
ನವದೆಹಲಿ : ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯನ್ನು ಮುಂದಿಟ್ಟುಕೊಂಡು ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಮತ್ತೆ ಚುನಾವಣಾ ಆಯೋಗದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ‘ಚುನಾವಣಾ ಅಕ್ರಮಗಳಿಗೆ ಸಂಬಂಧಿಸಿ ನಾವು ಎತ್ತಿದ ಪ್ರಶ್ನೆಗಳಿಗೆ ಉತ್ತರ ನೀಡುವ ಬದಲು ಚುನಾವಣಾ ಆಯೋಗವು ಸಾಕ್ಷ್ಯ ನಾಶ ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ. ಈ ಮೂಲಕ ಆಯೋಗದಿಂದ ಮತ್ತೆ ಮ್ಯಾಚ್ ಫಿಕ್ಸಿಂಗ್ ಆಗಿದೆ’ ಎಂದು ದೂರಿದ್ದಾರೆ.
ಕೇಂದ್ರ ಚುನಾವಣಾ ಆಯೋಗವು ಇತ್ತೀಚೆಗಷ್ಟೇ (ಮೇ 30ರ ಸುತ್ತೋಲೆ) 45 ದಿನಗಳ ಬಳಿಕ ಚುನಾವಣಾ ಪ್ರಕ್ರಿಯೆಯ ವಿಡಿಯೋ, ಫೋಟೋ ದಾಖಲೆಗಳನ್ನು ಅಳಿಸಿ ಹಾಕುವಂತೆ ರಾಜ್ಯಗಳ ಚುನಾವಣಾ ಆಯುಕ್ತರಿಗೆ ಸೂಚಿಸಿತ್ತು. ಇದರ ಬೆನ್ನಲ್ಲೇ ರಾಹುಲ್ ಗಾಂಧಿ ಅವರು ಇಂಥದ್ದೊಂದು ಗಂಭೀರ ಆರೋಪ ಮಾಡಿದ್ದಾರೆ.
ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, ‘ಮತದಾರರ ಪಟ್ಟಿಯನ್ನು ಯಂತ್ರಗಳೇ ಪರಿಶೀಲಿಸಲು ಅನುಕೂಲವಾಗುವ ರೀತಿ ಪ್ರಕಟಿಸುವುದಿಲ್ಲ. ಸಿಸಿಟೀವಿ ದೃಶ್ಯಾವಳಿಯನ್ನು ಕಾನೂನು ಬದಲಾಯಿಸಿ ಅಡಗಿಸಿಟ್ಟಿದ್ದಾರೆ. ಚುನಾವಣೆಯ ಫೋಟೋ ಮತ್ತು ವಿಡಿಯೋಗಳನ್ನು ಇನ್ನು ಮುಂದೆ ಒಂದು ವರ್ಷದ ಬಳಿಕವಲ್ಲ, ಬದಲಾಗಿ 45 ದಿನಗಳ ನಂತರ ಅಳಿಸಲಾಗುತ್ತದೆ. ಯಾರಿಂದ ನಮಗೆ ಉತ್ತರ ಬೇಕಿತ್ತೋ ಅವರೇ ಸಾಕ್ಷ್ಯ ನಾಶ ಮಾಡುತ್ತಿದ್ದಾರೆ. ಇದರಿಂದ ಮ್ಯಾಚ್‌ಫಿಕ್ಸಿಂಗ್ ಆಗಿರುವುದು ಸ್ಪಷ್ಟವಾಗುತ್ತಿದೆ. ಈ ರೀತಿ ಫಿಕ್ಸ್ ಆಗಿರುವ ಚುನಾವಣೆ ಪ್ರಜಾತಂತ್ರಕ್ಕೆ ವಿಷಕಾರಿ’ ಎಂದು ಆರೋಪಿಸಿದ್ದಾರೆ.
ಸೂಚನೆ ನೀಡಿದ್ದ ಚು.ಆಯೋಗ:
ಚುನಾವಣಾ ಆಯೋಗವು ಎಲ್ಲಾ ರಾಜ್ಯಗಳ ಚುನಾವಣಾಧಿಕಾರಿಗಳಿಗೆ ಮೇ 30ರಂದು ಚುನಾವಣೆಯ ಸೀಸಿಟಿವಿ, ವೆಬ್‌ಕಾಸ್ಟಿಂಗ್ ಮತ್ತು ಫೋಟೋ, ವಿಡಿಯೋ ದೃಶ್ಯಾವಳಿಗಳನ್ನು 45 ದಿನಗಳ ಬಳಿಕ ಅಳಿಸಬೇಕು. ಒಂದು ವೇಳೆ ಆ ಕ್ಷೇತ್ರದ ಚುನಾವಣೆಯನ್ನು ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರೆ ಮಾತ್ರ ಸಂರಕ್ಷಿಸಿಡಿ ಎಂದು ಸೂಚಿಸಿತ್ತು.
’ಚುನಾವಣಾ ಪ್ರಕ್ರಿಯೆಗಳನ್ನು ವಿವಿಧ ಮಾಧ್ಯಮದ ಮೂಲಕ ರೆಕಾರ್ಡಿಂಗ್ ಮಾಡಿಟ್ಟುಕೊಳ್ಳಲು ಸೂಚಿಸಲಾಗಿದೆ. ಚುನಾವಣಾ ಪ್ರಕ್ರಿಯೆಯಲ್ಲಿನ ಆಂತರಿಕ ನಿರ್ವಹಣೆಗಾಗಿಯಷ್ಟೇ ಆಯೋಗ ಈ ರೀತಿಯ ರೆಕಾರ್ಡಿಂಗ್‌ಗೆ ಅನುಮತಿ ನೀಡಿದೆ. ಈ ರೀತಿಯ ರೆಕಾರ್ಡಿಂಗ್ ಅನ್ನು ಕಾನೂನು ಕಡ್ಡಾಯಗೊಳಿಸಿಲ್ಲ. ಆದರೆ, ಇತ್ತೀಚೆಗೆ ತಪ್ಪು ಮಾಹಿತಿ ಹರಡಲು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಕಥೆಗಳನ್ನು ಸೃಷ್ಟಿಸಲು ಈ ರೆಕಾರ್ಡಿಂಗ್‌ಗಳ ದುರುಪಯೋಗ ಆಗುತ್ತಿದೆ. ಹೀಗಾಗಿ ಈ ರೀತಿಯ ಕ್ರಮ ಕೈಗೊಳ್ಳಬೇಕಾದ ಪರಿಸ್ಥಿತಿ ಬಂದಿದೆ’ ಎಂದು ಪತ್ರದಲ್ಲಿ ಹೇಳಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ