ಸುಗ್ರೀವಾಜ್ಞೆ ವಿಷಯದಲ್ಲಿ ಕಾಂಗ್ರೆಸ್ ತನ್ನ ನಿಲುವು ಸ್ಪಷ್ಟಪಡಿಸದೇ ಹೋದಲ್ಲಿ ಬೆಂಗಳೂರು ಸಭೆಯಲ್ಲಿ ತಾನು ಭಾಗವಹಿಸುವುದು ಅನುಮಾನ’ ಎಂದು ಆಪ್ ಹೇಳಿತ್ತು.
ನವದೆಹಲಿ (ಜುಲೈ 17, 2023): ದೆಹಲಿಯಲ್ಲಿನ ಸೇವೆಗಳ ಮೇಲಿನ ಅಧಿಕಾರ ಉಳಿಸಿಕೊಳ್ಳಲು ಇತ್ತೀಚೆಗೆ ಕೇಂದ್ರ ಸರ್ಕಾರ ಹೊರಡಿಸಿದ ಸುಗ್ರೀವಾಜ್ಞೆಯನ್ನು ಸಂಸತ್ತಿನಲ್ಲಿ ಬೆಂಬಲಿಸುವುದಿಲ್ಲ ಎಂದು ಕಾಂಗ್ರೆಸ್ ಘೋಷಿಸಿದೆ. ಬೆಂಗಳೂರಿನಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ಆಯೋಜನೆಗೊಂಡಿರುವ ಎರಡು ದಿನಗಳ ಮಹತ್ವದ ವಿಪಕ್ಷ ಸಭೆಗೂ ಮುನ್ನ ಇಂಥದ್ದೊಂದು ಘೋಷಣೆಯನ್ನು ಪಕ್ಷ ಮಾಡಿದೆ.
ಇದರಿಂದಾಗಿ ಉಭಯ ಪಕ್ಷಗಳ ನಡುವಿನ ಮುನಿಸು ಅಂತ್ಯವಾಗಿದೆ. ಹೀಗಾಗಿ ಬೆಂಗಳೂರಿನಲ್ಲಿ ಸೋಮವಾರದಿಂದ 2 ದಿನ ಕಾಲ ನಡೆಯಲಿರುವ ವಿಪಕ್ಷಗಳ ಸಭೆಯಲ್ಲಿ ಪಾಲ್ಗೊಳ್ಳುವುದಾಗಿ ಆಪ್ ಘೋಷಿಸಿದೆ. ಇದಕ್ಕೂ ಮುನ್ನ, ‘ಸುಗ್ರೀವಾಜ್ಞೆ ವಿಷಯದಲ್ಲಿ ಕಾಂಗ್ರೆಸ್ ತನ್ನ ನಿಲುವು ಸ್ಪಷ್ಟಪಡಿಸದೇ ಹೋದಲ್ಲಿ ಬೆಂಗಳೂರು ಸಭೆಯಲ್ಲಿ ತಾನು ಭಾಗವಹಿಸುವುದು ಅನುಮಾನ’ ಎಂದು ಆಪ್ ಹೇಳಿತ್ತು.
ಇದನ್ನು ಓದಿ: Uniform Civil Code: ರಾತ್ರೋರಾತ್ರಿ ಮುಸ್ಲಿಂ ಮಂಡಳಿ ಸಭೆ; ಸಂಹಿತೆಗೆ ಆಪ್ ಅಚ್ಚರಿಯ ತಾತ್ವಿಕ ಬೆಂಬಲ
ಈ ಕುರಿತು ಭಾನುವಾರ ಹೇಳಿಕೆ ನೀಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ‘ವಿಪಕ್ಷಗಳು ಆಡಳಿತ ನಡೆಸುತ್ತಿರುವ ರಾಜ್ಯಗಳಲ್ಲಿ ರಾಜ್ಯಪಾಲರ ಮೂಲಕ ಮಧ್ಯಪ್ರವೇಶ ಮಾಡುವ ಇಂಥ ಯಾವುದೇ ಯತ್ನವನ್ನು ನಾವು ವಿರೋಧಿಸುತ್ತೇವೆ ಮತ್ತು ದೆಹಲಿ ಸುಗ್ರೀವಾಜ್ಞೆ ಸಂಸತ್ತಿನಲ್ಲಿ ಮಂಡನೆಯಾದ ವೇಳೆ ನಾವು ಅದನ್ನು ವಿರೋಧಿಸುತ್ತೇವೆ. ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವ ಯಾವುದೇ ಪ್ರಯತ್ನವನ್ನು ನಾವು ಸತತವಾಗಿ ವಿರೋಧಿಸುತ್ತಲೇ ಬಂದಿದ್ದೇವೆ’ ಎಂದು ಹೇಳಿದ್ದಾರೆ.
ಆಪ್ ಸ್ವಾಗತ:
ಈ ನಡುವೆ ಕಾಂಗ್ರೆಸ್ ನಿಲುವನ್ನು ಸ್ವಾಗತಿಸಿರುವ ಅಮ್ ಆದ್ಮಿ ಪಕ್ಷ, ‘ದೆಹಲಿ ಸುಗ್ರೀವಾಜ್ಞೆ ಕುರಿತು ಕಾಂಗ್ರೆಸ್ ಸ್ಪಷ್ಟನೆ ನೀಡಿರುವುದು ಧನಾತ್ಮಕ ಬೆಳವಣಿಗೆ’ ಎಂದಿದೆ.
ಇದನ್ನೂ ಓದಿ: ಮೂರೇ ದಿನಕ್ಕೆ ವಿಪಕ್ಷಗಳ ಮೈತ್ರಿ ಠುಸ್! ಪರಸ್ಪರ ಕಚ್ಚಾಡಿಕೊಂಡ ಕಾಂಗ್ರೆಸ್, ಟಿಎಂಸಿ, ಸಿಪಿಎಂ
ಏನಿದು ಸುಗ್ರೀವಾಜ್ಞೆ?
ದೆಹಲಿಯಲ್ಲಿ ಹಿರಿಯ ಅಧಿಕಾರಿಗಳ ನಿಯೋಜನೆ ಮತ್ತು ವರ್ಗಾವಣೆ ಅಧಿಕಾರ ದೆಹಲಿ ಸರ್ಕಾರದ ಬಳಿಯೇ ಇರಬೇಕು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು. ಈ ಮೂಲಕ ದೆಹಲಿಯಲ್ಲಿನ ಸೇವೆಗಳ ಮೇಲೆ ಚುನಾಯಿತ ಸರ್ಕಾರಕ್ಕೆ ಪೂರ್ಣ ಅಧಿಕಾರ ನೀಡಿತ್ತು. ಈ ಹಿನ್ನೆಲೆಯಲ್ಲಿ ಸುಗ್ರೀವಾಜ್ಞೆಯನ್ನು ಹೊರಡಿಸಿದ್ದ ಕೇಂದ್ರ ಸರ್ಕಾರ, ಈ ಅಧಿಕಾರವನ್ನು ತನ್ನ ಬಳಿಯೇ ಉಳಿಸಿಕೊಂಡಿತ್ತು.
ಇದನ್ನೂ ಓದಿ: ಬಿಜೆಪಿ ಮಣಿಸಲು ಪಣ ತೊಟ್ಟ 17 ವಿಪಕ್ಷಗಳು: ಮುಂದಿನ ಸಭೆಗೆ ಬರಲು ಕಾಂಗ್ರೆಸ್‌ಗೆ ಆಪ್ ಷರತ್ತು