
ವಿಶ್ವನಾಥ ಮಲೇಬೆನ್ನೂರು
ನವದೆಹಲಿ : ಕೃಷಿ, ರಸ್ತೆ, ಸೇತುವೆ, ಕಟ್ಟಡ ನಿರ್ಮಾಣ, ದುರಂತ ಸ್ಥಳದಲ್ಲಿ ತ್ವರಿತ ರಕ್ಷಣಾ ಕಾರ್ಯಾಚರಣೆ, ಮೆರವಣಿಗೆ, ಉತ್ಸವ ಸೇರಿ ಎಲ್ಲೆಡೆ ಕಾಣಿಸಿಕೊಳ್ಳುವ ಜೆಸಿಬಿಗಳ ಬಗ್ಗೆ ಎಲ್ಲರಿಗೂ ಗೊತ್ತು. ಆದರೆ, ಭಾರತದಲ್ಲಿ ಸಿದ್ಧವಾಗುವ ಜೆಸಿಬಿ ಸಂಸ್ಥೆಯ ಬ್ಯಾಕ್ ಹೋ ಲೋಡರ್ ಯಂತ್ರಗಳು ವಿಶ್ವದ 130ಕ್ಕೂ ಹೆಚ್ಚು ದೇಶಗಳಿಗೆ ರಫ್ತಾಗುತ್ತಿವೆ. ಹರ್‍ಯಾಣದ ಬಲ್ಲಭಗಢದಲ್ಲಿರುವ ಜೆಸಿಬಿ ಇಂಡಿಯಾದ ಅತ್ಯಾಧುನಿಕ ಘಟಕದಲ್ಲಿ ಪ್ರತಿ ಮೂರು ನಿಮಿಷಕ್ಕೊಂದರಂತೆ ನಿತ್ಯ 157 ಜೆಸಿಬಿಗಳು ಸಿದ್ಧವಾಗುತ್ತಿವೆ ಎನ್ನುವುದು ಬಹುತೇಕರಿಗೆ ಗೊತ್ತಿರಲಿಕ್ಕಿಲ್ಲ.
ಇಂದು ಉತ್ತಮ, ನಾಳೆ ಇನ್ನೂ ಉತ್ತಮ ಎಂಬ ಸಂದೇಶದೊಂದಿಗೆ 1979ರ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಭಾರತಕ್ಕೆ ಕಾಲಿಟ್ಟ ಬ್ರಿಟನ್ ಮೂಲದ ಜೆಸಿಬಿ ಸಂಸ್ಥೆ ಇದೀಗ ನಮ್ಮದೇ ಆಗಿಬಿಟ್ಟಿದೆ. ಜೆಸಿಬಿ ಇಂಡಿಯಾ ಸಂಸ್ಥೆ ಭಾರತದಲ್ಲಿ ಉತ್ಪಾದಿಸುವ ಈ ಯಂತ್ರಗಳು ಯೂರೋಪಿಯನ್ ರಾಷ್ಟ್ರಗಳು, ಆಫ್ರಿಕಾ, ಅಮೆರಿಕ ಸೇರಿ ವಿಶ್ವದೆಲ್ಲೆಡೆ ರಫ್ತಾಗುತ್ತಿರುವುದು ವಿಶೇಷ. ಇತ್ತೀಚೆಗಷ್ಟೇ ಕಂಪನಿಯು ಭಾರತದಲ್ಲಿ 5 ಲಕ್ಷ ಜೆಸಿಬಿ ಯಂತ್ರಗಳನ್ನು ಉತ್ಪಾದಿಸಿದ ಸಾಧನೆ ಮಾಡಿದೆ. ಜತೆಗೆ, ಸಿಎನ್‌ಜಿ, ಹೈಡ್ರೋಜನ್ ಇಂಧನ ಬಳಸುವ ಯಂತ್ರಗಳನ್ನೂ ಉತ್ಪಾದಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಮೂಲಕ ಈ ಸ್ಪರ್ಧಾತ್ಮಕ ಸನ್ನಿವೇಶದಲ್ಲೂ ಕಂಪನಿಯು ಮಾರುಕಟ್ಟೆಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ.
ಅತ್ಯಾಧುನಿಕ ಉತ್ಪಾದನಾ ಘಟಕ:
ಜೆಸಿಬಿ ಇಂಡಿಯಾ ಸಂಸ್ಥೆ ದೇಶದಲ್ಲಿ ಒಟ್ಟು ನಾಲ್ಕು ಪ್ರಮುಖ ತಯಾರಿಕಾ ಘಟಕಗಳನ್ನು ಹೊಂದಿದ್ದು, ಈ ಪೈಕಿ ಹರ್‍ಯಾಣದ ಬಲ್ಲಭಗಢ ಘಟಕವು ಸಂಸ್ಥೆಯ ಕೇಂದ್ರ ಸ್ಥಾನ.. ಇದು ಸುಮಾರು 50 ಎಕರೆಗೂ ಹೆಚ್ಚಿನ ಪ್ರದೇಶದಲ್ಲಿದ್ದು, ಈ ಘಟಕದಲ್ಲಿ ಸಾಮಾನ್ಯವಾಗಿ ಕರೆಯಲ್ಪಡುವ ಜೆಸಿಬಿ ಯಂತ್ರ (ಬ್ಯಾಕ್ ಹೋ ಲೋಡರ್) ಸೇರಿ ಲೋಡರ್, ಟೆಲಿ ಹ್ಯಾಂಡ್ಲರ್, ಡೀಸೆಲ್ ಜನರೇಟರ್ ಮತ್ತು ಡೀಸೆಲ್ ಎಂಜಿನ್‌ಗಳನ್ನು ತಯಾರಿಸುತ್ತದೆ.
ಪ್ರತಿ ಜೆಸಿಬಿ ಯಂತ್ರದ ನಿಗಾ ಕೇಂದ್ರ:
ವಿಶೇಷವೆಂದರೆ ಮಾರಾಟವಾದ ಪ್ರತಿ ಜೆಸಿಬಿ ಯಂತ್ರಗಳ ಬಗ್ಗೆ ನಿಗಾ ವಹಿಸುವ ವ್ಯವಸ್ಥೆಯನ್ನು ಬಲ್ಲಭಗಢ ಘಟಕದಲ್ಲಿ ಮಾಡಲಾಗಿದೆ. ಯಂತ್ರದ ಕಾರ್ಯಾಚರಣೆ ಅವಧಿ, ಎಷ್ಟು ಇಂಧನ ದಹನ ಮಾಡಿದೆ. ಎಂಜಿನ್‌ನ ಆಯಿಲ್ ಮಟ್ಟ, ಯಾವುದಾದರೂ ಯಂತ್ರದಲ್ಲಿ ಸಮಸ್ಯೆ ಕಾಣಿಸಿಕೊಂಡಿದೆಯೇ ಎಂಬ ಮಾಹಿತಿ ಗ್ರಹಿಸುವ ತಂತ್ರಜ್ಞಾನವನ್ನು ಈ ಘಟಕದಲ್ಲಿ ಅಳವಡಿಸಲಾಗಿದೆ. ಏನಾದರೂ ಸಮಸ್ಯೆಗಳು ಗೋಚರಿಸಿದರೆ ತಕ್ಷಣ ಜೆಸಿಬಿ ಮಾಲೀಕರ ಮೊಬೈಲ್‌ಗೆ ಸಂದೇಶ ರವಾನಿಸಿ ಸರಿಪಡಿಸುವ ಕೆಲಸವನ್ನು ಸಂಸ್ಥೆ ಕಡೆಯಿಂದ ಮಾಡಲಾಗುತ್ತದೆ. ಇದಕ್ಕಾಗಿ ದೇಶದ 12 ಭಾಷೆಯಲ್ಲಿ ಗ್ರಾಹಕರಿಗೆ ಸಲಹೆ-ಸೂಚನೆ ನೀಡುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಒಟ್ಟಾರೆ ಸಂಸ್ಥೆಯು ಗ್ರಾಹಕ ಸ್ನೇಹಿ ಜೆಸಿಬಿಗಳನ್ನು ಉತ್ಪಾದಿಸುವ ಕೆಲಸ ಮಾಡುತ್ತಿದೆ.
ಜೆಸಿಬಿ ಖರೀದಿಯೇ ಒಂದು ಸ್ಟಾರ್ಟ್ಅಪ್
ಸರ್ಕಾರವು ಸ್ಟಾರ್ಟ್ಅಪ್‌ಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಜೆಸಿಬಿ ಖರೀದಿಯೇ ಒಂದು ರೀತಿಯ ಸ್ಟಾರ್ಟ್ಅಪ್ ಆರಂಭಿಸಿದಂತೆ. ಜೆಸಿಬಿ ಯಂತ್ರದಿಂದ ಉದ್ಯೋಗ ಕಡಿತವಾಗಲಿದೆ ಎನ್ನಲಾಗುತ್ತದೆ. ಆದರೆ, ಜೆಸಿಬಿ ಯಂತ್ರದಿಂದ ದೇಶದಲ್ಲಿ ಹೊಸ ಉದ್ಯೋಗ ಸೃಷ್ಟಿಯಾಗಿದೆ. ಒಂದು ಜೆಸಿಬಿ ಯಂತ್ರಕ್ಕೆ ಚಾಲಕ, ಸಹಾಯಕ ಸೇರಿ ಒಟ್ಟು ಆರು ಹೊಸ ಉದ್ಯೋಗ ಅವಕಾಶಗಳು ಸೃಷ್ಟಿಯಾಗುತ್ತಿದೆ. ಜೆಸಿಬಿ ಯಂತ್ರ ಖರೀದಿಗೆ ಬ್ಯಾಂಕ್‌ನಿಂದ ಶೇ.90 ರಷ್ಟು ಸಾಲ ಸಿಗಲಿದೆ. ಸಾಲ ಮರು ಪಾವತಿಗೆ ಸುಲಭ ಕಂತು ವ್ಯವಸ್ಥೆಯನ್ನೂ ನೀಡುತ್ತಿವೆ. ಇತ್ತೀಚೆಗೆ ಆರ್‌ಬಿಐ ಬಡ್ಡಿದರ ಇಳಿಸಿರುವುದರಿಂದ ಗ್ರಾಹಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಜೆಸಿಬಿ ಇಂಡಿಯಾ ಸಂಸ್ಥೆಯ ಸಿಇಒ ದೀಪಕ್ ಶೆಟ್ಟಿ ಹೇಳಿದ್ದಾರೆ.
-ಅಂಕಿ-ಅಂಶ-
ಡೀಲರ್ಸ್: 60ಕ್ಕೂ ಅಧಿಕ
ಶೋ ರೂಂ: 700ಕ್ಕೂ ಅಧಿಕ
ಉಗ್ರಾಣ: ಬೆಂಗಳೂರು ಸೇರಿದಂತೆ ಐದು ಕಡೆ
ಪರಿಣಿತ ಎಂಜಿನಿಯರ್: 6 ಸಾವಿರ
ಮೊಬೈಲ್ ಸರ್ವೀಸ್ ಎಂಜಿನಿಯರ್: 3500
ತರಬೇತಿ ಕೇಂದ್ರ: 20
ಸರ್ವೀಸ್ ವ್ಯಾನ್: 250ಕ್ಕೂ ಅಧಿಕ
ಸಹಾಯವಾಣಿ: 12 ಭಾಷೆಯಲ್ಲಿ 24/7 ಸೇವೆ
ತಯಾರಿಕಾ ಘಟಕ: 4
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ