ಸಂತ್ರಸ್ತೆ ಮನೆಗೆ ರಾಜಕೀಯ ನಾಯಕರ ದಂಡು| ಸಂತ್ರಸ್ತೆಯ ಮನೆಗೆ ಪ್ರಿಯಾಂಕಾ ವಾದ್ರಾ ಭೇಟಿ, ಯೋಗಿ ಸರ್ಕಾರಕ್ಕೆ ಚಾಟಿ| ಯೋಗಿ ಸರ್ಕಾರ ವಜಾಕ್ಕೆ ಎಸ್ಪಿ ನಾಯಕ ಅಖಿಲೇಶ್ ಆಗ್ರಹ, ಧರಣಿ
ನವದೆಹಲಿ[ಡಿ.08]: ಉತ್ತರಪ್ರದೇಶದ ಉನ್ನಾವ್ ಅತ್ಯಾಚಾರ ಸಂತ್ರಸ್ತೆಯು ಆರೋಪಿಗಳಿಂದ ದಾಳಿಗೆ ಒಳಗಾಗಿ ಸಾವನ್ನಪ್ಪುತ್ತಿದ್ದಂತೆಯೇ ಪ್ರತಿಪಕ್ಷಗಳಾದ ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷಗಳು ಕೇಂದ್ರ ಸರ್ಕಾರದ ಮೇಲೆ ಮುಗಿಬಿದ್ದಿವೆ. ವರ್ಷದ ಹಿಂದೆ ನಡೆದ ಅತ್ಯಾಚಾರದ ಬಳಿಕ ಒಮ್ಮೆಯೂ ಸಂತ್ರಸ್ತೆ ಮನೆಯತ್ತ ಮುಖಮಾಡದ ರಾಜಕೀಯ ನಾಯಕರು, ಶನಿವಾರ ಆಕೆಯ ಮನೆಯತ್ತ ದಾಂಗುಡಿ ಇಟ್ಟಿವೆ.
ಸಂತ್ರಸ್ತೆಯ ಉನ್ನಾವ್‌ನಲ್ಲಿರುವ ನಿವಾಸಕ್ಕೆ ಕಾಂಗ್ರೆಸ್ ಉತ್ತರಪ್ರದೇಶ ಉಸ್ತುವಾರಿ ಪ್ರಿಯಾಂಕಾ ಗಾಂಧಿ ವಾದ್ರಾ ಭೇಟಿ ನೀಡಿ ಸಾಂತ್ವನ ಹೇಳಿದರು. ಈ ವೇಳೆ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಉತ್ತರಪ್ರದೇಶ ಸರ್ಕಾರ ಅಪರಾಧಿಗಳಿಗೆ ರಕ್ಷಣೆ ನೀಡುತ್ತಿದೆ. ಆದರೆ ರಾಜ್ಯದಲ್ಲಿ ಕ್ರಿಮಿನಲ್‌ಗಳಿಗೆ ಸ್ಥಾನವಿಲ್ಲ ಎಂದು ಬೊಗಳೆ ಬಿಡುತ್ತಿದೆ. ಇಲ್ಲಿ ಮಹಿಳೆಯರ ಮೇಲೆ ಅಪರಾಧ ಹೆಚ್ಚುತ್ತಿದೆ. ರಾಜ್ಯದಲ್ಲಿ ಮಹಿಳೆಯರಿಗೆ ಸ್ಥಾನವಿಲ್ಲವೇ?’ ಎಂದು ಪ್ರಶ್ನಿಸಿದರು.
undefined
‘ಉನ್ನಾವ್ ಸಂತ್ರಸ್ತೆಯ ಕುಟುಂಬದ ಮೇಲೆ ಇದೇ ಮೊದಲ ಬಾರಿ ದೌರ್ಜನ್ಯ ನಡೆಯುತ್ತಿಲ್ಲ. ಆಕೆಯನ್ನು ಶಾಲೆಗೆ ಹೋಗದಂತೆ ಮೊದಲು ಬೆದರಿಸಲಾಯಿತು. ಆಕೆಯ ತಂದೆಯನ್ನು ಹೊಡೆದು, ಕೃಷಿ ಜಮೀನಿಗೆ ಬೆಂಕಿ ಹಚ್ಚಲಾಯಿತು. ನಂತರ ಆಕೆಯ ಮೇಲೆ ಅತ್ಯಾಚಾರ ಎಸಗಿ ಕೊಲ್ಲಲಾಯಿತು’ ಎಂದು ಪ್ರಿಯಾಂಕಾ ದೂರಿದರು.
ಇನ್ನು ಕಾಂಗ್ರೆಸ್ ರಾಷ್ಟ್ರೀಯ ವಕ್ತಾರೆ ಸುಪ್ರಿಯಾ ಶ್ರೀನೇತ್ ದಿಲ್ಲಿಯಲ್ಲಿ ಮಾತನಾಡಿ, ‘ಉತ್ತರಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ಯೋಗಿ ಆದಿತ್ಯನಾಥ್ ಸರ್ಕಾರ ಈಗಲಾದರೂ ಎಚ್ಚೆತ್ತುಕೊಳ್ಳದಿದ್ದರೆ ಅತ್ಯಾಚಾರ ಪ್ರಕರಣಗಳು ಇನ್ನೂ ಮುಂದುವರಿಯಲಿವೆ. ಉತ್ತರ ಪ್ರದೇಶವನ್ನು ರೇಪ್ ರಾಜಧಾನಿಯನ್ನಾಗಿ ಪರಿವರ್ತಿಸಲು ಅಲ್ಲಿನ ಸರ್ಕಾರ ಹಾತೊರೆಯುತ್ತಿರುವಂತಿದೆ’ ಎಂದು ಆರೋಪಿಸಿದರು.
ಯೋಗಿ ವಜಾಗೆ ಯಾದವ್ ಆಗ್ರಹ:
ಕಾನೂನು ಸುವ್ಯವಸ್ಥೆ ಕಾಪಾಡದ ಯೋಗಿ ಆದಿತ್ಯನಾಥ ಸರ್ಕಾರವನ್ನು ವಜಾ ಮಾಡಬೇಕು ಎಂದು ಸಮಾಜವಾದಿ ಪಾರ್ಟಿ ಅಧ್ಯಕ್ಷ ಅಖಿಲೇಶ ಯಾದವ್ ಆಗ್ರಹಿಸಿದ್ದಾರೆ. ಅಲ್ಲದೆ, ವಿಧಾನಸಭೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ.