ಸೂಕ್ತ ಅವಕಾಶಕ್ಕಾಗಿ ಕಾಯುತ್ತಿದೆ ಬಿಜೆಪಿ, ಬಂಡಾಯ ತಳಮಟ್ಟಕ್ಕೂ ಹಬ್ಬುವ ನಿರೀಕ್ಷೆಯಲ್ಲಿ ಕೇಸರಿ ಪಡೆ!

By Suvarna NewsFirst Published Jun 26, 2022, 9:09 AM IST
Highlights

* ಸರ್ಕಾರ ರಚಿಸಲು ಸದ್ಯಕ್ಕೆ ಹಕ್ಕು ಮಂಡಿಸದು ಬಿಜೆಪಿ?

* ಬಂಡಾಯ ತಳಮಟ್ಟಕ್ಕೂ ಹಬ್ಬುವ ನಿರೀಕ್ಷೆಯಲ್ಲಿ ಕೇಸರಿ ಪಡೆ

* ಶಿವಸೇನೆ ಕಾರ್ಯಕರ್ತರ ಸೆಳೆದು ಪಕ್ಷ ಬಲಪಡಿಸಲು ಚಿಂತನೆ

ನವದೆಹಲಿ(ಜೂ.26): ಮಹಾರಾಷ್ಟ್ರದ ಆಡಳಿತಾರೂಢ ಶಿವಸೇನೆಯ 3ನೇ 2ರಷ್ಟುಶಾಸಕರು ಪಕ್ಷದ ನಾಯಕತ್ವದ ವಿರುದ್ಧ ಬಂಡೆದ್ದಿದ್ದಾರೆ. ಬಿಜೆಪಿ ಏನಾದರೂ ಅವಿಶ್ವಾಸಮತ ಸಾಬೀತಿಗೆ ಪಟ್ಟು ಹಿಡಿದರೆ ಸರ್ಕಾರ ಪತನಗೊಳ್ಳಲಿದೆ. ಆದರೂ ಸರ್ಕಾರ ರಚಿಸಲು ಬಿಜೆಪಿ ಏಕೆ ಯತ್ನಿಸುತ್ತಿಲ್ಲ?

ಶಿವಸೇನೆಯಲ್ಲಿ ಆರಂಭವಾಗಿರುವ ಬಿಕ್ಕಟ್ಟು ಈಗ ರಾಜ್ಯ ಮಟ್ಟದಲ್ಲಿದೆ. ಅದು ನಗರಪಾಲಿಕೆ, ಪಟ್ಟಣ ಹಾಗೂ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳವರೆಗೂ ತನ್ನಿಂತಾನೇ ಹೋಗಲಿ ಎಂದು ಪಕ್ಷ ಕಾಯುತ್ತಿದೆ. ಹೀಗಾಗಿ ಸರ್ಕಾರ ರಚನೆಗೆ ಹಕ್ಕು ಮಂಡಿಸುವ ಆತುರ ಇಲ್ಲ. ಬಂಡಾಯ ಹಬ್ಬುವವರೆಗೂ ಕಾಯುತ್ತೇವೆ ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ಹೇಳಿಕೊಂಡಿದ್ದಾರೆ.

ಮಹಾರಾಷ್ಟ್ರದಲ್ಲಿ ಆರಂಭವಾಗಿರುವ ರಾಜಕೀಯದಾಟ ಬರೀ ಸರ್ಕಾರ ಬದಲಿಸುವುದಕ್ಕಷ್ಟೇ ಸೀಮಿತವಾಗಿಲ್ಲ. ಶಿವಸೇನೆಯ ಬೆಂಬಲಿಗರನ್ನು ಸೆಳೆದು, ಹಿಂದುತ್ವದ ಆಧಾರದಲ್ಲಿ ಪಕ್ಷದ ಬಲಪಡಿಸುವ ಬಿಜೆಪಿಯ ನಿರಂತರ ಪ್ರಯತ್ನ ಎಂದು ಹೆಸರು ಬಹಿರಂಗಪಡಿಸಲು ಉದ್ದೇಶಿಸದ ಆ ನಾಯಕರು ಹೇಳಿದ್ದಾರೆ.

ಈ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿ ಶಿವಸೇನೆಯ ಬಂಡಾಯ ನಾಯಕ ಏಕನಾಥ ಶಿಂಧೆ ಅವರ ಬಣದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಂಡಾಯ ಶಾಸಕರು ಇರುವಂತೆ ನೋಡಿಕೊಳ್ಳುವುದು. ಬಾಳಾಸಾಹೇಬ್‌ ಠಾಕ್ರೆ ಅವರ ಆದರ್ಶಗಳನ್ನು ಎತ್ತಿ ಹಿಡಿಯುವ ಪ್ರತಿಜ್ಞೆಯನ್ನು ಅವರು ಮಾಡುವಂತೆ ನೋಡಿಕೊಳ್ಳುವುದು ಎನ್ನುತ್ತಾರೆ ಬಿಜೆಪಿ ನಾಯಕ.

2019ರ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಬಳಿಕ ಉದ್ಧವ್‌ ಠಾಕ್ರೆ ಅವರು ಬಿಜೆಪಿ ಸಂಗಡ ತೊರೆದು ಎನ್‌ಸಿಪಿ ಹಾಗೂ ಕಾಂಗ್ರೆಸ್‌ ಜತೆ ಕೈಜೋಡಿಸಿದರು. ಅವರು ಮಾಡಿದ ಆ ವಂಚನೆಯಿಂದ ಬಿಜೆಪಿ ತೀವ್ರ ಅಸಮಾಧಾನಗೊಂಡಿತ್ತು. ಶಿವಸೇನೆಯೊಳಗಿನ ಬಿಕ್ಕಟ್ಟು ಆ ಸರ್ಕಾರ ರಚನೆಯಾದಾಗಲೇ ಆರಂಭವಾಗಿತ್ತು. ಜೂ.20ರಂದು ವಿಧಾನಪರಿಷತ್‌ ಚುನಾವಣೆ ಮತ ಎಣಿಕೆ ಮುಗಿದ ಬಳಿಕ ಸ್ಫೋಟಗೊಂಡಿತು ಎಂದು ಅವರು ವಿವರಿಸಿದ್ದಾರೆ.

ಉದ್ಧವ್‌ಗೆ ಗುಪ್ತಚರ ಮಾಹಿತಿ ಏಕೆ ಸಿಗಲಿಲ್ಲ?

ಶಿವಸೇನೆ ಶಾಸಕರ ಬಂಡಾಯದ ಕುರಿತು ಸುಳಿವು ಅರಿಯಲು ಗುಪ್ತಚರ ಇಲಾಖೆ ವಿಫಲವಾಯಿತೆ ಎಂಬ ವಾದವನ್ನು ಬಿಜೆಪಿಯ ನಾಯಕ ಅಲ್ಲಗಳೆಯುತ್ತಾರೆ. ಗುಪ್ತಚರ ಅಧಿಕಾರಿಗಳು ಪ್ರತಿನಿತ್ಯ ನೀಡುವ ಮಾಹಿತಿಯನ್ನು ಸ್ವೀಕರಿಸಲು ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರು ಹಿರಿಯ ಸಚಿವ ಹಾಗೂ ಬಂಟನೊಬ್ಬನನ್ನು ನೇಮಿಸಿದ್ದರು ಎಂದು ಅವರು ಹೇಳಿದ್ದಾರೆ.

click me!