
ಪಾಟ್ನಾ (ಏ.21): ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಸೋಲೊಪ್ಪಿದ ಬೆನ್ನಲ್ಲೇ, ಬಿಹಾರದ ಪ್ರಭಾವಿ ನಾಯಕ ಹಾಗೂ ಪಕ್ಷೇತರ ಸಂಸದ ಪಪ್ಪು ಯಾದವ್ ನೀಡಿರುವ ಹೇಳಿಕೆಯೊಂದು ದೇಶಾದ್ಯಂತ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಭಾರತದ ಬಹುತೇಕ ಮಹಿಳೆಯರು ಹಿರಿಯ ರಾಜಕಾರಣಿಗಳೊಂದಿಗೆ 'ಲೈಂಗಿಕ ರಾಜಿ' ಮಾಡಿಕೊಳ್ಳದೆ ರಾಜಕೀಯ ಪ್ರವೇಶಿಸಲು ಸಾಧ್ಯವಿಲ್ಲ ಎಂಬ ಅರ್ಥ ಬರುವಂತೆ ಅವರು ಮಾತನಾಡಿದ್ದಾರೆ.
ಸೋಮವಾರ ಮಾತನಾಡಿದ ಅವರು, "ಭಾರತದಲ್ಲಿ ಮಹಿಳೆಯರನ್ನು ದೇವತೆಗಳೆಂದು ಕರೆಯಲಾಗುತ್ತದೆ. ಆದರೆ ದುರದೃಷ್ಟವಶಾತ್ ಅವರಿಗೆ ಈ ದೇಶದಲ್ಲಿ ಎಂದಿಗೂ ಗೌರವ ಸಿಗುವುದಿಲ್ಲ. ಇದಕ್ಕೆ ಇಲ್ಲಿನ ವ್ಯವಸ್ಥೆ ಮತ್ತು ಸಮಾಜವೇ ಜವಾಬ್ದಾರಿ," ಎಂದರು. ಮುಂದುವರಿದು, "ಶೇ. 90 ರಷ್ಟು ಮಹಿಳೆಯರು ರಾಜಕಾರಣಿಗಳ ಕೋಣೆಯನ್ನು ಪ್ರವೇಶಿಸದೆ (ಲೈಂಗಿಕ ಸುಖ ನೀಡುವುದು ಎಂಬ ಅರ್ಥದಲ್ಲಿ) ತಮ್ಮ ರಾಜಕೀಯ ಜೀವನವನ್ನು ಆರಂಭಿಸಲು ಸಾಧ್ಯವಿಲ್ಲ" ಎಂದು ಗಂಭೀರ ಆರೋಪ ಮಾಡಿದರು.
ಈ ವಿವಾದಾತ್ಮಕ ಹೇಳಿಕೆಯ ಹಿನ್ನೆಲೆಯಲ್ಲಿ, ಬಿಹಾರ ರಾಜ್ಯ ಮಹಿಳಾ ಆಯೋಗವು ಮಂಗಳವಾರ ಪಪ್ಪು ಯಾದವ್‌ಗೆ ನೋಟಿಸ್ ಜಾರಿ ಮಾಡಿದ್ದು, ಮೂರು ದಿನಗಳಲ್ಲಿ ವಿವರಣೆ ನೀಡುವಂತೆ ಸೂಚಿಸಿದೆ. ಆದರೆ ಇದಕ್ಕೆ ಬಗ್ಗದ ಯಾದವ್, ಆಯೋಗದ ಸದಸ್ಯೆ ಸಜಲ್ ಝಾ ಅವರೇ ಹಲವು ನಾಯಕರೊಂದಿಗೆ ಇರುವ ಫೋಟೋಗಳು ನನ್ನ ಬಳಿ ಇವೆ, ಅವುಗಳನ್ನು ಬಹಿರಂಗಪಡಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ. "ಗಾಜಿನ ಮನೆಯಲ್ಲಿ ಕುಳಿತು ಬೇರೆಯವರ ಮೇಲೆ ಕಲ್ಲು ಎಸೆಯಬಾರದು," ಎಂದು ಸಜಲ್ ಝಾ ಅವರನ್ನು ಕುಟುಕಿದ್ದಾರೆ.
ಪಪ್ಪು ಯಾದವ್ ಹೇಳಿಕೆಯನ್ನು ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ತೀವ್ರವಾಗಿ ಖಂಡಿಸಿವೆ. ಕಾಂಗ್ರೆಸ್ ವಕ್ತಾರೆ ಶಾಮಾ ಮೊಹಮ್ಮದ್ ಅವರು ಯಾದವ್ ಅವರನ್ನು "ಥರ್ಡ್ ರೇಟ್ ಸಂಸದ" ಎಂದು ಕರೆದಿದ್ದಾರೆ. "ನಮ್ಮಲ್ಲಿ ಅನೇಕರು ಕಷ್ಟಪಟ್ಟು ಈ ಸ್ಥಾನಕ್ಕೆ ಬಂದಿದ್ದೇವೆ. ಪಪ್ಪು ಯಾದವ್ ತಕ್ಷಣವೇ ಕ್ಷಮೆ ಯಾಚಿಸಬೇಕು," ಎಂದು ಆಗ್ರಹಿಸಿದ್ದಾರೆ. ಜೆಪಿ ವಕ್ತಾರ ಶೆಹಜಾದ್ ಪೂನವಾಲಾ ಅವರು, "ಇದು ಕಾಂಗ್ರೆಸ್ ಬೆಂಬಲಿತ ನಾಯಕನ ಮಹಿಳಾ ವಿರೋಧಿ ಮನಸ್ಥಿತಿಯನ್ನು ತೋರಿಸುತ್ತದೆ. 'ಲಡ್ಕಿ ಹೂಂ, ಲಡ್ ಸಕ್ತಿ ಹೂಂ' ಎನ್ನುವ ಪ್ರಿಯಾಂಕಾ ಗಾಂಧಿ ಈಗ ಏಕೆ ಮೌನವಾಗಿದ್ದಾರೆ?" ಎಂದು ಪ್ರಶ್ನಿಸಿದ್ದಾರೆ.
ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಯು ಮೂರನೇ ಎರಡರಷ್ಟು ಬಹುಮತ ಪಡೆಯುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ. ಮಸೂದೆಯ ಪರವಾಗಿ 298 ಮತ್ತು ವಿರುದ್ಧವಾಗಿ 230 ಮತಗಳು ಬಿದ್ದವು. ಸಂವಿಧಾನ ತಿದ್ದುಪಡಿಗೆ ಅಗತ್ಯವಿದ್ದ 352 ಮತಗಳ ಕೊರತೆಯಿಂದಾಗಿ ಮಸೂದೆ ಬಿದ್ದುಹೋಯಿತು. ಇತ್ತೀಚಿನ ವರ್ಷಗಳಲ್ಲಿ ವಿರೋಧ ಪಕ್ಷಗಳು ಒಗ್ಗೂಡಿ ಸರ್ಕಾರದ ಪ್ರಮುಖ ಪ್ರಸ್ತಾವನೆಯನ್ನು ತಡೆಹಿಡಿದ ಅಪರೂಪದ ಘಟನೆ ಇದಾಗಿದೆ.
ನೋಟಿಸ್ ಸಿಕ್ಕ ಕೆಲವೇ ಗಂಟೆಗಳಲ್ಲಿ, ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದ ಪಪ್ಪು ಯಾದವ್ ಬಿಸಿಲ ತಾಪಕ್ಕೆ (Heatstroke) ತುತ್ತಾಗಿ ಅಸ್ವಸ್ಥರಾಗಿದ್ದಾರೆ ಎಂದು ವರದಿಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ