ಕೊರೋನಾ ವೈರಸ್ ನಿಯಂತ್ರಿಸುವ ನಿಟ್ಟಿನಲ್ಲಿ ದೇಶದಾದ್ಯಂತ ಲಾಕ್‌ಡೌನ್| ಬಾಯಿ ಚಪಲಕ್ಕೆಂದು ತರಿಸಿದ್ದ ಪಿಜ್ಜಾದಿಂದ ಕುತ್ತು| ಡೆಲಿವರಿ ಬಾಯ್‌ಗೆ ಕೊರೋನಾ ಸೋಂಕು, ಪಿಜ್ಜಾ ತರಿಸಿದ 72 ಕುಟುಂಬಕ್ಕೆ ಕ್ವಾರಂಟೈನ್
ನವದೆಹಲಿ(ಏ.16): ಕೊರೋನಾ ವೈರಸ್ ನಿಯಂತ್ರಿಸುವ ನಿಟ್ಟಿನಲ್ಲಿ ದೇಶದಾದ್ಯಂತ ಲಾಕ್‌ಡೌನ್ ಹೇರಲಾಗಿದ್ದು, ಕೆಲ ಅಗತ್ಯ ಸೇವೆಗಳಿಗಷ್ಟೇ ಅವಕಾಶ ನೀಡಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಒಂದೆಡೆ ಬಡ ಕುಟುಂಬ ಮಂದಿ ಒಂದೊತ್ತಿನ ಊಟಕ್ಕಾಗಿ ಪರದಾಡುತ್ತಿದ್ದು, ಹಸಿವಿನಿಂದ ಕಂಗಾಲಾಗಿದ್ದರೆ, ಮತ್ತೊಂದೆಡೆ ಬಾಯಿ ಚಪಲಕ್ಕೆಂದು ಆನ್‌ಲೈನ್ ಮೂಲಕ ಫುಡ್ ಆರ್ಡರ್ ಮಾಡುತ್ತಿದ್ದಾರೆ. ಆದರೀಗ ಪಿಜ್ಜಾ ಆರ್ಡರ್ ಮಾಡಿದ 72 ಕುಟುಂಬಗಳಿಗೆ ಶಾಕ್ ಬಂದೆರಗಿದೆ. ಫುಡ್ ಡೆಲಿವರಿ ಮಾಡಿದ ಹುಡುಗನಲ್ಲಿ ಸೋಂಕು ಕಾಣಿಸಿಕೊಂಡ ಪರಿಣಾಮ ಪಿಜ್ಜಾ ತರಿಸಿಕೊಂಡ ಕುಟುಂಬಗಳಿಗೂ ಕ್ವಾರಂಟೈನ್ ವಿಧಿಸಲಾಗಿದೆ.
ಹೌದು ಇಂತಹುದ್ದೊಂದು ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ದಕ್ಷಿಣ ದೆಹಲಿಯಲ್ಲಿ ಪಿಜ್ಜಾ ಡೆಲಿವರಿ ಮಾಡುತ್ತಿದ್ದ 19 ವರ್ಷದ ಯುವಕನಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಹೀಗಿರುವಾಗ ಆತ ಯಾರನ್ನೆಲ್ಲಾ ಸಂಪರ್ಕ ಮಾಡಿದ್ದ ಎಂಬ ಮಾಹಿತಿ ಕಲೆ ಹಾಕಿದಾಗ 72 ಮನೆಗಳಿಗೆ ಪಿಜ್ಜಾ ಡೆಲಿವರಿ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ಇದೀಗ ನಿಯಮದಂತೆ ಅಧಿಕಾರಿಗಳು ಈ ಯುವಕ ಪಿಜ್ಜಾ ಸರಬರಾಜು ಮಾಡಿದ್ದ 72 ಕುಟುಂಬ ಸದಸ್ಯರನ್ನು ಕ್ವಾರಂಟೈನ್ ಮಾಡಿದೆ.
ಈತ ಏಪ್ರಿಲ್ 12ರವರೆಗೆ ಪಿಜ್ಜಾ ಡೆಲಿವರಿ ಮಾಡುವ ಕೆಲಸ ಮಾಡಿದ್ದ. ಹೀಗಿರುವಾಗ ಕಳೆದ 15 ದಿನಗಳಲ್ಲಿ ಆತ ದಕ್ಷಿಣ ದೆಹಲಿಯ ಹೌಸ್ ಖಾಸ್, ಮಾಳ್ವಿಯಾನಗರ ಹಾಗೂ ಸಾವಿಇತ್ರಿ ನಗರ ಪ್ರದೇಶದ ಸುಮಾರು 72 ಮನೆಗಳಿಗೆ ಪಿಜ್ಜಾ ತಲುಪಿಸಿದ್ದ. ಹೀಗಿರುವಾಗ ಈತನಲ್ಲಿ ಸೋಂಕು ದೃಢಪಟ್ಟ ಹಹಿನ್ನೆಲೆ ಎಲ್ಲಾ ಕುಟುಂಬ ಸದಸ್ಯರನ್ನು ಕ್ವಾರಂಟೈನ್ ಮಾಡಿ ನಿಗಾ ಇಡಲಾಗಿದೆ. ಅಲ್ಲದೇ ಈತ ಭೇಟಿಯಾಗಿದ್ದ 20 ಡೆಲಿವರಿ ಬಾಯ್‌ಗಳನ್ನೂ ಕ್ವಾರಂಟೈನ್ ಮಾಡಲಾಗಿದೆ.
ಅದೇನಿದ್ದರೂ ಲಾಕ್‌ಡೌನ್ ಸಂದರ್ಭದಲ್ಲಿ ಮನೆಯಲ್ಲಿದ್ದು, ತಾವೇ ಊಟ ತಯಾರಿಸಿ, ತಿಂದು ಆರೋಗ್ಯವಾಗಿರುವುದನ್ನು ಬಿಟ್ಟು, ಬಾಯಿ ಚಪಲಕ್ಕೆಂದು ತರಿಸಿದ ಪಿಜ್ಜಾ ಈಗ ಈ ಕುಟುಂಬಗಳ ನೆಮ್ಮದಿ ಕೆಡಿಸಿದೆ ಎಂಬುವುದರಲ್ಲಿ ಅನುಮಾನವಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ