
ಮುಂಬೈ: ದುರಂತಕ್ಕೀಡಾದ ವಿಮಾನ ಲ್ಯಾಂಡಿಂಗ್‌ಗೂ ಮುನ್ನ ಆಗಸದಲ್ಲಿ ಕೊಂಚ ನಿಯಂತ್ರಣ ಕಳೆದುಕೊಂಡಂತಿತ್ತು. ಬಳಿಕ ವಿಮಾನ ದಿಢೀರ್ ನೆಲಕ್ಕಪ್ಪಳಿಸಿದ್ದು ಅದರ ಬೆನ್ನಲ್ಲೇ ಭಾರೀ ಸ್ಫೋಟದ ಸದ್ದು ಕೇಳಿಸಿತು. ಸ್ಫೋಟದ ತೀವ್ರತೆಗೆ ಬೆಂಕಿಯ ಕೆನ್ನಾಲಗೆ ಮುಗಿಲೆತ್ತರಕ್ಕೆ ಚಿಮ್ಮಿತು!
ಪುಣೆಯ ಬಾರಾಮತಿಯಲ್ಲಿ ಸಂಭವಿಸಿದ ಮಹಾರಾಷ್ಟ್ರ ಡಿಸಿಎಂ, ಎನ್‌ಸಿಪಿ ಮುಖಂಡ ಅಜಿತ್ ಪವಾರ್ ಅವರಿದ್ದ ವಿಶೇಷ
ವಿಮಾನ ದುರಂತವನ್ನು ಪ್ರತ್ಯಕ್ಷದರ್ಶಿ ಮಹಿಳೆಯೊಬ್ಬರು ವಿವರಿಸಿದ್ದು ಹೀಗೆ.
‘ಬೆಳಗ್ಗೆ ದುರಂತಕ್ಕೀಡಾದ ವಿಮಾನ ಏರ್ಪೋರ್ಟ್‌ಗೆ ಒಂದು ಸುತ್ತುಹೊಡೆಯಿತು. ಆ ವೇಳೆ ವಿಮಾನ ಕೊಂಚ ನಿಯಂತ್ರಣ ಕಳೆದುಕೊಂಡಂತಿತ್ತು. ವಿಮಾನ ಲ್ಯಾಂಡಿಂಗ್‌ಗಾಗಿ ರನ್‌ವೇಯತ್ತ ನುಗ್ಗುತ್ತಿತ್ತು. ಈ ಸಂದರ್ಭದಲ್ಲಿ ವಿಮಾನ ನೇರವಾಗಿ ನೆಲಕ್ಕಪ್ಪಳಿಸಿದ್ದು, ಸ್ಫೋಟ ಸಂಭವಿಸಿತು. ಆ ಸದ್ದು ಎಷ್ಟು ತೀವ್ರವಾಗಿತ್ತೆಂದರೆ ಅದರ ಸದ್ದು ದೂರದಲ್ಲಿರುವ ನಮ್ಮ ಮನೆಯವರೆಗೂ ಕೇಳಿಸಿತು ಎಂದು ಪ್ರತ್ಯಕ್ಷದರ್ಶಿ ಮಹಿಳೆಯೊಬ್ಬರು ಹೇಳಿಕೊಂಡಿದ್ದಾರೆ.
ಸ್ಫೋಟದ ಬೆನ್ನಲ್ಲೇ ವಿಮಾನದ ಹಲವು ಭಾಗಗಳು ಮುಗಿಲೆತ್ತರಕ್ಕೆ ಚಿಮ್ಮಿದವು. ಕೆಲವು ನಮ್ಮ ಮನೆ ಸಮೀಪ ಬದ್ದು ಬಿದ್ದವು. ವಿಮಾನವು ಕೆಳಗಿಳಿಯುವ ಮೊದಲು ಒಂದು ಕಡೆ ಬಾಗಿದ್ದು ಗಮನಕ್ಕೆ ಬಂತು. ವಿಮಾನ ದುರಂತವನ್ನು ನಾವು ಕಣ್ಣಾರೆ ಕಂಡಿದ್ದು, ಆ ಘಟನೆ ಆಘಾತಮೂಡಿಸುವಂತಿದೆ ಎಂದು ಮಹಿಳೆ ತಿಳಿಸಿದ್ದಾರೆ.
ಮತ್ತೊಬ್ಬ ಪ್ರತ್ಯಕ್ಷದರ್ಶಿ ಪ್ರಕಾರ, ವಿಮಾನವು ಲ್ಯಾಂಡಿಂಗ್ ಪ್ರಯತ್ನದಲ್ಲಿದ್ದಾಗ ಕೆಳಕ್ಕಿಳಿಯುವ ರೀತಿ ನೋಡಿದರೆ ಅದು ದುರಂತಕ್ಕೀಡಾಗುವುದು ಸ್ಪಷ್ಟವಾಗಿತ್ತು. ಆ ಸಂದರ್ಭದಲ್ಲಿ ವಿಮಾನವು ರನ್‌ವೇಯಿಂದ ಅಂದಾಜು 100 ಮೀಟರ್ ಎತ್ತರದಲ್ಲಿತ್ತು. ನೆಲಕ್ಕಪ್ಪಳಿಸಿದ ವಿಮಾನದತ್ತ ನಾವು ಓಡುವಾಗ ಭಾರೀ ಬೆಂಕಿ ಕಾಣಿಸಿಕೊಂಡಿದ್ದು, ಅದರ ಬೆನ್ನಲ್ಲೇ ನಾಲ್ಕೈದು ಸರಣಿ ಸ್ಫೋಟಗಳು ಕೇಳಿಸಿದವು. ಇದು ದುರಂತಕ್ಕೀಡಾದ ವಿಮಾನದ ಸಮೀಪ ತೆರಳುವುದರಿಂದ ನಮ್ಮನ್ನು ತಡೆಯಿತು ಎಂದು ಹೇಳಿದ್ದಾರೆ.
ದುರಂತ ಸ್ಥಳದಲ್ಲಿ ಭಾರೀ ಬೆಂಕಿ ಹೊತ್ತಿಕೊಂಡಿತ್ತು. ವಿಮಾನದಲ್ಲಿ ಅಜಿತ್ ಪವಾರ್ ಅವರಿದ್ದರು ಎಂಬುದು ನಮಗೆ ನಂತರ ಗೊತ್ತಾಯಿತು ಎಂದಿದ್ದಾರೆ.
ಫ್ಲೈಟ್ ರೇಡಾರ್ ಪ್ರಕಾರ, ಮುಂಬೈನಿಂದ ವಿಮಾನವು 8.10ಕ್ಕೆ ಆಗಸಕ್ಕೇರಿದೆ. ಬಾರಾಮತಿ ಏರ್ಪೋರ್ಟ್ ಸಮೀಪ 8.45ರ ವೇಳೆಗೆ ರಾಡಾರ್‌ನಿಂದ ಕಣ್ಮರೆಯಾಗಿದೆ.
ಮುಂಬೈ: ಕಳಪೆ ಗೋಚರತೆ ನಡುವೆಯೂ ಅಜಿತ್ ಪವಾರ್ ಪ್ರಯಾಣಿಸುತ್ತಿದ್ದ ವಿಮಾನವನ್ನು ಬಾರಾಮತಿ ಏರ್‌ಸ್ಟ್ರಿಪ್‌ನಲ್ಲಿ ಲ್ಯಾಂಡ್ ಮಾಡಲು ಏರ್ ಟ್ರಾಫಿಕ್ ಕಂಟ್ರೋಲ್ (ಎಟಿಸಿ) ಪೈಲಟ್‌ಗೆ ಅನುಮತಿ ನೀಡಿತ್ತು. ಆದರೆ ಲ್ಯಾಂಡ್ ಮಾಡುವ ಕುರಿತಾಗಿ ಪೈಲಟ್ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಅದಾಗಿ ನಿಮಿಷದ ನಂತರ ರನ್‌ವೇಯ ಅಂಚಿನಲ್ಲಿ ಬೆಂಕಿ ಹೊತ್ತಿಕೊಂಡಿತು ಎಂದು ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ.ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ್ದು, ‘ರನ್‌ವೇ 11ರಲ್ಲಿ ಬೆಳಿಗ್ಗೆ 8.43ಕ್ಕೆ ವಿಮಾನವನ್ನು ಇಳಿಸಲು ಎಟಿಸಿ ಅನುಮತಿ ನೀಡಿತು. ಆದರೆ ಪೈಲಟ್ ಎಟಿಸಿಗೆ ಪ್ರತಿಕ್ರಿಯೆ ನೀಡಲಿಲ್ಲ. ಮುಂದೆ, 8.44ಕ್ಕೆ ರನ್‌ವೇ 11ರ ಸುತ್ತ ಜ್ವಾಲೆ ವ್ಯಾಪಿಸಿತು’ ಎಂದು ತಿಳಿಸಿದೆ.
ಬಾರಾಮತಿ ಏರ್‌ಸ್ಟ್ರಿಪ್ ಅನ್ನು ಖಾಸಗಿಯವರು ನಿರ್ವಹಿಸುತ್ತಾರೆ. ಇದು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅಡಿ ಬರುವುದಿಲ್ಲ. ಎಟಿಸಿ ಪುಣೆಯಲ್ಲಿದ್ದು, ಅಲ್ಲಿಂದ ಮಾಹಿತಿ ನೀಡಲಾಗುತ್ತದೆ.
ನವದೆಹಲಿ: ವಿಮಾನ ದುರಂತದ ಬೆನ್ನಲ್ಲೇ ಭಾರತೀಯ ವಾಯುಪಡೆಯು ಬಾರಾಮತಿ ಏರ್‌ಸ್ಟ್ರಿಪ್‌ನಲ್ಲಿ ಎಟಿಸಿ ಮತ್ತು ಹಮಾಮಾನ ಸೇವೆ ಒದಗಿಸಲು ಮೀಸಲಾದ ತಂಡವೊಂದನ್ನು ನಿಯೋಜಿಸಿರುವುದಾಗಿ ತಿಳಿಸಿದೆ. ಇಲ್ಲಿ ಈವರೆಗೂ ಎಟಿಸಿ ಇರದ ಕಾರಣ ಈ ಕ್ರಮ ಜರುಗಿಸಲಾಗಿದೆ.ಈ ಬಗ್ಗೆ ಎಕ್ಸ್‌ನಲ್ಲಿ ಮಾಹಿತಿ ನೀಡಿದ್ದು, ‘ದುರಂತದ ನಂತರ ನಾಗರಿಕ ಸಚಿವಾಲಯದ ತುರ್ತು ವಿನಂತಿ ಮೇರೆಗೆ, ಭಾರತೀಯ ವಾಯುಪಡೆಯು ಬಾರಾಮತಿಯಲ್ಲಿ ‘ವಾಯು ಯೋಧ’ರ (ಏರ್ ವಾರಿಯರ್ಸ್) ಸಮರ್ಪಿತ ತಂಡವನ್ನು ನಿಯೋಜಿಸಿದೆ. ಅವರು ಸುರಕ್ಷಿತ ವಾಯು ಕಾರ್ಯಾಚರಣೆಗೆ ಅಗತ್ಯವಾದ ಎಟಿಸಿ ಮತ್ತು ಹವಾಮಾನ ಸೇವೆಗಳನ್ನು ಒದಗಿಸುತ್ತಿದ್ದಾರೆ’ ಎಂದು ತಿಳಿಸಿದೆ.
ಸ್ಫೋಟದ ದೃಶ್ಯ ಸೀಸಿ ಟೀವಿಯಲ್ಲಿ ಸೆರೆ
ನವದೆಹಲಿ: ಅಜಿತ್ ಪವಾರ್ ಅವರಿದ್ದ ವಿಮಾನ ನೆಲಕ್ಕಪ್ಪಳಿಸಿದ ಬಳಿಕ ಸಂಭವಿಸಿದ ಭಾರೀ ಸ್ಫೋಟ, ದಟ್ಟ ಹೊಗೆಯ ದೃಶ್ಯಾವಳಿ ಬಾರಾಮತಿ ಏರ್ಪೋರ್ಟ್ ಸಮೀಪದ ಹೈವೇಯಲ್ಲಿ ಅಳವಡಿಸಲಾಗಿದ್ದ ಸೀಸಿಟೀವಿಯೊಂದರಲ್ಲಿ ಸೆರೆಯಾಗಿದೆ.ಬೆಳಗ್ಗೆ 8 ಗಂಟೆ 46 ನಿಮಿಷಕ್ಕೆ ಸರಿಯಾಗಿ ಭಾರೀ ಪ್ರಮಾಣದ ಬೆಂಕಿ, ಆ ಬಳಿಕ ದಟ್ಟ ಹೊಗೆ ಕಾಣಸಿಕೊಂಡಿದ್ದು ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ