
ನವದೆಹಲಿ: ಚುನಾವಣೆಯಲ್ಲಿ ಒಬ್ಬ ಅಭ್ಯರ್ಥಿ ಒಂದು ಕ್ಷೇತ್ರದಿಂದ ಮಾತ್ರ ಸ್ಪರ್ಧಿಸಲು ಅವಕಾಶ ನೀಡುವಂತೆ ಶಿಫಾರಸು ಮಾಡಿ ಕೇಂದ್ರ ಕಾನೂನು ಸಚಿವಾಲಯಕ್ಕೆ ಮುಖ್ಯ ಚುನಾವಣಾ ಆಯುಕ್ತ (Chief Election Commissioner) (ಸಿಇಸಿ) ರಾಜೀವ್ ಕುಮಾರ್ ಪತ್ರ ಬರೆದಿದ್ದಾರೆ. ಸದ್ಯ ವಿಧಾನಸಭೆ ಅಥವಾ ಲೋಕಸಭೆ ಚುನಾವಣೆಯಲ್ಲಿ ಒಬ್ಬ ಅಭ್ಯರ್ಥಿ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಬಹುದಾಗಿದೆ. ಒಂದು ಕ್ಷೇತ್ರದಲ್ಲಿ ಸೋಲುವ ಭೀತಿಯಿದ್ದರೆ ಅಥವಾ ಬೇರೆ ಬೇರೆ ಕಾರಣಗಳಿಂದ ಸಾಕಷ್ಟು ರಾಜಕಾರಣಿಗಳು ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಾರೆ. ಚುನಾವಣಾ ಆಯೋಗದ ಶಿಫಾರಸನ್ನು ಒಪ್ಪಿಕೊಂಡು ಕೇಂದ್ರ ಸರ್ಕಾರವು ಪ್ರಜಾಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ತಂದರೆ ಒಬ್ಬ ವ್ಯಕ್ತಿ ಒಂದು ಕ್ಷೇತ್ರದಲ್ಲಿ ಮಾತ್ರ ಸ್ಪರ್ಧಿಸಬೇಕಾಗುತ್ತದೆ.
ಚುನಾವಣಾ ವ್ಯವಸ್ಥೆಯ ಸುಧಾರಣೆಗೆ ಕೈಹಾಕಿರುವ ಚುನಾವಣಾ ಆಯೋಗವು ಇತ್ತೀಚೆಗಷ್ಟೇ 253 ನೋಂದಾಯಿತ ಮಾನ್ಯತೆಯಿಲ್ಲದ ರಾಜಕೀಯ ಪಕ್ಷಗಳನ್ನು (Registered Unrecognized Political Parties) (ಆರ್‌ಯುಪಿಪಿ) ಅಸಿಂಧುಗೊಳಿಸಿ ಆದೇಶ ಹೊರಡಿಸಿತ್ತು. ಅದರ ಬೆನ್ನಲ್ಲೇ ಈಗ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಅವರಿಗೆ ಮುಖ್ಯ ಚುನಾವಣಾ ಆಯುಕ್ತರು ‘ಒಬ್ಬರಿಗೆ ಒಂದೇ ಕ್ಷೇತ್ರ’ ನಿಯಮ ಜಾರಿಗೆ ಶಿಫಾರಸು ಮಾಡಿರುವುದು ಮಹತ್ವ ಪಡೆದಿದೆ.
ಇದನ್ನು ಓದಿ: Shiv Sena ಪಕ್ಷದ ಹೆಸರು, ಚಿಹ್ನೆ ಮುಟ್ಟುಗೋಲು: ಚುನಾವಣಾ ಆಯೋಗ ಮದ್ಯಂತರ ಆದೇಶ
RP ಕಾಯ್ದೆಯ ಸೆಕ್ಷನ್ 29A ನ ಶಾಸನಬದ್ಧ ಅವಶ್ಯಕತೆಗಳಿಗೆ ಅನುಸಾರವಾಗಿ, ಪ್ರತಿ ರಾಜಕೀಯ ಪಕ್ಷವು ತನ್ನ ಹೆಸರು, ಪ್ರಧಾನ ಕಚೇರಿ, ಕಚೇರಿಯ ಮುಖ್ಯಸ್ಥ, ವಿಳಾಸ ಮತ್ತು PAN ನಲ್ಲಿ ಯಾವುದೇ ಬದಲಾವಣೆಯನ್ನು ತಕ್ಷಣವೇ ಆಯೋಗಕ್ಕೆ ತಿಳಿಸಬೇಕು. ಇದರಡಿ, 86 ನೋಂದಾಯಿತ ಮಾನ್ಯತೆಯಿಲ್ಲದ ರಾಜಕೀಯ ಪಕ್ಷಗಳು ಅಸ್ತಿತ್ವದಲ್ಲಿಲ್ಲ ಎಂದು ಸಂಬಂಧಿತ ರಾಜ್ಯ ಅಥಾ ಕೇಂದ್ರಾಡಳಿತ ಪ್ರದೇಶದಲ್ಲಿ ಮುಖ್ಯ ಚುನಾವಣಾ ಅಧಿಕಾರಿಯಿಂದ ಭೌತಿಕ ಪರಿಶೀಲನೆಯ ಮೂಲಕ ಕಂಡುಬಂದಿದೆ. ಹಾಗೂ, ರಾಜ್ಯ-ನೋಂದಾಯಿತ ವಿಳಾಸಕ್ಕೆ ಪೋಸ್ಟ್ ಆಫೀಸ್ ಕಳುಹಿಸದ ಪತ್ರಗಳು/ನೋಟಿಸ್‌ಗಳ ವರದಿಗಳನ್ನು ಆಧರಿಸಿದೆ ಎಂದು ತಿಳಿದುಬಂದಿದೆ.
ಅನಾಮಧೇಯ ದೇಣಿಗೆಗೆ 2000 ರೂ. ಮಿತಿ?
ರಾಜಕೀಯ ಪಕ್ಷಗಳು ಸ್ವೀಕರಿಸುವ ಅನಾಮಧೇಯ ದೇಣಿಗೆಗೆ ಸದ್ಯ ಇರುವ 20,000 ರೂ. ಮಿತಿಯನ್ನು 2,000 ರೂ. ಗೆ ಇಳಿಸುವುದಕ್ಕೂ ಕೇಂದ್ರ ಸರ್ಕಾರಕ್ಕೆ ಚುನಾವಣಾ ಆಯೋಗ ಶಿಫಾರಸು ಮಾಡಿದೆ ಎಂದು ಮೂಲಗಳು ತಿಳಿಸಿವೆ. ಚುನಾವಣೆಯಲ್ಲಿ ಕಪ್ಪು ಹಣ ಬಳಕೆಯಾಗುವುದನ್ನು ತಪ್ಪಿಸಲು ಈ ಕ್ರಮಕ್ಕೆ ಆಯೋಗ ಮುಂದಾಗಿದೆ.
ಈಗಿರುವ ನಿಯಮಗಳಡಿ ರಾಜಕೀಯ ಪಕ್ಷಗಳು ತಮಗೆ ಬರುವ 20,000 ರೂ. ಗಿಂತ ಹೆಚ್ಚಿನ ಎಲ್ಲಾ ದೇಣಿಗೆಯ ಕುರಿತು ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಬೇಕು. ಜೊತೆಗೆ ಒಬ್ಬರಿಂದ ಗರಿಷ್ಠ 20,000 ರೂ. ವರೆಗೆ ಅನಾಮಧೇಯ ದೇಣಿಗೆ ಪಡೆಯಬಹುದು. 2000 ರೂ. ಗಿಂತ ಕಡಿಮೆ ದೇಣಿಗೆಯನ್ನು ನಗದು ರೂಪದಲ್ಲಿ ಪಡೆದರೆ ಅದರ ಬಗ್ಗೆ ಮಾಹಿತಿ ನೀಡಬೇಕಿಲ್ಲ.
ಇದನ್ನೂ ಓದಿ: ರಾಜಕೀಯ ಪಕ್ಷಗಳ ಉಚಿತ ಕೊಡುಗೆ ಭರವಸೆಗೆ ಬ್ರೇಕ್?: ಚು.ಆಯೋಗ ಪ್ರಸ್ತಾಪ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ