ಸಂಭಲ್ ಮಸೀದಿ ಸಮೀಕ್ಷೆ ವೇಳೆ ಹಿಂಸೆಗೆ ಪಾಕ್ ನಂಟು: ರಾಹುಲ್ ಭೇಟಿಗೆ ಪೊಲೀಸರ ತಡೆ

By Kannadaprabha News  |  First Published Dec 5, 2024, 7:38 AM IST

ಉತ್ತರ ಪ್ರದೇಶದ ಸಂಭಲ್‌ನಲ್ಲಿ ಶಾಹಿ ಜಾಮಾ ಮಸೀದಿ ಸಮೀಕ್ಷೆ ವಿರೋಧಿಸಿ ನಡೆದ ಹಿಂಸಾಚಾರದ ಹಿಂದೆ ಪಾಕಿಸ್ತಾನದ ಕೈವಾಡ ಇದೆಯೇ ಎಂಬ ಸಂದೇಹ ವ್ಯಕ್ತವಾಗಿದೆ. ಏಕೆಂದರೆ ಸಂಭಲ್‌ನಲ್ಲಿ ನಡೆದ ಹಿಂಸಾಚಾರದಲ್ಲಿ ಪಾಕಿಸ್ತಾನ ನಿರ್ಮಿತ ಮದ್ದುಗುಂಡುಗಳು ಪತ್ತೆಯಾಗಿವೆ.


ಸಂಭಲ್: ಉತ್ತರ ಪ್ರದೇಶದ ಸಂಭಲ್‌ನಲ್ಲಿ ಶಾಹಿ ಜಾಮಾ ಮಸೀದಿ ಸಮೀಕ್ಷೆ ವಿರೋಧಿಸಿ ನಡೆದ ಹಿಂಸಾಚಾರದ ಹಿಂದೆ ಪಾಕಿಸ್ತಾನದ ಕೈವಾಡ ಇದೆಯೇ ಎಂಬ ಸಂದೇಹ ವ್ಯಕ್ತವಾಗಿದೆ. ಏಕೆಂದರೆ ಗಲಭೆ ನಡೆದ ಮಸೀದಿ ಬಳಿಯ ಕೋಟ್ ಗಾರ್ವಿ ಪ್ರದೇಶದಿಂದ ಪಾಕಿಸ್ತಾನ ನಿರ್ಮಿತ ಮದ್ದು ಗುಂಡುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

6 ಖಾಲಿ ಶೆಲ್ ಗಳು ಮತ್ತು ಎರಡು ಮಿಸ್‌ಫೈರ್ಡ್ ಕಾರ್ಟ್‌ರಿಡ್ಜ್‌ಗಳು ಇದರಲ್ಲಿ ಸೇರಿವೆ. ಇವು ಹಿಂಸೆಗೆ ಪಾಕಿಸ್ತಾನದ ಸಂಭವನೀಯ ಸಂಪರ್ಕವನ್ನು ಬಹಿರಂಗಪಡಿಸಿವೆ. ಸಂಭಲ್‌ನ ಹೆಚ್ಚುವರಿ ಪೊಲೀಸ್ ಅಧೀಕ್ಷಕ (ಎಎಸ್‌ಪಿ) ಶಿರೀಶ್ ಚಂದ್ರ ಮಾತನಾಡಿ, '2 ಮಿಸ್ ಫೈರ್ಡ್ 9 ಎಂಎಂ ಕಾರ್ಟ್‌ರಿಡ್ಜ್‌ಗಳು ಮತ್ತು ಪಾಕಿಸ್ತಾನ್‌ ಆರ್ಡನೆನ್ಸ್‌ ಫ್ಯಾಕ್ಟರಿ(ಪಿಒಎಫ್) ತಯಾರಿಸಿದ 1 ಖಾಲಿ ಶೆಲ್ ಜತೆಗೆ ಎರಡು 12 ಬೋರ್‌ಶೆಲ್‌ ಗಳು ಮತ್ತು ಎರಡು 32 ಬೋರ್‌ಶೆಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳಲ್ಲಿ ಕೆಲವು ಪಾಕ್ ನಿರ್ಮಿತ. ಇದು ನಮ್ಮ ತನಿಖೆಯನ್ನು ಮತ್ತೊಂದು ಆಯಾಮಕ್ಕೆ ಕೊಂಡೊಯ್ದಿದೆ ಎಂದರು. ಇದಲ್ಲದೆ ವಿಧಿವಿಜ್ಞಾನ ತಜ್ಞರು ಅಮೆರಿಕದಲ್ಲಿ ತಯಾರಿಸಿದ ಕಾರ್ಟ್‌ರಿಡ್ಜ್‌ಗಳನ್ನು ಸಹ ವಶಪಡಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Tap to resize

Latest Videos

ರಾಹುಲ್ ಭೇಟಿಗೆ ತಡೆ

ಗಾಜಿಯಾಬಾದ್ : ಮಸೀದಿ ಸಮೀಕ್ಷೆ ವಿವಾದದ ಕಾರಣ ಕೋಮುಗಲಭೆಗೆ ಒಳಗಾಗಿದ್ದ ಉತ್ತರ ಪ್ರದೇಶದ ಸಂಭಲ್‌ಗೆ ಹೊರಟಿದ್ದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ಸಂಸದೆ ಪ್ರಿಯಾಂಕಾ ಗಾಂಧಿ ನೇತೃತ್ವದ ಕಾಂಗ್ರೆಸ್ ನಾಯಕರ ನಿಯೋಗವನ್ನು ಉತ್ತರ ಪ್ರದೇಶ ಪೊಲೀಸರು ಗಾಜಿಯಾಬಾದ್‌ ಬಳಿಯ ಗಾಜಿಪುರ ಗಡಿಯಲ್ಲೇ ತಡೆದಿದ್ದಾರೆ. ಹೀಗಾಗಿ ಎಲ್ಲ ನಾಯಕರು ದೆಹಲಿ ಉತ್ತರ ಪ್ರದೇಶ ಗಡಿಯಲ್ಲಿ ಸುಮಾರು 2 ಗಂಟೆಗಳ ಕಾಲ ತಂಗಿ, ನಂತರ ದೆಹಲಿಗೆ ಮರಳಿದರು.

ರಾಹುಲ್‌ ಆಕ್ರೋಶ:

ಗಾಜಿಪುರ ಗಡಿಯಲ್ಲಿ ತಡೆದ ನಂತರ ಪೊಲೀಸರೊಂದಿಗೆ ಮಾತನಾಡಿದ ರಾಹುಲ್‌, ಸಂಭಲ್‌ಗೆ ಪೊಲೀಸ್ ರಕ್ಷಣೆಯಲ್ಲಿ ಏಕಾಂಗಿಯಾಗಿ ಹೋಗಲು ಸಿದ್ಧ ಎಂದು ಹೇಳಿದರು. ಆದರೆ ಪೊಲೀಸರು ಅನುಮತಿಸಲಿಲ್ಲ. ಏಕೆಂದರೆ ಡಿ.10ರವರೆಗೆ ಸಂಭಲ್‌ಗೆ ಬಾಹ್ಯ ವ್ಯಕ್ತಿಗಳ ಪ್ರವೇಶ ನಿಷೇಧಿಸಲಾಗಿದೆ.  ಬಳಿಕ ಸಂವಿಧಾನದ ಪ್ರತಿಯನ್ನು ಕೈಯಲ್ಲಿ ಹಿಡಿದು ಸುದ್ದಿಗಾರರ ಜತೆ ಮಾತನಾಡಿದ ರಾಹುಲ್‌, ಪೊಲೀಸರು ತಡೆದ ಕಾರಣ ವಿರೋಧ ಪಕ್ಷದ ನಾಯಕನ ಹಕ್ಕಿಗೆ ಚ್ಯುತಿ ಆದಂತಾಗಿದೆ. ಪೊಲೀಸರ ನಿರ್ಧಾರ ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದೆ. ನಾವು ಸಂಭಲ್‌ಗೆ ಹೋಗಿ ಅಲ್ಲಿ ಏನಾಯಿತು ಎಂಬುದನ್ನು ನೋಡಿ, ಜನರನ್ನು ಭೇಟಿಯಾಗಲು ಬಯಸುತ್ತೇವೆ. ನಮಗೆ ನೀಡಿರುವ ತಡೆಯು ಸಂವಿಧಾನವನ್ನು ಕೊನೆಗೊಳಿಸುವ ಪ್ರಯತ್ನ. ಆದರೆ ನಾವು ಹೋರಾಟ ಮುಂದುವರಿಸುತ್ತೇವೆ ಎಂದರು.

ಉತ್ತರ ಪ್ರದೇಶದ ಬಿಜೆಪಿ ನಾಯಕರು ಕಾಂಗ್ರೆಸ್ ನಡೆಯನ್ನು 'ಮುಸ್ಲಿಂ ವೋಟ್ ಬ್ಯಾಂಕ್ ಸಮಾಧಾನಪಡಿಸುವ 'ನಾಟಕ' ಎಂದು ಟೀಕಿಸಿದ್ದಾರೆ.

click me!