Ukraine Crisis: ಸಿಕ್ಕಿಬಿದ್ದ ವಿದ್ಯಾರ್ಥಿಗಳ ರಕ್ಷಿಸಲು ಸಿಂಧಿಯಾ ಸೇರಿ 4 ಸಚಿವರು ಉಕ್ರೇನ್‌ಗೆ!

Published : Feb 28, 2022, 01:16 PM ISTUpdated : Feb 28, 2022, 01:26 PM IST
Ukraine Crisis: ಸಿಕ್ಕಿಬಿದ್ದ ವಿದ್ಯಾರ್ಥಿಗಳ ರಕ್ಷಿಸಲು ಸಿಂಧಿಯಾ ಸೇರಿ 4 ಸಚಿವರು ಉಕ್ರೇನ್‌ಗೆ!

ಸಾರಾಂಶ

* ಮೋದಿ ನೇತೃತ್ವದಲ್ಲಿ ಕ್ಯಾಬಿನೆಟ್ ಸಭೆ * ಉಕ್ರೇನ್‌ನಲ್ಲಿ ಸಿಕ್ಕಾಕೊಂಡ ಭಾರತೀಯರ ರಕ್ಷಣೆಗೆ ರಣತಂತ್ರ * ಸಿಂಧಿಯಾ ಸೇರಿ ನಾಲ್ವರು ಸಚಿವರು ಉಕ್ರೇನ್‌ಗೆ

ನವದೆಹಲಿ(ಫೆ.28): ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳನ್ನು ಕರೆತರುವ ಉದ್ದೇಶದಿಂದ ಮೋದಿ ಸರ್ಕಾರವು ವೇಗವಾಗಿ ಕಾರ್ಯನಿರ್ವಹಿಸುತ್ತಿದೆ. ಸೋಮವಾರ ಪ್ರಧಾನಿ ಮೋದಿ ಅವರು ಸಚಿವರೊಂದಿಗೆ ಸಭೆ ನಡೆಸಿದ್ದಾರೆ. ವಿದ್ಯಾರ್ಥಿಗಳು ಮತ್ತು ಸಿಲುಕಿರುವ ಭಾರತೀಯರ ಸ್ಥಳಾಂತರಕ್ಕಾಗಿ ಸರ್ಕಾರವು ನಾಲ್ಕು ಮಂತ್ರಿಗಳನ್ನು ಉಕ್ರೇನ್‌ಗೆ ಕಳುಹಿಸಲು ನಿರ್ಧರಿಸಿದೆ. ಮೂಲಗಳ ಪ್ರಕಾರ, ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ಕೇಂದ್ರ ಸಚಿವರಾದ ಹರ್ದೀಪ್ ಸಿಂಗ್ ಪುರಿ, ಕಿರಣ್ ರಿಜಿಜು ಮತ್ತು ಜನರಲ್ (ನಿವೃತ್ತ) ವಿಕೆ ಸಿಂಗ್ ಅವರು ಉಕ್ರೇನ್‌ಗೆ ತೆರಳಿ ವಿದ್ಯಾರ್ಥಿಗಳನ್ನು ಸ್ಥಳಾಂತರಿಸುವ ಕಾರ್ಯಾಚರಣೆಯಲ್ಲಿ ಸಮನ್ವಯಗೊಳಿಸಲು ಮತ್ತು ಸಹಾಯ ಮಾಡುತ್ತಾರೆ. ಈ ಮಂತ್ರಿಗಳು ಭಾರತದ ವಿಶೇಷ ಪ್ರತಿನಿಧಿಗಳಾಗಿ ಅಲ್ಲಿಗೆ ಹೋಗುತ್ತಾರೆ.

ವಿದ್ಯಾರ್ಥಿಗಳ ರಕ್ಷಣೆ ನಮ್ಮ ಆದ್ಯತೆ ಎಂದ ಮೋದಿ

ಉಕ್ರೇನ್‌ನಲ್ಲಿನ ಪ್ರಸ್ತುತ ಪರಿಸ್ಥಿತಿಗೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಕಳೆದ 24 ಗಂಟೆಗಳಲ್ಲಿ ಎರಡು ಬಾರಿ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಇದರಲ್ಲಿ ಪ್ರಧಾನಿ ಮೋದಿ ಅವರು ಭಾರತೀಯ ನಾಗರಿಕರ ಸ್ಥಳಾಂತರಕ್ಕೆ ಒತ್ತು ನೀಡಿದರು. ಭಾನುವಾರ ಸಂಜೆ ಉತ್ತರ ಪ್ರದೇಶದಿಂದ ಹಿಂದಿರುಗಿದ ನಂತರ, ಪ್ರಧಾನಿ ಅವರು ಉಕ್ರೇನ್‌ನಲ್ಲಿನ ಪ್ರಸ್ತುತ ಪರಿಸ್ಥಿತಿಯ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್, ವಿದೇಶಾಂಗ ಕಾರ್ಯದರ್ಶಿ ಹರ್ಷ್ ಶ್ರಿಂಗ್ಲಾ, ಕ್ಯಾಬಿನೆಟ್ ಕಾರ್ಯದರ್ಶಿ ರಾಜೀವ್ ಗೌಬಾ ಮತ್ತು ಹಲವಾರು ಹಿರಿಯ ಅಧಿಕಾರಿಗಳೊಂದಿಗೆ ಎರಡು ಗಂಟೆಗಳ ಸುದೀರ್ಘ ಸಭೆ ನಡೆಸಿದರು. ಸೋಮವಾರ ಮತ್ತೊಂದು ಸಭೆ ನಡೆಸಿದರು. ಸಭೆಯಲ್ಲಿ, ಪ್ರಧಾನಿ ಮೋದಿ ಮತ್ತೊಮ್ಮೆ ಭಾರತೀಯ ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಸ್ಥಳಾಂತರಿಸುವಿಕೆಯನ್ನು ಖಚಿತಪಡಿಸುವುದು ದೇಶದ ಪ್ರಮುಖ ಆದ್ಯತೆಯಾಗಿದೆ ಎಂದು ಪುನರುಚ್ಚರಿಸಿದರು.

ಆಪರೇಷನ್ ಗಂಗಾ ಮೂಲಕ ನೆರೆಯ ದೇಶಗಳಿಂದ ಹಿಂತಿರುಗುತ್ತಿರುವ ವಿದ್ಯಾರ್ಥಿಗಳು

ಸಿಕ್ಕಿಬಿದ್ದಿರುವ ಭಾರತೀಯರ ಸ್ಥಳಾಂತರವನ್ನು ತ್ವರಿತಗೊಳಿಸಲು ಉಕ್ರೇನ್‌ನ ನೆರೆಯ ರಾಷ್ಟ್ರಗಳೊಂದಿಗೆ ಸಹಕಾರವನ್ನು ಹೆಚ್ಚಿಸುವ ಕುರಿತು ಚರ್ಚೆಗಳು ನಡೆದವು. ಸಂಘರ್ಷ ಪೀಡಿತ ಉಕ್ರೇನ್‌ನಿಂದ ಸಿಲುಕಿರುವ ವಿದ್ಯಾರ್ಥಿಗಳು ಮತ್ತು ಭಾರತೀಯ ನಾಗರಿಕರನ್ನು ಮರಳಿ ಕರೆತರಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಆಪರೇಷನ್ ಗಂಗಾ ಆರಂಭಿಸಿದೆ. "ಆಪರೇಷನ್ ಗಂಗಾ" ಅಡಿಯಲ್ಲಿ ಏರ್ ಇಂಡಿಯಾ ವಿಶೇಷ ವಿಮಾನಗಳನ್ನು ನಿರ್ವಹಿಸುತ್ತಿದೆ. ಏತನ್ಮಧ್ಯೆ, ಇಂದು ಬೆಳಿಗ್ಗೆ ಉಕ್ರೇನ್‌ನಿಂದ ಭಾರತೀಯರನ್ನು ಹೊತ್ತ ಐದನೇ ವಿಮಾನ ದೆಹಲಿ ತಲುಪಿದೆ. ಇದರಲ್ಲಿ 249 ವಿದ್ಯಾರ್ಥಿಗಳಿದ್ದರು. ಮತ್ತೊಂದು ವಿಮಾನ ಬುಡಾಪೆಸ್ಟ್‌ನಿಂದ 240 ಭಾರತೀಯರನ್ನು ಕರೆ ತಂದಿದೆ. 

ರಷ್ಯಾ ಅಧ್ಯಕ್ಷ ಪುಟಿನ್ ಅವರೊಂದಿಗೆ ಮಾತನಾಡಿದ್ದ ಪ್ರಧಾನಿ ಮೋದಿ 

ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಿದ ತಕ್ಷಣ, ಪ್ರಧಾನಿ ಮೋದಿ ಅವರು ಗುರುವಾರ ಸಂಜೆ ಸಂಪುಟ ಭದ್ರತಾ ಸಮಿತಿಯ ಸಭೆ ನಡೆಸಿದರು. ಈ ಸಭೆಯಲ್ಲಿ, ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಸುರಕ್ಷಿತವಾಗಿ ಹಿಂದಿರುಗಿಸುವ ಕುರಿತು ಚರ್ಚಿಸಲಾಯಿತು. ಪ್ರಧಾನಿ ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಮಾತನಾಡಿದ್ದಾರೆ. ಪುಟಿನ್ ಜೊತೆಗಿನ ಮಾತುಕತೆಯ ವೇಳೆ ಹಿಂಸಾಚಾರವನ್ನು ತಕ್ಷಣವೇ ನಿಲ್ಲಿಸುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ ಎಂದು ಪಿಎಂಒ ಹೇಳಿದೆ. ಅಲ್ಲದೆ, ಭಾರತೀಯ ವಿದ್ಯಾರ್ಥಿಗಳ ಸುರಕ್ಷಿತ ವಾಪಸಾತಿಯ ಬಗ್ಗೆ ಮಾತನಾಡಿದ್ದಾರೆ.

ಸಂಭಾಷಣೆಯ ಬಗ್ಗೆ ವರದುಇ ಮಾಡಿರುವ ರಷ್ಯಾ, ಪ್ರಧಾನಿ ಮೋದಿ ಅವರು ಸ್ಪಷ್ಟೀಕರಣಕ್ಕಾಗಿ ಅಧ್ಯಕ್ಷ ಪುಟಿನ್ ಅವರಿಗೆ ಧನ್ಯವಾದ ಅರ್ಪಿಸಿದರು ಮತ್ತು ಪ್ರಸ್ತುತ ಉಕ್ರೇನ್‌ನಲ್ಲಿರುವ ಭಾರತೀಯ ನಾಗರಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸಹಾಯವನ್ನು ಕೇಳಿದರು. ಅಗತ್ಯ ಸೂಚನೆಗಳನ್ನು ನೀಡಲಾಗುವುದು ಎಂದು ಅಧ್ಯಕ್ಷ ಪುಟಿನ್ ಹೇಳಿರುವುದಾಗಿ ತಿಳಿಸಿದ್ದಾರೆ.

ಉಕ್ರೇನ್‌ ಗಡಿ ಭಾಗದ ರಾಷ್ಟ್ರಗಳಿಂದ ವಿದ್ಯಾರ್ಥಿಗಳ ಏರ್‌ಲಿಫ್ಟ್

ಉಕ್ರೇನ್ ಮೇಲಿನ ವಾಯುಪ್ರದೇಶವನ್ನು ಮುಚ್ಚಿರುವುದರಿಂದ ಭಾರತೀಯರ ವಾಪಸಾತಿ ಬಹಳ ನಿಧಾನವಾಗಿ ನಡೆಯುತ್ತಿದೆ. ಹಂಗೇರಿ, ಪೋಲೆಂಡ್, ಸ್ಲೋವಾಕ್ ರಿಪಬ್ಲಿಕ್ ಮತ್ತು ರೊಮೇನಿಯಾದಿಂದ ವಿದ್ಯಾರ್ಥಿಗಳನ್ನು ವಿಮಾನಗಳ ಮೂಲಕ ಸ್ಥಳಾಂತರಿಸಲಾಗುತ್ತಿದೆ. ಮೈಲುಗಟ್ಟಲೆ ತಣ್ಣಗಿನ ವಾತಾವರಣ ಹಾಗೂ ಕೊರೆಯುವ ಚಳಿಯಲ್ಲೂ ನಡೆದು ಹೋಗಿ ವಿದ್ಯಾರ್ಥಿಗಳು ಗಡಿ ತಲುಪುತ್ತಿದ್ದಾರೆ. ಅವರನ್ನು ಇಲ್ಲಿಂದ ಸುರಕ್ಷಿತವಾಗಿ ಸ್ಥಳಾಂತರಿಸಲಾಗುತ್ತಿದೆ.

ಬಂಕರ್‌ಗಳಲ್ಲಿ ಅಡಗಿರುವ ಭಾರತೀಯ ವಿದ್ಯಾರ್ಥಿಗಳು

ಹಿಂದಿನ ಸೋವಿಯತ್ ಗಣರಾಜ್ಯವು NATO ಗೆ ಸಾಮೀಪ್ಯದಿಂದ ತಿಂಗಳುಗಳ ಕಾಲ ಉದ್ವಿಗ್ನತೆಯ ನಂತರ ರಷ್ಯಾ ಗುರುವಾರ ಬೆಳಿಗ್ಗೆ ಉಕ್ರೇನ್ ವಿರುದ್ಧ ಮಿಲಿಟರಿ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಸುಮಾರು 16,000 ಭಾರತೀಯ ವಿದ್ಯಾರ್ಥಿಗಳು ಇನ್ನೂ ಉಕ್ರೇನ್‌ನಲ್ಲಿ ಸಿಲುಕಿಕೊಂಡಿದ್ದಾರೆ. ಭೂಗತ ಮೆಟ್ರೋ ನಿಲ್ದಾಣಗಳು ಮತ್ತು ನೆಲಮಾಳಿಗೆಗಳಿಂದ ಸಾಮಾಜಿಕ ಮಾಧ್ಯಮದಲ್ಲಿ ಚಿತ್ರಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳಲಾಗಿದೆ, ಅಲ್ಲಿ ಅವರು ರಷ್ಯಾದ ಬಾಂಬ್‌ಗಳು ಮತ್ತು ಕ್ಷಿಪಣಿಗಳಿಂದ ಆಶ್ರಯ ಪಡೆಯುತ್ತಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಗ್ಯಾಸ್ ಸಿಲಿಂಡರ್ ಸ್ಫೋಟ: ಗೋವಾ ಕ್ಲಬ್‌ನಲ್ಲಿ ಅಗ್ನಿ ಅವಘಡ, 23 ಸಾವು
ಇಂದು ರಾತ್ರಿ 8ರ ಒಳಗೆ ಟಿಕೆಟ್ ಮೊತ್ತ ಮರುಪಾವತಿಸಿ : ಇಂಡಿಗೋಗೆ ಕೇಂದ್ರ ಗಡುವು