ತಲೆ ಎತ್ತಲಿದೆ ಹೊಸ ಸಂಸತ್‌ ಭವನ: 75ನೇ ಸ್ವಾತಂತ್ರ್ಯ ದಿನಕ್ಕೆ ಉಡುಗೊರೆ!

By Suvarna News  |  First Published Jan 1, 2020, 10:57 AM IST

ತಲೆ ಎತ್ತಲಿದೆ ಹೊಸ ಸಂಸತ್‌ ಭವನ!| 75ನೇ ಸ್ವಾತಂತ್ರ್ಯ ದಿನಕ್ಕೆ ಉಡುಗೊರೆ| ಮೂರು ಗೋಪುರ, ತ್ರಿಕೋನ ಆಕಾರ| ರಾಷ್ಟ್ರಪತಿ ಭವನ ಬಳಿ ಪ್ರಧಾನಿ ನಿವಾಸ


ನವದೆಹಲಿ[ಜ.01]: ಶತಮಾನದ ಹೊಸ್ತಿಲಲ್ಲಿರುವ ನವದೆಹಲಿಯ ಸಂಸತ್‌ ಭವನ ಮತ್ತು ಅದನ್ನು ಒಳಗೊಂಡಿರುವ ಸೆಂಟ್ರಲ್‌ ವಿಸ್ತಾ ಪ್ರದೇಶಕ್ಕೆ ಹೊಸ ರೂಪ ಕೊಡುವ ಕೇಂದ್ರ ಸರ್ಕಾರದ ಮಹತ್ವಕಾಂಕ್ಷೆಯ ಯೋಜನೆಯ ಒಂದಿಷ್ಟುಮಾಹಿತಿಗಳು ಹೊರಬಿದ್ದಿವೆ. ಅದರನ್ವಯ ತ್ರಿಕೋನಾಕಾರದ ಮೂರು ಗೋಪುರಗಳ ಹೊಸ ಸಂಸತ್‌ ಭವನ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ. ಇದು ಪ್ರಜಾಪ್ರಭುತ್ವದ ಚೈತನ್ಯದ ಸಂಕೇತವಾಗಿರಲಿದೆ ಎಂದು ಮೂಲಗಳು ತಿಳಿಸಿವೆ.

ಹೊಸ ಸಂಸತ್ತು ಈಗಿನ ಸಂಸತ್ತಿನ ಪಕ್ಕದಲ್ಲೇ ಇರಲಿದೆ. ಲೋಕಸಭೆಯಲ್ಲಿ 900ರಿಂದ 1000 ಜನ ಕೂರಲು ಸ್ಥಳಾವಕಾಶ ಸೃಷ್ಟಿಸಲಾಗುತ್ತದೆ. ರಾಜ್ಯಸಭೆ ಹಾಗೂ ಸೆಂಟ್ರಲ್‌ ಹಾಲ್‌ ಇರಲಿವೆ. ಎಲ್ಲ ಸಂಸದರ ಕಚೇರಿಗಳು ಇದೇ ಸಂಸತ್‌ ಭವನದಲ್ಲಿ ಇರಲಿವೆ. ಇದರ ಜತೆಗೆ ಪ್ರಧಾನ ಮಂತ್ರಿಗಳಿಗೆ ಹೊಸ ನಿವಾಸ, ಎಲ್ಲ ಕಚೇರಿಗಳಿಗೆ ಸಂಪರ್ಕ ಕಲ್ಪಿಸಲು ಭೂಗತ ರಸ್ತೆ, ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷವಾಗುವ ನಿಮಿತ್ತ ಒಂದು ಐತಿಹಾಸಿಕ ಸ್ಮಾರಕ ಕೂಡ ಇದರ ಅಕ್ಕಪಕ್ಕವೇ ನಿರ್ಮಾಣವಾಗಲಿವೆ.

Tap to resize

Latest Videos

ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆ ಇದಾಗಿದ್ದು, ಕಳೆದ ಸೆ.13ರಂದೇ ಇದಕ್ಕೆ ಅನುಮೋದನೆ ದೊರಕಿತ್ತು. ಈ ಯೋಜನೆಯ ಕುತೂಹಲಕರ ಮಾಹಿತಿಗಳು ಈಗ ಲಭಿಸಿವೆ. ಗುಜರಾತ್‌ನ ಎಚ್‌ಸಿಪಿ ಡಿಸೈನ್‌ ಕಂಪನಿಗೆ ಈ ಯೋಜನೆಯ ವಿನ್ಯಾಸದ ಟೆಂಡರ್‌ ಲಭಿಸಿದೆ. 2024ರ ಹೊತ್ತಿಗೆ ಯೋಜನೆ ಪೂರ್ತಿಗೊಳ್ಳುವ ನಿರೀಕ್ಷೆಯಿದೆ. ಇದೇ ವೇಳೆ ಹೊಸ ಕಟ್ಟಡಗಳ ನಿರ್ಮಾಣಕ್ಕಾಗಿ ಈಗ ಅಸ್ತಿತ್ವದಲ್ಲಿರುವ ಯಾವುದೇ ಪರಂಪರಾ ಕಟ್ಟಡಗಳನ್ನು ಧ್ವಂಸಗೊಳಿಸದೇ ಇರಲು ನಿರ್ಧರಿಸಲಾಗಿದೆ.

ಈಗಿರುವ ಹಾಲಿ ಸೌತ್‌ ಬ್ಲಾಕ್‌ ಹಾಗೂ ನಾತ್‌ರ್‍ ಬ್ಲಾಕ್‌ಗಳನ್ನು ವಸ್ತುಸಂಗ್ರಹಾಲಯಗಳನ್ನಾಗಿ ಪರಿವರ್ತಿಸಲಾಗುತ್ತದೆ. ಒಂದು ವಸ್ತುಸಂಗ್ರಹಾಲಯದಲ್ಲಿ ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮ ನಡೆದ 1857ಕ್ಕಿಂತ ಮೊದಲು ಭಾರತ ಹೇಗಿತ್ತು ಎಂಬುದರ ಪ್ರದರ್ಶನ ಇರಲಿದೆ. ಇನ್ನೊಂದು ವಸ್ತುಸಂಗ್ರಹಾಲಯದಲ್ಲಿ 1857ರ ನಂತರದಿಂದ ಈವರೆಗಿನ ಭಾರತ ಹೇಗಿತ್ತು ಎಂಬುದರ ವಿವರಣೆ ಇರಲಿದೆ.

1931ರಲ್ಲಿ ನಿರ್ಮಾಣ ಆಗಿತ್ತು 

1911ರಲ್ಲಿ ಬ್ರಿಟಿಷರು ಭಾರತದ ರಾಜಧಾನಿಯನ್ನು ಕೋಲ್ಕತಾದಿಂದ ದೆಹಲಿಗೆ ಸ್ಥಳಾಂತರಿಸುವ ಘೋಷಣೆ ಮಾಡಿದ್ದರು. ನಂತರ 20 ವರ್ಷಗಳ ಯೋಜನೆ ಕೈಗೊಂಡು ದಿಲ್ಲಿಯಲ್ಲಿ ಸಂಸತ್‌ ಭವನ, ರಾಷ್ಟ್ರಪತಿ ಭವನ, ನಾತ್‌ರ್‍ ಬ್ಲಾಕ್‌, ಸೌತ್‌ ಬ್ಲಾಕ್‌, ಇಂಡಿಯಾ ಗೇಟ್‌ ನಿರ್ಮಾಣ ಮಾಡಲಾಗಿತ್ತು. 1931ರಲ್ಲಿ ನವದೆಹಲಿಯನ್ನು ಅನಾವರಣ ಮಾಡಲಾಗಿತ್ತು. ವಾಸ್ತುಶಿಲ್ಪಿಗಳಾದ ಎಡ್ವಿನ್‌ ಲ್ಯೂಟನ್ಸ್‌ ಹಾಗೂ ಹರ್ಬರ್ಟ್‌ ಬೇಕರ್‌ ಅವರು ನವದೆಹಲಿಯ ನಿರ್ಮಾಣದ ಹೊಣೆ ಹೊತ್ತಿದ್ದರು.

click me!