
ಧರ್ಮಶಾಲಾ: ಟಿಬೆಟನ್ ಧರ್ಮಗುರು ದಲೈಲಾಮಾ ಅವರ ಉತ್ತರಾಧಿಕಾರಿ ಆಯ್ಕೆ ವಿಷಯದಲ್ಲಿದ್ದ ಊಹಾಪೋಹಕ್ಕೆ ಕೊನೆಗೂ ತೆರೆ ಬಿದ್ದಿದೆ.
ನಾನೇ 2015ರಲ್ಲಿ ರಚಿಸಿದ್ದ ಗಾಡೆನ್ ಫೋಡ್ರಾಂಗ್ ಟ್ರಸ್ಟ್‌ಗೆ ಮಾತ್ರ ನನ್ನ ಉತ್ತರಾಧಿಕಾರಿಯನ್ನು ಗುರುತಿಸುವ ಅಧಿಕಾರವಿದೆ ಎಂದು 14ನೇ ದಲೈಲಾಮಾ ಆಗಿರುವ ಟೆಂಜಿನ್ ಗ್ಯಾಟ್ಸೊ ಘೋಷಿಸಿದ್ದಾರೆ. ಈ ಮೂಲಕ ತಮ್ಮ ಉತ್ತರಾಧಿಕಾರಿ ಆಯ್ಕೆಯಲ್ಲಿ ಚೀನಾ ಸರ್ಕಾರದ ಹಸ್ತಕ್ಷೇಪವನ್ನು ಬಲವಾಗಿ ತಿರಸ್ಕರಿಸಿದ್ದಾರೆ.
ಜು.6ರಂದು 90ನೇ ವರ್ಷಕ್ಕೆ ಕಾಲಿಡುತ್ತಿರುವ ದಲೈಲಾಮಾ ತಮ್ಮ ಉತ್ತರಾಧಿಕಾರಿ ವಿಷಯವಾಗಿ 5.57 ನಿಮಿಷದ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ‘ದಲೈಲಾಮಾ ಸಂಸ್ಥೆ ಮುಂದುವರಿಯುತ್ತದೆ. ನನ್ನ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವ ಅಧಿಕಾರ ಗಾಡೆನ್ ಫೋಡ್ರಾಂಗ್ ಟ್ರಸ್ಟ್‌ಗೆ ಮಾತ್ರ ಇರುತ್ತದೆ. ಈ ವಿಷಯದಲ್ಲಿ ಹಸ್ತಕ್ಷೇಪ ಮಾಡಲು ಬೇರೆ ಯಾರಿಗೂ ಯಾವುದೇ ಅಧಿಕಾರವಿಲ್ಲ’ ಎಂದು ತಿಳಿಸಿದ್ದಾರೆ. ಅವರು 1959ರಲ್ಲಿ ಚೀನಾ ಪಡೆಗಳು ಟಿಬೆಟ್ ಅನ್ನು ಕೈವಶ ಮಾಡಿಕೊಂಡಾಗ ಜೀವಭಯದಿಂದ ಲಾಸಾ ತೊರೆದು ಭಾರತಕ್ಕೆ ಪಲಾಯನ ಮಾಡಿದ್ದರು. ಆಗಿನಿಂದಲೂ ಚೀನಾ ಅವರನ್ನು ‘ಪ್ರತ್ಯೇಕತಾವಾದಿ’ ಎಂದು ದೂಷಿಸುತ್ತಲೇ ಬಂದಿದೆ.
ನಮ್ಮಿಂದಲೇ ಉತ್ತರಾಧಿಕಾರಿ ಆಯ್ಕೆ- ಚೀನಾ ಕಿರಿಕ್:
ಉತ್ತರಾಧಿಕಾರಿ ಆಯ್ಕೆ ಕುರಿತು ದಲೈಲಾಮಾ ಘೋಷಣೆ ಬೆನ್ನಲ್ಲೆ ಚೀನಾ ಸರ್ಕಾರ ಹೇಳಿಕೆ ನೀಡಿದ್ದು, ‘ದಲೈಲಾಮಾ ಅವರ ಉತ್ತರಾಧಿಕಾರಿಯನ್ನು ಚೀನಾ ಸರ್ಕಾರವೇ ಅನುಮೋದಿಸಬೇಕು ಮತ್ತು ಈ ಪ್ರಕ್ರಿಯೆ ಚೀನಾದೊಳಗೇ ನಡೆಯಬೇಕು’ ಎಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ