
ನವದೆಹಲಿ(ಆ.10): ಕೊನೆಗೂ ಚಿತ್ರರಂಗದ ವಿರೋಧಿಸಿದ್ದ ಸಿನಿಮಾಟೋಗ್ರಫ್ ತಿದ್ದುಪಡಿ ಮಸೂದೆಯನ್ನು ಸಂಸತ್ತು ಅಂಗೀಕರಿಸಿದೆ. ಕೇಂದ್ರೀಯ ಸಿನಿಮಾ ಪ್ರಮಾಣಪತ್ರ ಮಂಡಳಿ (ಸಿಬಿಎಫ್‌ಸಿ)ಯಿಂದ ಅನುಮೋದನೆ ಪಡೆದ ಚಿತ್ರ ಬಿಡುಗಡೆ ಆದ ನಂತರವೂ ಅದರ ಪ್ರಮಾಣಪತ್ರ ಮರುಪರಿಶೀಲಿಸುವ ಅಧಿಕಾರವನ್ನು ಕೇಂದ್ರ ಸರ್ಕಾರಕ್ಕೆ ನೀಡುವ ಮಸೂದೆ ಇದಾಗಿದೆ. ಸೋಮವಾರದ ರಾಜ್ಯಸಭೆಯಲ್ಲಿ ಸಿನಿಮಾ ಪ್ರಮಾಣಪತ್ರ ಮೇಲ್ಮನವಿ ನ್ಯಾಯಾಧಿಕರಣ (ಎಫ್‌ಸಿಎಟಿ) ಸೇರಿದಂತೆ ಒಟ್ಟಾರೆ 9 ಮೇಲ್ಮನವಿ ನ್ಯಾಯಾಧಿಕರಣಗಳನ್ನು ರದ್ದುಗೊಳಿಸುವ ಮಸೂದೆಗೆ ಕೇಂದ್ರ ಅನುಮೋದನೆ ಪಡೆದಿದೆ.
ಕೇಂದ್ರದ ಈ ಕ್ರಮದಿಂದಾಗಿ 1952ರ ಸಿನಿಮಾಟೋಗ್ರಾಫ್ ಕಾಯ್ದೆ ತಿದ್ದುಪಡಿಯಾಗಲಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಸಿನಿಮಾ ಕುರಿತಾಗಿ ಕೇಂದ್ರೀಯ ಸಿನಿಮಾ ಪ್ರಮಾಣಪತ್ರ ಮಂಡಳಿ(ಸಿಬಿಎಫ್‌ಸಿ)ಯಿಂದ ಏನೇ ಸಮಸ್ಯೆ ಏರ್ಪಟ್ಟರೂ ಆ ಸಮಸ್ಯೆಗಳ ಇತ್ಯರ್ಥಕ್ಕಾಗಿ ಸಿನಿಮಾ ನಿರ್ಮಾಪಕರು ಸಿನಿಮಾ ಪ್ರಮಾಣಪತ್ರ ಮೇಲ್ಮನವಿ ನ್ಯಾಯಾಧಿಕರಣದ ಮೊರೆ ಹೋಗುವಂತಿಲ್ಲ. ಬದಲಾಗಿ ಹೈಕೋರ್ಟ್‌ಗಳ ಮೊರೆ ಹೋಗಬೇಕು. ಆದರೆ ಈಗಾಗಲೇ ನ್ಯಾಯಾಲಯಗಳಲ್ಲಿ ಸಾವಿರಾರು ಪ್ರಕರಣಗಳು ಇತ್ಯರ್ಥವಾಗದೆ ಬಾಕಿ ಉಳಿದುಕೊಂಡಿದ್ದು, ಅವುಗಳ ನಡುವೆ ತಮ್ಮ ವ್ಯಾಜ್ಯವನ್ನು ನ್ಯಾಯಾಲಯಗಳು ಕೈಗೆತ್ತಿಕೊಳ್ಳಲು ಸಾಕಷ್ಟುವಿಳಂಬವಾಗಲಿದೆ ಎಂಬುದು ಸಿನಿಮಾ ನಿರ್ಮಾಪಕರ ಆತಂಕವಾಗಿದೆ.
ಅಲ್ಲದೆ ಸಿಬಿಎಫ್‌ಸಿಯಿಂದ ಅನುಮೋದನೆ ಪಡೆದ ಸಿನಿಮಾಗಳ ಪ್ರಮಾಣಪತ್ರಗಳನ್ನು ಮರು ಪರಿಶೀಲಿಸುವ ಅಧಿಕಾರವನ್ನು ಕೇಂದ್ರ ಸರ್ಕಾರಕ್ಕೆ ನೀಡುವ ಅಂಶವೂ ಇದರಲ್ಲಿದೆ. ಇದೇ ಕಾರಣಕ್ಕೆ ಎಫ್‌ಸಿಎಟಿ ರದ್ದುಗೊಳಿಸುವ ಕೇಂದ್ರದ ಕ್ರಮದ ವಿರುದ್ಧ ಈ ಹಿಂದೆ ಸಿನಿಮಾ ನಿರ್ಮಾಪಕರಾದ ಹನ್ಸಲ್ ಮೆಹ್ತಾ, ವಿಶಾಲ್ ಭಾರದ್ವಜ್ ಹಾಗೂ ಅನುರಾಗ್ ಕಶ್ಯಪ್, ತಮಿಳು ನಟ ಕಮಲ್ ಹಾಸನ್ ಸೇರಿದಂತೆ ಇನ್ನಿತರರು ಅಸಮಾಧಾನ ವ್ಯಕ್ತಪಡಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ