ಪುರುಷರನ್ನು ಮಾತ್ರ ಏಕೆ ವಶಕ್ಕೆ ತೆಗೆದುಕೊಳ್ಳಬೇಕು? ನಾವು ಮತ್ತು ನಮ್ಮ ಮಕ್ಕಳು ಹೇಗೆ ಬದುಕುಳಿಯುತ್ತಾರೆ? ನಮಗೆ ಆದಾಯದ ಮಾರ್ಗವಿಲ್ಲ ಎಂದು ಕೆಲ ಮಹಿಳೆಯರು ಪ್ರಶ್ನೆ ಮಾಡಿದ್ದಾರೆ.
ಡಿಸ್ಪುರ (ಫೆಬ್ರವರಿ 4, 2023): ಅಸ್ಸಾಂ ಸರ್ಕಾರ ಬಾಲ್ಯವಿವಾಹಗಳ ವಿರುದ್ಧ ತೀವ್ರ ಚಾಟಿ ಬೀಸಲು ಪ್ರಾರಂಭಿಸಿದ್ದು, ಶುಕ್ರವಾರದಿಂದ ಹಲವರ ಬಂಧನವಾಗುತ್ತಿದೆ. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಘೋಷಿಸಿದ ರಾಜ್ಯವ್ಯಾಪಿ ದಮನವು ಶುಕ್ರವಾರ ಪ್ರಾರಂಭವಾಗಿದ್ದು, ಮುಂದಿನ 6 ದಿನಗಳವರೆಗೆ ಇದು ಮುಂದುವರಿಯುತ್ತದೆ ಎಂದು ತಿಳಿದುಬಂದಿದೆ. ಅಲ್ಲದೆ, ಈವರೆಗೆ 2,257 ಮಂದಿಯನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ. ಈ ಮದ್ಯೆ, ತಮ್ಮ ಪತಿ ಮತ್ತು ಪುತ್ರರ ಬಂಧನವನ್ನು ವಿರೋಧಿಸಿ ಮಹಿಳೆಯರು ಶನಿವಾರ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಪ್ರತಿಭಟನೆ ನಡೆಸಿದ್ದಾರೆ. ತಮರ್ಹಾ ಪೊಲೀಸ್ ಠಾಣೆಯ ಮುಂದೆ ಜಮಾಯಿಸಿದ ಮಹಿಳೆಯರನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದ ನಂತರ ಧುಬ್ರಿ ಜಿಲ್ಲೆಯಲ್ಲಿ ಉದ್ವಿಗ್ನತೆ ಉಂಟಾಗಿದೆ. ತಮ್ಮ ಕುಟುಂಬ ಸದಸ್ಯರನ್ನು ಬಿಡುಗಡೆ ಮಾಡುವಂತೆ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ ಎಂದು ತಿಳಿದುಬಂದಿದೆ.
ಪುರುಷರನ್ನು (Men) ಮಾತ್ರ ಏಕೆ ವಶಕ್ಕೆ ತೆಗೆದುಕೊಳ್ಳಬೇಕು? ನಾವು ಮತ್ತು ನಮ್ಮ ಮಕ್ಕಳು ಹೇಗೆ ಬದುಕುಳಿಯುತ್ತಾರೆ? ನಮಗೆ ಆದಾಯದ ಮಾರ್ಗವಿಲ್ಲ ಎಂದು ಮಜುಲಿ ಜಿಲ್ಲೆಯ 55 ವರ್ಷದ ನಿರೋದಾ ಡೋಲೆ ಎಂಬುವರು ಅಸ್ಸಾಂ ಸರ್ಕಾರದ (Assam Government) ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ. ಹಾಗೆ, ಹೆಸರು ಹೇಳಲಿಚ್ಛಿಸದ ಬಾರ್ಪೇಟಾ (Barpeta) ಜಿಲ್ಲೆಯ ಮಹಿಳೆಯೊಬ್ಬರು, ತಮ್ಮ ಮಗ ಅಪ್ರಾಪ್ತ ಬಾಲಕಿಯೊಂದಿಗೆ ಓಡಿಹೋಗಿದ್ದಾನೆ. ಅವನು ತಪ್ಪು ಮಾಡಿದ್ದಾನೆ, ಆದರೆ ನನ್ನ ಗಂಡನನ್ನು ಏಕೆ ಬಂಧಿಸಬೇಕು? ಎಂದು ಆಕೆ ಪ್ರಶ್ನೆ ಮಾಡಿದ್ದಾರೆ. ಅಲ್ಲದೆ, ಮೋರಿಗಾಂವ್‌ನ ಮೊನೊವಾರಾ ಖಾತೂನ್ ಎಂಬುವರು ನನ್ನ ಸೊಸೆ ಮದುವೆಯಾದಾಗ 17 ವರ್ಷ ವಯಸ್ಸಾಗಿತ್ತು. ಈಗ ಅವಳಿಗೆ 19 ಮತ್ತು ಐದು ತಿಂಗಳ ಗರ್ಭಿಣಿ. ಅವಳನ್ನು ಯಾರು ನೋಡಿಕೊಳ್ಳುತ್ತಾರೆ ಎಂದೂ ಪ್ರಶ್ನೆ ಮಾಡಿದ್ದಾರೆ.
ಇದನ್ನು ಓದಿ: ಬಾಲ್ಯ ವಿವಾಹದ ವಿರುದ್ಧ ಸಿಎಂ ಹಿಮಂತ್ ದಿಟ್ಟ ಹೆಜ್ಜೆ, ನಾಳೆಯಿಂದಲೇ ಅರೆಸ್ಟ್!
ಈವರೆಗೆ 2,000 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ (Arrest) ಮತ್ತು 4,004 ಪ್ರಕರಣಗಳನ್ನು ಇದುವರೆಗೆ ದಾಖಲಿಸಲಾಗಿದೆ. ಅಲ್ಲದೆ, 8,000 ಆರೋಪಿಗಳ ಪಟ್ಟಿಯನ್ನು ಹೊಂದಿದ್ದು, ಕಾರ್ಯಾಚರಣೆ ಮುಂದುವರಿಯಲಿದೆ ಎಂದೂ ಪೊಲೀಸರು ತಿಳಿಸಿದ್ದಾರೆ. ಜತೆಗೆ ಧಾರ್ಮಿಕ ಸಂಸ್ಥೆಗಳಲ್ಲಿ ಇಂತಹ ವಿವಾಹ ಕಾರ್ಯಕ್ರಮಗಳನ್ನು ನಡೆಸಿದ 51 ಪುರೋಹಿತರು ಮತ್ತು ಕಾಜಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದೂ ಹೇಳಿದ್ದಾರೆ.
ಶುಕ್ರವಾರ ಸಂಜೆಯವರೆಗೆ, ಬಿಸ್ವನಾಥ್ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ 137 ಮಂದಿಯನ್ನು ಬಂಧಿಸಲಾಗಿದೆ, ನಂತರ ಧುಬ್ರಿಯಲ್ಲಿ 126, ಬಕ್ಸಾದಲ್ಲಿ 120, ಬಾರ್ಪೇಟಾದಲ್ಲಿ 114 ಮತ್ತು ಕೊಕ್ರಜಾರ್‌ನಲ್ಲಿ 96 ಮಂದಿಯನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗಿಯರನ್ನು ಮದುವೆಯಾದವರನ್ನು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿಯಲ್ಲಿ ದಾಖಲಿಸಲಾಗುವುದು ಮತ್ತು 14-18 ವರ್ಷ ವಯಸ್ಸಿನ ಹುಡುಗಿಯರನ್ನು ಮದುವೆಯಾದವರ ವಿರುದ್ಧ ಬಾಲ್ಯ ವಿವಾಹ ನಿಷೇಧ ಕಾಯ್ದೆ, 2006 ರ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗುವುದು ಎಂದು ಅಸ್ಸಾಂ ರಾಜ್ಯ ಸಚಿವ ಸಂಪುಟ ಇತ್ತೀಚೆಗೆ ನಿರ್ಧರಿಸಿದೆ.
ಇದನ್ನೂ ಓದಿ: ಅಪ್ರಾಪ್ತರ ವರಿಸಿದ ಸಾವಿರಾರು ಪತಿಯರು ಶೀಘ್ರವೇ ಜೈಲಿಗೆ!
ಮಹಿಳೆಯರ ಮೇಲಿನ ಅಕ್ಷಮ್ಯ ಮತ್ತು ಘೋರ ಅಪರಾಧದ ವಿರುದ್ಧ ಶೂನ್ಯ ಸಹಿಷ್ಣುತೆಯ ಮನೋಭಾವದಿಂದ ಕಾರ್ಯನಿರ್ವಹಿಸುವಂತೆ ಪೊಲೀಸರಿಗೆ ಸೂಚಿಸಿದ್ದೇನೆ ಎಂದು ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ. ಅಸ್ಸಾಂನಲ್ಲಿ ತಾಯಂದಿರು ಮತ್ತು ಶಿಶು ಮರಣ ಪ್ರಮಾಣ ಹೆಚ್ಚಿದ್ದು, ಇದಕ್ಕೆ ಬಾಲ್ಯವಿವಾಹವು ಪ್ರಾಥಮಿಕ ಕಾರಣವಾಗಿದ್ದು, ಅಸ್ಸಾಂ ರಾಜ್ಯದಲ್ಲಿ ನೋಂದಣಿಯಾದ ಸರಾಸರಿ ಶೇಕಡ 31ರಷ್ಟು ವಿವಾಹಗಳು ನಿಷೇಧಿತ ವಯೋಮಿತಿಯಲ್ಲಿವೆ ಎಂದು ತಿಳಿದುಬಂದಿದೆ.