* ಪುಣೆ ಆಸ್ಪತ್ರೆಯಲ್ಲಿ ಈವರೆಗೆ ಒಂದೂ ಕೋವಿಡ್ ಸಾವಿಲ್ಲ!
* ಕಳೆದೊಂದು ವರ್ಷದಲ್ಲಿ 1800 ಮಂದಿಗೆ ಚಿಕಿತ್ಸೆ
* ಎಲ್ಲರೂ ಗುಣಮುಖರಾಗಿ ಮನೆಗೆ ವಾಪಸ್
ಪುಣೆ(ಮೇ.18): ಕೊರೋನಾದಿಂದ ಇಡೀ ದೇಶವೇ ತತ್ತರಿಸಿದ್ದು, ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸೆ ಸಿಕ್ಕರೂ ಫಲಿಸದೇ ಸಹಸ್ರಾರು ಮಂದಿ ಮೃತಪಟ್ಟಿದ್ದಾರೆ. ಆದರೆ ಪುಣೆಯ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಕಳೆದೊಂದು ವರ್ಷದಿಂದ ಕೋವಿಡ್‌ಗೆ ಒಬ್ಬರೂ ಬಲಿಯಾಗಿಲ್ಲ. ಆಸ್ಪತ್ರೆಗೆ ದಾಖಲಾದ ಎಲ್ಲ ರೋಗಿಗಳೂ ಗುಣಮುಖರಾಗಿ ಮನೆಗೆ ಮರಳಿದ್ದಾರೆ!
ಕೊರೋನಾ ಅಂತ ಬೆಡ್‌ಗೆ ಅಂಟಲಿಲ್ಲ, ಆಸ್ಪತ್ರೆ ನೆಲ ಒರಸಿದ ಸೋಂಕಿತ ಸಚಿವ..!
undefined
ಪಿಂಪ್ರಿ- ಚಿಂಚವಾಡ ನಗರಪಾಲಿಕೆ ಪುಣೆಯಲ್ಲಿ ಐದು ಆಸ್ಪತ್ರೆಗಳನ್ನು ಹೊಂದಿದ್ದು ಅದರಲ್ಲಿ ನ್ಯೂ ಜೀಜಾಮಾತಾ ಆಸ್ಪತ್ರೆಯೂ ಒಂದು. ಕಳೆದೊಂದು ವರ್ಷದಿಂದ ಇಲ್ಲಿ ಸೌಮ್ಯ ಅಥವಾ ಸಾಧಾರಣ ಕೋವಿಡ್ ಲಕ್ಷಣವುಳ್ಳವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಯಲ್ಲಿ 94 ಬೆಡ್‌ಗಳಿದ್ದು, ಆ ಪೈಕಿ 20 ಆಕ್ಸಿಜನ್ ಹಾಸಿಗೆಗಳಿವೆ. ಕಳೆದೊಂದು ವರ್ಷದ ಅವಧಿಯಲ್ಲಿ 1800 ಮಂದಿ ಸೋಂಕಿತರು ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಎಲ್ಲರೂ ಗುಣಮುಖರಾಗಿ ಮನೆಗೆ ಮರಳಿದ್ದಾರೆ.
ಬ್ಯಾಡಗಿ ಆಸ್ಪತ್ರೆಗೆ 36 ಆಕ್ಸಿಜನ್ ಸಿಲಿಂಡರ್ ನೀಡಲು ನೆರವಾದ ಸಿರಿಗೆರೆ ಶ್ರೀ
ಕಾರಣ ಏನು?
ದೇಶದ ಉಳಿದೆಲ್ಲಾ ಆಸ್ಪತ್ರೆಗಳು ಕೊರೋನಾ ಸೋಂಕಿತರ ಸಾವಿಗೆ ಸಾಕ್ಷಿಯಾಗುತ್ತಿದ್ದರೆ, ಜೀಜಾಮಾತಾ ಆಸ್ಪತ್ರೆಯಲ್ಲೇಕೆ ಸಾವು ಸಂಭವಿಸಿಲ್ಲ ಎಂದು ಅಲ್ಲಿನ ವೈದ್ಯರನ್ನೇ ಕೇಳಿದಾಗ ಅವರು ಹೇಳಿದ್ದಿಷ್ಟು: ಆಸ್ಪತ್ರೆಗೆ ಕೋವಿಡ್ ರೋಗಿಯನ್ನು ಕರೆತರುತ್ತಿದ್ದಂತೆ ಪ್ರಾಥಮಿಕ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಸೌಮ್ಯ ಅಥವಾ ಸಾಧಾರಣ ಸೋಂಕು ಇದ್ದರೆ ದಾಖಲು ಮಾಡಿಕೊಳ್ಳುತ್ತೇವೆ. ಸ್ಥಿತಿ ಗಂಭೀರವಾಗಿದ್ದರೆ, ಪಾಲಿಕೆಯ ಬೇರೆ ಆಸ್ಪತ್ರೆಗೆ ದಾಖಲಿಸುತ್ತೇವೆ. ಸೌಮ್ಯ ಅಥವಾ ಸಾಧಾರಣ ಸೋಂಕಿತರ ಪರಿಸ್ಥಿತಿ ಬಿಗಡಾಯಿಸಿದರೆ ಅವರನ್ನು ಕೂಡಲೇ ಹೆಚ್ಚಿನ ಚಿಕಿತ್ಸೆಗೆ ಬೇರೆ ಆಸ್ಪತ್ರೆಗೆ ಕಳುಹಿಸಿಕೊಡುತ್ತೇವೆ. ಈವರೆಗೆ ಅಂತಹ 100 ರೋಗಿಗಳನ್ನು ಬೇರೆ ಆಸ್ಪತ್ರೆಗೆ ರವಾನಿಸಿದ್ದೇವೆ ಎನ್ನುತ್ತಾರೆ ವೈದ್ಯ ಡಾ| ರೂಪೇಶ್ ದಳವಿ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona