* ಪರೀಕ್ಷೆಯಲ್ಲಿ ಅನುತ್ತೀರ್ಣ, ಪ್ರೀತಿ, ಡ್ರಗ್ಸ್, ಪ್ರೀತಿ ಪಾತ್ರರ ಅಗಲಿಕೆಯಿಂದ ಸಾವು
* 3 ವರ್ಷದಲ್ಲಿ 24000 ಮಕ್ಕಳ ಆತ್ಮಹತ್ಯೆ
ನವದೆಹಲಿ(ಆ.02): 2017-19ರ ಅವಧಿಯಲ್ಲಿ ದೇಶದಲ್ಲಿ 14-18 ವಯೋಮಾನದ 24 ಸಾವಿರಕ್ಕೂ ಹೆಚ್ಚು ಮಕ್ಕಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಪೈಕಿ 4000ಕ್ಕೂ ಹೆಚ್ಚು ಮಕ್ಕಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕೇಂದ್ರದ ಸರ್ಕಾರದ ವರದಿ ಹೇಳಿದೆ.
ಮಕ್ಕಳ ಸಾವಿನ ಕುರಿತಾಗಿ ಎನ್‌ಸಿಆರ್‌ಬಿ ವರದಿಯನ್ನು ಸಂಸತ್ತಿನಲ್ಲಿ ಮಂಡಿಸಲಾಗಿದ್ದು, ಈ ಪ್ರಕಾರ 2017-19ರ ಅವಧಿಯಲ್ಲಿ 24,568 ಮಕ್ಕಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಪೈಕಿ 13,325 ಮಂದಿ ಬಾಲಕಿಯರು ಎಂದು ತಿಳಿಸಲಾಗಿದೆ.
2017ರಲ್ಲಿ 8029, 2018ರಲ್ಲಿ 8168 ಮತ್ತು 2019ರಲ್ಲಿ 8377 ಮಕ್ಕಳು ತಮ್ಮ ಪ್ರಾಣಕ್ಕೆ ಕುತ್ತು ತಂದುಕೊಂಡಿದ್ದಾರೆ. ಇನ್ನು ಅತಿ ಹೆಚ್ಚು ಮಕ್ಕಳು ಆತ್ಮಹತ್ಯೆಗೆ ಶರಣಾದ ರಾಜ್ಯಗಳ ಪಟ್ಟಿಯಲ್ಲಿ ಮಧ್ಯಪ್ರದೇಶ (3115) ಅತಿಹೆಚ್ಚು, ಪಶ್ಚಿಮ ಬಂಗಾಳ (2802), ಮಹಾರಾಷ್ಟ್ರ (2527) ಹಾಗೂ ತಮಿಳುನಾಡಿನಲ್ಲಿ 2035 ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪ್ರೀತಿ-ಪ್ರೇಮ ವೈಫಲ್ಯ, ಆತ್ಮೀಯರು ಅಗಲಿದ ಕಾರಣ, ಮಾದಕ ದ್ರವ್ಯ, ಮದ್ಯದ ವ್ಯಸನಿ, ಅವಧಿಗೂ ಮುನ್ನವೇ ಗರ್ಭಿಣಿ, ನಿರುದ್ಯೋಗ, ಬಡತನ ಸೇರಿದಂತೆ ಇನ್ನಿತರ ಕಾರಣಗಳಿಗಾಗಿ ಮಕ್ಕಳು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ.