ಕುಟುಂಬ ನಾಲ್ವರು ಪರ್ಫ್ಯೂಮ್ ಬಾಟಲಿ ಸ್ಫೋಟಗೊಂಡು ಗಾಯಗೊಂಡ ಘಟನೆ ನಡೆದಿದೆ. ಪರ್ಫ್ಯೂಮ್ ಬಾಟಲಿಯ ಎಕ್ಸ್‌ಪೈರಿ ಡೇಟ್ ಬದಲಿಸುವ ಪ್ರಯತ್ನದಲ್ಲಿ ಈ ಸ್ಫೋಟ ಸಂಭವಿಸಿದೆ.
ಮುಂಬೈ(ಜ.11) ನಿಮ್ಮ ಪರ್ಫ್ಯೂಮ್ ಬಾಟಲಿ ಅವಧಿ ಮುಗಿದಿದೆಯಾ? ಹಾಗಿದ್ದರೂ ಈ ಬಾಟಲಿಯನ್ನು ಸುರಕ್ಷಿತವಾಗಿ ತ್ಯಾಜ್ಯ ನಿರ್ವಹಣೆ ಮಾಡಿ. ಇದು ಅತ್ಯಂತ ಅಪಾಯಕಾರಿ. ಇದೀಗ ಇದೇ ಪರ್ಫ್ಯೂಮ್ ಬಾಟಲಿ ಸ್ಫೋಟಗೊಂಡು ಕುಟುಂಬದ ಇಬ್ಬರು ಮಕ್ಕಳು ಸೇರಿ ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ಮುಂಬೈನ ಹೊರವಲಯದ ನಾಲಾಸುಪಾರದಲ್ಲಿ ನಡೆದಿದೆ. ಕುಟುಂಬದ ಸದಸ್ಯರು ಪರ್ಫ್ಯೂಮ್ ಬಾಟಲಿಯ ಎಕ್ಸ್‌ಪೈರಿ ಡೇಟ್ ಬದಲಿಸುವ ಪ್ರಯತ್ನ ಮಾಡಿದ್ದರು. ಆದರೆ ಬೆಂಕಿ ಹೊತ್ತಿಕೊಳ್ಳುವ ದ್ರವ ಇದಾಗಿರುವ ಕಾರಣ ತಕ್ಷಣವೇ ಸ್ಫೋಟಗೊಂಡಿದೆ.
ರೋಶಿನಿ ಅಪಾರ್ಟ್‌ಮೆಂಟ್ ಒಂದರ 112ನೇ ಮನೆಯಲ್ಲಿಈ ಘಟನೆ ನಡೆದಿದೆ. ಕುಟುಂಬ ಸದಸ್ಯರು ಪರ್ಫ್ಯೂಮ್ ಬಾಟಲಿಯ ಎಕ್ಸ್‌ಪೈರಿ ಡೇಟ್ ಬದಲಿಸುವ ಪ್ರಯತ್ನದಲ್ಲಿರುವಾಗ ಈ ಸ್ಫೋಟ ಸಂಭವಿಸಿದೆ ಎಂದು ಪೊಲೀಸರು ಹೇಳಿದ್ದಾರೆ. ಘಟನೆಯಲ್ಲಿ 41 ವರ್ಷದ ಮಹಾವೀರ್ ವಾದರ್, 38 ವರ್ಷದ ಸುನೀತಾ ವಾದರ್ , ಮಕ್ಕಳಾದ 9 ವರ್ಷದ ಕುಮಾರ್ ಹರ್ಷವರ್ಧನ್ ವಾದರ್ ಹಾಗೂ 14 ವರ್ಷದ ಕುಮಾರಿ ಹರ್ಷದಾ ವಾದರ್ ಗಾಯಗೊಂಡಿದ್ದಾರೆ.
ಸ್ಫೋಟದ ಸದ್ದು ಕೇಳಿ ಅಕ್ಕ ಪಕ್ಕದ ಮನೆಯವರು ಧಾವಿಸಿದ್ದಾರೆ. ಬಳಿಕ ಗಾಯಗೊಂಡಿದ್ದವರನ್ನು ಆಸ್ಪತ್ರೆ ದಾಖಲಿಸಿದ್ದಾರೆ. ಇತ್ತ ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಗಾಯಗೊಂಡವರಿಗೆ ಚಿಕಿತ್ಸೆ ಮುಂದುವರಿದಿದೆ. ಇತ್ತ ಪೊಲೀಸರು ಮನೆ ಶೋಧಿಸಿದ್ದಾರೆ. ಈ ವೇಳೆ ಪರ್ಫ್ಯೂಮ್ ಬಾಟಲಿ ಸ್ಫೋಟಗೊಂಡಿರುವುದು ಪತ್ತೆಯಾಗಿದೆ. ಬೆಂಕಿ ಬಳಸಿ ಪರ್ಫ್ಯೂಮ್ ಬಾಟಲಿಯ ಎಕ್ಸ್‌ಪೈರಿ ಡೇಟ್ ಬದಲಿಸುವ ಪ್ರಯತ್ನ ಮಾಡಿದ್ದಾರೆ ಅನ್ನೋ ಅನುಮಾನಗಳು ವ್ಯಕ್ತವಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಘಟನೆಯಿಂದ ಇದೀಗ ಹಲವರ ಆತಂಕ ಹೆಚ್ಚಿದೆ. ಪರ್ಫ್ಯೂಮ್ ಬಾಟಲಿ ಎಕ್ಸ್‌ಪೈರಿ ಡೇಟ್ ಮುಗಿದಿದ್ದರೆ ಬಳಸುವುದು ಸೂಕ್ತವಲ್ಲ. ಇಷ್ಟೇ ಅಲ್ಲ ತೀವ್ರ ಬಿಸಿ, ಬಿಸಿಲು, ಅಥವಾ ಬೆಂಕಿ ಪಕ್ಕದಲ್ಲಿ ಪರ್ಫ್ಯೂಮ್ ಇಡವುದು ಅಪಾಯಕಾರಿಯಾಗಿದೆ. ಪರ್ಫ್ಯೂಮ್ ಮಾತ್ರವಲ್ಲ ಅವಧಿ ಮುಗಿದ ಯಾವುದೇ ವಸ್ತುಗಳು ಬಳಸಲು ಯೋಗ್ಯವಲ್ಲ. ಹೀಗಾಗಿ ಈ ಕುರಿತು ಎಚ್ಚರವಹಿಸುಂತೆ ಮುಂಬೈ ಪೊಲೀಸರು ಮನವಿ ಮಾಡಿದ್ದಾರೆ. ಈ ಪ್ರಕರಣದಲ್ಲಿ ದಿನಾಂಕ ಬದಲಿಸುವ ಪ್ರಯತ್ನ ಯಾಕೆ ಮಾಡಿದ್ದರು, ವ್ಯಾಪಾರಕ್ಕಾಗಿ ಈ ರೀತಿ ಮಾಡಿದ್ದಾರೋ ಅನ್ನೋದು ತನಿಖೆಯಲ್ಲಿ ಬಹಿರಂಗವಾಗಲಿದೆ ಎಂದು ಪೊಲೀಸರು ಹೇಳಿದ್ದಾರೆ. ಇಬ್ಬರು ಮಕ್ಕಳ ಪೈಕಿ 9 ವರ್ಷದ ಬಾಲಕನಿಗೆ ಗಾಯದ ಪ್ರಮಾಣ ಹೆಚ್ಚಿದೆ ಎಂದು ಪೊಲೀಸರು ಹೇಳಿದ್ದಾರೆ.