ರಮಾಣಪತ್ರದಿಂದ ತೆಗೆದು ಹಾಕಲಾಗಿತ್ತು. ನೀತಿ ಸಂಹಿತೆಗ್ಗೆ ಧಕ್ಕೆಯಾಗದಂತೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ. ಆರೋಗ್ಯ ಇಲಾಖೆ ಸ್ಪಷ್ಟನೆ ನೀಡಲು ಕಾರಣ ಸಾಮಾಜಿಕ ಮಾಧ್ಯಮಗಳಲ್ಲಿ ಕೋವೀಶೀಲ್ಡ್ ಲಸಿಕೆ ಅಡ್ಡಪರಿಣಾಮ ಬಳಿಕ ಫೋಟೋ ತೆಗೆದು ಹಾಕಲಾಗಿದೆ ಅನ್ನೋ ಮಾಹಿತಿ ಹರಿದಾಡಿತ್ತು.

ಕೋವೀಶೀಲ್ಡ್ ಲಸಿಕೆ ತಯಾರಿಕಾ ಫಾರ್ಮಾ ಅಸ್ಟ್ರಝೆಂತಾ ಇತ್ತೀಚೆಗೆ ಕೋರ್ಟ್‌ನಲ್ಲಿ ಅಡ್ಡಪರಿಣಾಮವನ್ನು ಒಪ್ಪಿಕೊಂಡಿತ್ತು. ಕೋವೀಶೀಲ್ಡ್ ಲಸಿಕೆ ಪಡೆದುಕೊಂಡಿರುವವರಲ್ಲಿ ಅತೀ ವಿರಳ ಪ್ರಕರಣಗಳು ಪತ್ತೆಯಾಗಿದೆ. ರಕ್ತ ಹೆಪ್ಪುಗಟ್ಟುವಿಕೆ, ಪ್ಲೇಟ್‌ಲೇಟ್ ಸಂಖ್ಯೆ ಕುಸಿತವಾಗುವ ಕೆಲ ಅಡ್ಡಪರಿಣಾಮಗಳು ಲಸಿಕೆಯಲ್ಲಿದೆ. ಇದು ಅತೀ ವಿರಳ ಪ್ರಕರಣಗಳು. ಇದರಿಂದ ವ್ಯಕ್ತಿಯ ಜೀವಕ್ಕೂ ಅಪಾಯವಿದೆ ಎಂದು ಕಂಪನಿ ಒಪ್ಪಿಕೊಂಡಿತ್ತು.

ಕೋವಿಶೀಲ್ಡ್‌ ವ್ಯಾಕ್ಸಿನ್‌ ತಗೊಂಡಿದ್ರಾ? ಚಿಂತೆ ಪಡೋ ಅಗತ್ಯವಿದ್ಯಾ?
 
ಅಡ್ಡಪರಿಣಾಮ ಕುರಿತ ಮಾಹಿತಿ ಹೊರಬಿದ್ದ ಬಳಿಕ ಕೇಂದ್ರ ಸರ್ಕಾರ ಮೋದಿ ಫೋಟೋವನ್ನು ಲಸಿಕೆ ಪ್ರಮಾಣಪತ್ರವನ್ನು ತೆಗೆದು ಹಾಕಿದೆ ಅನ್ನೋ ಆರೋಪ ಕೇಳಿಬಂದಿತ್ತು. ಇದೀಗ ಈ ಆರೋಪಕ್ಕೆ ಆರೋಗ್ಯ ಇಲಾಖೆ ಸ್ಪಷ್ಟನೆ ನೀಡಿದೆ.
 

click me!