ಗುಜರಾತ್‌ ಗಲಭೆ: ಮಾಜಿ ಐಪಿಎಸ್‌ ಶ್ರೀಕುಮಾರ್‌ ಬಂಧನ, ಭಟ್‌ ಮೇಲೆ ಕೇಸ್‌!

By Suvarna NewsFirst Published Jun 26, 2022, 8:32 AM IST
Highlights

* ಗಲಭೆ ಕುರಿತು ಸುಳ್ಳು ದಾಖಲೆ ಸೃಷ್ಟಿಆರೋಪ

* ಗುಜರಾತ್‌ ಗಲಭೆ ಹೋರಾಟಗಾರ್ತಿ ತೀಸ್ತಾ ವಶಕ್ಕೆ

* ಮಾಜಿ ಐಪಿಎಸ್‌ ಶ್ರೀಕುಮಾರ್‌ ಬಂಧನ, ಭಟ್‌ ಮೇಲೆ ಕೇಸ್‌

ಮುಂಬೈ(ಜೂ.26): ಗೋಧ್ರೋತ್ತರ (ಗುಜರಾತ್‌) ಹತ್ಯಾಕಾಂಡದ ಕುರಿತು ಸುಪ್ರೀಂ ಕೋರ್ಚ್‌ ಎಸ್‌ಐಟಿ ವರದಿಯನ್ನು ಎತ್ತಿಹಿಡಿದ ಒಂದು ದಿನದ ನಂತರ ಈ ಹತ್ಯಾಕಾಂಡದ ವಿರುದ್ಧ ಹೋರಾಟ ನಡೆಸುತ್ತಿದ್ದ ಮಾನವಹಕ್ಕು ಹೋರಾಟಗಾರ್ತಿ ತೀಸ್ತಾ್ತ ಸೆಟಲ್ವಾಡ್‌ ಅವರನ್ನು ಗುಜರಾತ್‌ ಎಸ್‌ಐಟಿ ವಶಕ್ಕೆ ಪಡೆದಿದೆ. ಈ ಮೂಲಕ ಪ್ರಕರಣದಲ್ಲಿ ಅಂದಿನ ಗುಜರಾತ್‌ನ ಮೋದಿ ಸರ್ಕಾರದ ವಿರುದ್ಧ ಹೋರಾಡಿದವರ ಮೇಲೆ ಕ್ರಮ ಕೈಗೊಳ್ಳುವಿಕೆ ಆರಂಭವಾಗಿದೆ.

ಈ ನಡುವೆ, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸದಾ ಗುಜರಾತ್‌ ಸರ್ಕಾರದ ವಿರುದ್ಧ ಹೇಳಿಕೆ ನೀಡುತ್ತಿದ್ದ ಮಾಜಿ ಐಪಿಎಸ್‌ ಅಧಿಕಾರಿ ಆರ್‌.ಬಿ. ಶ್ರೀಕುಮಾರ್‌ ವಿರುದ್ಧವೂ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ. ಅಧಿಕಾರಿಗಳಾದ ಸಂಜೀವ್‌ ಭಟ್‌ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈಗಾಗಲೇ ಕಸ್ಟಡಿ ಸಾವಿನ ಅನ್ಯ ಪ್ರಕರಣದಲ್ಲಿ ಭಟ್‌ ದೋಷಿಯಾಗಿದ್ದು, ಜೈಲಲ್ಲಿದ್ದಾರೆ.

ದೂರು ಏನು?:

ತೀಸ್ತಾ, ಶ್ರೀಕುಮಾರ್‌ ಹಾಗೂ ಸಂಜೀವ್‌ ಭಟ್‌ ವಿರುದ್ಧ ಶನಿವಾರ ಮುಂಜಾನೆ ಗುಜರಾತ್‌ನಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಈ ದೂರಿನಲ್ಲಿ ಗಲಭೆ ಸಂತ್ರಸ್ತರೊಂದಿಗೆ ವ್ಯಾಪಕವಾಗಿ ಕೆಲಸ ಮಾಡಿದ ಸೆಟಲ್ವಾಡ್‌ ಅವರ ಎನ್‌ಜಿಒ ಮಾಡಿದ ಆರೋಪಗಳನ್ನು ಸುಪ್ರೀಂ ಕೋರ್ಚ್‌ ಖಾರವಾಗಿ ವಿರೋಧಿಸಿದ್ದನ್ನು ಉಲ್ಲೇಖಿಸಲಾಗಿದೆ. ಈ ಹಿನ್ನೆಲೆಯಲ್ಲಿ ತೀಸ್ತಾ ಅವರನ್ನು ನಕಲಿ ಮತ್ತು ಸುಳ್ಳು ದಾಖಲೆಗಳ ಸೃಷ್ಟಿಆರೋಪದ ಅಡಿ ಮುಂಬೈನ ಅವರ ನಿವಾಸದಿಂದ ವಶಕ್ಕೆ ಪಡೆಯಲಾಗಿದೆ.

ಇನ್ನು ಇದೇ ರೀತಿ ಗುಜರಾತ್‌ ಸರ್ಕಾರದ ವಿರುದ್ಧ ಮಿಥ್ಯಾರೋಪ ಮಾಡಿದ್ದರು ಎಂದು ಆರೋಪಿಸಿ ಸಂಜೀವ್‌ ಭಟ್‌ ಹಾಗೂ ಶ್ರೀಕುಮಾರ್‌ ವಿರುದ್ಧವೂ ದೂರು ದಾಖಲಾಗಿದೆ.

‘ಮೋದಿ ಅವರ ವ್ಯಕ್ತಿತ್ವವನ್ನು ಹಾಳು ಮಾಡಲು ಗುಜರಾತ್‌ ಗಲಭೆಗೆ ಸಂಬಂಧಿಸಿದಂತೆ ಸೆಟಲ್ವಾಡ್‌ ಅವರು ಸುಳ್ಳು ವಿಚಾರಗಳನ್ನು ಹರಡಿದ್ದಾರೆ’ ಎಂದು ಕೇಂದ್ರ ಗೃಹಸಚಿವ ಅಮಿತ್‌ ಶಾ ಅವರು ಶನಿವಾರ ಬೆಳಗ್ಗೆಯಷ್ಟೇ ಹೇಳಿದ್ದರು.

ಗೋಧ್ರಾ ಹತ್ಯಾಕಂಡದಲ್ಲಿ ಉನ್ನತಮಟ್ಟದ ಸಂಚು ಅಡಗಿದೆ ಎಂದು ಸುಪ್ರೀಂ ಕೋರ್ಚ್‌ಗೆ ಅರ್ಜಿ ಸಲ್ಲಿಸಿದವರಲ್ಲಿ ಸೆಟಲ್ವಾಡ್‌ ಸಹ ಒಬ್ಬರು. ಎಸ್‌ಐಟಿ ಪ್ರಧಾನಿ ಮೋದಿಗೆ ಕ್ಲೀನ್‌ಚಿಟ್‌ ನೀಡಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ಶುಕ್ರವಾರ ತಿರಸ್ಕರಿಸಿದ ಸುಪ್ರೀಂ ಕೋರ್ಚ್‌, ನಕಲಿ ವರದಿಗಳನ್ನು ನೀಡಿದ್ದಾರೆ ಎಂಬ ಕಾರಣಕ್ಕೆ ಸೆಟಲ್ವಾಡ್‌ ವಿರುದ್ಧ ಹರಿಹಾಯ್ದಿತ್ತು.

click me!