ಪಹಲ್ಗಾಮ್ ನರಮೇಧಕ್ಕೆ ಕಾರಣ ಪಾಕ್ ಉಗ್ರ ಹಫೀಜ್ ಸಯೀದ್! NIA ಚಾರ್ಜ್‌ಶೀಟ್ ಸಲ್ಲಿಕೆ

Published : Jul 07, 2026, 01:39 PM IST
Hafiz Saeed

ಸಾರಾಂಶ

ಜಮ್ಮು-ಕಾಶ್ಮೀರದ ಪಹಲ್ಗಾಮ್ ಉಗ್ರ ದಾಳಿ ಪ್ರಕರಣದಲ್ಲಿ ಎನ್‌ಐಎ ಹೆಚ್ಚುವರಿ ಚಾರ್ಜ್‌ಶೀಟ್ ಸಲ್ಲಿಸಿದೆ. ಈ ದಾಳಿಯಲ್ಲಿ ಕನ್ನಡಿಗರೂ ಸೇರಿದಂತೆ 26 ಮಂದಿ ಮೃತಪಟ್ಟಿದ್ದು, ಲಷ್ಕರ್-ಎ-ತೊಯ್ದಾ ಮುಖ್ಯಸ್ಥ ಹಫೀಜ್ ಸಯೀದ್‌ನನ್ನು ಪ್ರಮುಖ ಆರೋಪಿಯನ್ನಾಗಿಸಲಾಗಿದೆ. ಈ ಮೂಲಕ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯ ಪಾತ್ರವನ್ನು ಎನ್‌ಐಎ ಬಯಲು ಮಾಡಿದೆ.

ನವದೆಹಲಿ: ಕನ್ನಡಿಗರಾದ ಮಂಜುನಾಥ್ ಮತ್ತು ಭರತ್ ಸೇರಿದಂತೆ ಒಟ್ಟು 26 ಅಮಾಯಕರನ್ನು ಬಲಿಪಡೆದಿದ್ದ ಜಮ್ಮು-ಕಾಶ್ಮೀರದ ಪಹಲ್ಗಾಮ್ ಭೀಕರ ಉಗ್ರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ತನಿಖಾ ವರದಿ ಸಿದ್ದಪಡಿಸಿದೆ. ಈ ದಾಳಿಯ ಹಿಂದೆ ಲಷ್ಕರ್-ಎ-ತೊಯ್ದಾ (LeT) ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ಕೈವಾಡ ಇರುವುದನ್ನು ಎನ್‌ಐಎ ಪತ್ತೆಹಚ್ಚಿದ್ದು, ಆತನನ್ನು ಪ್ರಮುಖ ಆರೋಪಿಯನ್ನಾಗಿಸಿ ನ್ಯಾಯಾಲಯಕ್ಕೆ ಹೆಚ್ಚುವರಿ ದೋಷಾರೋಪ ಪಟ್ಟಿ (ಚಾರ್ಜ್‌ಶೀಟ್) ಸಲ್ಲಿಸಿದೆ. ಈ ಮೂಲಕ ಕಾಶ್ಮೀರದಲ್ಲಿ ನಡೆದಿದ್ದ ಈ ನರಮೇಧದಲ್ಲಿ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯ ಪಾತ್ರ ಮತ್ತೊಮ್ಮೆ ಜಗತ್ತಿನೆದುರು ಬಟಾ ಬಯಲಾಗಿದೆ.

ಜಮ್ಮುವಿನ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿರುವ ಈ ಹೆಚ್ಚುವರಿ ಚಾರ್ಜ್‌ಶೀಟ್‌ನಲ್ಲಿ, ಪಾಕಿಸ್ತಾನ ಮೂಲದ ಹಫೀಜ್ ಸಯೀದ್ ಭಾರತದ ವಿರುದ್ಧ ಯುದ್ಧ ಸಾರಲು ಗಡಿಯಾಚೆಗಿನಿಂದಲೇ ಪಿತೂರಿ ನಡೆಸಿದ್ದ ಎಂದು ಉಲ್ಲೇಖಿಸಲಾಗಿದೆ. ನಿಷೇಧಿತ 'ಲಷ್ಕರ್-ಎ-ತೊಯ್ದಾ' ಹಾಗೂ ಅದರ ಸಹ ಸಂಘಟನೆಯಾದ 'ದಿ ರೆಸಿಸ್ಟೆನ್ಸ್ ಫ್ರಂಟ್' (TRF) ಮುಖ್ಯಸ್ಥನಾಗಿ ಆತ ವೈಯಕ್ತಿಕ ನೆಲೆಯಲ್ಲೇ ಈ ದಾಳಿಗೆ ಸಂಚು ರೂಪಿಸಿದ್ದ ಎಂದು ಎನ್‌ಐಎ ಗಂಭೀರ ಆರೋಪ ಹೊರಿಸಿದೆ.

ವೈಜ್ಞಾನಿಕ ತನಿಖೆ ಮತ್ತು ಪೂರಕ ಸಾಕ್ಷ್ಯಗಳು

ಎನ್‌ಐಎ ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ 1,597 ಪುಟಗಳ ಮೂಲ ಚಾರ್ಜ್‌ಶೀಟ್ ಅನ್ನು ಸಲ್ಲಿಕೆ ಮಾಡಿತ್ತು. ಅದಕ್ಕೆ ಪೂರಕವಾಗಿ ಈಗ ಸಲ್ಲಿಸಲಾಗಿರುವ ಹೆಚ್ಚುವರಿ ಚಾರ್ಜ್‌ಶೀಟ್‌ನಲ್ಲಿ, ದಾಳಿಯ ಹಿಂದೆ ಪಾಕಿಸ್ತಾನ ನಡೆಸಿದ ವ್ಯವಸ್ಥಿತ ಷಡ್ಯಂತ್ರ, ಸಯೀದ್‌ನ ಪ್ರತ್ಯಕ್ಷ ಪಾತ್ರ ಹಾಗೂ ಸ್ಥಳ ಪರಿಶೀಲನೆಯ ನಂತರ ಕಲೆಹಾಕಿದ ಸೂಕ್ಷ್ಮ ವೈಜ್ಞಾನಿಕ ತನಿಖೆಯ ಮಹತ್ವದ ಸಾಕ್ಷ್ಯಗಳನ್ನು ಒದಗಿಸಲಾಗಿದೆ.

ಇದಕ್ಕೂ ಮುನ್ನ ಕಳೆದ ವರ್ಷದ ಡಿಸೆಂಬರ್ 15 ರಂದು ಸಲ್ಲಿಕೆಯಾಗಿದ್ದ ಚಾರ್ಜ್‌ಶೀಟ್‌ನಲ್ಲಿ, ಪಾಕಿಸ್ತಾನಿ ಹ್ಯಾಂಡ್ಲರ್ ಸಾಜಿದ್ ಜಟ್‌ನನ್ನು ಆರೋಪಿ ಎಂದು ಹೆಸರಿಸಲಾಗಿತ್ತು. ಹಾಗೆಯೇ 2025 ರ ಜುಲೈನಲ್ಲಿ ನಡೆದ 'ಆಪರೇಷನ್ ಮಹಾದೇವ್' ವೇಳೆ ಹತರಾದ ಮೂವರು ಭಯೋತ್ಪಾದಕರು ಹಾಗೂ ಬಂಧಿತ ಇಬ್ಬರು ಆರೋಪಿಗಳ ವಿರುದ್ಧವೂ ದೋಷಾರೋಪ ಹೊರಿಸಲಾಗಿತ್ತು.

ಅಂದು ಪಹಲ್ಗಾಮ್‌ನಲ್ಲಿ ಏನಾಗಿತ್ತು?

2025ರ ಏಪ್ರಿಲ್ 22 ರಂದು ಜಮ್ಮು-ಕಾಶ್ಮೀರದ ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ಪಾಕ್ ಪ್ರಾಯೋಜಿತ ಉಗ್ರರು ಅಮಾಯಕ ಪ್ರವಾಸಿಗರನ್ನು ಗುರಿಯಾಗಿಸಿ ಭೀಕರ ಗುಂಡಿನ ದಾಳಿ ನಡೆಸಿದ್ದರು. ಈ ನರಮೇಧದಲ್ಲಿ 25 ಪ್ರವಾಸಿಗರು ಮತ್ತು ಒಬ್ಬ ಸ್ಥಳೀಯ ವ್ಯಕ್ತಿ ಸೇರಿದಂತೆ ಒಟ್ಟು 26 ಮಂದಿಯನ್ನು ಉಗ್ರರು ಕೊಂದು ಹಾಕಿದ್ದರು.

ಈ ಭೀಕರ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆಯು 'ಆಪರೇಷನ್ ಸಿಂದೂರ' ಕಾರ್ಯಾಚರಣೆ ನಡೆಸಿತ್ತು. ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಇದ್ದ ಪಾಕಿಸ್ತಾನದ ಉಗ್ರ ನೆಲೆಗಳು ಮತ್ತು ಅವರಿಗೆ ಸಾಥ್ ನೀಡುತ್ತಿದ್ದ ಸೇನಾ ನೆಲೆಗಳನ್ನು ಭಾರತೀಯ ಪಡೆಗಳು ಧ್ವಂಸಗೊಳಿಸಿದ್ದವು. ಈ ಪ್ರಬಲ ಪ್ರತಿದಾಳಿಗೆ 150ಕ್ಕೂ ಹೆಚ್ಚು ಉಗ್ರರು ಸತ್ತಿದ್ದರು.

ದೆಹಲಿ ಕಾರು ಬಾಂಬ್ ಸ್ಫೋಟ: 11 ಮೃತರ ವಿಧಿವಿಜ್ಞಾನ ವರದಿ ಸಲ್ಲಿಕೆ

ಕಳೆದ ವರ್ಷ ನವೆಂಬರ್ 10 ರಂದು ದೆಹಲಿಯ ಐತಿಹಾಸಿಕ ಕೆಂಪುಕೋಟೆ ಪ್ರದೇಶದಲ್ಲಿ ನಡೆದಿದ್ದ ಭೀಕರ ಕಾರು ಬಾಂಬ್ ಸ್ಫೋಟ ಪ್ರಕರಣದ ತನಿಖೆಯೂ ಚುರುಕುಗೊಂಡಿದೆ. ಈ ಹೈ-ಇಂಟೆನ್ಸಿಟಿ ಐಇಡಿ (IED) ಸ್ಫೋಟದಲ್ಲಿ ಮೃತಪಟ್ಟಿದ್ದ 11 ಜನರ ವಿಧಿವಿಜ್ಞಾನ (Forensic) ವರದಿಯನ್ನು ಎನ್‌ಐಎ ಸೋಮವಾರ ದೆಹಲಿ ನ್ಯಾಯಾಲಯಕ್ಕೆ ಸಲ್ಲಿಸಿದೆ.

ವಿಶೇಷ ನ್ಯಾಯಾಧೀಶ ಪೀತಾಂಬರ್ ದತ್ ಅವರ ಮುಂದೆ ಈ ವರದಿಯನ್ನು ಮಂಡಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ 9 ಉಗ್ರರ ನ್ಯಾಯಾಂಗ ಬಂಧನ ಅವಧಿಯನ್ನು ನ್ಯಾಯಾಲಯವು ಜುಲೈ 13ರವರೆಗೆ ವಿಸ್ತರಿಸಿ ಆದೇಶಿಸಿದೆ. ಈ ಭೀಕರ ಸ್ಫೋಟದ ತನಿಖೆ ನಡೆಸುತ್ತಿರುವ ಎನ್‌ಐಎ, ಈಗಾಗಲೇ ಒಟ್ಟು 13 ಆರೋಪಿಗಳ ವಿರುದ್ಧ ಕೋರ್ಟ್‌ಗೆ ದೋಷಾರೋಪ ಪಟ್ಟಿ ಸಲ್ಲಿಸಿದೆ ಎಂದು ಮೂಲಗಳು ತಿಳಿಸಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮನೆಯಲ್ಲಿರುವ ಬಂಗಾರಕ್ಕೆ ಬಡ್ಡಿ ಸಿಗುತ್ತಾ? ನಿಮ್ಮ ಬಂಗಾರ, ದೇಶಕ್ಕೆ ಬಂಡವಾಳ! ಮನೆಯಲ್ಲಿಟ್ಟಿರುವ ಬಂಗಾರದ ಮೇಲೆ ಮೋದಿ ಕಣ್ಣು..!
ವಯನಾಡಿನಲ್ಲಿ ಭಾರೀ ಭೂಕುಸಿತ; ಮನೆ-ಚರ್ಚ್ ಸಂಪೂರ್ಣ ನಾಶ, ಮಣ್ಣಿನಡಿ ಹಲವರು ಸಿಲುಕಿರೋ ಶಂಕೆ