ರೈತರಿಗೆ ಒಂದೇ ಕಡೆ ಎಲ್ಲ ಸೌಲಭ್ಯ: ದೇಶಾದ್ಯಂತ 600 ಕಿಸಾನ್‌ ಸಮೃದ್ಧಿ ಕೇಂದ್ರಗಳಿಗೆ Modi ಚಾಲನೆ

By Kannadaprabha NewsFirst Published Oct 18, 2022, 7:13 AM IST
Highlights

ರೈತರ ಎಲ್ಲ ಅಗತ್ಯ ಒಂದೇ ಸೂರಿನಡಿ ಪೂರೈಸುವ 600 ಕಿಸಾನ್‌ ಸಮೃದ್ಧಿ ಕೇಂದ್ರಗಳಿಗೆ ಪ್ರಧಾನಿ ಮೋದಿ ಚಾಲನೆ ನೀಡಿದ್ದಾರೆ. ಅಲ್ಲದೆ, ಏಕ ಬ್ರ್ಯಾಂಡ್‌ನ ‘ಭಾರತ್‌’ ಯೂರಿಯಾಗೂ ಮೋದಿ ಲೋಕಾರ್ಪಣೆ ಮಾಡಿದ್ದಾರೆ.

ನವದೆಹಲಿ: ದೇಶಾದ್ಯಂತ ಯೂರಿಯಾವನ್ನು (Urea) ‘ಭಾರತ್‌’ (Bharat) ಹೆಸರಿನ ಒಂದೇ ಬ್ರ್ಯಾಂಡ್‌ನಡಿ ಮಾರಾಟ ಮಾಡುವ ‘ಒಂದು ದೇಶ, ಒಂದು ರಸಗೊಬ್ಬರ’ (One Nation One Urea) ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ (PM Narendra Modi) ಲೋಕಾರ್ಪಣೆಗೊಳಿಸಿದರು. ಇದೇ ವೇಳೆ, ರೈತರಿಗೆ (Farmers) ಗೊಬ್ಬರ, ಬೀಜ ಮಾರಾಟದಿಂದ ಹಿಡಿದು ಮಣ್ಣಿನ ಪರೀಕ್ಷೆಯವರೆಗೆ ಎಲ್ಲಾ ಅಗತ್ಯ ಸೇವೆಗಳನ್ನೂ ಒಂದೇ ಸೂರಿನಡಿ ನೀಡುವ 600 ಕಿಸಾನ್‌ ಸಮೃದ್ಧಿ ಕೇಂದ್ರಗಳನ್ನೂ (Kisan Samruddhi Kendra) ಪ್ರಧಾನಿ ಉದ್ಘಾಟಿಸಿದರು. ಈ ಎರಡು ಸುಧಾರಣೆಗಳು ದೇಶದಲ್ಲಿ ರಸಗೊಬ್ಬರ ಪೂರೈಕೆ ಹಾಗೂ ರೈತರ ಬದುಕನ್ನು ಉತ್ತಮಗೊಳಿಸುವ ಎರಡು ಮಹತ್ವಾಕಾಂಕ್ಷಿ ಕೃಷಿ ಸುಧಾರಣೆಗಳು ಎಂದು ಪ್ರಧಾನಿ ಮೋದಿ ಬಣ್ಣಿಸಿದರು.

ಕೇಂದ್ರ ಸರ್ಕಾರದಿಂದ ಯೂರಿಯಾ ಹಾಗೂ ಇನ್ನಿತರ ರಸಗೊಬ್ಬರಗಳಿಗೆ ಭಾರಿ ಪ್ರಮಾಣದಲ್ಲಿ ಸಬ್ಸಿಡಿ ಪಡೆಯುವ ಖಾಸಗಿ ಕಂಪನಿಗಳು ಇಷ್ಟು ದಿನ ತಮ್ಮದೇ ಬ್ರ್ಯಾಂಡ್‌ನಡಿ ಬೇರೆ ಬೇರೆ ಹೆಸರಿನಲ್ಲಿ ರಸಗೊಬ್ಬರಗಳನ್ನು ರೈತರಿಗೆ ಮಾರಾಟ ಮಾಡುತ್ತಿದ್ದವು. ಇನ್ನು ಮುಂದೆ ಅವು ‘ಭಾರತ್‌’  (Bharat) ಎಂಬ ಒಂದೇ ಬ್ರ್ಯಾಂಡ್‌ನಡಿ ರಸಗೊಬ್ಬರ ಮಾರಾಟ ಮಾಡುವುದು ‘ಒಂದು ದೇಶ, ಒಂದು ರಸಗೊಬ್ಬರ’ ಯೋಜನೆಯೆಂದೇ ಹೆಸರಾಗಿರುವ ‘ಪ್ರಧಾನ ಮಂತ್ರಿ ಭಾರತೀಯ ಜನ ಉರ್ವಾರುಕ ಪರಿಯೋಜನಾ’ (Pradhan Mantri Jan Urvarak Yojana) ಅಡಿಯಲ್ಲಿ ಕಡ್ಡಾಯವಾಗಿದೆ. ಮೊದಲಿಗೆ ಭಾರತ್‌ ಹೆಸರಿನ ಯೂರಿಯಾ ಬಿಡುಗಡೆ ಮಾಡಲಾಗಿದ್ದು, ಶೀಘ್ರದಲ್ಲೇ ಡಿಎಪಿ ಹಾಗೂ ಇನ್ನಿತರ ರಸಗೊಬ್ಬರಗಳು ಕೂಡ ಭಾರತ್‌ ಹೆಸರಿನಲ್ಲೇ ಬರಲಿವೆ.

ಇದನ್ನು ಓದಿ: PM - KISAN ಯೋಜನೆ: ರೈತರ ಬ್ಯಾಂಕ್‌ ಖಾತೆಗೆ 16 ಸಾವಿರ ಕೋಟಿ ರೂ. ವರ್ಗಾಯಿಸಿದ ಪ್ರಧಾನಿ Modi

ಕಿಸಾನ್‌ ಸಮೃದ್ಧಿ ಕೇಂದ್ರ:
ರೈತರಿಗೆ ಒಂದೇ ಸೂರಿನಡಿ ರಸಗೊಬ್ಬರಗಳು, ಬಿತ್ತನೆ ಬೀಜ, ಕೃಷಿ ಉಪಕರಣಗಳು, ಮಣ್ಣಿನ ಪರೀಕ್ಷೆ ಸೇವೆ, ಸರ್ಕಾರಿ ಯೋಜನೆಗಳ ಕುರಿತು ಮಾಹಿತಿ ನೀಡುವ ಕಿಸಾನ್‌ ಸಮೃದ್ಧಿ ಕೇಂದ್ರಗಳನ್ನು ಪ್ರಧಾನಿ ಮೋದಿ ಉದ್ಘಾಟಿಸಿದರು. ಮೊದಲಿಗೆ ಇಂತಹ 600 ಕೇಂದ್ರಗಳು ದೇಶಾದ್ಯಂತ ಆರಂಭವಾಗಲಿವೆ. ಕ್ರಮೇಣ ದೇಶದೆಲ್ಲೆಡೆ ಇರುವ 3.25 ಲಕ್ಷ ರಸಗೊಬ್ಬರ ಮಾರಾಟ ಮಳಿಗೆಗಳನ್ನು ಕಿಸಾನ್‌ ಸಮೃದ್ಧಿ ಕೇಂದ್ರವಾಗಿ ರೂಪಾಂತರಗೊಳಿಸಲಾಗುವುದು ಎಂದು ಮೋದಿ ಪ್ರಕಟಿಸಿದರು.

ಕೃಷಿ ಹಾಗೂ ರಸಗೊಬ್ಬರ ಸಚಿವಾಲಯಗಳು ಜಂಟಿಯಾಗಿ ಆಯೋಜಿಸಿದ್ದ ಪಿಎಂ ಕಿಸಾನ್‌ ಸಮ್ಮೇಳನದಲ್ಲಿ ಇದೇ ವೇಳೆ ಮೋದಿ ಅವರು ಸಾಪ್ತಾಹಿಕ ಅಂತಾರಾಷ್ಟ್ರೀಯ ರಸಗೊಬ್ಬರ ಇ-ನಿಯತಕಾಲಿಕ ‘ಇಂಡಿಯನ್‌ ಎಡ್ಜ್‌’ (Indian Edge) ಕೂಡ ಬಿಡುಗಡೆ ಮಾಡಿದರು.

ಇದನ್ನೂ ಓದಿ:  ಗದಗ, ಕೊಪ್ಪಳದಲ್ಲಿ ಯೂರಿಯಾಕ್ಕೆ ಅಂಗಡಿಗಳ ಮುಂದೆ ರೈತರ ಕ್ಯೂ!

ಉತ್ತಮ ಗುಣಮಟ್ಟದ ಗೊಬ್ಬರ ಲಭ್ಯ:
ಬೇರೆ ಬೇರೆ ಬ್ರ್ಯಾಂಡ್‌ನ ರಸಗೊಬ್ಬರಗಳನ್ನು ಬೇರೆ ಬೇರೆ ಕಂಪನಿಗಳು ಪೈಪೋಟಿಯ ಮೇಲೆ ಮಾರುಕಟ್ಟೆ ಮಾಡುತ್ತಿದ್ದುದರಿಂದ ರೈತರು ಯಾವುದನ್ನು ಖರೀದಿಸಬೇಕು ಎಂಬ ಗೊಂದಲದಲ್ಲಿದ್ದರು. ಈ ಪೈಪೋಟಿಯಲ್ಲಿ ಗುಣಮಟ್ಟ ಕುಸಿಯುತ್ತಿತ್ತು. ಏಕೆಂದರೆ ಅಧಿಕ ಕಮಿಷನ್‌ ಆಸೆಗೆ ಚಿಲ್ಲರೆ ಮಾರಾಟಗಾರರು ಯಾವ ರಸಗೊಬ್ಬರವನ್ನು ಬೇಕಾದರೂ ಮಾರಾಟ ಮಾಡುತ್ತಿದ್ದರು. ಇನ್ನು ಮುಂದೆ ಭಾರತ್‌ ಬ್ರ್ಯಾಂಡ್‌ ಅಡಿಯಲ್ಲಿ ಆ ಸಮಸ್ಯೆ ಇರುವುದಿಲ್ಲ. ಹೀಗಾಗಿ ರೈತರಿಗೆ ಅನುಕೂಲವಾಗಲಿದೆ ಎಂದು ಮೋದಿ ಹೇಳಿದರು.

click me!