ಮೋದಿ ಮುಂದಿನ ಅಜೆಂಡಾ ಎನ್‌ಪಿಆರ್‌? ಸಂಪುಟದಲ್ಲಿ ಚರ್ಚೆ ಸಂಭವ

By Suvarna NewsFirst Published Dec 22, 2019, 8:24 AM IST
Highlights

ಮೋದಿ ಮುಂದಿನ ಅಜೆಂಡಾ ಎನ್‌ಪಿಆರ್‌?| ಜನಸಂಖ್ಯಾ ನೋಂದಣಿ ಬಗ್ಗೆ ನಾಡಿದ್ದು ಸಂಪುಟ ಸಭೆಯಲ್ಲಿ ಚರ್ಚೆ ಸಂಭವ| ದೇಶದ ನಿವಾಸಿಗಳ ಸಮಗ್ರ ಗುರುತಿನ ದತ್ತಾಂಶ ಸೃಷ್ಟಿಯೇ ಇದರ ಉದ್ದೇಶ

ನವದೆಹಲಿ[ಡಿ.22]: ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಸಂಸತ್ತಿನಲ್ಲಿ ಅಂಗೀಕರಿಸುವಲ್ಲಿ ಸಫಲವಾಗಿರುವ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈಗ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್‌) ಜಾರಿಗೆ ಮುಂದಾಗುವ ಸಾಧ್ಯತೆ ಇದೆ. ಪೌರತ್ವ ಕಾಯ್ದೆ ತಿದ್ದುಪಡಿ ಹಾಗೂ ರಾಷ್ಟ್ರೀಯ ನಾಗರಿಕ ನೋಂದಣಿ (ಎನ್‌ಸಿಆರ್‌) ಬಗ್ಗೆ ವ್ಯಾಪಕ ವಿರೋಧ ಕಂಡುಬಂದು ದೇಶದ ವಿವಿಧೆಡೆ ಹಿಂಸಾಚಾರ ನಡೆದಿರುವ ನಡುವೆಯೇ ಮಂಗಳವಾರ ನಡೆಯಲಿರುವ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಎನ್‌ಪಿಆರ್‌ ಬಗ್ಗೆ ಗಹನ ಚರ್ಚೆ ನಡೆಯುವ ಸಂಭವವಿದೆ ಎಂದು ಮೂಲಗಳು ತಿಳಿಸಿವೆ.

NRC ಜಾರಿಯಾದರೆ ಛತ್ತೀಸ್‌ಗಢದ ಅರ್ಧದಷ್ಟು ಜನರು ಖಾಲಿ: ಸಿಎಂ

ಎನ್‌ಪಿಆರ್‌ಗೆ ಒಪ್ಪಿಗೆ ದೊರೆತರೆ ಇದನ್ನು ಏಪ್ರಿಲ್‌ 1, 2020ರಿಂದ ಸೆಪ್ಟೆಂಬರ್‌ 20, 2020ರವರೆಗೆ ಕೈಗೊಳ್ಳುವ ನಿರೀಕ್ಷೆಯಿದೆ. ದೇಶದ ಪ್ರತಿ ಮನೆಗೂ ಗಣತಿದಾರರು ಬಂದು ಜನಸಂಖ್ಯೆ ನೋಂದಣಿ ಮಾಡಲಿದ್ದಾರೆ. ಬಯೋಮೆಟ್ರಿಕ್‌ ಸಾಧನ ಬಳಸಿ ದೇಶದ ನಿವಾಸಿಗಳ ಗುರುತಿನ ದತ್ತಾಂಶ ಸಂಗ್ರಹಿಸಲಾಗುತ್ತದೆ. ಈ ಪ್ರಕ್ರಿಯೆಯ ಮೂಲ ಉದ್ದೇಶವೆಂದರೆ ದೇಶದ ಪ್ರತಿ ನಿವಾಸಿಗಳ ಸಮಗ್ರ ಗುರುತಿನ ದತ್ತಾಂಶಗಳನ್ನು ಸೃಷ್ಟಿಸುವುದಾಗಿದೆ.

ಎನ್‌ಪಿಆರ್‌ ಅನ್ನು ಮನಮೋಹನ ಸಿಂಗ್‌ ಸರ್ಕಾರ 2010ರಲ್ಲಿ ಆರಂಭಿಸಿತ್ತು. ಅಂದಿನ ಗೃಹ ಸಚಿವ ಪಿ. ಚಿದಂಬರಂ ಅವರು ಎನ್‌ಪಿಆರ್‌ ಆರಂಭಿಸಿ ಕರಾವಳಿಯಲ್ಲಿ ನೆಲೆಸಿರುವ ಜನರ ದತ್ತಾಂಶ ಸಂಗ್ರಹಕ್ಕೆ ನಿರ್ಧರಿಸಿದ್ದರು. ಆದರೆ ನಂತರ ಈ ಪ್ರಕ್ರಿಯೆ ಸ್ಥಗಿತಗೊಂಡಿತ್ತು. ಈಗ ಇದಕ್ಕೆ ಮತ್ತೆ ಚಾಲನೆ ಕೊಟ್ಟು, ಕರಾವಳಿಯಷ್ಟೇ ಅಲ್ಲ, ದೇಶವ್ಯಾಪಿ ಪ್ರಕ್ರಿಯೆಯನ್ನಾಗಿ ಮಾಡುವುದು ಕೇಂದ್ರ ಸರ್ಕಾರದ ಉದ್ದೇಶ.

ಏನಿದು ಎನ್‌ಪಿಆರ್‌?

ದೇಶದ ಜನಗಣತಿಗೆ ಪೂರಕವಾದ ಪ್ರಕ್ರಿಯೆಯೇ ಎನ್‌ಪಿಆರ್‌. ಎನ್‌ಪಿಆರ್‌ ಮೂಲಕ ದೇಶದಲ್ಲಿರುವ ಜನರ ಸಮಗ್ರ ಗುರುತಿನ ದತ್ತಾಂಶ ಸಂಗ್ರಹಿಸಲಾಗುತ್ತದೆ. ಬಯೋಮೆಟ್ರಿಕ್‌ ಯಂತ್ರ ಬಳಸಿ ಜನರ ಗುರುತು ಪಡೆಯಲಾಗುತ್ತದೆ. ದೇಶದ ಯಾವುದೇ ಪ್ರದೇಶದಲ್ಲಿ 6 ತಿಂಗಳು ಅಥವಾ ಅದಕ್ಕಿಂತ ಹೆಚ್ಚು ಅವಧಿ ವಾಸವಾಗಿರುವವರು ರಾಷ್ಟ್ರೀಯ ಜನಸಂಖ್ಯಾ ನೋಂದಣಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕಾಗುತ್ತದೆ.

ಎನ್‌ಅರ್‌ಸಿಗೂ ಎನ್‌ಪಿಆರ್‌ಗೂ ಸಂಬಂಧವಿಲ್ಲ

ಎನ್‌ಪಿಆರ್‌ಗೂ ರಾಷ್ಟ್ರೀಯ ನಾಗರಿಕ ನೋಂದಣಿಗೂ (ಎನ್‌ಆರ್‌ಸಿ) ಸಂಬಂಧವಿಲ್ಲ. ಎನ್‌ಆರ್‌ಸಿ ಪ್ರಕ್ರಿಯೆಯು ಈ ದೇಶದ ನಾಗರಿಕರನ್ನು ಗುರುತಿಸುವ ಪ್ರಕ್ರಿಯೆ. ಆದರೆ ಎನ್‌ಪಿಆರ್‌, ಜನಗಣತಿಗೆ ಪೂರಕವಾಗಿ ದೇಶದ ಜನರ ದತ್ತಾಂಶ ಸಂಗ್ರಹಿಸುವ ಪ್ರಕ್ರಿಯೆ ಮಾತ್ರ ಎಂದು ಕೇಂದ್ರ ಗೃಹ ಸಚಿವಾಲಯದ ಮೂಲಗಳು ಹೇಳಿವೆ.

'ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ದೇಶದ ಶಾಂತಿ ಕದಡುತ್ತಿದ್ದಾರೆ'

ಡಿಸೆಂಬರ್ 22ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!