INS Vikrant: ಸಾಗರದ ಚಕ್ರವರ್ತಿ ನೌಕಾಸೇನೆಗೆ ನಿಯೋಜನೆ!

Published : Sep 02, 2022, 10:45 AM IST
INS Vikrant: ಸಾಗರದ ಚಕ್ರವರ್ತಿ ನೌಕಾಸೇನೆಗೆ ನಿಯೋಜನೆ!

ಸಾರಾಂಶ

ಸಂಪೂರ್ಣ ದೇಶೀಯವಾಗಿ ನಿರ್ಮಿತವಾಗಿರುವ ಐಎನ್‌ಎಸ್‌ ವಿಕ್ರಾಂತ್‌ ವಿಮಾನವಾಹಕ ಸಮರನೌಕೆ, ದಿ ಎಂಪರರ್ ಆಫ್‌ ದ ಸೀ ಎಂದೇ ಕರೆಸಿಕೊಳ್ಳುವ ಯುದ್ಧನೌಕೆ ಭಾರತದ ನೌಕಾಸೇನೆಗೆ ಸೇರ್ಪಡೆಯಾಗಿದೆ. ಇದರಲ್ಲಿ ಬರೋಬ್ಬರಿ 30 ವಿಮಾನಗಳನ್ನು ನಿಯೋಜನೆ ಮಾಡುವ ಸಾಮರ್ಥ್ಯ ಹೊಂದಿದೆ. ಕೊಚ್ಚಿನ್‌ ಶಿಪ್‌ಯಾರ್ಡ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಈ ನೌಕೆಯನ್ನು ಸೇನೆಗೆ ನಿಯೋಜನೆ ಮಾಡಿದರು.  

ಕೊಚ್ಚಿ (ಸೆ.2): ಭಾರತದ ಈವರೆಗಿನ ಅತೀದೊಡ್ಡ ಸಮರನೌಕೆ, ವಿಮಾನವಾಹಕ ಯುದ್ಧನೌಕೆ ಎನಿಸಿಕೊಂಡಿರುವ ಐಎನ್‌ಎಸ್ ವಿಕ್ರಾಂತ್‌ಅನ್ನು ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಭಾರತದ ನೌಕಾಸೇನೆಗೆ ನಿಯೋಜನೆ ಮಾಡಿದರು. ಈಗಾಗಲೇ ಸೋಶಿಯಲ್‌ ಮೀಡಿಯಾಗಳಲ್ಲಿ ದಿ ಎಂಪರರ್‌ ಅಫ್‌ ದ ಸೀ ಎನ್ನುವ ಹೆಸರಿನಿಂದ ಪ್ರಖ್ಯಾತವಾಗಿರುವ ಐಎನ್‌ಎಸ್‌ ವಿಕ್ರಾಂತ್‌ ಸಂಪೂರ್ಣವಾಗಿ ಭಾರತದಲ್ಲಿಯೇ ನಿರ್ಮಾಣವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕೊಚ್ಚಿನ್‌ ಶಿಪ್‌ಯಾರ್ಡ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೊದಲ ಸ್ವದೇಶಿ ವಿಮಾನವಾಹಕ ನೌಕೆ ಐಎನ್‌ಎಸ್ ವಿಕ್ರಾಂತ್ ಅನ್ನು ನೌಕಾಪಡೆಗೆ ಹಸ್ತಾಂತರಿಸಿದರು. ಐಎನ್ ಎಸ್ ವಿಕ್ರಾಂತ್ ನ ವಿಶೇಷವೆಂದರೆ ಅದು ಸ್ವದೇಶಿ ಯುದ್ಧನೌಕೆ. 2009 ರಲ್ಲಿ ಇದರ ನಿರ್ಮಾಣ ಪ್ರಕ್ರಿಯೆ ಆರಂಭವಾಗಿತ್ತು. ಅಂದಾಜು 13 ವರ್ಷಗಳ ನಿರ್ಮಾಣ ಕಾರ್ಯದ ಬಳಿಕ, ಈಗ ಸಾಗರಕ್ಕೆ ಇಳಿದಿದೆ. ಇದರೊಂದಿಗೆ ಪಿಎಂ ಮೋದಿ ಅವರು ನೌಕಾಪಡೆಯ ಹೊಸ ಧ್ವಜವನ್ನು ಸಹ ಅನಾವರಣಗೊಳಿಸಿದರು. ನೌಕಾಪಡೆಯ ಹೊಸ ಧ್ವಜವು ಬ್ರಿಟಿಷ್‌ ವಸಾಹತುಶಾಹಿ ಪರಂಪರೆಗೆ ಅಂತ್ಯ ಹಾಡಿದ್ದರೆ, ಭಾರತದ ಕಡಲ ಪರಂಪರೆಯನ್ನು ಇದರಲ್ಲಿ ಇರಿಸಿಕೊಳ್ಳಲಾಗಿದೆ. ಐಎನ್ಎಸ್ ವಿಕ್ರಾಂತ್ ತೂಕ 45000 ಟನ್. ಅಷ್ಟೇ ಅಲ್ಲ, ಇದರ ಉದ್ದ 262 ಮೀಟರ್ ಮತ್ತು ಅಗಲ 62 ಮೀಟರ್ ಆಗಿದೆ. 

ಐಎನ್‌ಎಸ್ ವಿಕ್ರಾಂತ್‌ನಲ್ಲಿ 30 ವಿಮಾನಗಳನ್ನು ನಿಯೋಜನೆ ಮಾಡಬಹುದು. ಇದರ ಹೊರತಾಗಿ, MiG-29K ಫೈಟರ್ ಜೆಟ್ ಅನ್ನು ಈ ವಿಮಾನದ ಮೂಲಕ ಹಾರಿಸಬಹುದಾಗಿದೆ. ಮೂಲಕ ವಾಯು ವಿರೋಧಿ, ಮೇಲ್ಮೈ ವಿರೋಧಿ ಮತ್ತು ಭೂ ದಾಳಿಯಲ್ಲೂ ಇದು ಪಾತ್ರ ವಹಿಸಿದಂತಾಗಿದೆ. ಇದರೊಂದಿಗೆ ಕಾಮೋವ್ 31 ಹೆಲಿಕಾಪ್ಟರ್ ಕೂಡ ಈ ನೌಕೆಯಿಂದ ಹಾರಬಲ್ಲದು. 


ಹೊಸ ಸೂರ್ಯೋದಯಕ್ಕೆ ಸಾಕ್ಷಿಯಾಗಿದ್ದೇವೆ: ಐಎನ್‌ಎಸ್‌ ವಿಕ್ರಾಂತ್‌ಅನ್ನು ನಿಯೋಜನೆ ಮಾಡಿದ ಬಳಿಕ ನಡೆದ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಇಂದು ಭಾರತದ ಕೇರಳ ಕರಾವಳಿಯಲ್ಲಿ ಪ್ರತಿಯೊಬ್ಬ ಭಾರತೀಯ ಕೂಡ ಭವಿಷ್ಯದ ಸೂರ್ಯೋದಯಕ್ಕೆ ಸಾಕ್ಷಿಯಾಗಿದ್ದಾರೆ.  INS ವಿಕ್ರಾಂತ್‌ನಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮವು ವಿಶ್ವದ ದಿಗಂತದಲ್ಲಿ ಭಾರತದ ಉದಯೋನ್ಮುಖ ಚೈತನ್ಯಗಳ ಘೋಷಣೆಯಾಗಿದೆ. ವಿಕ್ರಾಂತ್‌ ಅತ್ಯಂತ ಬಲಾಢ್ಯವಾಗಿದೆ ಹಾಗೂ ಅಷ್ಟೇ ಬೃಹತ್‌ ಆಗಿದೆ. ಇದು ಕೇವಲ ಯುದ್ಧ ನೌಕೆ ಮಾತ್ರವಲ್ಲ, ಇದು 21 ನೇ ಶತಮಾನದ ಭಾರತದ ಕಠಿಣ ಪರಿಶ್ರಮ, ಪ್ರತಿಭೆ, ಪ್ರಭಾವ ಮತ್ತು ಬದ್ಧತೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು.

ಮೇಡ್‌ ಇನ್ ಇಂಡಿಯಾ ವಿಮಾನವಾಹಕ ಯುದ್ಧನೌಕೆ ವಿಕ್ರಾಂತ್ ಸೆ.2ಕ್ಕೆ ಸೇನೆಗೆ ಸೇರ್ಪಡೆ!

ಗುರಿಗಳು ಚಿಕ್ಕದಾಗಿದ್ದರೆ, ಪ್ರಯಾಣಗಳು ದೀರ್ಘವಾಗಿದ್ದರೆ, ಸಾಗರ ಮತ್ತು ಸವಾಲುಗಳು ಅಂತ್ಯವಿಲ್ಲದಿದ್ದರೆ ಅದಕ್ಕೆ ಭಾರತದ ಉತ್ತರವಾಗಿ ವಿಕ್ರಾಂತ್‌ ಹೊರಬಂದಿದೆ ಎಂದು ಪ್ರಧಾನಿ ಹೇಳಿದರು. ವಿಕ್ರಾಂತ್ ಸ್ವಾತಂತ್ರ್ಯದ ಅಮೃತದ ಅನುಪಮವಾದ ಅಮೃತವಾಗಿದೆ. ವಿಕ್ರಾಂತ್ ಭಾರತ ಸ್ವಾವಲಂಬಿಯಾಗುವುದರ ವಿಶಿಷ್ಟ ಪ್ರತಿಬಿಂಬವಾಗಿದೆ ಎಂದು ಹೆಮ್ಮೆಯಿಂದ ಮಾತನಾಡಿದರು. ಸ್ವದೇಶಿ ತಂತ್ರಜ್ಞಾನದೊಂದಿಗೆ ಇಷ್ಟು ಬೃಹತ್‌ ಪ್ರಮಾಣದ ವಿಮಾನವಾಹಕ ಯುದ್ಧನೌಕೆಯನ್ನು ನಿರ್ಮಾಣ ಮಾಡುವ ಕೆಲವೇ ಕಲವು ದೇಶಗಳ ಸಾಲಿಗೆ ಭಾರತ ಇಂದು ಸೇರ್ಪಡೆಯಾಗಿದೆ. ಇಂದು ಐಎನ್‌ಎಸ್ ವಿಕ್ರಾಂತ್ ದೇಶದಲ್ಲಿ ಹೊಸ ಆತ್ಮವಿಶ್ವಾಸವನ್ನು ತುಂಬಿದೆ, ದೇಶದ ಯುವ ಜನತೆಯಲ್ಲಿ ಹೊಸ ಆತ್ಮವಿಶ್ವಾಸವನ್ನು ಮೂಡಿಸಿದೆ ಎಂದು ತಿಳಿಸಿದರು.

ವಸಾಹತುಶಾಹಿ ವಿರುದ್ಧ ಮೋದಿ ದಿಟ್ಟ ಹೆಜ್ಜೆ, ನೌಕಾಪಡೆಯ ಸೇಂಟ್ ಜಾರ್ಜ್ ಕ್ರಾಸ್ ಕೈಬಿಟ್ಟ ಕೇಂದ್ರ!

ನೌಕಾಪಡೆಯ ಹೊಸ ಧ್ವಜ ಅನಾವರಣ: ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ನೌಕಾಪಡೆಯ ಹೊಸ ಧ್ವಜವನ್ನೂ ಅನಾವರಣ ಮಾಡಿದ್ದಾರೆ.  ನೌಕಾಪಡೆಯ ನೂತನ ಧ್ವಜದಲ್ಲಿ ಭಾರತದ ಧ್ವಜ ಹಾಗೂ ನೌಕಾಪಡೆಯ ಚಿಹ್ನೆಯನ್ನು ಇರಿಸಲಾಗಿದೆ. ಧ್ವಜ ಅನಾವರಣದ ವೇಳೆ ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಇತರ ಸೇನಾ ಅಧಿಕಾರಿಗಳು ಉಪಸ್ಥಿತರಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇಂಡಿಗೋ ವಿಮಾನ ರದ್ದತಿ ಕೊಂಚ ಸರಿ ದಾರಿಗೆ
ಹಿಂದಿ ಹೇರಿಕೆ ಬಗ್ಗೆ ನ್ಯಾ। ನಾಗರತ್ನ ಬೇಸರ