
ನವದೆಹಲಿ(ಆ.02): ಇತ್ತೀಚೆಗೆ ಕೇಂದ್ರ ಸಚಿವ ಸಂಪುಟಕ್ಕೆ ಸೇರಿದ ನೂತನ ಸಚಿವರನ್ನು ಪರಿಚಯ ಮಾಡುವ ಕೆಲಸಕ್ಕೆ ಸಂಸತ್ತಿನಲ್ಲಿ ಅಡ್ಡಿ ಮಾಡಿದ ವಿಪಕ್ಷಗಳ ನೀತಿಯನ್ನೇ 2024ರ ಚುನಾವಣೆಯ ತಯಾರಿಯ ಆರಂಭಿಕ ಮೆಟ್ಟಿಲಾಗಿ ಬಳಸಿಕೊಳ್ಳಲು ಬಿಜೆಪಿ ಮುಂದಾಗಿದೆ. ಈ ಹೊಸ 43 ಸಚಿವರನ್ನೇ ಮುಂದಿಟ್ಟುಕೊಂಡು ದೇಶವ್ಯಾಪಿ ‘ಜನ ಆಶೀರ್ವಾದ ಯಾತ್ರೆ’ ನಡೆಸಲು ಪಕ್ಷ ನಿರ್ಧರಿಸಿದೆ. ಈ ಕಾರ್ಯಕ್ರಮವನ್ನು ಸಚಿವರ ಪರಿಚಯದ ಕಾರ್ಯಕ್ರಮದ ಜೊತೆಗೆ, 2024ರ ಲೋಕಸಭಾ ಚುನಾವಣೆಗೆ ಸಿದ್ಧತೆಯಾಗಿ ಬಳಸಲೂ ಪಕ್ಷ ನಿರ್ಧರಿಸಿದೆ.
ಯಾತ್ರೆಯು ಆಗಸ್ಟ್ 16ರಿಂದ 3 ದಿನ ಕರ್ನಾಟಕ ಸೇರಿದಂತೆ ದೇಶದ 19 ರಾಜ್ಯಗಳ 150 ಲೋಕಸಭಾ ಕ್ಷೇತ್ರಗಳಲ್ಲಿ ಸಾಗಲಿದ್ದು, ಪ್ರತಿ ಮಂತ್ರಿಯು 400 ಕಿ.ಮೀ. ಕ್ರಮಿಸಲಿದ್ದಾರೆ. ಈ ಯಾತ್ರೆಯ ವೇಳೆ ತಮ್ಮನ್ನು ಜನತೆಗೆ ಪರಿಚಯಿಸಿಕೊಳ್ಳುವ ಜತೆ, ಮೋದಿ ಸರ್ಕಾರದ ಸಾಧನೆಗಳನ್ನು ಜನತೆಗೆ ಪರಿಚಯಿಸಲಿದ್ದಾರೆ.
ಈ ಸಚಿವರು ಸ್ವಕ್ಷೇತ್ರದಿಂದ 400 ಕಿ.ಮೀ. ಅಂತರದ ಊರಿನಿಂದ ಯಾತ್ರೆ ಆರಂಭಿಸಿ, 3ನೇ ದಿನದ ಅಂತ್ಯಕ್ಕೆ ಸ್ವಕ್ಷೇತ್ರದಲ್ಲಿ ಸಮಾಪನಗೊಳಿಸಲಿದ್ದಾರೆ. ಉದಾಹರಣೆಗೆ ಭೂಪೇಂದ್ರ ಯಾದವ್ ಅವರು ತಮ್ಮ ಕ್ಷೇತ್ರದಿಂದ 400 ಕಿ.ಮೀ. ದೂರದಲ್ಲಿರುವ ರಾಜಸ್ಥಾನದ ಊರಿನಿಂದ ಯಾತ್ರೆ ಆರಂಭಿಸಿ 3ನೇ ದಿನ ಸ್ವಕ್ಷೇತ್ರ ಅಳ್ವರ್ ತಲುಪಲಿದ್ದಾರೆ.
ತೆರೆದ ವಾಹನಗಳಲ್ಲಿ ಯಾತ್ರೆ ನಡೆಸುತ್ತ, ಮಾರ್ಗ ಮಧ್ಯದಲ್ಲಿ ಅಲ್ಲಲ್ಲಿ ಸಮಾವೇಶಗಳನ್ನು ಸಚಿವರು ನಡೆಸಲಿದ್ದಾರೆ ಹಾಗೂ ಸಂತರು, ಕ್ರೀಡಾಪಟುಗಳು, ಸಾಮಾಜಿಕ ಕಾರ‍್ಯಕರ್ತರಂಥ ಸಮಾಜದ ವಿವಿಧ ವರ್ಗಗಳೊಂದಿಗೆ ಸಂವಾದ ನಡೆಸಲಿದ್ದಾರೆ. ರಾತ್ರಿ ವೇಳೆ ಗ್ರಾಮವಾಸ್ತವ್ಯ ನಡೆಸಲಿದ್ದಾರೆ. ಯಾತ್ರೆಯ ನಿಮಿತ್ತ ಮೋದಿ ಸರ್ಕಾರದ ಸಾಧನೆಗಳನ್ನು ಬಿಂಬಿಸುವ ಪೋಸ್ಟರ್‌ಗಳನ್ನು ಯಾತ್ರೆ ಸಾಗುವ ಹಾದಿಯಲ್ಲಿ ಅಳವಡಿಸಬೇಕು ಎಂದು ಬಿಜೆಪಿ ಸೂಚಿಸಿದೆ.
‘ಕೇಂದ್ರ ಸಚಿವರು ಮರದಲ್ಲಿರುವ ಹಣ್ಣಿನಂತೆ. ಕೈಗೆಟುಕುವುದಿಲ್ಲ’ ಎಂಬ ಭಾವನೆ ಇದೆ. ಈ ಭಾವನೆ ಸುಳ್ಳು ಮಾಡಿ ಕೇಂದ್ರ ಸಚಿವರು ಜನರಿಗೆ ಹತ್ತಿರ ಇರುವವರು ಎಂಬುದನ್ನು ಬಿಂಬಿಸುವುದು ಪ್ರಧಾನಿ ನರೇಂದ್ರ ಮೋದಿ ಅವರ ಉದ್ದೇಶ ಎಂದು ಯಾತ್ರೆಯ ವಿವರಣೆಯಲ್ಲಿ ಉಲ್ಲೇಖಿಸಲಾಗಿದೆ.
ಯಾತ್ರೆಯು ಅದ್ಧೂರಿಯಾಗಿರಬೇಕು. ಆದರೆ ಸಾಮಾಜಿಕ ಅಂತರ, ಮಾಸ್ಕ್, ಸ್ಯಾನಿಟೈಸರ್‌ನಂತಹ ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ತಿಳಿಸಲಾಗಿದೆ.
ಕರ್ನಾಟಕದಲ್ಲಿ 4 ಹೊಸ ಸಚಿವರ ಯಾತ್ರೆ?
ಕರ್ನಾಟಕದಿಂದ ರಾಜೀವ್ ಚಂದ್ರಶೇಖರ್, ಶೋಭಾ ಕರಂದ್ಲಾಜೆ, ಭಗವಂತ ಖೂಬಾ ಹಾಗೂ ನಾರಾಯಣಸ್ವಾಮಿ ಅವರು ಹೊಸತಾಗಿ ಕೇಂದ್ರ ಸಚಿವರಾಗಿದ್ದಾರೆ. ಇವರು ಕೂಡ 400 ಕಿ.ಮೀ. ಜನಾಶೀರ್ವಾದ ಯಾತ್ರೆ ನಡೆಸುವ ಸಾಧ್ಯತೆಯಿದೆ.
ಯಾತ್ರೆ ವೈಶಿಷ್ಟ್ಯ
- 400 ಕಿ.ಮೀ: ಪ್ರತಿ ಸಚಿವರು ಕ್ರಮಿಸಲಿರುವ ಹಾದಿ
- 15000 ಕಿ.ಮೀ: ಯಾತ್ರೆಯ ಒಟ್ಟು ವ್ಯಾಪ್ತಿ
- 19 ರಾಜ್ಯ: ಇಷ್ಟು ರಾಜ್ಯಗಳಲ್ಲಿ ಯಾತ್ರೆ ಸಂಚಾರ
- 150 ಕ್ಷೇತ್ರ: ಯಾತ್ರೆ ಸಾಗಲಿರುವ ಲೋಕಸಭಾ ಕ್ಷೇತ್ರಗಳು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ