ಮಾರ್ಗಸೂಚಿ ಪಾಲಿಸಿಲ್ಲ: ಹೈದರಾಬಾದ್‌ ಎನ್‌ಕೌಂಟರ್‌ ಪ್ರಶ್ನಿಸಿ ಸುಪ್ರೀಂಗೆ 2 ಅರ್ಜಿ!

By Web DeskFirst Published Dec 8, 2019, 9:17 AM IST
Highlights

ಹೈದರಾಬಾದ್‌ ಎನ್‌ಕೌಂಟರ್‌ ಪ್ರಶ್ನಿಸಿ ಸುಪ್ರೀಂಗೆ 2 ಅರ್ಜಿ| ಎನ್‌ಕೌಂಟರ್‌ ವೇಳೆ ಮಾರ್ಗ ಸೂಚಿ ಅನ್ವಯಿಸಿಲ್ಲ ಎಂದು ಆರೋಪ| ಪೊಲೀಸರ ವಿರುದ್ಧ ತನಿಖೆ, ಆರೋಪಿಗಳ ಕುಟುಂಬಕ್ಕೆ ನೆರವಿಗೆ ಮನವಿ

ನವದೆಹಲಿ[ಡಿ.08]: ಪಶುವೈದ್ಯೆ ಮೇಲಿನ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ನಾಲ್ವರು ಆರೋಪಿಗಳು ಶುಕ್ರವಾರ ಎನ್‌ಕೌಂಟರ್‌ಗೆ ಬಲಿಯಾದ ಪ್ರಕರಣ ಇದೀಗ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದೆ. ಎನ್‌ಕೌಂಟರ್‌ ಮೇಲೆ ಅನುಮಾನ ವ್ಯಕ್ತಪಡಿಸಿದ ಶನಿವಾರ ಸುಪ್ರೀಂಕೋರ್ಟ್‌ನಲ್ಲಿ ಎರಡು ಪ್ರತ್ಯೇಕ ಅರ್ಜಿ ಸಲ್ಲಿಸಲಾಗಿದೆ.

ಎನ್‌ಕೌಂಟರ್‌ ನಡೆಸುವ ವೇಳೆ ಪಾಲಿಸಬೇಕಾದ 16 ಮಾರ್ಗಸೂಚಿಗಳ ಕುರಿತು 2014ರಲ್ಲೇ ಸುಪ್ರೀಂಕೋರ್ಟ್‌ ಸ್ಪಷ್ಟಆದೇಶ ಹೊರಡಿಸಿದೆ. ಆದರೆ ಶುಕ್ರವಾರದ ಎನ್‌ಕೌಂಟರ್‌ ವೇಳೆ ಈ ನಿಯಮ ಉಲ್ಲಂಘಿಸಲಾಗಿದೆ. ಹೀಗಾಗಿ ಎನ್‌ಕೌಂಟರ್‌ನಲ್ಲಿ ಭಾಗಿಯಾದ ಐಪಿಎಸ್‌ ಅಧಿಕಾರಿ ವಿಶ್ವನಾಥ ಸಜ್ಜನರ್‌ ಸೇರಿದಂತೆ ಪೊಲೀಸರ ವಿರುದ್ಧ ಎಫ್‌ಐಆರ್‌ ದಾಖಲಿಸಿ, ತನಿಖೆ ನಡೆಸಬೇಕು ಎಂದು ವಕೀಲರಾದ ಜಿ.ಎಸ್‌. ಮಣಿ ಹಾಗೂ ಪ್ರದೀಪ್‌ ಕುಮಾರ್‌ ಯಾದವ್‌ ಅವರು ಅರ್ಜಿಯಲ್ಲಿ ಕೋರಿದ್ದಾರೆ.

ಇನ್ನು ವಕೀಲ ಎಂ.ಎಲ್‌. ಶರ್ಮಾ ಸಲ್ಲಿಸಿರುವ ಅರ್ಜಿಯಲ್ಲಿ ‘ಜೀವಿಸುವ ಹಕ್ಕು ಮತ್ತು ನ್ಯಾಯೋಚಿತ ವಿಚಾರಣೆಯ ಹಕ್ಕನ್ನು ನೀಡುವ ಸಂವಿಧಾನದ 21ನೇ ಪರಿಚ್ಛೇದವನ್ನು ಉಲ್ಲಂಘಿಸಿ ಪೊಲೀಸರು ಆರೋಪಿಗಳನ್ನು ಕೊಂದಿದ್ದಾರೆ. ಪ್ರಕರಣದಲ್ಲಿ ಯಾವುದೇ ವಿಚಾರಣೆ ನಡೆಸದೇ ನಾಲ್ವರು ಆರೋಪಿಗಳನ್ನು ದೋಷಿ ಎನ್ನಲಾಗಿದೆ. ಪೊಲೀಸ್‌ ಕಸ್ಟಡಿಯಲ್ಲಿ ನಡೆದ ಕೊಲೆ ಇದಾಗಿದ್ದು, ಎಲ್ಲಾ ಪೊಲೀಸರು ಇದರಲ್ಲಿ ಭಾಗಿಯಾಗಿದ್ದಾರೆ. ಈ ಬಗ್ಗೆ ಸ್ವತಂತ್ರ ತನಿಖೆ ನಡೆಸಬೇಕು ಮತ್ತು ಬಲಿಯಾದವರ ಕುಟುಂಬಗಳಿಗೆ ಸೂಕ್ತ ಪರಿಹಾರ ಕಲ್ಪಿಸಬೇಕು’ ಎಂದು ಕೋರಲಾಗಿದೆ.

click me!