ಬಾಹ್ಯಾಕಾಶಕ್ಕೆ ಹೋಗಬೇಕೇ? ಹಲ್ಲು ಸರಿ ಇರಲೇಬೇಕು!

By Web DeskFirst Published Nov 17, 2019, 3:38 PM IST
Highlights

ಬಾಹ್ಯಾಕಾಶಕ್ಕೆ ಹೋಗಬೇಕೇ? ಹಲ್ಲು ಸರಿ ಇರಲೇಬೇಕು!| ಇಸ್ರೋ ಗಗನಯಾನಕ್ಕೆ ಅರ್ಜಿ ಹಾಕಿದ್ದ 60 ಪೈಲಟ್‌ಗಳು| ಹಲ್ಲು ಸರಿ ಇಲ್ಲವೆಂದು ಬಹುತೇಕ ಅರ್ಜಿಗಳು ತಿರಸ್ಕೃತ

ನವದೆಹಲಿ[ನ.17]: ಅಂತರಿಕ್ಷಕ್ಕೆ ಹೋಗುವವರು ದೈಹಿಕವಾಗಿ ಸದೃಢರಾಗಿದ್ದರಷ್ಟೆಸಾಲದು. ಅವರ ಹಲ್ಲುಗಳು ಕೂಡ ಸರಿ ಇರಬೇಕು!

ಅಚ್ಚರಿಯಾದರೂ ಇದು ನಿಜ. 2022ರಲ್ಲಿ ಮೊದಲ ಬಾರಿಗೆ ಮಾನವಸಹಿತ ಬಾಹ್ಯಾಕಾಶ ಯಾತ್ರೆ ‘ಗಗನಯಾನ’ವನ್ನು ಕೈಗೊಳ್ಳಲು ಉದ್ದೇಶಿಸಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ), ಹಲ್ಲು ಸರಿ ಇಲ್ಲ ಎಂಬ ಕಾರಣಕ್ಕೆ ರಷ್ಯಾ ಸಲಹೆಯಂತೆ ಹಲವರ ಹೆಸರನ್ನು ತಿರಸ್ಕರಿಸಿದೆ.

ಗಗನಯಾನ ಯೋಜನೆಯಡಿ ಮೂವರನ್ನು ಅಂತರಿಕ್ಷಕ್ಕೆ ಕಳುಹಿಸುವ ಸಲುವಾಗಿ ಈ ಹಿಂದೆಯೇ ಇಸ್ರೋ ಅರ್ಜಿ ಆಹ್ವಾನಿಸಿತ್ತು. 60 ಮಂದಿಯಿಂದ ಅರ್ಜಿಯೂ ಬಂದಿತ್ತು. ಅವರನ್ನು ರಷ್ಯಾದ ತಜ್ಞರ ಸಹಾಯದೊಂದಿಗೆ ಪರೀಕ್ಷೆಗೊಳಪಡಿಸಿ, 12 ಮಂದಿಯ ಹೆಸರನ್ನಷ್ಟೇ ಇಸ್ರೋ ಅಂತಿಮಗೊಳಿಸಿದೆ. ಉಳಿದ 48 ಜನರ ಹೆಸರನ್ನು ತಿರಸ್ಕರಿಸಲಾಗಿದೆ. ಈ ಪೈಕಿ ಬಹುತೇಕರ ಹೆಸರು ತಿರಸ್ಕಾರವಾಗಲು ಹಲ್ಲು ಸರಿ ಇಲ್ಲದಿರುವುದೇ ಕಾರಣ ಎಂಬ ಕುತೂಹಲಕರ ಮಾಹಿತಿ ದೊರೆತಿದೆ. ಉಳಿದಂತೆ ಕಿವಿ ಕೊಂಚ ಮಂದವಾಗಿರುವುದು ಹಾಗೂ ದೃಷ್ಟಿದೋಷವಿರುವ ಕಾರಣಕ್ಕೆ ಕೆಲವರನ್ನು ತಿರಸ್ಕರಿಸಲಾಗಿದೆ.

ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಇಳಿಸದೇ ಬಿಡಲ್ಲ: ಇಸ್ರೋ ಅಧ್ಯಕ್ಷರ ಘೋಷಣೆ!

ಜುಲೈ ಹಾಗೂ ಆಗಸ್ಟ್‌ನಲ್ಲಿ ನಡೆದ ಪರೀಕ್ಷೆ ವೇಳೆ ಬಹುತೇಕರು ತಿರಸ್ಕೃತವಾಗಲು ದಂತ ಸಮಸ್ಯೆಯೇ ಕಾರಣ ಎಂದು ಭಾರತೀಯ ವೈಮಾಂತರಿಕ್ಷ ಔಷಧ ಸಂಸ್ಥೆ ತಿಳಿಸಿದೆ. ಗಗನಯಾನಿಗಳನ್ನು ಆಯ್ಕೆ ಮಾಡುವಾಗ ರಷ್ಯಾದ ತಜ್ಞರು ಹಲ್ಲಿನ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾರೆ. ಏಕೆಂದರೆ, ಬಾಹ್ಯಾಕಾಶ ಯಾನದ ಅಂತಿಮ ಹಂತದಲ್ಲಿ ಗಗನಯಾತ್ರಿಗಳಿಗೆ ಹಲ್ಲು ನೋವು ಕಂಡುಬಂದರೆ ಇಡೀ ಯಾನವನ್ನೇ ರದ್ದುಗೊಳಿಸಬೇಕಾಗುತ್ತದೆ ಎಂದು ಸಂಸ್ಥೆಯ ಕಮಾಂಡಂಟ್‌ ಏರ್‌ ಕಮೋಡೋರ್‌ ಅನುಪಮ್‌ ಆಗ್ರಾವಾಲ್‌ ಅವರು ತಿಳಿಸಿದ್ದಾರೆ.

12 ಹೆಸರು ಅಂತಿಮ:

2022ಕ್ಕೆ ಗಗನಯಾನ ಕೈಗೊಳ್ಳಲು ಉದ್ದೇಶಿಸಿರುವ ಇಸ್ರೋ ಸದ್ಯ 12 ಮಂದಿಯ ಹೆಸರನ್ನು ಅಂತಿಮಗೊಳಿಸಿದೆ. ಅವರೆಲ್ಲರಿಗೂ ಕಳೆದ 45 ದಿನಗಳಿಂದ ರಷ್ಯಾದ ಸ್ಟಾರ್‌ ಸಿಟಿಯಲ್ಲಿರುವ ಯೂರಿ ಗಗಾರಿನ್‌ ಗಗನಯಾತ್ರಿಗಳ ತರಬೇತಿ ಕೇಂದ್ರದಲ್ಲಿ ತರಬೇತಿ ನೀಡಲಾಗಿದೆ. ಈ ಪೈಕಿ 7 ಮಂದಿ ತರಬೇತಿ ಪೂರ್ಣಗೊಳಿಸಿದ್ದಾರೆ. ಈ ತಂಡ ಭಾರತಕ್ಕೆ ಮರಳಿ ಮತ್ತಷ್ಟುಕಠಿಣ ತರಬೇತಿಯಲ್ಲಿ ತೊಡಗಲಿದೆ. ಅಂತಿಮ ಹಂತದಲ್ಲಿ ಮೂವರನ್ನು ಮಾತ್ರ ಅಂತರಿಕ್ಷಕ್ಕೆ ಕಳುಹಿಸಲಾಗುತ್ತದೆ.

ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಇಳಿಸದೇ ಬಿಡಲ್ಲ: ಇಸ್ರೋ ಅಧ್ಯಕ್ಷರ ಘೋಷಣೆ!

ಏನು ಕಾರಣ?

ಯುರೋಪಿನ ಬಾಹ್ಯಾಕಾಶ ಸಂಸ್ಥೆಗಳ ಪ್ರಕಾರ, ಗಗನಯಾತ್ರಿಗಳ ಹಲ್ಲು ಸರಿ ಇರಬೇಕು. ಏಕೆಂದರೆ, ಬಾಹ್ಯಾಕಾಶಯಾನದ ವೇಳೆ ಅಲುಗಾಟ ಬಲಿಷ್ಠವಾಗಿರುತ್ತದೆ. ಸರಿಯಾಗಿ ಜೋಡಣೆಯಾಗದ ಹಲ್ಲುಗಳು ಸಡಿಲಗೊಳ್ಳಬಹುದು ಅಥವಾ ಕಳಚಿಬೀಳಬಹುದು. ಹಲ್ಲಿನಲ್ಲಿ ಕುಳಿಗಳು ಇದ್ದರೆ ವಾತಾವರಣದ ಒತ್ತಡದಿಂದಾಗಿ ನೋವು ಕಾಣಿಸಿಕೊಳ್ಳಬಹುದು. ಅದು ತೀವ್ರವಾದಲ್ಲಿ, ಇಡೀ ಯೋಜನೆಗೆ ಅಡ್ಡಿ ಆಗಬಹುದು.

ಚಂದ್ರಯಾನ ಬಳಿಕ ಗಗನಯಾನಕ್ಕೆ ಸಿದ್ಧತೆ!

click me!