ORS ಸಂಶೋಧಕ ಡಾ. ದಿಲೀಪ್ ನಿಧನ: ಕೋಟ್ಯಂತರ ಜೀವ ಕಾಪಾಡಿದ್ದ ಖ್ಯಾತ ವೈದ್ಯ

By Kannadaprabha NewsFirst Published Oct 18, 2022, 9:01 AM IST
Highlights

ಓಆರ್‌ಎಸ್‌ ಸಂಶೋಧಿಸಿ ಕೋಟ್ಯಂತರ ಜೀವ ಕಾಪಾಡಿದ್ದ ಡಾ. ದಿಲೀಪ್‌ ಮೃತಪಟ್ಟಿದ್ದಾರೆ. ಡಾ. ದಿಲೀಪ್‌ ಅವರು 1971ರಲ್ಲಿ ಸಂಶೋಧಿಸಿದ ಒಆರ್‌ಎಸ್‌ ಥೆರಪಿ, ವೈದ್ಯಕೀಯ ಕ್ಷೇತ್ರದಲ್ಲಿ 20ನೇ ಶತಮಾನದ ಅತ್ಯಂತ ಮಹತ್ವದ ಸಂಶೋಧನೆ ಎಂದು ಲ್ಯಾನ್ಸೆಟ್‌ ತನ್ನ ವರದಿಯಲ್ಲಿ ತಿಳಿಸಿತ್ತು.

ಕೋಲ್ಕತ್ತ: ಅತಿಸಾರ ಅಥವಾ ಇತರೆ ಯಾವುದೇ ಕಾರಣದಿಂದ ದೇಹ ನಿರ್ಜಲೀಕರಣಗೊಂಡಾಗ ನೀಡುವ ಓಆರ್‌ಎಸ್‌ (ORS) (ಓರಲ್‌ ರೀಹೈಡ್ರೇಷನ್‌ ಸೊಲ್ಯೂಷನ್‌) (Oral Rehydration Solution) ಚಿಕಿತ್ಸೆ ಸಂಶೋಧಿಸುವ ಮೂಲಕ ವಿಶ್ವದಾದ್ಯಂತ ಕೋಟ್ಯಂತರ ಜೀವಗಳನ್ನು ಕಾಪಾಡಿದ್ದ ಖ್ಯಾತ ವೈದ್ಯ ಡಾ. ದಿಲೀಪ್‌ ಮಹಲ್‌ ನಬೀಸ್‌ (Dr. Dilip Mahalanabis) (87) ಭಾನುವಾರ ಕೋಲ್ಕತ್ತದಲ್ಲಿ (Kolkata) ನಿಧನರಾದರು. ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿದ್ದ ದಿಲೀಪ್‌ ಅವರನ್ನು 2 ವಾರಗಳ ಹಿಂದೆ ಪಶ್ಚಿಮ ಬಂಗಾಳ ರಾಜಧಾನಿಯಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಭಾನುವಾರ ರಾತ್ರಿ ಅವರು ಕೊನೆಯುಸಿರೆಳೆದರು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.

ಪ್ರತಿಷ್ಠಿತ ರಾಯಲ್‌ ಸ್ವೀಡಿಷ್‌ ಅಕಾಡೆಮಿ ಆಫ್‌ ಸೈನ್ಸಸ್‌ನ ಸದಸ್ಯರೂ ಆಗಿದ್ದ ಡಾ. ದಿಲೀಪ್‌ ಅವರು 1971ರಲ್ಲಿ ಸಂಶೋಧಿಸಿದ ಒಆರ್‌ಎಸ್‌ ಥೆರಪಿ, ವೈದ್ಯಕೀಯ ಕ್ಷೇತ್ರದಲ್ಲಿ 20ನೇ ಶತಮಾನದ ಅತ್ಯಂತ ಮಹತ್ವದ ಸಂಶೋಧನೆ ಎಂದು ಲ್ಯಾನ್ಸೆಟ್‌ ತನ್ನ ವರದಿಯಲ್ಲಿ ತಿಳಿಸಿತ್ತು. ನೊಬೆಲ್‌ ಪುರಸ್ಕಾರಕ್ಕೆ ಅರ್ಹರಾಗಿದ್ದ ಈ ವೈದ್ಯರಿಗೆ, ಕನಿಷ್ಠ ಭಾರತ ಸರ್ಕಾರ ಕೂಡಾ ಯಾವುದೇ ಪದ್ಮ ಪ್ರಶಸ್ತಿಯನ್ನೂ ಇದುವರೆಗೆ ನೀಡಿಲ್ಲ.

Latest Videos

ಇದನ್ನು ಓದಿ: ಬೇಸಿಗೆಯಲ್ಲಿ ORS ಕುಡಿಯುವುದರಿಂದ ಸಿಗೋ ಆರೋಗ್ಯ ಪ್ರಯೋಜನಗಳೇನು ?

ಹಿನ್ನೆಲೆ: ಡಾ. ದಿಲೀಪ್‌ ಮಹಲ್‌ ನಬೀಸ್‌ ಕೋಲ್ಕತ್ತಾ ವೈದ್ಯಕೀಯ ಕಾಲೇಜಿನಿಂದ ಪದವಿ ಪಡೆದು ಬಳಿಕ ಬಳಿಕ ಮಕ್ಕಳ ವೈದ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಬಳಿಕ ಲಂಡನ್‌ನಲ್ಲಿ ರಾಷ್ಟ್ರೀಯ ಆರೋಗ್ಯ ಸೇವೆ ವಿಭಾಗದಲ್ಲಿ 2 ವರ್ಷ ಸೇವೆ ಸಲ್ಲಿಸಿದರು. ಬಳಿಕ ಜಾನ್ಸ್‌ ಹಾಪ್ಕಿನ್ಸ್‌ ವಿಶ್ವವಿದ್ಯಾಲಯವನ್ನು ಸೇರಿದರು. 1964ರಲ್ಲಿ ಭಾರತಕ್ಕೆ ಮರಳಿದರು.

ಓಆರ್‌ಎಸ್‌ ಸಂಶೋಧನೆ:
1971ರಲ್ಲಿ ಬಾಂಗ್ಲಾದೇಶದ ವಿಮೋಚನಾ ಯುದ್ಧ ಆರಂಭವಾದಾಗ ಲಕ್ಷಾಂತರ ನಿರಾಶ್ರಿತರು ಪಶ್ಚಿಮ ಬಂಗಾಳದ ಶಿಬಿರಗಳಲ್ಲಿ ಆಶ್ರಯ ಪಡೆದರು. ಈ ವೇಳೆ ಶುಚಿತ್ವದ ಹಾಗೂ ಶುದ್ಧ ಕುಡಿಯುವ ನೀರಿನ ತೊಂದರೆಯಿಂದಾಗಿ ಕಾಲರಾ, ಅತಿಸಾರದಿಂದ ತೀವ್ರವಾಗಿ ಹರಡಲು ಆರಂಭವಾಯಿತು. ಸೋಂಕಿಗೆ ಬಹಳಷ್ಟು ಮಕ್ಕಳು ಬಲಿಯಾಗುತ್ತಿದ್ದರು. ಈ ಹಿನ್ನೆಲೆಯಲ್ಲಿ ಡಾ. ಮಹಲ್‌ ನಬೀಸ್‌ ಮೌಖಿಕ ಪುನರ್ಜಲೀಕರಣ ಚಿಕಿತ್ಸೆ (Oral Rehydration Therapy) (ಒಆರ್‌ಟಿ) (ORT) ಕಂಡುಹಿಡಿದರು. 

ಉಪ್ಪು, ಗ್ಲೂಕೋಸ್‌ ಹಾಗೂ ಬೇಕಿಂಗ್‌ ಸೋಡಾ ಮಿಶ್ರಣದಿಂದಾಗಿ ಅತಿಸಾರಕ್ಕೆ ಸುಲಭ ಚಿಕಿತ್ಸೆ ಕಂಡುಹಿಡಿದರು. ಇದರಿಂದ ಲಕ್ಷಾಂತರ ಜನರ ಜೀವ ಉಳಿಯಿತು. ಮಕ್ಕಳ ಸಾಯುವಿಕೆ ಪ್ರಮಾಣ ಗಣನೀಯವಾಗಿ ತಗ್ಗಿತು. ಒಆರ್‌ಟಿ ಮುಂದೆ ಒಆರ್‌ಎಸ್‌ ಎಂದು ಜನಪ್ರಿಯವಾಯಿತು. ಅವರ ಚಿಕಿತ್ಸೆಯ ಬಗ್ಗೆ ಜಾನ್ಸ್‌ ಹಾಪ್ಕಿನ್ಸ್‌ ಮೆಡಿಕಲ್‌ ಜರ್ನಲ್‌ ಹಾಗೂ ಲಾನ್ಸೆಟ್‌ನಲ್ಲಿ ಪ್ರಕಟವಾದವು. ಲಾನ್ಸೆಟ್‌ ಇದನ್ನು 20ನೇ ಶತಮಾನದ ಶ್ರೇಷ್ಠ ವೈದ್ಯಕೀಯ ಸಂಶೋಧನೆ ಎಂದು ಕೊಂಡಾಡಿತು. 1980ರಿಂದ 1990ರ ದಶಕದಲ್ಲಿ ಮಹಲ್‌ ನಬೀಸ್‌ ಅವರು ಜಿನೇವಾದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಅತಿಸಾರ ನಿಯಂತ್ರಣ ಕಾರ್ಯಕ್ರಮದ ವೈದ್ಯಾಧಿಕಾರಿಯಾಗಿಯೂ ಕಾರ್ಯ ನಿರ್ವಹಿಸಿದರು.

click me!