
ನವದೆಹಲಿ: ‘ಅತ್ಯಂತ ತೀವ್ರ ಪರಿಸ್ಥಿತಿಯಲ್ಲಿ ಗುಂಡು ಹಾರಿಸಲು ಕಾನೂನಿನಲ್ಲಿ ಅವಕಾಶವಿದೆ. ಹೀಗಿದ್ದಾಗ ಪೆಲೆಟ್ ಗನ್‌ಗಳನ್ನು ಮಾತ್ರ ಹೇಗೆ ಸಂಪೂರ್ಣವಾಗಿ ನಿಷೇಧಿಸಲು ಸಾಧ್ಯ?’ ಎಂದು ಸುಪ್ರೀಂ ಕೋರ್ಟ್ ಗುರುವಾರ ತೀಕ್ಷ್ಣವಾಗಿ ಪ್ರಶ್ನಿಸಿದೆ.
ಜು.20ರಂದು ದೆಹಲಿಯಲ್ಲಿ ನಡೆದ ಸಿಜೆಪಿಯ ಸಂಸತ್ ಚಲೋ ಪ್ರತಿಭಟನೆಯಲ್ಲಿ ಪೊಲೀಸರು ನಿಯಮಬಾಹಿರವಾಗಿ ಪೆಲೆಟ್ ಗನ್ ಬಳಸಿದ್ದಾರೆ. ಹೀಗಾಗಿ ಪೆಲೆಟ್ ಗನ್‌ಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಕೋರಿ ಮಾಜಿ ಐಪಿಎಸ್ ಅಧಿಕಾರಿ ಯಶೋವರ್ಧನ್ ಆಜಾದ್ ಹಾಗೂ ಪೆಲೆಟ್ ದಾಳಿಯಲ್ಲಿ ಗಾಯಗೊಂಡಿದ್ದ ಪ್ರಶಾಂತ್ ಕುಮಾರ್ ಸಿಂಗ್, ಶೇಖ್ ಇರ್ಷಾದ್ ಮನ್ಸೂರಿ ಸುಪ್ರೀಂಗೆ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಗಳ ವಿಚಾರಣೆ ನಡೆಸಿದ ಮು.ನ್ಯಾ. ಸೂರ್ಯಕಾಂತ್, ನ್ಯಾ. ಜಯಮಾಲ್ಯ ಬಾಗ್ಚಿ ಮತ್ತು ನ್ಯಾ. ವಿ. ಮೋಹನ ಅವರಿದ್ದ ಪೀಠ, ‘ಪೊಲೀಸ್ ನಿಯಮಗಳು ಅಸಾಧಾರಣ ಸಂದರ್ಭಗಳಲ್ಲಿ ಇಂತಹ ಆಯುಧಗಳ ಬಳಕೆಗೆ ಅನುಮತಿ ನೀಡುತ್ತವೆ. ಆ ನಿಯಮಗಳನ್ನು ಪ್ರಶ್ನಿಸದೆ ಪೆಲೆಟ್ ಗನ್‌ಗಳ ಮೇಲೆ ಸಂಪೂರ್ಣ ನಿಷೇಧ ಕೇಳುವುದು ಸರಿಯಲ್ಲ. ಲಾಠಿಚಾರ್ಜ್ ಮತ್ತು ಅಶ್ರುವಾಯುವಿಗೂ ಪರಿಸ್ಥಿತಿ ನಿಯಂತ್ರಣಕ್ಕೆ ಬರದಾಗ, ಗುಂಡುಗಳನ್ನು ಬಳಸಲು ಪೊಲೀಸರಿಗೆ ಅನುಮತಿ ಇದೆ. ಹೀಗಿದ್ದಾಗ ಪೆಲೆಟ್ ಗನ್‌ಗಳನ್ನು ಮಾತ್ರ ಬಳಸದಂತೆ ತಡೆಯುವುದು ಹೇಗೆ ಸಾಧ್ಯ?’ ಎಂದು ಪ್ರಶ್ನಿಸಿತು.
ಇದೇ ವೇಳೆ, ‘ಶಾಂತಿಯುತ ಪ್ರತಿಭಟನೆಯೂ ಯಾವುದೇ ಕ್ಷಣದಲ್ಲಿ ಸಮಾಜಘಾತಕ ಶಕ್ತಿಗಳಿಂದ ಹಿಂಸಾತ್ಮಕವಾಗಿ ಬದಲಾಗಬಹುದು. ಇಂಥ ಸಂದರ್ಭಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಹಂತ ಹಂತವಾಗಿ ಬಲಪ್ರಯೋಗ ಅಗತ್ಯವಾಗಬಹುದು. ಆದರೆ ಜು.20ರಂದು ಪೆಲೆಟ್ ಗನ್‌ಗಳನ್ನು ಬಳಸಿದ ಕ್ರಮವು ಹಂತ ಹಂತದ ಬಲಪ್ರಯೋಗದ ತತ್ವಕ್ಕೆ ಅನುಗುಣವಾಗಿತ್ತೇ ಎಂಬುದನ್ನು ಪರಿಶೀಲಿಸಲು ನ್ಯಾಯಪೀಠ ಸಿದ್ಧವಿದೆ’ ಎಂದು ತಿಳಿಸಿತು.
ಘಟನೆಯಲ್ಲಿ ತ್ವರಿತ ಕಾರ್ಯಾಚರಣೆ ಪಡೆ (ಆರ್‌ಎಫ್‌ಎ) ಬಳಸಿದ ಗುಂಡುಗಳ ದಾಖಲೆಯನ್ನು ಸಂರಕ್ಷಿಸಿಡುವಂತೆ ಸುಪ್ರೀಂ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ತನಿಖೆಗೆ ಅಗತ್ಯವಿರುವ ಎಲ್ಲ ದಾಖಲೆಗಳನ್ನು ಸಂರಕ್ಷಿಸಿಡಲಾಗುವುದು ಎಂದು ಸಾಲಿಸಿಟರ್ ಜನರಲ್ ತಿಳಿಸಿದ್ದಾರೆ. ಇದೇ ವೇಳೆ, ಅರ್ಜಿದಾರರಿಗೆ ಮತ್ತು ಪೆಲೆಟ್ ದಾಳಿಗೊಳಗಾದ ಇತರರಿಗೆ ಉತ್ತಮ ಚಿಕಿತ್ಸೆ ಒದಗಿಸುವಂತೆ ಸುಪ್ರೀಂ ಕೋರ್ಟ್ ದೆಹಲಿ ಸರ್ಕಾರಕ್ಕೆ ನಿರ್ದೇಶಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ