ಲೋಕಸಭೆಗೆ ನಡೆಯುತ್ತಾ ಅವಧಿ ಪೂರ್ವ ಎಲೆಕ್ಷನ್‌? ಕೇಂದ್ರ ಸಚಿವರ ಸ್ಪಷ್ಟನೆ ಹೀಗಿದೆ..

By Kannadaprabha NewsFirst Published Sep 4, 2023, 10:16 AM IST
Highlights

ಕೇಂದ್ರ ಸರ್ಕಾರವು ‘ಒಂದು ರಾಷ್ಟ್ರ, ಒಂದು ಚುನಾವಣೆ’ ಕುರಿತು ಸಮಿತಿಯನ್ನು ರಚಿಸಿದೆ ಮತ್ತು ಏಕ ಚುನಾವಣೆಗೆ ಮಾನದಂಡಗಳನ್ನು ಅಂತಿಮಗೊಳಿಸುವ ಮೊದಲು ಸಮಿತಿಯು ಮಧ್ಯಸ್ಥಗಾರರೊಂದಿಗೆ ವ್ಯಾಪಕವಾದ ಚರ್ಚೆ ಮಾಡುತ್ತದೆ ಎಂದು ಅನುರಾಗ್‌ ಠಾಕೂರ್‌ ಹೇಳಿದರು.

ನವದೆಹಲಿ (ಸೆಪ್ಟೆಂಬರ್ 4, 2023): ‘ಒಂದು ದೇಶ ಒಂದು ಚುನಾವಣೆ’ ಕುರಿತು ಚರ್ಚೆಯಾಗುತ್ತಿರುವ ಹಿನ್ನೆಲೆಯಲ್ಲಿ ಲೋಕಸಭೆಗೆ ಅವಧಿಪೂರ್ವ ಚುನಾವಣೆ ನಡೆಸಬಹುದು ಅಥವಾ ವರ್ಷಾಂತ್ಯಕ್ಕೆ ನಡೆಯಬೇಕಿರುವ ಪಂಚರಾಜ್ಯಗಳ ಚುನಾವಣೆಯನ್ನು ಮುಂದೂಡಿ ಲೋಕಸಭೆ ಜತೆಗೇ ಚುನಾವಣೆ ನಡೆಸಬಹುದು ಎಂಬ ವಾದಗಳನ್ನು ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ ನಿರಾಕರಿಸಿದ್ದಾರೆ. ಈ ಮೂಲಕ ಈ ವಿಶೇಷ ಅಧಿವೇಶನವೇ ಕೊನೆಯ ಅಧಿವೇಶನವಾಗಬಹುದು ಅಥವಾ ಅವಧಿಪೂರ್ವ ಚುನಾವಣೆ ನಡೆಯಬಹುದು ಎಂಬ ಊಹಾಪೋಹ ತಳ್ಳಿಹಾಕಿದ್ದಾರೆ.
ಅಂತಹ ಯಾವುದೇ ಪ್ರಸ್ತಾವ ಕೇಂದ್ರ ಸರ್ಕಾರದ ಮುಂದೆ ಇಲ್ಲ. ಇದೆಲ್ಲಾ ಮಾಧ್ಯಮಗಳ ಊಹಾಪೋಹ. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಅವಧಿಯ ಕಟ್ಟಕಡೆಯ ದಿನದವರೆಗೂ ಜನರ ಸೇವೆ ಮಾಡಲು ಇಷ್ಟಪಡುತ್ತಾರೆ ಎಂದು ಟಿವಿ ವಾಹಿನಿಯೊಂದರ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಇತ್ತೀಚೆಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಸೇರಿದಂತೆ ಹಲವು ವಿಪಕ್ಷ ನಾಯಕರು, ಕೇಂದ್ರ ಸರ್ಕಾರ ಅವಧಿ ಪೂರ್ವ ಚುನಾವಣೆಗೆ ಸಜ್ಜಾಗುತ್ತಿದೆ ಎಂದು ಭವಿಷ್ಯ ನುಡಿದಿದ್ದರು. ಅದರ ಬೆನ್ನಲ್ಲೇ ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ ಈ ಸ್ಪಷ್ಟನೆ ನೀಡಿದ್ದಾರೆ. 

ಇದನ್ನು ಓದಿ: ಅಸೆಂಬ್ಲಿ, ಸಂಸತ್‌ ಜತೆ ಪಂಚಾಯ್ತಿ, ನಗರಕ್ಕೂ ಏಕಕಾಲಕ್ಕೆ ಎಲೆಕ್ಷನ್? ಅಧ್ಯಯನ ಸಮಿತಿಗೆ ಅಮಿತ್ ಶಾ ಸೇರಿ 8 ಮಂದಿ

ಇನ್ನು, ಕೇಂದ್ರ ಸರ್ಕಾರವು ‘ಒಂದು ರಾಷ್ಟ್ರ, ಒಂದು ಚುನಾವಣೆ’ ಕುರಿತು ಸಮಿತಿಯನ್ನು ರಚಿಸಿದೆ ಮತ್ತು ಏಕ ಚುನಾವಣೆಗೆ ಮಾನದಂಡಗಳನ್ನು ಅಂತಿಮಗೊಳಿಸುವ ಮೊದಲು ಸಮಿತಿಯು ಮಧ್ಯಸ್ಥಗಾರರೊಂದಿಗೆ ವ್ಯಾಪಕವಾದ ಚರ್ಚೆ ಮಾಡುತ್ತದೆ ಎಂದೂ ಅವರು ಹೇಳಿದರು.

ಏಕಕಾಲಕ್ಕೆ ಚುನಾವಣೆ ನಡೆಸುವ ಕುರಿತು ಪರಿಶೀಲಿಸಿ ಶಿಫಾರಸು ಮಾಡಲು ಕೇಂದ್ರ ಸರ್ಕಾರ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇತೃತ್ವದ ಎಂಟು ಸದಸ್ಯರ ಸಮಿತಿಗೆ ಶನಿವಾರ ಸೂಚನೆ ನೀಡಿದೆ. ಆದರೆ, ಹಿರಿಯ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಸಮಿತಿಯ ಭಾಗವಾಗಲು ಆಹ್ವಾನ ನಿರಾಕರಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಅನುರಾಗ್‌ ಠಾಕೂರ್‌, ಅಧಿರ್ ರಂಜನ್ ಚೌಧರಿ ಅವರು ಸಮಿತಿಯ ಭಾಗವಾಗಿರಲು ಸರ್ಕಾರ ಬಯಸುತ್ತದೆ ಎಂದು ಹೇಳಿದರು. ಪ್ರತಿಪಕ್ಷಗಳ ಧ್ವನಿಯೂ ಸೇರಿದಂತೆ ಮೋದಿ ಸರ್ಕಾರದ ದೊಡ್ಡ ಹೃದಯವನ್ನು ತೋರಿಸುತ್ತದೆ ಎಂದೂ ಅವರು ಹೇಳಿದರು.

ಇದನ್ನೂ ಓದಿ: ಒಂದು ದೇಶ - ಒಂದೇ ಚುನಾವಣೆ ಅಧ್ಯಯನಕ್ಕೆ ರಾಮನಾಥ್‌ ಕೋವಿಂದ್ ನೇತೃತ್ವದ ಸಮಿತಿ: ವಿಶೇಷ ಅಧಿವೇಶನ ಕರೆದ ಬೆನ್ನಲ್ಲೇ ಘೋಷಣೆ

ಈ ಮಧ್ಯೆ, ಸೆಪ್ಟೆಂಬರ್ 18 ರಂದು ಪ್ರಾರಂಭವಾಗುವ ಸಂಸತ್ತಿನ ವಿಶೇಷ ಅಧಿವೇಶನಕ್ಕೆ ಸರ್ಕಾರವು ದೊಡ್ಡ ಯೋಜನೆಗಳನ್ನು ಹೊಂದಿದೆ ಎಂದು ಅನುರಾಗ್‌ ಠಾಕೂರ್ ಸುಳಿವು ನೀಡಿದರು, ಆದರೆ ಅವರು ವಿಶೇಷ ಅಧಿವೇಶನದ ಕಾರ್ಯಸೂಚಿಯನ್ನು ಬಹಿರಂಗಪಡಿಸಲಿಲ್ಲ. ಇನ್ನೊಂದೆಡೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ "ಒಂದು ರಾಷ್ಟ್ರ, ಒಂದು ಚುನಾವಣೆ" ಕಲ್ಪನೆಗೆ ತಮ್ಮ ವಿರೋಧ ವ್ಯಕ್ತಪಡಿಸಿದ್ದರು ಮತ್ತು ಇದು ಭಾರತೀಯ ಒಕ್ಕೂಟ ಮತ್ತು ಅದರ ಎಲ್ಲಾ ರಾಜ್ಯಗಳ ಮೇಲಿನ ದಾಳಿ ಎಂದು ಕರೆದರು.

ಇದನ್ನೂ ಓದಿ: ಸೆಪ್ಟೆಂಬರ್‌ 18 ರಿಂದ ವಿಶೇಷ ಅಧಿವೇಶನ: 'ಒಂದು ರಾಷ್ಟ್ರ, ಒಂದು ಚುನಾವಣೆ' ಮಸೂದೆ ಮಂಡನೆಗೆ ಮೋದಿ ಸರ್ಕಾರ ಮಾಸ್ಟರ್‌ ಪ್ಲ್ಯಾನ್‌!

click me!