ರಾಜ್ಯಗಳಿಗೆ ಒಬಿಸಿ ಮೀಸಲು ಅಧಿಕಾರ ಮರಳಿಸುವ ಮಸೂದೆ ಸಂಸತ್ತಲ್ಲಿ ಮಂಡನೆ!

Published : Aug 10, 2021, 07:38 AM IST
ರಾಜ್ಯಗಳಿಗೆ ಒಬಿಸಿ ಮೀಸಲು ಅಧಿಕಾರ ಮರಳಿಸುವ ಮಸೂದೆ ಸಂಸತ್ತಲ್ಲಿ ಮಂಡನೆ!

ಸಾರಾಂಶ

* ರಾಜ್ಯಗಳಿಗೆ ಒಬಿಸಿ ಮೀಸಲು ಅಧಿಕಾರ ಮರಳಿಸುವ ಮಸೂದೆ ಸಂಸತ್ತಲ್ಲಿ ಮಂಡನೆ * ವಿಧೇಯಕಕ್ಕೆ 15 ಪ್ರತಿಪಕ್ಷಗಳಿಂದ ಸಂಪೂರ್ಣ ಬೆಂಬಲ * ಮಸೂದೆ ಸುಲಭ ಅಂಗೀಕಾರ ಸಾಧ್ಯತೆ

ನವದೆಹಲಿ(ಆ.10): ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದವರ (ಒಬಿಸಿ) ಪಟ್ಟಿಯನ್ನು ತಯಾರಿಸುವ ಹಕ್ಕನ್ನು ರಾಜ್ಯಗಳಿಗೆ ಮರಳಿಸುವ ಮಹತ್ವದ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಕೇಂದ್ರ ಸರ್ಕಾರ ಸೋಮವಾರ ಲೋಕಸಭೆಯಲ್ಲಿ ಮಂಡಿಸಿದೆ. ಈ ಮಸೂದೆಯನ್ನು ಪೂರ್ಣ ಪ್ರಮಾಣದಲ್ಲಿ ಬೆಂಬಲಿಸುವುದಾಗಿ 15 ವಿಪಕ್ಷಗಳು ಕೂಡ ಘೋಷಿಸಿರುವ ಕಾರಣ, ಮಸೂದೆ ಉಭಯ ಸದನಗಳಲ್ಲೂ ಶೀಘ್ರವೇ ಅಂಗೀಕಾರಗೊಂಡು ಕಾಯ್ದೆ ಸ್ವರೂಪ ಪಡೆಯುವ ಭರವಸೆ ಇದೆ.

ಲೋಕಸಭೆಯಲ್ಲಿ ಸಂವಿಧಾನದ 127ನೇ ತಿದ್ದುಪಡಿ ಮಸೂದೆ ಮಂಡಿಸಿ ಮಾತನಾಡಿದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ಸಚಿವ ವೀರೇಂದ್ರ ಕುಮಾರ್‌, ‘ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ತಮ್ಮದೇ ಆದ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದವರ ಪಟ್ಟಿತಯಾರಿಸಲು ಅಧಿಕಾರ ಹೊಂದಿರುವ ಕುರಿತು ಹೆಚ್ಚುವರಿಯಾಗಿ ಸ್ಪಷ್ಟನೆ ನೀಡುವ ಮತ್ತು ಒಕ್ಕೂಟ ವ್ಯವಸ್ಥೆಯ ಚೌಕಟ್ಟನ್ನು ಮುಂದುವರೆಸಿಕೊಂಡು ಹೋಗುವ ನಿಟ್ಟಿನಲ್ಲಿ ಸಂವಿಧಾನದ 342ಎ ಮತ್ತು ಅದರ ಜೊತೆಗೆ 338ಬಿ ಹಾಗೂ 366ನೇ ವಿಧಿಗೆ ತಿದ್ದುಪಡಿ ತರುವ ಅಗತ್ಯವಿದೆ’ ಎಂದು ಹೇಳಿದರು.

ವಿವಾದ ಏನು?:

ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗ ರಚಿಸುವ ಸಲುವಾಗಿ ಕೇಂದ್ರ ಸರ್ಕಾರ 2018ರಲ್ಲಿ ಸಂವಿಧಾನಕ್ಕೆ 102ನೇ ತಿದ್ದುಪಡಿ ತರುವ ಮೂಲಕ 338ಬಿ, 342ಎ ಮತ್ತು 366(26ಸಿ)ವಿಧಿಯಲ್ಲಿ ಕೆಲ ಬದಲಾವಣೆ ಮಾಡಿತ್ತು. ಈ ಪೈಕಿ 338ಬಿ ವಿಧಿಯು ರಾಷ್ಟ್ರೀಯ ಹಿಂದುಳಿದ ಆಯೋಗದ ಅಧಿಕಾರ, ಕರ್ತವ್ಯ ಮೊದಲಾವುಗಳನ್ನು ವಿವರಿಸುತ್ತಿತ್ತು. ಇನ್ನು 342ಎ ಯಾವುದೇ ಸಮುದಾಯವನ್ನು ಒಬಿಸಿ ಪಟ್ಟಿಗೆ ಸೇರಿಸುವ ರಾಷ್ಟ್ರಪತಿಗಳ ಅಧಿಕಾರ ವಿವರಿಸುತ್ತಿತ್ತು. 366 (26ಸಿ) ವಿಧಿಯು, ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದವರು ಯಾರು ಎಂಬುದನ್ನು ವಿವರಿಸುತ್ತಿತ್ತು.

ಆದರೆ ಮಹಾರಾಷ್ಟ್ರದ ಮರಾಠಾ ಮೀಸಲು ಪ್ರಕರಣದ ತೀರ್ಪು ನೀಡುವ ಸಂವಿಧಾನದ 342ಎ ವಿಧಿಯನ್ನು ತನ್ನದೇ ಆದ ರೀತಿಯಲ್ಲಿ ವ್ಯಾಖ್ಯಾನ ಮಾಡಿದ್ದ ಸುಪ್ರೀಂಕೋರ್ಟ್‌, ಒಬಿಸಿ ಪಟ್ಟಿಸಿದ್ಧಪಡಿಸುವ ಅಧಿಕಾರ ಕೇವಲ ರಾಷ್ಟ್ರಪತಿಗಳಿಗೆ ಮಾತ್ರ ಇದೆ. ರಾಜ್ಯಗಳಿಗೆ ಈ ಅಧಿಕಾರ ಇಲ್ಲ. ಹೀಗಾಗಿ ಮಹಾರಾಷ್ಟ್ರ ಸರ್ಕಾರ ಮರಾಠ ಸಮುದಾಯಕ್ಕೆ ನೀಡಿದ್ದ ಮೀಸಲು ರದ್ದುಪಡಿಸಬೇಕು ಎಂದು ಆದೇಶ ಹೊರಡಿಸಿತ್ತು.

ಪ್ರಕರಣದ ವಿಚಾರಣೆ ವೇಳೆ, 342ಎ ವಿಧಿಯನ್ನು ಕೇವಲ ರಾಷ್ಟ್ರೀಯ ಹಿಂದುಳಿದ ಆಯೋಗದ ರಚನೆಗಾಗಿ ಮಾಡಿದ್ದು. ಇದರಿಂದ ಒಬಿಸಿ ಪಟ್ಟಿರಚಿಸುವ ರಾಜ್ಯಗಳ ಅಧಿಕಾರ ಮೊಟಕುಗೊಳ್ಳುವುದಿಲ್ಲ ಎಂದು ಕೇಂದ್ರ ಸರ್ಕಾರ ವಾದಿಸಿದ್ದರೂ, ಅದನ್ನು ಸುಪ್ರೀಂಕೋರ್ಟ್‌ ಒಪ್ಪಿರಲಿಲ್ಲ.

ಬಳಿಕ 342ಎ ವಿಧಿ ಕುರಿತ ವ್ಯಾಖ್ಯಾನವನ್ನು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಮೂಲಕ ಪ್ರಶ್ನಿಸಿತ್ತಾದರೂ, ಅದನ್ನು ನ್ಯಾಯಾಲಯ ವಜಾ ಮಾಡಿತ್ತು. ಹೀಗಾಗಿ ವಿಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದವು. ಕೇಂದ್ರ ಸರ್ಕಾರ ರಾಜ್ಯಗಳ ಹಕ್ಕನ್ನು ಮೊಟಕುಗೊಳಿಸಿದೆ ಎಂದು ಟೀಕಿಸಿದ್ದವು. ಈ ಹಿನ್ನೆಲೆಯಲ್ಲಿ ಹೊಸ ಸಂವಿಧಾನ ತಿದ್ದುಪಡಿ ಮೂಲಕ ವಿಷಯದ ಬಗ್ಗೆ ಸ್ಪಷ್ಟತೆ ನೀಡಿ, ಒಬಿಸಿ ಪಟ್ಟಿರಚಿಸುವ ಹಕ್ಕನ್ನು ಮರಳಿ ರಾಜ್ಯಗಳಿಗೆ ಕಲ್ಪಿಸುವ ಸಲುವಾಗಿ ಇದೀಗ ಕೇಂದ್ರ ಸರ್ಕಾರ ಸಾಂವಿಧಾನ ತಿದ್ದುಪಡಿ ಮಸೂದೆ ಮಂಡಿಸಿದೆ.

ವಿಪಕ್ಷಗಳ ಬೆಂಬಲ:

ಕೇಂದ್ರ ಸರ್ಕಾರ ಮಂಡಿಸಿದ ಮಸೂದೆಯನ್ನು ಚರ್ಚೆ ಬಳಿಕ ಅಂಗೀಕರಿಸಲು ಬೆಂಬಲ ನೀಡುವುದಾಗಿ ವಿಪಕ್ಷಗಳು ಘೋಷಿಸಿವೆ. ಸೋಮವಾರ ಸಂಸತ್‌ ಕಲಾಪಕ್ಕೂ ಮುನ್ನ ಸಭೆ ಸೇರಿದ್ದ 15ಕ್ಕೂ ಹೆಚ್ಚು ವಿಪಕ್ಷಗಳ ನಾಯಕರು ಈ ನಿರ್ಧಾರ ಪ್ರಕಟಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!