ಆಯೋಧ್ಯೆ ಮಹರ್ಷಿ ವಾಲ್ಮೀಕಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಪ್ರಧಾನಿ ಮೋದಿ ಉದ್ಘಾಟಿಸಿದ್ದಾರೆ. ವಿಶೇಷ ಅಂದರೆ ಉದ್ಘಾಟನಾ ವಿಮಾನ ಪ್ರಯಾಣದಲ್ಲಿ ಪ್ರಯಾಣಿಕರು ಹನುಮಾನ್ ಚಾಲೀಸ ಪಠಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
ಆಯೋಧ್ಯೆ(ಡಿ.30) ಭವ್ಯ ಶ್ರೀರಾಮ ಮಂದಿರದಲ್ಲಿ ಜನವರಿ 22ರಂದು ಪ್ರಾಣಪ್ರತಿಷ್ಠೆ ನಡೆಯಲಿದೆ. ಜನವರಿ ಆರಂಭದಿಂದಲೇ ಪೂಜಾ ಕೈಂಕರ್ಯಗಳು ಆರಂಭಗೊಳ್ಳಲಿದೆ. ಇದೀಗ ಆಯೋಧ್ಯೆಯಲ್ಲಿ ಆಯೋಧ್ಯಾ ಧಾಮ ರೈಲು ನಿಲ್ದಾಣ ಹಾಗೂ ಮಹರ್ಷಿ ವಾಲ್ಮೀಕಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆಗೊಂಡಿದೆ. ಆಯೋಧ್ಯೆಯ ನೂತನ ವಿಮಾನ ನಿಲ್ದಾಣಕ್ಕೆ ತೆರಳಿದ ಮೊದಲ ಉದ್ಘಾಟನಾ ವಿಮಾನದಲ್ಲಿ ಪ್ರಯಾಣಿಕರು ಹನುಮಾನ್ ಚಾಲೀಸ ಪಠಣ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
ಪ್ರಧಾನಿ ಮೋದಿ ಇಂದು(ಡಿ.30) ಸುಸಜ್ಜಿತ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೊದಲ ಹಂತವನ್ನು ಉದ್ಘಾಟಿಸಿದ್ದಾರೆ. ಇತ್ತ ಉದ್ಘಾಟನೆ ನಿಮಿತ್ತ ಇಂಡಿಗೋ ಮೊದಲ ವಿಮಾನ ಪ್ರಯಾಣ ಸೇವೆ ನೀಡಿತ್ತು. ಆಯೋಧ್ಯೆಗೆ ಟೇಕ್ ಆಫ್ ಆದ ವಿಮಾನದಲ್ಲಿ ಪ್ರಯಾಣಿಕರು ಹನುಮಾನ ಚಾಲೀಸ ಪಠಣ ಮಾಡಿದ್ದಾರೆ. ಪ್ರಯಾಣದುದ್ದಕ್ಕೂ ಪ್ರಯಾಣಿಕರು ಹುನುಮಾನ ಚಾಲೀಸ, ಭಗವಾನ್ ಶ್ರೀರಾಮನ ಭಜನೆ ಮೂಲಕ ಪ್ರಯಾಣ ಸ್ಮರಣೀಯವಾಗಿಸಿದ್ದಾರೆ.
ಆಯೋಧ್ಯೆಯಲ್ಲಿ ಮೋದಿಗೆ ಹೂಮಳೆ ಸ್ವಾಗತ ನೀಡಿದ ಬಾಬ್ರಿ ಮಸೀದಿ ಅರ್ಜಿದಾರ ಇಕ್ಬಾಲ್ ಅನ್ಸಾರಿ!
ಪ್ರಯಾಣಿಕರು ಹನುಮಾನ್ ಚಾಲೀಸ ಪಠಣ ವಿಡಿಯೋ ಭಾರಿ ವೈರಲ್ ಆಗಿದೆ. ಈ ವಿಡಿಯೋಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಆಯೋಧ್ಯೆ ಭಾರತದ ಧಾರ್ಮಿಕ ಕೇಂದ್ರ ಸ್ಥಾನ. ಇದೀಗ ರಾಮನಕಾಲಕ್ಕೆ ಭಾರತ ಮರಳುತ್ತಿದ್ದು, ವಿಶ್ವದಲ್ಲೇ ಭಾರತ ಪ್ರಕಾಶಮಾನವಾಗಿ ಬೆಳಗಲಿದೆ ಎಂದು ಹಲವರು ಪ್ರತಿಕ್ರಿಯೆ ನೀಡಿದ್ದಾರೆ.
| People recite 'Hanuman Chalisa' onboard the inaugural flight to the newly constructed Maharishi Valmiki International Airport Ayodhya Dham, in Ayodhya, UP pic.twitter.com/7H5UP666XK
— ANI (@ANI)
ಅಯೋಧ್ಯೆಯ ವಿಮಾನ ನಿಲ್ದಾಣದ ಹೆಸರನ್ನು ‘ಮಹರ್ಷಿ ವಾಲ್ಮೀಕಿ ವಿಮಾನ ನಿಲ್ದಾಣ’ ಎಂದು ಅಂತಿಮಗೊಳಿಸಲಾಗಿದೆ. ಈ ಹಿಂದೆ ವಿಮಾನ ನಿಲ್ದಾಣವನ್ನು ‘ಮರ್ಯಾದಾ ಪುರುಷೋತ್ತಮ ಶ್ರೀರಾಮ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ’ ಎಂದು ಹೆಸರಿಸಲಾಗಿತ್ತು. ಆದರೀಗ ಭಾರತದ ಮಹಾಕಾವ್ಯ ಎನಿಸಿಕೊಂಡಿರುವ ‘ರಾಮಾಯಣ’ ಕೃತಿಯನ್ನು ರಚಿಸಿ ಲೋಕಕ್ಕೆ ಶ್ರೀರಾಮನ ಕಥೆಯನ್ನು ಗೊತ್ತುಪಡಿಸಿದ ಖ್ಯಾತಿ ಹೊಂದಿರುವ ಮಹರ್ಷಿ ವಾಲ್ಮೀಕಿ ಹೆಸರನ್ನಿಲಾಗಿದೆ. ಮಹರ್ಷಿ ವಾಲ್ಮೀಕಿ ಸೀತೆ ಕಾಡಿಗೆ ಹೋದ ಮೇಲೆ ಆಕೆಗೆ ಆಶ್ರಯ ನೀಡಿ ಆರೈಕೆ ಮಾಡಿದ ಹಾಗೂ ಆಕೆಯ ಮಕ್ಕಳಾದ ಲವ ಕುಶರಿಗೆ ವಿದ್ಯೆ ನೀಡಿದ್ದರು.
ಪ್ರಧಾನಿ ಮೋದಿಯಿಂದ ಮಾತ್ರ ಅಯೋಧ್ಯೆಗೆ ಬಂತು ಜೀವಕಳೆ; ಮಾರಿಷಸ್ ಸಂಸದನ ಮೆಚ್ಚುಗೆ!
ಮಹರ್ಷಿ ವಾಲ್ಮೀಕಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೊದಲ ಹಂತವನ್ನು 1,450 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಟರ್ಮಿನಲ್ ಕಟ್ಟಡವು 6,500 ಚದರ ಮೀಟರ್ ವಿಸ್ತೀರ್ಣವಾಗಿದೆ. ವಾರ್ಷಿಕ 10 ಲಕ್ಷ ಪ್ರಯಾಣಿಕರಿಗೆ ಸೇವೆ ಸಲ್ಲಿಸುವ ಸಾಮರ್ಥ್ಯ ಹೊಂದಿದೆ. ಶ್ರೀರಾಮಾಯಣದ ಹಲವು ಐತಿಹಾಸಿಕ ಹಾಗೂ ಮಹತ್ವ ಸಾರುವ ಅಂಶಗಳು ಈ ವಿಮಾನ ನಿಲ್ದಾಣದಲ್ಲಿದೆ. ಶ್ರೀರಾಮನ ಜೀವನ ಚಿತ್ರಿಸುವ ಸ್ಥಳೀಯ ಕಲೆ, ವರ್ಣಚಿತ್ರಗಳು ಸೇರಿದಂತೆ ಹಲವು ಚಿತ್ರಗಳು ಈ ವಿಮಾನ ನಿಲ್ದಾಣದ ಅಂದ ಹೆಚ್ಚಿಸಲಿದೆ.