
ಇಸ್ಲಾಮಾಬಾದ್(ಆ.27): ಭಾರತದ ‘ಚಂದ್ರಯಾನ-3’ ಮಿಷನ್ ಕುರಿತು ಕೊನೆಗೂ ಅಧಿಕೃತವಾಗಿ ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನ, ‘ಯಶಸ್ಸನ್ನು ಮಹಾನ್ ವೈಜ್ಞಾನಿಕ ಸಾಧನೆ. ಇದಕ್ಕಾಗಿ ಇಸ್ರೋ ವಿಜ್ಞಾನಿಗಳು ಮೆಚ್ಚುಗೆಗೆ ಅರ್ಹರಾಗಿದ್ದಾರೆ ಎಂದು ಬಣ್ಣಿಸಿದೆ. ಪಾಕಿಸ್ತಾನದ ಹೊಗಳಿಕೆ ತಡವಾಗಿ ಬಂದಿದೆಯಾದರೂ, ವೈರಿ ದೇಶದ ಸಾಧನೆ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದು ವಿಶೇಷವಾಗಿದೆ. ಇದೇ ವೇಳೆ, ದೇಶದ ಪ್ರಮುಖ ದಿನಪತ್ರಿಕೆಗಳು, ಶ್ರೀಮಂತ ರಾಷ್ಟ್ರಗಳಿಗಿಂತ ಭಾರತಕ್ಕಿಂತ ಕಡಿಮೆ ಬಜೆಟ್‌ನಲ್ಲಿ ಈ ಸಾಧನೆ ಮಾಡಿದ್ದಕ್ಕಾಗಿ ಪ್ರಶಂಸೆ ವ್ಯಕ್ತಪಡಿಸಿವೆ.
ಸುದ್ದಿಗೋಷ್ಠಿಯಲ್ಲಿ ಚಂದ್ರಯಾನದ ಬಗ್ಗೆ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ ಪಾಕ್ ವಿದೇಶಾಂಗ ಕಚೇರಿಯ ವಕ್ತಾರೆ ಮುಮ್ತಾಜ್ ಜಹ್ರಾ ಬಲೋಚ್, ‘ಇದು ಒಂದು ದೊಡ್ಡ ವೈಜ್ಞಾನಿಕ ಸಾಧನೆ ಎಂದು ನಾನು ಹೇಳಬಲ್ಲೆ. ಇದಕ್ಕಾಗಿ ಇಸ್ರೋ (ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ) ವಿಜ್ಞಾನಿಗಳು ಮೆಚ್ಚುಗೆಗೆ ಅರ್ಹರು’ ಎಂದು ಸಂಕ್ಷಿಪ್ತವಾಗಿ ಪ್ರತಿಕ್ರಿಯಿಸಿದರು. ಪಾಕಿಸ್ತಾನಿ ಪತ್ರಿಕೆಗಳು ಇಸ್ರೋ ಸಾಧನೆಯನ್ನು ಮುಖಪುಟದಲ್ಲಿ ಪ್ರಕಟಿಸಿದ್ದರೂ ಪಾಕಿಸ್ತಾನ ಸರ್ಕಾರ ಅಧಿಕೃತ ಹೇಳಿಕೆ ನೀಡಿರಲಿಲ್ಲ.
Chandrayaan - 3 ಯಶಸ್ಸಿಗಾಗಿ ಉಪವಾಸ ಮಾಡಿದ ಪಾಕ್ ಮಹಿಳೆ ಸೀಮಾ ಹೈದರ್
ಪತ್ರಿಕೆಗಳ ಪ್ರಶಂಸೆ:
ಡಾನ್ ಪತ್ರಿಕೆ ತನ್ನ ಸಂಪಾದಕೀಯದಲ್ಲಿ ’ಭಾರತದ ಬಾಹ್ಯಾಕಾಶ ಅನ್ವೇಷಣೆ’ ಎಂಬ ಶೀರ್ಷಿಕೆಯಲ್ಲಿ ಚಂದ್ರಯಾನ-3 ಮಿಷನ್‌ನ ಯಶಸ್ಸನ್ನು ಐತಿಹಾಸಿಕ ಎಂದು ಕರೆದಿದೆ. ‘ಶ್ರೀಮಂತ ರಾಷ್ಟ್ರಗಳು ಹೆಚ್ಚಿನ ಮೊತ್ತವನ್ನು ವ್ಯಯಿಸಿ ಸಾಧಿಸಿದ್ದನ್ನು ಭಾರತವು ಕಡಿಮೆ ಬಜೆಟ್‌ನಲ್ಲಿ ಸಾಧಿಸಿದೆ. ಹೀಗಾಗಿ ಈ ಸಾಧನೆಯು ಮೆಚ್ಚುಗೆಗೆ ಅರ್ಹ’ ಎಂದು ಎಂದು ಪತ್ರಿಕೆ ಹೇಳಿದೆ.
‘ಬಹುಶಃ ಭಾರತದ ಬಾಹ್ಯಾಕಾಶ ಕಾರ್ಯಕ್ರಮದ ಯಶಸ್ಸಿಗೆ ಪ್ರಮುಖವಾದುದು, ಸರ್ಕಾರದ ಬೆಂಬಲದ ಹಾಗೂ ಈ ಕಷ್ಟಕರ ಕಾರ್ಯಾಚರಣೆಗಳನ್ನು ಸಾಧ್ಯವಾಗಿಸಲು ಸಹಾಯ ಮಾಡಿದ ಅದರ ಎಂಜಿನಿಯರ್‌ಗಳು ಮತ್ತು ವಿಜ್ಞಾನಿಗಳ ಗುಣಮಟ್ಟ ಮತ್ತು ಅವರ ಸಮರ್ಪಣಾ ಭಾವ’ ಎಂದು ಬಣ್ಣಿಸಿದೆ. ಆದರೆ, ‘ಭಾರತದ ಬಾಹ್ಯಾಕಾಶ ಯಶಸ್ಸಿನಿಂದ ಪಾಕಿಸ್ತಾನಕ್ಕೆ ಕಲಿಯಲು ಸಾಕಷ್ಟಿದೆ. ಪಾಕಿಸ್ತಾನದ ಬಾಹ್ಯಾಕಾಶ ಕಾರ್ಯಕ್ರಮವನ್ನು ಭಾರತದ ಮೊದಲು ಪ್ರಾರಂಭಿಸಲಾಯಿತು ಮತ್ತು ಸಾಧಾರಣ ಯಶಸ್ಸನ್ನು ಕಂಡಿತು’ ಎಂದು ಅದು ಹೇಳಿದೆ.
ನನ್ನ ದೇಶ ಈ ಸಾಧನೆ ಮಾಡಲು ಇನ್ನೂ 3 ದಶಕಗಳೇ ಬೇಕು: ಪಾಕ್ ನಟಿ ಶೆಹರ್
‘ಎಕ್ಸ್‌ಪ್ರೆಸ್ ಟ್ರಿಬ್ಯೂನ್’ ಪತ್ರಿಕೆಯು ತನ್ನ ಸಂಪಾದಕೀಯದಲ್ಲಿ ’ಇಂಡಿಯಾಸ್ ಲೂನಾರ್ ಲಾರೆಲ…’ ಶೀರ್ಷಿಕೆಯಡಿಯಲ್ಲಿ ಭಾರತದ ಮಹತ್ವಾಕಾಂಕ್ಷೆ ಹಾರಾಟವು ಅಮೆರಿಕ, ಸೋವಿಯತ್-ರಷ್ಯಾ ಮತ್ತು ಚೀನಾದ ಬಾಹ್ಯಾಕಾಶ ಕಾರ್ಯಕ್ರಮಗಳು ಸಾಧಿಸದ್ದನ್ನು ಸಾಧಿಸಿದೆ. ಮೊದಲ ಬಾರಿ ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆಯನ್ನು ಇಳಿಸಿದೆ ಎಂದು ಬಣ್ಣಿಸಿದೆ.
ಇದೇ ವೇಳೆ, ಕೆಲವು ಟ್ವೀಟರ್ ಬಳಕೆದಾರರು ಪಾಕಿಸ್ತಾನದ ಬಾಹ್ಯಾಕಾಶ ಸಂಸ್ಥೆಯಾದ ‘ಸೂಪರ್‌ಕೋ’ ಏನು ಮಾಡುತ್ತಿದೆ ಎಂದು ಅಪಹಾಸ್ಯ ಮಾಡಿದ್ದಾರೆ. ‘ಸೂಪರ್‌ಕೋ ತನ್ನ ವಿಜ್ಞಾನಿಗಳಿಗೆ ಹೌಸಿಂಗ್ ಸೊಸೈಟಿ ನಿರ್ಮಿಸಿದ್ದೇ ಸಾಧನೆ’ ಎಂದು ಕುಹಕವಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ