ಈ 8 ಮಂದಿಗೆ ಈ ಮೊದಲು ಗಲ್ಲುಶಿಕ್ಷೆ ವಿಧಿಸಲಾಗಿತ್ತು. ಆದರೆ ಭಾರತದ ಮನವಿಯಂತೆ ಮೇಲ್ಮನವಿ ನ್ಯಾಯಾಲಯ ಗಲ್ಲುಶಿಕ್ಷೆಯನ್ನು ಕಡಿತಗೊಳಿಸಿದ್ದು ಜೈಲು ಶಿಕ್ಷೆ ವಿಧಿಸಿದೆ.
ನವದೆಹಲಿ (ಡಿಸೆಂಬರ್ 30, 2023): ಬೇಹುಗಾರಿಕೆ ಆರೋಪದಲ್ಲಿ ಕತಾರ್‌ನಲ್ಲಿ ಗಲ್ಲುಶಿಕ್ಷೆಗೆ ಗುರಿಯಾಗಿದ್ದ ಭಾರತೀಯ ನೌಕಾಪಡೆಯ 8 ಮಂದಿ ಮಾಜಿ ಅಧಿಕಾರಿಗಳಿಗೆ ಕತಾರ್ ಕೋರ್ಟ್ 3 ವರ್ಷದಿಂದ 25 ವರ್ಷಗಳವರೆಗೆ ಜೈಲುಶಿಕ್ಷೆ ವಿಧಿಸಿದೆ.
ಈ 8 ಮಂದಿಗೆ ಈ ಮೊದಲು ಗಲ್ಲುಶಿಕ್ಷೆ ವಿಧಿಸಲಾಗಿತ್ತು. ಆದರೆ ಭಾರತದ ಮನವಿಯಂತೆ ಮೇಲ್ಮನವಿ ನ್ಯಾಯಾಲಯ ಗಲ್ಲುಶಿಕ್ಷೆಯನ್ನು ಕಡಿತಗೊಳಿಸಿದ್ದು ಜೈಲು ಶಿಕ್ಷೆ ವಿಧಿಸಿದೆ. ನೌಕಾಪಡೆಯ 7 ಮಂದಿ ಮಾಜಿ ಅಧಿಕಾರಿಗಳು ಮತ್ತು ಓರ್ವ ನಾವಿಕನಿಗೆ ಶಿಕ್ಷೆ ವಿಧಿಸಲಾಗಿದೆ. ನಾವಿಕನಿಗೆ 25 ವರ್ಷ ಜೈಲು ಶಿಕ್ಷೆ, 4 ಮಂದಿಗೆ 15 ವರ್ಷ, ಇಬ್ಬರಿಗೆ 10 ವರ್ಷ ಮತ್ತು ಒಬ್ಬನಿಗೆ 3 ವರ್ಷ ಜೈಲುಶಿಕ್ಷೆ ವಿಧಿಸಲಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಇದನ್ನು ಓದಿ: ಭಾರತಕ್ಕೆ ರಾಜತಾಂತ್ರಿಕ ಗೆಲುವು, ನೌಕಾಸೇನೆ ಮಾಜಿ ಅಧಿಕಾರಿಗಳ ಗಲ್ಲುಶಿಕ್ಷೆ ರದ್ದುಗೊಳಿಸಿದ ಕತಾರ್!
ಈ ಕುರಿತಾಗಿ ಭಾರತೀಯ ವಿದೇಶಾಂಗ ಸಚಿವಾಲಯ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಕುರಿತು ಮಾತನಾಡಿರುವ ಸಚಿವಾಲಯದ ವಕ್ತಾರ ಅರಿಂದಮ್ ಬಗ್ಚಿ, ‘ಈ ವಿಷಯದ ಕುರಿತಾಗಿ ನಾವು ವಿವರವಾದ ಪತ್ರಿಕಾ ಪ್ರಕಟಣೆಯನ್ನು ಗುರುವಾರ ನೀಡಿದ್ದೇವೆ. ತೀರ್ಪನ್ನು ಸಂಪೂರ್ಣವಾಗಿ ನೋಡುವವರೆಗೂ ನಾವು ಯಾವುದೇ ಹೆಚ್ಚುವರಿ ಮಾಹಿತಿ ನೀಡಲಾಗುವುದಿಲ್ಲ. ಭಾರತೀಯರು ಮತ್ತು ಅವರ ಕುಟುಂಬದ ಸದಸ್ಯರ ಹಿತಾಸಕ್ತಿ ನಮ್ಮ ಪ್ರಮುಖ ಕಾಳಜಿಯಾಗಿದೆ’ ಎಂದು ಹೇಳಿದ್ದಾರೆ.
ಶಿಕ್ಷೆಗೆ ಒಳಗಾಗಿರುವವರೆಲ್ಲಾ 56 ವರ್ಷ ಮೇಲ್ಪಟ್ಟವರಾಗಿದ್ದು, ಆರೋಗ್ಯ ಸಮಸ್ಯೆಯನ್ನು ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.
Breaking: ಬೇಹುಗಾರಿಕೆ ಆರೋಪದಲ್ಲಿ ಬಂಧಿತರಾಗಿದ್ದ 8 ಭಾರತೀಯ Navy ಅಧಿಕಾರಿಗಳಿಗೆ ಕತಾರ್‌ನಿಂದ ಗಲ್ಲು ಶಿಕ್ಷೆ!
ಏನಿದು ಪ್ರಕರಣ?
ದೋಹಾದ ಅಲ್ ದಹ್ರಾ ಕಂಪನಿಯಲ್ಲಿ ಈ 8 ಮಂದಿ ಭಾರತೀಯರು ಕೆಲಸ ಮಾಡುತ್ತಿದ್ದರು. ಇವರು ಕೆಲಸದ ವೇಳೆ ಅತ್ಯಾಧುನಿಕ ಸಬ್‌ಮರೀನ್ ಒಂದರ ರಹಸ್ಯ ಮಾಹಿತಿಯನ್ನು ಇಸ್ರೇಲ್ ಜೊತೆ ಹಂಚಿಕೊಂಡಿದ್ದಾರೆ ಎಂದು ಆರೋಪಿಸಿ ಕತಾರ್ ಇವರಿಗೆ ಗಲ್ಲು ಶಿಕ್ಷೆ ವಿಧಿಸಿತ್ತು.
ಭಾರತದಲ್ಲೇ ಶಿಕ್ಷೆ?
2015ರಲ್ಲಿ ಭಾರತ ಮತ್ತು ಕತಾರ್ ಮಾಡಿಕೊಂಡ ಒಪ್ಪಂದದ ಅನ್ವಯ ಜೈಲು ಶಿಕ್ಷೆಗೆ ಗುರಿಯಾದ ಪರಸ್ಪರ ದೇಶಗಳ ಕೈದಿಗಳನ್ನು ಅವರ ದೇಶದಲ್ಲೇ ಶಿಕ್ಷೆ ಅನುಭವಿಸಲು ಅವಕಾಶವಿದೆ. ಹೀಗಾಗಿ 8 ಜನರಿಗೆ ಶಿಕ್ಷೆಯಾದರೂ ಅವರು ಭಾರತದಲ್ಲೇ ಶಿಕ್ಷೆ ಅನುಭವಿಸುವ ಸಾಧ್ಯತೆ ಇದೆ.