ಭಿನ್ನರ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರ ಉದ್ಧವ್‌ಗೆ: ಶಿವಸೇನೆ ಕಾರ್ಯಕಾರಿಣಿಯಲ್ಲಿ ಮಹತ್ವದ ನಿರ್ಧಾರ!

By Suvarna NewsFirst Published Jun 26, 2022, 8:43 AM IST
Highlights

* ಬಾಳಾ ಠಾಕ್ರೆ, ಶಿವಸೇನೆ ಹೆಸರನ್ನು ಇನ್ಯಾರೂ ಬಳಸುವಂತಿಲ್ಲ

* ಭಿನ್ನರ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರ ಉದ್ಧವ್‌ಗೆ

* ಶಿವಸೇನೆ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಮಹತ್ವದ ನಿರ್ಧಾರ

ಮುಂಬೈ(ಜೂ.26): ಪಕ್ಷದ ವಿರುದ್ಧವೇ ಬಂಡಾಯ ಎದ್ದಿರುವ 38 ಶಾಸಕರ ವಿರುದ್ಧ ಯಾವುದೇ ರೀತಿಯ ಶಿಸ್ತು ಕ್ರಮ ಕೈಗೊಳ್ಳುವ ಸಂಪೂರ್ಣ ಅಧಿಕಾರವನ್ನು ಪಕ್ಷದ ಅಧ್ಯಕ್ಷ ಮತ್ತು ಮುಖ್ಯಮಂತ್ರಿ ಉದ್ಧವ್‌ ಠಾಕ್ರೆಗೆ ನೀಡುವ ಮಹತ್ವದ ನಿರ್ಧಾರವನ್ನು ಶನಿವಾರ ಇಲ್ಲಿ ನಡೆದ ಶಿವಸೇನೆಯ ರಾಷ್ಟ್ರೀಯ ಕಾರ್ಯಕಾರಿಣಿ ಕೈಗೊಂಡಿದೆ.

ಇದೇ ವೇಳೆ ಇತರೆ ಯಾವುದೇ ರಾಜಕೀಯ ಸಂಘಟನೆ ಶಿವಸೇನಾ ಅಥವಾ ದಿ.ಬಾಳಾ ಠಾಕ್ರೆ ಅವರ ಹೆಸರನ್ನು ಯಾವುದೇ ರೀತಿಯಲ್ಲಿ ಬಳಸುವಂತಿಲ್ಲ ಎಂದೂ ಅದು ನಿರ್ಣಯ ಅಂಗೀಕರಿಸಿದ್ದು, ಈ ಸಂಬಂಧ ಚುನಾವಣಾ ಆಯೋಗಕ್ಕೂ ಪತ್ರ ಬರೆಯಲು ನಿರ್ಧರಿಸಿದೆ.

ಶಿಂಧೆ ಬಣ ತಮ್ಮನ್ನು ‘ಶಿವಸೇನಾ ಬಾಳಾಸಾಹೇಬ್‌ ಗುಂಪು’ ಎಂದು ಶನಿವಾರ ಬೆಳಗ್ಗೆ ಕರೆದುಕೊಂಡಿತ್ತು. ಹೀಗಾಗಿ ‘ಶಿವಸೇನಾ ಬಾಳಾಸಾಹೇಬ್‌’ ಎಂಬ ಪಕ್ಷ ರಚನೆ ಆಗಬಹುದು ಎಂಬ ಊಹಾಪೋಹಕ್ಕೆ ಇದು ದಾರಿ ಮಾಡಿತ್ತು. ಇದರ ಬೆನ್ನಲ್ಲೇ ಶಿಂಧೆ ಬಣಕ್ಕೆ ಉದ್ಧವ್‌ ಎದಿರೇಟು ನೀಡಿದ್ದಾರೆ.

ಪಕ್ಷದಲ್ಲಿನ ಭಾರೀ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಶನಿವಾರ ಮಧ್ಯಾಹ್ನ 1 ಗಂಟೆಗೆ ತುರ್ತಾಗಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯನ್ನು ಮುಂಬೈನಲ್ಲಿ ಕರೆಯಲಾಗಿತ್ತು. ಸಭೆಯಲ್ಲಿ ಸಾಕಷ್ಟುವಿಷಯಗಳನ್ನು ಚರ್ಚಿಸಿದ ಬಳಿಕ 6 ನಿರ್ಣಯಗಳ್ನು ಅಂಗೀಕರಿಸಲಾಯಿತು ಎಂದು ಪಕ್ಷದ ಹಿರಿಯ ನಾಯಕ ಸಂಜಯ್‌ ರಾವುತ್‌ ತಿಳಿಸಿದರು.

ಆದರೆ ಬಂಡಾಯ ಶಾಸಕರ ಜೊತೆಗಿನ ಸಂಧಾನದ ಮಾರ್ಗವನ್ನು ಇನ್ನೂ ಮುಕ್ತವಾಗಿರಿಸುವ ನಿಟ್ಟಿನಲ್ಲಿ, ಏಕನಾಥ್‌ ಶಿಂಧೆ ಸೇರಿದಂತೆ 38 ನಾಯಕರ ವಿರುದ್ಧ ತಕ್ಷಣಕ್ಕೆ ಯಾವುದೇ ಶಿಸ್ತು ಕ್ರಮ ಕೈಗೊಳ್ಳುವುದರಿಂದ ಪಕ್ಷ ಹಿಂದಕ್ಕೆ ಸರಿದಿದೆ. ಈ ಮೂಲಕ ಮಹಾ ಅಘಾಡಿ ಸರ್ಕಾರವನ್ನು ಉಳಿಸಿಕೊಳ್ಳುವ ಯತ್ನವನ್ನು ಸಿಎಂ ಉದ್ಧವ್‌ ಬಣ ಮುಂದುವರೆಸಿದೆ.

ಏನೇನು ನಿರ್ಣಯ?

- ಬಂಡುಕೋರರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಸಂಪೂರ್ಣ ಅಧಿಕಾರ ಪಕ್ಷದ ಅಧ್ಯಕ್ಷ ಉದ್ಧವ್‌ ಠಾಕ್ರೆಗೆ

- ಇತರೆ ಯಾವುದೇ ರಾಜಕೀಯ ಸಂಘಟನೆ ಶಿವ ಸೇನಾ ಅಥವಾ ಬಾಳಾ ಠಾಕ್ರೆ ಹೆಸರನ್ನು ಬಳಸುವಂತಿಲ್ಲ.

- ಶಿವ ಸೇನೆ ಬಾಳಾಠಾಕ್ರೆಗೆ ಸೇರಿದ್ದು ಅವರ ಹಿಂದುತ್ವ ಸಿದ್ಧಾಂತ ಮತ್ತು ಮರಾಠಿ ಅಸ್ಮಿತೆ ಮುಂದುವರಿಕೆಗೆ ಬದ್ಧ

click me!