ಲಸಿಕೆ ಅಭಿಯಾನ ಭಾರಿ ಚುರುಕು: ಎರಡೇ ದಿನದಲ್ಲಿ 5 ಲಕ್ಷ ಮಂದಿಗೆ ವ್ಯಾಕ್ಸಿನ್‌!

By Kannadaprabha NewsFirst Published Mar 3, 2021, 7:38 AM IST
Highlights

ಲಸಿಕೆ ಅಭಿಯಾನ ಭಾರಿ ಚುರುಕು| ಹಂತ 3: ಎರಡೇ ದಿನದಲ್ಲಿ 5 ಲಕ್ಷ ಮಂದಿಗೆ ವ್ಯಾಕ್ಸಿನ್‌| 50 ಲಕ್ಷ ಮಂದಿ ನೋಂದಣಿ| ಗಣ್ಯರಿಂದಲೂ ಸ್ವೀಕಾರ

ನವದೆಹಲಿ(ಮಾ.,03): 60 ವರ್ಷ ಮೇಲ್ಪಟ್ಟಮತ್ತು ವಿವಿಧ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ 45 ವರ್ಷ ಮೀರಿದವರಿಗೆ ಆರಂಭಿಸಲಾಗಿರುವ ಕೊರೋನಾ ಲಸಿಕೆ ವಿತರಣೆ ಮಂಗಳವಾರ ಮತ್ತಷ್ಟುಚುರುಕು ಪಡೆದುಕೊಂಡಿದೆ. ಲಸಿಕೆ ಪಡೆಯಲು ದೇಶಾದ್ಯಂತ ಭಾರೀ ಪ್ರಮಾಣದಲ್ಲಿ ವಯೋವೃದ್ಧರು ಆಸ್ಪತ್ರೆಗಳಿಗೆ ಭೇಟಿ ನೀಡಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಜೊತೆಗೆ ಅನ್‌ಲೈನ್‌ ಪೋರ್ಟಲ್‌ ಮೂಲಕವೂ ಹೆಸರು ನೋಂದಣಿ ನಡೆದಿದ್ದು, 2 ದಿನದಲ್ಲಿ ನೋಂದಣಿ ಮಾಡಿಕೊಂಡವರ ಸಂಖ್ಯೆ 50 ಲಕ್ಷ ದಾಟಿದೆ.

ಇದರಿಂದಾಗಿ, ಮೊದಲ 2 ಹಂತದ ವೇಳೆ ಲಸಿಕೆ ಪಡೆಯಲು ವ್ಯಕ್ತವಾದ ನಿರಾಸಕ್ತಿಯಿಂದ ಸರ್ಕಾರಕ್ಕೆ ಉಂಟಾಗಿದ್ದ ಕಳವಳ ದೂರವಾಗಿದೆ. ಜೊತೆಗೆ ಮೊದಲ ದಿನ ಪೋರ್ಟಲ್‌ನಲ್ಲಿ ಕಾಣಿಸಿಕೊಂಡ ತಾಂತ್ರಿಕ ಸಮಸ್ಯೆಗಳು ಎರಡನೇ ದಿನದ ಹೊತ್ತಿಗೆ ಬಹುತೇಕ ದೂರವಾಗುವುದರೊಂದಿಗೆ ಲಸಿಕೆ ನೀಡಿಕೆ ಪ್ರಕ್ರಿಯೆ ಮತ್ತಷ್ಟುಸುಗಮಗೊಂಡಿದೆ.

ಕಳೆದ 2 ದಿನಗಳ ಅವಧಿಯಲ್ಲಿ 60 ವರ್ಷ ಮೇಲ್ಪಟ್ಟ, ಆರೋಗ್ಯ ಸಮಸ್ಯೆ ಎದುರಿಸುತ್ತಿರುವ 45 ವರ್ಷ ಮೇಲ್ಪಟ್ಟ2.08 ಲಕ್ಷ ಜನರು ಮೊದಲ ಡೋಸ್‌ ಲಸಿಕೆ ಪಡೆದಿದ್ದಾರೆ. ಇದರೊಂದಿಗೆ ಈವರೆಗೆ ದೇಶದಲ್ಲಿ ಕೊರೋನಾ ಲಸಿಕೆ ಪಡೆದವರ ಒಟ್ಟು ಸಂಖ್ಯೆ 1.48 ಕೋಟಿಗೆ ತಲುಪಿದೆ.

3ನೇ ಹಂತ ಆರಂಭಕ್ಕೂ ಮುನ್ನ ಸರ್ಕಾರ ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಸಿಬ್ಬಂದಿಗೆ ಲಸಿಕೆ ನೀಡಿಕೆ ಆರಂಭಿಸಿತ್ತು. ಇದುವರೆಗೆ ಈ ಎರಡೂ ವರ್ಗದ ಜನರಿಗೆ 1.46 ಕೋಟಿ ಡೋಸ್‌ ಲಸಿಕೆ ವಿತರಿಸಲಾಗಿದೆ. ಇದರಲ್ಲಿ 1.20 ಕೋಟಿ ಜನರಿಗೆ ಮೊದಲ ಡೋಸ್‌ ಮತ್ತು 26 ಲಕ್ಷ ಜನರಿಗೆ 2ನೇ ಡೋಸ್‌ ನೀಡಲಾಗಿದೆ.

ಗಣ್ಯರಿಂದ ಲಸಿಕೆ ಸ್ವೀಕಾರ:

ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್‌ ಮತ್ತು ಸಚಿವ ರವಿಶಂಕರ್‌ ಪ್ರಸಾದ್‌ ಮಂಗಳವಾರ ದೆಹಲಿಯಲ್ಲಿ ಖಾಸಗಿ ಆಸ್ಪತ್ರೆಗೆ ತೆರಳಿ ಲಸಿಕೆ ಪಡೆದರು. ಜೊತೆಗೆ ಪ್ರತಿ ಲಸಿಕೆಗೆ 250 ರು. ನಂತೆ ಶುಲ್ಕ ಪಾವತಿ ಮಾಡಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಹರ್ಷವರ್ಧನ್‌, ‘ನಾನು ಮತ್ತು ನನ್ನ ಪತ್ನಿ ಇಂದು ಕೋವ್ಯಾಕ್ಸಿನ್‌ ಲಸಿಕೆ ಪಡೆದೆವು. ಲಸಿಕೆಯಿಂದ ಯಾವುದೇ ಅಡ್ಡಪರಿಣಾಮ ಆಗಲಿಲ್ಲ. ಹಾಗಾಗಿ 60 ವರ್ಷ ಮೇಲ್ಪಟ್ಟವರು ಯಾವುದೇ ಭಯ ಇಲ್ಲದೆ ಲಸಿಕೆ ಪಡೆಯಬೇಕು’ ಎಂದು ಮನವಿ ಮಾಡಿದರು.

ಇನ್ನು ರಕ್ಷಣಾ ಸಚಿವ ರಾಜನಾಥ್‌ಸಿಂಗ್‌, ನಟ ಕಮಲ್‌ ಹಾಸನ್‌, ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿ ಫಾರೂಕ್‌ ಅಬ್ದುಲ್ಲಾ, ಆಂಧ್ರಪ್ರದೇಶ ರಾಜ್ಯಪಾಲ ವಿಶ್ವಭೂಷಣ್‌ ಹರಿಚಂದನ್‌ ಮತ್ತು ಅವರ ಪತ್ನಿ ಸುಪ್ರವಾ ಹರಿಚಂದನ್‌, ಕರ್ನಾಟಕ ರಾಜ್ಯಪಾಲ ವಜುಭಾಯ್‌ ವಾಲಾ, ಮಂತ್ರಿಗಳಾದ ಕೆ.ಎಸ್‌. ಈಶ್ವರಪ್ಪ, ಮಾಧುಸ್ವಾಮಿ, ಬಿ.ಸಿ. ಪಾಟೀಲ್‌, ಸಂಸದ ಜಿ.ಎಂ. ಸಿದ್ದೇಶ್ವರ್‌, ಎನ್‌ಸಿಪಿ ನಾಯಕ ಪ್ರಫುಲ್‌ ಪಟೇಲ್‌, ಹಲವು ಉದ್ಯಮಿಗಳು ಕೂಡ ಮಂಗಳವಾರ ಲಸಿಕೆ ಪಡೆದರು.

click me!