
ಕೊಚ್ಚಿ/ ಇಂದೋರ್/ ಜೈಪುರ(ಜ.05): ಹಿಮಾಚಲ ಪ್ರದೇಶದಲ್ಲಿ 1200ಕ್ಕೂ ಹೆಚ್ಚು ಹಕ್ಕಿಗಳು ಸಾವನ್ನಪ್ಪಿರುವ ಸಂಗತಿ ಬೆಳಕಿಗೆ ಬಂದ ಬೆನ್ನಲ್ಲೇ ಕೇರಳ, ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲೂ ಹಕ್ಕಿಗಳು ದೊಡ್ಡ ಪ್ರಮಾಣದಲ್ಲಿ ಸಾವನ್ನಪ್ಪಿರುವುದು ಪತ್ತೆಯಾಗಿದೆ. ಅವುಗಳ ಮೃತದೇಹವನ್ನು ಪರೀಕ್ಷೆಗೊಳಪಡಿಸಿದಾಗ ಹಕ್ಕಿಜ್ವರದ ವೈರಸ್ ಎಚ್5ಎನ್8 ಪತ್ತೆಯಾಗಿದ್ದು, ಕೊರೋನಾ ನಡುವೆ ದೇಶಕ್ಕೆ ಮತ್ತೊಂದು ಆತಂಕ ಎದುರಾಗಿದೆ.
ಕೇರಳದ ಅಲಪ್ಪುಳ ಹಾಗೂ ಕೊಟ್ಟಾಯಂ ಜಿಲ್ಲೆಗಳಲ್ಲಿ ಕಳೆದ ವಾರದಿಂದೀಚೆಗೆ ನೂರಾರು ಬಾತುಕೋಳಿಗಳು ನಿಗೂಢವಾಗಿ ಸಾವನ್ನಪ್ಪಿದ್ದವು. ಈ ಹಿನ್ನೆಲೆಯಲ್ಲಿ ಪರೀಕ್ಷೆ ನಡೆಸಿದಾಗ ಹಕ್ಕಿಜ್ವರ ಪತ್ತೆಯಾಗಿದೆ. ಜ್ವರ ಪತ್ತೆಯಾಗಿರುವ ಪ್ರದೇಶದ ಸುತ್ತಮುತ್ತ 1 ಕಿ.ಮೀ. ಸುತ್ತಳತೆಯಲ್ಲಿ ಎಲ್ಲಾ ಹಕ್ಕಿಗಳನ್ನೂ ಕೊಲ್ಲಲು ಆದೇಶಿಸಲಾಗಿದ್ದು, ಈಗಾಗಲೇ 12,000ಕ್ಕೂ ಹೆಚ್ಚು ಹಕ್ಕಿಗಳನ್ನು ಕೊಲ್ಲಲಾಗಿದೆ. ಇನ್ನೂ 36,000 ಹಕ್ಕಿಗಳನ್ನು ಕೊಲ್ಲಲು ಸರ್ಕಾರ ಸಿದ್ಧತೆ ಮಾಡಿಕೊಂಡಿದೆ.
ಮಧ್ಯಪ್ರದೇಶದ ರಾಜಧಾನಿ ಇಂದೋರ್‌ನಲ್ಲಿ 50ಕ್ಕೂ ಹೆಚ್ಚು ಕಾಗೆಗಳು ಮೂರು ದಿನದಿಂದೀಚೆಗೆ ನಿಗೂಢವಾಗಿ ಸತ್ತುಬಿದ್ದಿದ್ದವು. ಅವುಗಳನ್ನು ಪರೀಕ್ಷೆಗೊಳಪಡಿಸಿದಾಗ ಹಕ್ಕಿಜ್ವರದ ವೈರಸ್ ಪತ್ತೆಯಾಗಿದ್ದು, ಸುತ್ತಮುತ್ತಲ ಸ್ಥಳಗಳಲ್ಲಿ ಜನರಲ್ಲಿ ಈ ವೈರಸ್ ಪತ್ತೆಗೆ ಸಮೀಕ್ಷೆ ಆರಂಭಿಸಲಾಗಿದೆ.
ಇನ್ನು, ರಾಜಸ್ಥಾನದ ರಾಜಧಾನಿ ಜೈಪುರ ಹಾಗೂ ಸುತ್ತಮುತ್ತಲ ಅನೇಕ ಜಿಲ್ಲೆಗಳಲ್ಲಿ ಸತ್ತುಬಿದ್ದಿರುವ ಕಾಗೆಗಳು ಪತ್ತೆಯಾಗಿದ್ದು, ಅವುಗಳನ್ನು ಪರೀಕ್ಷಿಸಿದಾಗ ಎಚ್5ಎನ್8 ವೈರಸ್ ಕಂಡುಬಂದಿದೆ. ರಾಜ್ಯ ಸರ್ಕಾರ ನಿಯಂತ್ರಣ ಕೇಂದ್ರ ಸ್ಥಾಪಿಸಿ ಎಲ್ಲಾ ಪೌಲ್ಟಿ್ರ ಫಾರಂಗಳಿಂದ ಮಾಹಿತಿ ಸಂಗ್ರಹಿಸತೊಡಗಿದೆ.
ಹಿಮಾಚಲ ಪ್ರದೇಶದಲ್ಲಿ ಭಾನುವಾರದವರೆಗೆ 1200ಕ್ಕೂ ಹೆಚ್ಚು ವಲಸೆ ಹಕ್ಕಿಗಳು ಸತ್ತುಬಿದ್ದಿರುವುದು ಪತ್ತೆಯಾಗಿತ್ತು. ಸೋಮವಾರ ಅವುಗಳ ಸಂಖ್ಯೆ 1800 ದಾಟಿದೆ. ಹಕ್ಕಿಜ್ವರವೇ ಸಾವಿಗೆ ಕಾರಣವಿರಬಹುದು ಎಂದು ಶಂಕಿಸಲಾಗಿದ್ದು, ಮೃತ ಹಕ್ಕಿಗಳ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ