
ನವದಹೆಲಿ(ಜೂ.22) ಭಾರತದ ಮೇಲೆ ನಡೆದ ಅತೀ ದೊಡ್ಡ ಭಯೋತ್ಪಾದಕ ದಾಳಿ ಪೈಕಿ ಪೆಹಲ್ಗಾಂ ದಾಳಿ ಪ್ರಕರಣ ಕೂಡ ಒಂದು. ಹಿಂದೂಗಳ ಟಾರ್ಗೆಟ್ ಮಾಡಿ ಉಗ್ರರು ನಡೆಸಿದ ದಾಳಿಯಲ್ಲಿ 26 ಅಮಾಯಕ ಪ್ರವಾಸಿಗರು ಮೃತಪಟ್ಟಿದ್ದರು.ಈ ದಾಳಿಗೆ ಪ್ರತಿಯಾಗಿ ಭಾರತ ಆಪರೇಶನ್ ಸಿಂದೂರ್ ಮೂಲಕ ಉತ್ತರ ನೀಡಿತ್ತು. ಉಗ್ರರ ನೆಲೆ ಧ್ವಂಸಗೊಳಿಸಿತ್ತು. ಪಾಕಿಸ್ತಾನ ಡ್ರೋನ್ ಹಾಗೂ ಮಿಸೈಲ್ ಮೂಲಕ ದಾಳಿ ನಡೆಸಿದಾಗ ಭಾರತ ಪ್ರತ್ಯುತ್ತರ ನೀಡಿತ್ತು. ಇದೀಗ ಈ ಪೆಹಲ್ಗಾಂ ದಾಳಿ ಪ್ರಕರಣದ ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ. ಉಗ್ರರು ದಾಳಿ ನಡೆಸಲು ಅವರಿಗೆ ನೆರವು ಹಾಗೂ ಆಶ್ರಯ ನೀಡಿದ ಇಬ್ಬರು ಸ್ಥಳೀಯರನ್ನು ಎನ್ಐಎ ಬಂಧಿಸಿದೆ.
ಪಾಕಿಸ್ತಾನಿ ಉಗ್ರರಿಗೆ ಆಶ್ರಯ ನೀಡಿ, ಊಟ ಕೊಟ್ಟಿದ್ದ ಸ್ಥಳೀಯರು
ಪೆಹಲ್ಗಾಂನ ನಿವಾಸಿಗಳಾದ ಪರ್ವೈಜ್ ಅಹಮ್ಮದ್ ಜೋಥರ್ ಹಾಗೂ ಬಶೀರ್ ಅಹಮ್ಮದ್ ಜೋಥರ್ ಇಬ್ಬರು ಬಂಧಿತರು. ಪರ್ವೈಜ್ ಪೆಹಲ್ಗಾಂ ಬಾಟ್‌ಕೋಟೆ ಮೂಲದವನಾಗಿದ್ದರೆ, ಬಶೀರ್ ಅಹಮ್ಮದ್ ಪೆಹಲ್ಗಾಂ ಹಿಲ್ ಪಾರ್ಕ್ ನಿವಾಸಿ. ಇಬ್ಬರು ಪೆಹಲ್ಗಾಂನಲ್ಲಿ ದಾಳಿ ನಡೆಸಿದ ಉಗ್ರರಿಗೆ ನೆರವು ನೀಡಿದ್ದ ಆರೋಪದಡಿ ಎನ್ಐಎ ಬಂಧಿಸಿದೆ. ಉಗ್ರರಿಗೆ ಊಟ, ವಸತಿ, ಪೆಹಲ್ಗಾಂ ಸಂಪೂರ್ಣ ಚಿತ್ರಣ, ಕೆಲ ಶಸ್ತ್ರಾಸ್ತ್ರಗಳ ಸಾಗಾಟಕ್ಕೂ ನೆರವು ನೀಡಿದ್ದರು. ಕೆಲ ದಿನಗಳ ಕಾಲ ಈ ಉಗ್ರರು ಇಬ್ಬರ ಜೊತೆ ನೆಲೆಸಿದ್ದರು.
ಪಾಕಿಸ್ತಾನ ಮೂಲದ ಉಗ್ರರು
ಪೆಹಲ್ಗಾಂ ದಾಳಿ ಮಾಡಿದ ಉಗ್ರರು ಪಾಕಿಸ್ತಾನ ಮೂಲದವರು. ಅಕ್ರಮವಾಗಿ ಭಾರತಕ್ಕೆ ನುಸುಳಿದ್ದ ಈ ಉಗ್ರರಿಗೆ ಪೆಹಲ್ಗಾಂನ ಸ್ಥಳೀಯ ಇಬ್ಬರು ನೆರವು ನೀಡಿದ್ದರು. ಬಳಿಕ ಪೆಹಲ್ಗಾಂನಲ್ಲಿ ಎಲ್ಲೆಲ್ಲಾ ಭದ್ರತಾ ಪಡಗಳಿವೆ, ಎಲ್ಲಿಂದ ದಾಳಿ ಆರಂಭಿಸಿ, ಎಲ್ಲಿ ಕೊನೆಗೊಳಿಸಬೇಕು, ಎಲ್ಲಿಂದ ಎಸ್ಕೇಪ್ ಆಗಬೇಕು ಅನ್ನೋದರ ಮಾಹಿತಿಯನ್ನು ಸ್ಥಳೀಯರಿದಂ ಪಡೆದುಕೊಂಡು ಪ್ಲಾನ್ ರೂಪಿಸಿದ್ದರು. ಪಾಕಿಸ್ತಾನದ ಮೂಲಕ ಇವರು ಲಷ್ಕರ್ ಇ ತೈಬಾ ಉಗ್ರ ಸಂಘಟನೆಗೆ ಸೇರಿದವರಾಗಿದ್ದಾರೆ ಅನ್ನೋ ಮಾಹಿತಿಯನ್ನು ಎನ್ಐಎಗೆ ಬಂಧಿತರು ಹೇಳಿದ್ದಾರೆ.
ಪಾಕಿಸ್ತಾನಿ ಉಗ್ರರು ಅನ್ನೋ ಮಾಹಿತಿ ಗೊತ್ತಿತ್ತು
ಪೆಹಲ್ಗಾಂ ಪ್ರಕರಣದಲ್ಲಿ ಬಂಧಿತರಾಗಿರುವ ಇಬ್ಬರು ಸ್ಥಳೀಯರು ಪಾಕ್ ಉಗ್ರರಿಗೆ ಸಹಾಯ ಗೊತ್ತಿಲ್ಲದೆ ಮಾಡಿದ ತಪ್ಪಲ್ಲ. ಪಾಕಿಸ್ತಾನ ಮೂಲಕ ಉಗ್ರರು ಅನ್ನೋ ಸ್ಪಷ್ಟ ಮಾಹಿತಿ ಇತ್ತು. ಈ ಉಗ್ರರು ಭಾರತದಲ್ಲಿ ಅತೀ ದೊಡ್ಡ ದಾಳಿಗೆ ಪ್ಲಾನ್ ಮಾಡಿದ್ದಾರೆ ಅನ್ನೋ ಮಾಹಿತಿ ಕೂಡ ಇತ್ತು. ಇಬ್ಬರೂ ಈ ದಾಳಿಗೆ ನೆರವು ನೀಡಿದ್ದಾರೆ.ಒಟ್ಟು ಮೂವರು ಉಗ್ರರಿಗೆ ಇವರು ಆಶ್ರಯ ನೀಡಿದ್ದರು. ಪೆಹಲ್ಗಾಂನಲ್ಲೇ ದಾಳಿಗೆ ಸಂಚು ರೂಪಿಸಲಾಗಿದೆ ಅನ್ನೋ ಮಾಹಿತಿಯೂ ಈ ಸ್ಥಳೀಯರಿಗೆ ಇತ್ತು ಎಂದು ಎನ್ಐಎ ತನಿಖೆಯಲ್ಲಿ ಬಹಿರಂಗವಾಗಿದೆ.
ಉಗ್ರರನ್ನು ಸುರಕ್ಷಿತವಾಗಿ ಪೆಹಲ್ಗಾಂಗೆ ಕರೆತಂದಿದ್ದ ಸ್ಥಳೀಯರು
ಭಾರತಕ್ಕೆ ನುಸುಳಿದ ಉಗ್ರರು, ಸ್ಥಳೀಯ ನೆಟ್‌ವರ್ಕ್ ಮುಕಾಂತರ ಬಶೀರ್ ಅಹಮ್ಮದ್ ಹಾಗೂ ಪರ್ವೈಜ್ ಅಹಮ್ಮದ್ ಸಂಪರ್ಕಿಸಿದ್ದಾರೆ. ಇಬ್ಬರು ಸ್ಥಳೀಯರು ಈ ಮೂವರು ಉಗ್ರರನ್ನು ಸುರಕ್ಷಿತವಾಗಿ ಪೆಹಲ್ಗಾಂಗೆ ಕರೆ ತಂದಿದ್ದಾರೆ. ಇವರ ಖರ್ಚು ವೆಚ್ಚ, ಸಾರಿಗೆ, ಆಹಾರ, ವಸತಿ ಸೇರಿದಂತೆ ಎಲ್ಲಾ ವ್ಯವಸ್ಥೆಯನ್ನು ಸ್ಥಳೀಯರು ಮಾಡಿದ್ದರು. ಸ್ಥಳೀಯರ ಜೊತೆಗಿದ್ದ ಕಾರಣ ಉಗ್ರರು ಪೆಹಲ್ಗಾಂನ ಸಂಪೂರ್ಣ ಮಾಹಿತಿಯನ್ನು ಪಡೆದು ದಾಳಿ ನಡೆಸಿದ್ದಾರೆ. ಇದು ವ್ಯವಸ್ಥಿತವಾಗಿ ನಡೆಸಿದ ದಾಳಿ. ಪಾಕಿಸ್ತಾನಿ ಉಗ್ರರಿಗೆ ಸ್ಥಳೀಯರ ನೆರವು ಸಿಕ್ಕಿದ ಕಾರಣ ಈ ದಾಳಿಯ ತೀವ್ರತೆ ಹೆಚ್ಚಾಗಿದೆ ಅನ್ನೋ ಮಾಹಿತಿಯೂ ತನಿಖೆಯಲ್ಲಿ ಬಯಲಾಗಿದೆ.
ಪೆಹಲ್ಗಾಂ ಉಗ್ರ ದಾಳಿಯಲ್ಲಿ 26 ಅಮಾಯಕರು ಬಲಿಯಾಗಿದ್ದರೆ, 16ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.ಉಗ್ರರು ಧರ್ಮ ಕೇಳಿ ದಾಳಿ ನಡೆಸಿದ್ದರು. ಈ ದಾಳಿಯ ವಿಡಿಯೋಗಳು ಭಾರಿ ವೈರಲ್ ಆಗಿತ್ತು. ಜಮ್ಮ ಮತ್ತು ಕಾಶ್ಮೀರದಲ್ಲಿ ಶಾಂತಿ ನಲೆಸುತ್ತಿದ್ದಂತೆ ಪ್ರವಾಸೋದ್ಯಮ ಚಿಗುರೊಡೆದಿತ್ತು. ಹೊರಗಿನಿಂದ ಹೆಚ್ಚಿನ ಮಂದಿ ಕಾಶ್ಮೀರ ಪ್ರವಾಸ ಮಾಡುತ್ತಿದ್ದರು. ಇದೇ ವೇಳೆ ದಾಳಿ ಮಾಡಿ ಭಾರತೀಯರಲ್ಲಿ ಆತಂಕ ಸೃಷ್ಟಿಸುವ ಪ್ರಯತ್ನವನ್ನು ಉಗ್ರರು ನಡೆಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ