ದುಬೆ ಸಾವಿನ ಕೆಲವೇ ತಾಸು ಮುನ್ನ ನಡೆದಿತ್ತು ಈ ಬೆಳವಣಿಗೆ!

By Suvarna News  |  First Published Jul 11, 2020, 10:33 AM IST

ಪಾತಕಿ ವಿಕಾಸ್‌ ದುಬೆ ಜೀವಕ್ಕೆ ಪೊಲೀಸರಿಂದ ಅಪಾಯ| ದುಬೆ ಸಾವಿನ ಕೆಲವೇ ತಾಸು ಮುನ್ನ ನಡೆದಿತ್ತು ಈ ಬೆಳವಣಿಗೆ!| ಎಮ್‌ಕೌಂಟರ್‌ ಸುತ್ತ ಅನುಮಾನದ ಹುತ್ತ


ನವದೆಹಲಿ(ಜು.11): ಪಾತಕಿ ವಿಕಾಸ್‌ ದುಬೆ ಜೀವಕ್ಕೆ ಪೊಲೀಸರಿಂದ ಅಪಾಯ ಇದೆ ಎಂದು ಎನ್‌ಕೌಂಟರ್‌ಗೆ ಕೆಲವೇ ಗಂಟೆಗಳ ಮೊದಲು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿತ್ತು ಎಂಬ ಅಚ್ಚರಿಯ ವಿಷಯ ಬಹಿರಂಗಗೊಂಡಿದೆ.

ವಕೀಲ ಘನಶ್ಯಾಮ್‌ ಉಪಾಧ್ಯಾಯ್‌ ಎಂಬವರು ಶುಕ್ರವಾರ ಮುಂಜಾನೆ 2 ಗಂಟೆ ವೇಳೆಗೆ ಸುಪ್ರೀಂಕೋರ್ಟ್‌ಗೆ ಈ ಕುರಿತು ಇ-ಅರ್ಜಿ ಸಲ್ಲಿಸಿದ್ದರು. ಅದರಲ್ಲಿ ಪೊಲೀಸರು ದುಬೆಯನ್ನು ಕೊಲ್ಲದಂತೆ ಉತ್ತರ ಪ್ರದೇಶ ಸರ್ಕಾರ ಮತ್ತು ಪೊಲೀಸರಿಗೆ ನಿರ್ದೇಶನ ನೀಡುವಂತೆ ಕೋರಲಾಗಿತ್ತು.

Tap to resize

Latest Videos

ವಿಕಾಸ್‌ ದುಬೆ ಎನ್‌ಕೌಂಟರ್‌, ಅನುಮಾನಕ್ಕೆ ಕಾರಣವಾಗಿದೆ ಆ ಒಂದು ವಿಡಿಯೋ!

ಹಾಗೆಯೇ ದುಬೆಯ 5 ಮಂದಿ ಸಹಚರರ ಎನ್‌ಕೌಂಟರ್‌ ಬಗ್ಗೆ ಎಫ್‌ಐಆರ್‌ ದಾಖಲಿಸಿ ತನಿಖೆಯನ್ನು ಸಿಬಿಐಗೆ ವಹಿಸಬೇಕು, ಅರ್ಜಿಯನ್ನು ಶೀಘ್ರ ವಿಚಾರಣೆಗೆ ಕೈಗೆತ್ತಿಕೊಳ್ಳದಿದ್ದರೆ ಏನೂ ಪ್ರಯೋಜನವಾಗುವುದಿಲ್ಲ ಎಂದೂ ಮನವಿ ಮಾಡಲಾಗಿತ್ತು.

ಎನ್‌ಕೌಂಟರ್‌ ಸುತ್ತ ಅನುಮಾನದ ಹುತ್ತ

ಉತ್ತರ ಪ್ರದೇಶದ ಕುಖ್ಯಾತ ರೌಡಿ ವಿಕಾಸ್‌ ದುಬೆ ಎನ್‌ಕೌಂಟರ್‌ ಪ್ರಕರಣ ಕುರಿತು ರಾಜಕೀಯ ಪಕ್ಷಗಳು ಹಾಗೂ ಮಾನವ ಹಕ್ಕುಗಳ ಹೋರಾಟಗಾರರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೆ ಅವರು ನೀಡುತ್ತಿರುವ ಪಂಚ ಕಾರಣಗಳು ಇಂತಿವೆ.

1. ಎನ್‌ಕೌಂಟರ್‌ಗೆ ಕೆಲವೇ ಗಂಟೆಗಳ ಮುಂಚೆ ವಿಕಾಸ್‌ ದುಬೆಯನ್ನು ಕರೆದೊಯ್ಯುತ್ತಿದ್ದ ಕಾರನ್ನು ಬದಲಿಸಲಾಗಿದೆ. ಟೋಲ್‌ ಪ್ಲಾಜಾದಲ್ಲಿ ಲಭ್ಯವಾದ ವಿಡಿಯೋದಲ್ಲಿ ತೋರಿಸಿದಂತೆ ಮುಂಜಾನೆ 4 ಗಂಟೆಗೆ ದುಬೆಯನ್ನು ಕರೆದೊಯ್ಯುತ್ತಿದ್ದ ಕಾರೇ ಬೇರೆ. ಎನ್‌ಕೌಂಟರ್‌ಗೂ ಮುನ್ನ ಪಲ್ಟಿಆದ ಕಾರೇ ಬೇರೆ.

ದುಬೆ ಎನ್‌ಕೌಂಟರ್ ಆಯ್ತು, ಆತನ ರಕ್ಷಿಸಿದವರ ಕಥೆ ಏನು: ಪ್ರಿಯಾಂಕ ಪ್ರಶ್ನೆ

2. ಪೊಲೀಸ್‌ ವಾಹನವನ್ನು ಹಿಂಬಾಲಿಸುತ್ತಿದ್ದ ಮಾಧ್ಯಮಗಳ ವಾಹನಗಳನ್ನು ಎನ್‌ಕೌಂಟರ್‌ ನಡೆದ 2 ಕಿ.ಮೀ.ಗಿಂತ ಹಿಂದೆಯೇ ತಡೆದು ನಿಲ್ಲಿಸಲಾಗಿದೆ.

3. ಪ್ರತ್ಯಕ್ಷದರ್ಶಿಗಳು ಗುಂಡಿನ ಶಬ್ದವನ್ನು ಕೇಳಿಸಿಕೊಂಡಿದ್ದಾಗಿ ಹೇಳಿಕೆ ನೀಡಿದ್ದಾರೆ. ಆದರೆ, ರಸ್ತೆ ಅಪಘಾತ ನಡೆದ ಬಗ್ಗೆ ಏನನ್ನೂ ಹೇಳಿಲ್ಲ. ಘಟನೆ ನಡೆದ ಸ್ಥಳದಿಂದ ಪೊಲೀಸರು ತಮ್ಮನ್ನು ಸಾಗಹಾಕಿದ್ದರು ಎಂದು ಹೇಳಿದ್ದಾರೆ.

4. ಕಾರು ಪಲ್ಟಿಆದ ಬಳಿಕ ವಿಕಾಸ್‌ ದುಬೆ ಗನ್‌ ಅನ್ನು ಕಿತ್ತುಕೊಂಡಿದ್ದ ಮತ್ತು ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ. ಆದರೆ, ಕೊಲೆ ಸೇರಿದಂತೆ 60ಕ್ಕೂ ಹೆಚ್ಚು ಕ್ರಿಮಿನಲ್‌ ಪ್ರಕರಣಗಳನ್ನು ಎದುರಿಸುತ್ತಿದ್ದ ರೌಡಿ ದುಬೆಗೆ ಪೊಲೀಸರು ಏಕೆ ಕೋಳ ತೊಡಿಸಿರಲಿಲ್ಲ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.

5. ಕಾರು ಅಪಘಾತಕ್ಕೀಡಾಗಿ ಪಲ್ಟಿಆದ ಜಾಗದಲ್ಲಿ ರಸ್ತೆ ತಡೆಗೋಡೆಗಳು ಇರಲಿಲ್ಲ. ಪಕ್ಕದಲ್ಲೇ ಒಂದು ರಸ್ತೆಯೂ ಇತ್ತು. ವಿಶಾಲವಾದ ಜಾಗವಿದ್ದರೂ ಕಾರು ಪಲ್ಟಿಆಗಿದ್ದು ಹೇಗೆ ಎಂದು ಪ್ರಶ್ನಿಸಲಾಗುತ್ತಿದೆ.

click me!