ರಕ್ಷಣಾ ಪಡೆಯ 7,000 ಉದ್ಯೋಗಿಗಳಿಗೆ 2 ಐಷಾರಾಮಿ ಕಾಂಪ್ಲೆಕ್ಸ್, ಮೋದಿಯಿಂದ ಉದ್ಘಾಟನೆ!

By Suvarna NewsFirst Published Sep 16, 2021, 12:15 PM IST
Highlights

* ಶಿಥಿಲಗೊಂಡ ಹಳೇ ಕಟ್ಟಡ, ರಕ್ಷಣಾ ಪಡೆಗೆ ಎರಡು ಹೊಸ ಕಾಂಪ್ಲೆಕ್ಸ್

* 7,000 ಉದ್ಯೋಗಿಗಳಿಗೆ ಬೇಕಾದ ಸೌಲಭ್ಯವಿರುವ ಸಂಕೀರ್ಣ

* ಸಂಕೀರ್ಣ ಉದ್ಘಾಟಿಸಿದ ಪ್ರಧಾನಿ ಮೋದಿ

ನವದೆಹಲಿ(ಸೆ.16): ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ದೆಹಲಿಯ ಕಸ್ತೂರ್ಬಾ ಗಾಂಧಿ ಮಾರ್ಗ ಮತ್ತು ಆಫ್ರಿಕಾ ಅವೆನ್ಯೂದಲ್ಲಿ ಎರಡು Defense Office ಕಾಂಪ್ಲೆಕ್ಸ್ ಉದ್ಘಾಟಿಸಿದ್ದಾರೆ. ಇದಕ್ಕೂ ಮುನ್ನ, ರಕ್ಷಣಾ ವಿಭಾಗದ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಇಲ್ಲಿನ ಪೂಜೆ ನೆರವೇರಿಸಿದರು. ಪ್ರಧಾನ ಮಂತ್ರಿ ಆಫ್ರಿಕಾ ಅವೆನ್ಯೂದ ರಕ್ಷಣಾ ಕಚೇರಿ ಸಂಕೀರ್ಣಕ್ಕೆ ಭೇಟಿ ನೀಡಿ ಭೂಸೇನೆ, ನೌಕಾಪಡೆ, ವಾಯುಪಡೆ ಮತ್ತು ನಾಗರಿಕ ಅಧಿಕಾರಿಗಳೊಂದಿಗೆ ಸಂವಾದ ನಡೆಸಿದ್ದಾರೆ. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ 'ಸೆಂಟ್ರಲ್ ವಿಸ್ಟಾ' ವೆಬ್‌ಸೈಟ್‌ಗೆ ಚಾಲನೆ ನೀಡಿದ್ದಾರೆ.

ಆಧುನಿಕ ರಕ್ಷಣಾ ಆವರಣ ನಿರ್ಮಿಸುವಲ್ಲಿ ಒಂದು ದೊಡ್ಡ ಹೆಜ್ಜೆ

ಸಂಕೀರ್ಣ ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ ಕೆಜಿ ಮಾರ್ಗ ಮತ್ತು ಆಫ್ರಿಕಾ ಅವೆನ್ಯೂನಲ್ಲಿ ನಿರ್ಮಿಸಲಾಗಿರುವ ಈ ಆಧುನಿಕ ಕಚೇರಿಗಳು ರಾಷ್ಟ್ರದ ಭದ್ರತೆಗೆ ಸಂಬಂಧಿಸಿದ ಎಲ್ಲಾ ಕೆಲಸಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವಲ್ಲಿ ಬಹಳ ಸಹಾಯ ಮಾಡಲಿವೆ. ರಾಜಧಾನಿಯಲ್ಲಿ ಆಧುನಿಕ ರಕ್ಷಣಾ ವಲಯವನ್ನು ಸೃಷ್ಟಿಸುವ ನಿಟ್ಟಿನಲ್ಲಿ ಇದೊಂದು ದೊಡ್ಡ ಹೆಜ್ಜೆಯಾಗಿದೆ. ಈ ಹೊಸ ರಕ್ಷಣಾ ಕಚೇರಿ ಸಂಕೀರ್ಣವು ನಮ್ಮ ಪಡೆಗಳ ಕೆಲಸವನ್ನು ಹೆಚ್ಚು ಅನುಕೂಲಕರ, ಹೆಚ್ಚು ಪರಿಣಾಮಕಾರಿಯಾಗಿ ಮಾಡುವ ನಮ್ಮ ಪ್ರಯತ್ನಗಳಿಗೆ ಮತ್ತಷ್ಟು ಬಲ ತುಂಬಲಿವೆ ಎಂದಿದ್ದಾರೆ.

ಸೇನೆಗೆ ಬಲ

ಅಲ್ಲದೇ ಇಂದು, ನಾವು 21 ನೇ ಶತಮಾನದ ಭಾರತದ ಸೇನಾ ಶಕ್ತಿಯನ್ನು ಆಧುನೀಕರಿಸಲು ಪ್ರಯತ್ನಿಸುತ್ತಿರುವಾಗ, ನಾವು ಅದನ್ನು ಒಂದು ಆಧುನಿಕ ಆಯುಧದಿಂದ ಸಜ್ಜುಗೊಳಿಸುವಲ್ಲಿ ತೊಡಗಿದ್ದೇವೆ, ಗಡಿ ಮೂಲಸೌಕರ್ಯವನ್ನು ಬಲಪಡಿಸಲಾಗುತ್ತಿದೆ, ಸಿಡಿಎಸ್ ಮೂಲಕ ಸೇನೆ ನಡುವಿನ ಕೋ ಆರ್ಡಿನೇಶನ್ ಉತ್ತಮವಾಗುತ್ತಿದೆ, ಸೇನೆಯ ಅಗತ್ಯತೆಯ ಖರೀದಿಯೂ ಬಹಳ ವೇಗವಾಗಿ ನಡೆಯುತ್ತಿದೆ ಎಂದಿದ್ದಾರೆ.

ಶಿಥಿಲಗೊಂಡಿತ್ತು ಹಿಂದಿನ ಕಟ್ಟಡ 

ಈ ವೇಳೆ ಮಾತನಾಡಿದ ರಕ್ಷಣಾ ಸಚಿವ ರಾಜನಾರ್ಥ ಸಿಂಗ್ ಹಿಂದಿನ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿದ್ದವು. ಇದು ನಮ್ಮ ಅಧಿಕಾರಿಗಳ ಕೆಲಸದ ಪರಿಸ್ಥಿತಿ ಮೇಲೆ ಪರಿಣಾಮ ಬೀರಿದ್ದವು. ಅಲ್ಲಿದ್ದ ಸ್ಥಳವನ್ನು ಬಳಸಿಕೊಳ್ಳಲು ಆಗುತ್ತಿರಲಿಲ್ಲ. ಅದಕ್ಕಾಗಿಯೇ ಈ ಎರಡು ಹೊಸ ಕ್ಯಾಂಪಸ್‌ಗಳನ್ನು ನಿರ್ಮಿಸಲಾಗಿದೆ. 7,000 ಕ್ಕಿಂತ ಹೆಚ್ಚು ಉದ್ಯೋಗಿಗಳಿಗೆ ಇಲ್ಲಿ ಸೌಲಭ್ಯವಿದೆ ಎಂದಿದ್ದಾರೆ.

ಸೆಂಟ್ರಲ್ ವಿಸ್ಟಾಗೆ ಸ್ಥಳ

ಈ ಎರಡು ಕಟ್ಟಡಗಳ ನಿರ್ಮಾಣದ ನಂತರ, ಸುಮಾರು 7.5 ಲಕ್ಷ ಚದರ ಮೀಟರ್ ವಿಸ್ತೀರ್ಣ ಸೆಂಟ್ರಲ್ ವಿಸ್ಟಾಗೆ ಮುಕ್ತಗೊಳಿಸಲಾಗುತ್ತದೆ. ಈ ಎರಡರ ನಿರ್ಮಾಣಕ್ಕೆ ಸುಮಾರು 775 ಕೋಟಿ ರೂ. ಆಫ್ರಿಕಾ ಅವೆನ್ಯೂ ಕಟ್ಟಡವನ್ನು 5 ಲಕ್ಷ ಚದರ ಮೀಟರ್‌ಗಳಲ್ಲಿ ನಿರ್ಮಿಸಲಾಗಿದೆ. ಇದು ಐದು ಬ್ಲಾಕ್‌ಗಳನ್ನು ಹೊಂದಿದೆ. ಕಸ್ತೂರ್ಬಾ ಗಾಂಧಿ ಮಾರ್ಗವನ್ನು (ಕೆಜಿ ಮಾರ್ಗ) 4.52 ಲಕ್ಷ ಚದರ ಮೀಟರ್‌ಗಳಲ್ಲಿ ನಿರ್ಮಿಸಲಾಗಿದೆ. ಇದು ಮೂರು ಬ್ಲಾಕ್‌ಗಳನ್ನು ಹೊಂದಿದೆ. ಈ ಎರಡೂ ಸಂಕೀರ್ಣಗಳು ಕ್ಯಾಂಟೀನ್, ಬ್ಯಾಂಕ್, ಎಟಿಎಂ ಇತ್ಯಾದಿ ಎಲ್ಲ ಸೌಲಭ್ಯಗಳನ್ನು ಹೊಂದಿವೆ. ಅದೇ ಸಮಯದಲ್ಲಿ, ಪರಿಸರದ ಬಗ್ಗೆ ಸಂಪೂರ್ಣ ಕಾಳಜಿ ವಹಿಸಲಾಗಿದೆ. ಅಂದರೆ ನಿರ್ಮಾಣ ವೇಳೆ ಇಲ್ಲಿ ಇಲ್ಲಿ ಒಂದೇ ಒಂದು ಮರವನ್ನು ಕತ್ತರಿಸಿಲ್ಲ.

click me!