
ನವದೆಹಲಿ(ಜು.24): ಮುಂಬರುವ ಚುನಾವಣೆಗೆ ಬಿಜೆಪಿ ಭಾರಿ ತಯಾರಿ ಮಾಡಿಕೊಳ್ಳುತ್ತಿದೆ. ಈಗಾಗಲೇ ಹಲವು ಸಭೆಗಳನ್ನು ನಡೆಸಿ ರಾಜ್ಯ ಸರ್ಕಾರದ ಆಡಳಿತ ಚುರುಕುಗೊಳಿಸಲು ಮುಂದಾಗಿದೆ. ಇಂದು ಬಿಜೆಪಿ ಆಡಳಿತ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮಹತ್ವದ ಸಭೆ ನಡೆಸಿದ್ದಾರೆ. ಆಯಾ ರಾಜ್ಯ ಮುಖ್ಯಮಂತ್ರಿಗಳು ತಮ್ಮ ಆಡಳಿತದಲ್ಲಿನ ಅಭಿವೃದ್ಧಿ, ಜನಪರ ಯೋಜನೆಗಳು ಹಾಗೂ ಯೋಜನೆಗಳ ಕಾರ್ಯಗತ ಕುರಿತ ವರದಿ ಸಲ್ಲಿಸಿದ್ದಾರೆ. ಬಳಿಕ ಮೋದಿ ಆಡಳಿತ ಚುರುಕುಗೊಳಿಸಲು ಮಹತ್ವದ ಸಲಹೆ ನೀಡಿದ್ದಾರೆ. ಬಡವರು, ಹಿಂದುಳಿದ ವರ್ಗಗಳ ಸಮುದಾಯದ ಅಭಿವೃದ್ಧಿಗೆ ಕೇಂದ್ರದ ವಿಶೇಷ ಯೋಜನೆಗಳ ಸೌಲಭ್ಯವನ್ನು ಸಂಪೂರ್ಣವಾಗಿ ಅಳವಡಿಸಿಕೊಳ್ಳಲು ಸೂಚಿಸಲಾಗಿದೆ.ಎಲ್ಲಾ ವರ್ಗದ ಜನರು ವಿಶ್ವಾಸಗಳಿಸಲು ಜನಪರ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಸೂಚಿಸಲಾಗಿದೆ. ಇದೇ ವೇಳೆ ಅಜಾದಿಕಾ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಚರ್ಚೆ ನಡೆಸಲಾಗಿದೆ.
ರಾಷ್ಟ್ರಪತಿ ಬೀಳ್ಗೊಡುಗೆ ಸಮಾರಂಭಕ್ಕೆ ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಹಾಜರಾಗಿದ್ದರು. ಇಂದು ಬಿಜೆಪಿ ಕೇಂದ್ರ ಕಚೇರಿಯಲ್ಲಿ ಬಿಜೆಪಿ ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಲಾಗಿದೆ. ಈ ಸಭೆಯಲ್ಲಿ ಕರ್ನಾಟಕ ಸಿಎಂ ಬಸವರಾಜ್ ಬೊಮ್ಮಾಯಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚವ್ಹಾಣ್, ಉತ್ತರಖಂಡ್ ಸಿಎಂ ಪುಷ್ಕರ್ ಸಿಂಗ್ ಧಮಿ, ಅಸ್ಸಾಂ ಸಿಎಂ ಹಿಮಂತ್ ಬಿಸ್ವಾ ಶರ್ಮಾ, ನಾಗಾಲ್ಯಾಂಡ್ ಸಿಎಂ ನೆಫಿಯೋ ರಿಯೋ, ತ್ರಿಪುರಾ ಸಿಿಎಂ ಮಾನಿಕ್ ಶಾ, ಗುಜರಾತ್ ಸಿಎಂ ಭುಪೇಂದ್ರ ಪಟೇಲ್, ಗೋವಾ ಸಿಎಂ ಪ್ರಮೋದ್ ಸಾವಂತ್ ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಇವರ ಜೊತೆ ಹಲವು ಮೈತ್ರಿ ಸರ್ಕಾರದ ಉಪಮುಖ್ಯಮಂತ್ರಿಗಳು ಹಾಜರಿದ್ದರು. ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೆವೇಂದ್ರ ಫಡ್ನವಿಸ್ ಸೇರಿಂತೆ ಇತರ ಕೆಲ ಉಪ ಮುಖ್ಯಮಂತ್ರಿಗಳು ಪಾಲ್ಗೊಂಡಿದ್ದರು.
2024ರ ಲೋಕಸಭಾ ಚುನಾವಣೆ, 2023ರಲ್ಲಿ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳ ಚುನಾವಣೆ ನಡೆಯಲಿದೆ. ಈ ವೇಳೆ ಬಿಜೆಪಿ ಅಭೂತಪೂರ್ವ ಗೆಲುವಿನೊಂದಿಗೆ ಮತ್ತೆ ಅಧಿಕಾರ ಹಿಡಿಯಲು ಹಾಗೂ ಆಡಳಿತ ವಿಸ್ತರಿಸಲು ಮಾಸ್ಟರ್ ಪ್ಲಾನ ರೆಡಿ ಮಾಡಿದೆ. ಇದಕ್ಕಾಗಿ ಖುದ್ದು ಮೋದಿ ಸಭೆ ನಡೆಸಿದ್ದಾರೆ. ಎಲ್ಲಾ ರಾಜ್ಯಗಳ ವರದಿ ಪರಿಶೀಲಿಸಿದ್ದಾರೆ. ಹರ್ ಘರ್ ತಿರಂಗಾ ಆಂದೋಲನ ಯಶಸ್ವಿಯಾಗಲು ಎಲ್ಲಾ ಕಾರ್ಯಕ್ರಮ ರೂಪಿಸುವಂತೆ ಮೋದಿ ಸೂಚಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ