ಸಚಿವರಿಗೆ ದಿನವಿಡೀ ಮೋದಿ ಪರೀಕ್ಷೆ| 6 ತಿಂಗಳ ಸಾಧನೆ ವಿವರ ಪಡೆದ ಪ್ರಧಾನಿ| ಮಹತ್ವಾಕಾಂಕ್ಷಿ ಯೋಜನೆ ಜಾರಿಗೆ ಸೂಚನೆ
ನವದೆಹಲಿ[ಡಿ.22]: ಅಭೂತಪೂರ್ವದ ಜಯದ ಬಳಿಕ ಅಧಿಕಾರದ ಗದ್ದುಗೆಗೆ ಮರಳಿದ ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ 6 ತಿಂಗಳ ಅವಧಿಯಲ್ಲಿ ಸಚಿವರು ತಮ್ಮ ಖಾತೆಯಲ್ಲಿ ಏನೆಲ್ಲಾ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ ಎಂಬ ಕುರಿತಾಗಿ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.
ದೆಹಲಿಯಲ್ಲಿರುವ ಪ್ರವಾಸಿ ಭಾರತೀಯ ಕೇಂದ್ರದ ಸಭಾಂಗಣದಲ್ಲಿ ಶನಿವಾರ ಬೆಳಗ್ಗೆ 10.30ಕ್ಕೆ ಆರಂಭವಾದ ಸಭೆಯು ಸಂಜೆವರೆಗೂ ನಡೆದಿದ್ದು, ಈ ವೇಳೆ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳ ಪ್ರಗತಿಯತ್ತ ಗಮನ ಹರಿಸುವಂತೆ ಸಚಿವರಿಗೆ ಪ್ರಧಾನಿ ಮೋದಿ ಅವರು ನಿರ್ದೇಶಿಸಿದರು. ಮಂತ್ರಿಮಂಡಲದ ಕಾರ್ಯಕ್ಷಮತೆ ಅಳೆಯುವುದಷ್ಟೇ ಅಲ್ಲದೆ, ಮುಂದಿನ ಸಂಪುಟ ಪುನಾರಚನೆ ಮತ್ತು ಖಾತೆ ಬದಲಾವಣೆಯೂ ಈ ಸಭೆಯ ಉದ್ದೇಶವಾಗಿತ್ತು ಎಂದು ಹೇಳಲಾಗಿದೆ.
ಅಲ್ಲದೆ, ಉದ್ಯೋಗ ಸೃಷ್ಟಿಯಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂಬ ಪ್ರತಿಪಕ್ಷಗಳ ಆರೋಪವನ್ನು ಹುಸಿ ಮಾಡುವ ಸಲುವಾಗಿ ದೇಶಾದ್ಯಂತ ನಿರುದ್ಯೋಗ ಸಮಸ್ಯೆ ನಿವಾರಣೆ ಕುರಿತಾದ ಕ್ರಮಗಳ ಬಗ್ಗೆ ಮೋದಿ ಅವರು ಸಚಿವರಿಗೆ ಪಾಠ ಮಾಡಿದರು.
ಮೇಕ್ ಇನ್ ಇಂಡಿಯಾ, ಸ್ಮಾರ್ಟ್ ಸಿಟಿ ಯೋಜನೆ, ನಮಾಮಿ ಗಂಗೆ, ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ, ರೈತರ ಆದಾಯ ದ್ವಿಗುಣ, ಪ್ರತಿಯೊಂದು ಮನೆಗೂ ನಲ್ಲಿ ನೀರು ಸೇರಿದಂತೆ ಇನ್ನಿತರ ಕೇಂದ್ರದ ಮಹತ್ವಾಕಾಂಕ್ಷಿ ಯೋಜನೆಗಳ ಅನುಷ್ಠಾನದಲ್ಲಿ ಸಚಿವರು ಎದುರಿಸುತ್ತಿರುವ ಸವಾಲುಗಳೇನು ಬಹಿರಂಗ ಪಡಿಸಿ ಎಂದು ಸಚಿವರಿಗೆ ಮೋದಿ ಸೂಚಿಸಿದರು ಎಂದು ಮೂಲಗಳು ತಿಳಿಸಿವೆ.