ಚೀನಾಕ್ಕೆ ಕ್ಲೀನ್‌ಚಿಟ್‌ ನೀಡಿದ್ದಕ್ಕೆ ಕ್ಷಮೆ ಕೇಳಿ: ಮೋದಿಗೆ ಕಾಂಗ್ರೆಸ್‌ ಆಗ್ರಹ

By Suvarna NewsFirst Published Nov 7, 2021, 7:38 AM IST
Highlights

* ಅರುಣಾಚಲದಲ್ಲಿ ಚೀನಾ ಹಳ್ಳಿ ನಿರ್ಮಾಣ ವರದಿಗೆ ಪ್ರತಿಕ್ರಿಯೆ

* ಚೀನಾಕ್ಕೆ ಕ್ಲೀನ್‌ಚಿಟ್‌ ನೀಡಿದ್ದಕ್ಕೆ ಕ್ಷಮೆ ಕೇಳಿ: ಮೋದಿಗೆ ಕಾಂಗ್ರೆಸ್‌ ಆಗ್ರಹ

ನವದೆಹಲಿ(ನ.07): ಅರುಣಾಚಲ ಪ್ರದೇಶದ (Arunachal Pradesh) ಗಡಿಯಿಂದ 4.5 ಕಿ.ಮೀ. ಒಳಗೆ ನುಸುಳಿ 100 ಮನೆಗಳ ಹಳ್ಳಿಯನ್ನು ಚೀನಾ (China) ನಿರ್ಮಿಸಿದೆ ಎಂಬ ಅಮೆರಿಕದ ರಕ್ಷಣಾ ಸಚಿವಾಲಯದ ವರದಿಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಚೀನಾಕ್ಕೆ ನೀಡಿದ್ದ ‘ಕ್ಲೀನ್‌ಚಿಟ್‌’ ವಾಪಸ್‌ ಪಡೆಯಬೇಕು ಹಾಗೂ ದೇಶವನ್ನು ದಾರಿತಪ್ಪಿಸಿದ್ದಕ್ಕಾಗಿ ಕ್ಷಮೆ ಯಾಚಿಸಬೇಕು ಎಂದು ಕಾಂಗ್ರೆಸ್‌ ಪಕ್ಷ ಆಗ್ರಹಿಸಿದೆ.

17 ತಿಂಗಳ ಹಿಂದೆಯೇ ಅರುಣಾಚಲದ ಬಿಜೆಪಿ ಸಂಸದ ತಪಿರ್‌ ಗಾವ್‌ ಅವರು ಚೀನಾದವರು ಭಾರತದ ಗಡಿಯೊಳಕ್ಕೆ ನುಸುಳಿದ್ದಾರೆಂದು ಪ್ರಧಾನಿಗೆ ಪತ್ರ ಬರೆದಿದ್ದರು. ಆದರೆ, ಪ್ರಧಾನಿ ಮತ್ತು ಗೃಹ ಸಚಿವರು (Home Minister) ಅದನ್ನು ಅಲ್ಲಗಳೆದು ಚೀನಾಕ್ಕೆ ಕ್ಲೀನ್‌ಚಿಟ್‌ ನೀಡಿದ್ದರು. ಅದು ಭಾರತದ ಇತಿಹಾಸದಲ್ಲಿ ಕರಾಳ ಅಧ್ಯಾಯ. ಏಕೆಂದರೆ, ಅವರಿಬ್ಬರ ಹೇಳಿಕೆಯನ್ನೇ ಚೀನಾ ತನ್ನ ತಪ್ಪು ಮುಚ್ಚಿಕೊಳ್ಳಲು ಜಗತ್ತಿನಾದ್ಯಂತ ಉಲ್ಲೇಖಿಸುತ್ತಿದೆ ಎಂದು ಕಾಂಗ್ರೆಸ್ ದೂರಿದೆ.

ಅಲ್ಲದೇ ಅರುಣಾಚಲ ಮಾತ್ರವಲ್ಲದೆ, ಲಡಾಖ್‌ (Ladakh), ಉತ್ತರಾಖಂಡ (Uttarakhand), ದೆಪ್ಸಂಗ್‌, ಗೋಗ್ರಾ ಹಾಟ್‌ ಸ್ಟ್ರಿಂಗ್ಸ್‌ ಹಾಗೂ ದೌಲತ್‌ ಬೇಗ್‌ ಓಲ್ಡಿ ಪ್ರದೇಶದಲ್ಲೂ ಚೀನಾ ಒಳನುಸುಳಿದೆ. ಅವರನ್ನು ಯಾವಾಗ ಹೊರಹಾಕಿ ಹಳೆಯ ಸ್ಥಿತಿ ತರುತ್ತೀರಿ ಎಂದು ಮೋದಿ ಅವರನ್ನು ಕಾಂಗ್ರೆಸ್‌ ಪ್ರಶ್ನಿಸಿದೆ.

ಅರುಣಾಚಲದಲ್ಲಿ ತಲೆ ಎತ್ತಿದೆ ಚೀನಾದ 100 ಮನೆಗಳ ಹಳ್ಳಿ

ಭಾರತದ ಜತೆ ಕಾಲು ಕೆರೆದು ಕಾದಾಟಕ್ಕೆ ಇಳಿಸುವ ನೆರೆಯ ಚೀನಾ ಅರುಣಾಚಲ ಪ್ರದೇಶ ರಾಜ್ಯದೊಳಗೆ 100 ಮನೆಗಳನ್ನು ಹೊಂದಿದ ಗ್ರಾಮವೊಂದನ್ನು ನಿರ್ಮಾಣ ಮಾಡಿದೆ ಎಂದು ಅಮೆರಿಕದ ಭದ್ರತಾ ಇಲಾಖೆ ಹೇಳಿದೆ.

ಅಮೆರಿಕದ ಭದ್ರತಾ ಇಲಾಖೆಯ ವರದಿಯ ‘ಚೀನಾ-ಭಾರತ ಗಡಿ ಬಿಕ್ಕಟ್ಟು’ ಅಧ್ಯಾಯದಲ್ಲಿ, ‘2020ರ ವೇಳೆಗೆ ಚೀನಾದ ಪೀಪಲ್‌ ರಿಪಬ್ಲಿಕ್‌ ಸರ್ಕಾರವು, ಟಿಬೆಟ್‌ ಸ್ವಾಯತ್ತ ಪ್ರಾಂತ್ಯದ ವಿವಾದಿತ ಪ್ರದೇಶ ಮತ್ತು ಭಾರತದ ಅವಿಭಾಜ್ಯ ಅಂಗ ಅರುಣಾಚಲ ಪ್ರದೇಶದ ಪೂರ್ವ ಸೆಕ್ಟರ್‌ನ ವಾಸ್ತವ ಗಡಿ ರೇಖೆಯ ನಡುವೆ 100 ಮನೆಗಳನ್ನು ಒಳಗೊಂಡ ಗ್ರಾಮವೊಂದನ್ನು ನಿರ್ಮಾಣ ಮಾಡಿದೆ’ ಎಂದು ಹೇಳಿದೆ.

ಒಂದು ದಶಕಕ್ಕಿಂತಲೂ ಹೆಚ್ಚಿನ ಅವಧಿಯಿಂದ ಚೀನಾ ಈ ಭಾಗದಲ್ಲಿ ಸಣ್ಣ ಸೇನಾ ತುಕಡಿಯನ್ನು ನಿಯೋಜಿಸಿತ್ತು. ಆದರೆ 2020ರಲ್ಲಿ ಗ್ರಾಮ ಅಭಿವೃದ್ಧಿಪಡಿಸಿದ ಬಳಿಕ ಚೀನಾ, ರಸ್ತೆ ನಿರ್ಮಾಣ ಸೇರಿದಂತೆ ಇನ್ನಿತರ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಯೋಜನೆಗಳನ್ನು ಕೈಗೊಳ್ಳುತ್ತಿದೆ. ತನ್ಮೂಲಕ ಭಾರತದ ಗಡಿಯೊಳಗೆ ಚೀನಾ ಹಿಂದೆಂದಿಗಿಂತಲೂ ತನ್ನ ಇರುವಿಕೆಯನ್ನು ಹೆಚ್ಚು ಸಕ್ರಿಯಗೊಳಿಸಿದೆ. ಹೀಗಾಗಿ ಪರಿಸ್ಥಿತಿ ತೀರ ಭಿನ್ನವಾಗಿದೆ. ಗಡಿ ಬಿಕ್ಕಟ್ಟು ಕುರಿತಾಗಿ ಭಾರತ-ಚೀನಾ ಮಧ್ಯೆ ಸರಣಿ ಮಾತುಕತೆಗಳು ನಡೆದಿವೆ. ಆದಾಗ್ಯೂ, ತನ್ನ ಚತುರತೆಯಿಂದಾಗಿ ಗಡಿ ವಾಸ್ತವ ಪ್ರದೇಶದಲ್ಲಿ ತನ್ನ ಚಟುವಟಿಕೆಗಳನ್ನು ಮುಂದುವರಿಸುತ್ತಿದೆ ಎಂದು ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಗಡಿಯಲ್ಲಿ ಚೀನಾ ಸೇನೆ ಜಮಾವಣೆ ಹೆಚ್ಚಳ: ಸೇನೆ ಆತಂಕ

 ಸದಾಕಾಲ ಭಾರತದ ಗಡಿಗಳಲ್ಲಿ ಕ್ಯಾತೆ ತೆಗೆಯುವ ಚೀನಾ ಇದೀಗ ಭಾರತದ ಗಡಿ ಭಾಗಗಳಲ್ಲಿ ತನ್ನ ಸೇನಾ ಕಾರ್ಯಾಚರಣೆಯನ್ನು ಬಿರುಸುಗೊಳಿಸಿದೆ. ಅಲ್ಲದೆ ಸೇನಾ (Army) ಜಮಾವಣೆಯನ್ನು ಸಹ ಮಾಡಿದೆ. ಇದಕ್ಕೆ ಪ್ರತಿಯಾಗಿ ಭಾರತ ಸೇನೆಯನ್ನು (Indian Army) ಸಿದ್ಧವಾಗಿಡಲಾಗಿದೆ. ಅರುಣಾಚಲ ಪ್ರದೇಶದ ಸೆಕ್ಟರ್‌ನಲ್ಲಿ ಚೀನಾದಿಂದ (China) ಎದುರಾಗುವ ಯಾವುದೇ ಆಪತ್ತನ್ನು ಸಮರ್ಥವಾಗಿ ಎದುರಿಸಲು ಭಾರತ ಸರ್ವಸನ್ನದ್ಧವಾಗಿದೆ ಎಂದು ಪೂರ್ವ ಸೇನಾ ಕಮಾಂಡರ್‌ ಲೆಫ್ಟಿನೆಂಟ್‌ ಜನರಲ್‌ ಮನೋಜ್‌ ಪಾಂಡೆ ತಿಳಿಸಿದ್ದಾರೆ.

click me!