
ಮುಂಬೈ (ಜು.09) ಊಟಕ್ಕೆ ಮನೆಗೆ ಬರುವುದಾಗಿ ಹೇಳಿದ ವೈದ್ಯ ಸೇತುವೆಯಿಂದ ಜಿಗಿದು ಪ್ರಾಣ ಬಿಟ್ಟ ಘಟನೆ ಮುಂಬೈನಲ್ಲಿ ನಡೆದಿದೆ. ಡ್ಯೂಟಿ ಮುಗಿಸಿದ ವೈದ್ಯ ತನ್ನ ತಾಯಿಗೆ ಕರೆ ಮಾಡಿ ಊಟಕ್ಕೆ ಮನೆಗೆ ಬರುವುದಾಗಿ ಹೇಳಿದ್ದಾನೆ. ಆದರೆ ವೈದ್ಯ ಎಷ್ಟು ಹೊತ್ತಾದರೂ ಮನೆಗೆ ಬಾರದ ಕಾರಣ ಆತಂಕಗೊಂಡ ತಾಯಿ ಎಲ್ಲೆಡೆ ವಿಚಾರಿಸಲು ಆರಂಭಿಸಿದ್ದಾಳೆ. ಅಷ್ಟೊತ್ತಿಗೆ ಪೊಲೀಸರಿಗೆ ವ್ಯಕ್ತಿಯೊಬ್ಬರು ಅಟಲ್ ಸೇತುವೆಯಿಂದ ಜಿಗಿದಿದ್ದಾರೆ ಅನ್ನೋ ಮಾಹಿತಿಯೂ ಸಿಕ್ಕಿದೆ. ಕೋಸ್ಟ್ ಗಾರ್ಡ್ ತಂಡ ತೀವ್ರ ಹುಡುಕಾಟ ನಡೆಸಿದರೂ ಸುಳಿವಿಲ್ಲ. ಇತ್ತ ತಾಯಿ ಹಾಗೂ ಕುಟುಂಬಸ್ಥರು ಆಕ್ರಂದನ ಮುಗಿಲು ಮುಟ್ಟಿದೆ.
ವೈದ್ಯ ಓಂಕಾರ್ ಕಾರಿನಲ್ಲಿ ಹೊರಟಾಗ ಕರೆ
ಮುಂಬೈನ ಜೆಜೆ ಆಸ್ಪತ್ರೆಯಲ್ಲಿ ಡಾ. ಒಂಕಾರ್ ಕವಿತ್ಕೆ ನುರಿತ ವೈದ್ಯನಾಗಿ ಸೇವೆ ಸಲ್ಲಿಸುತ್ತಿದ್ದರು. ಸಾಮಾನ್ಯವಾಗಿ 8 ಗಂಟೆಗೆ ಡ್ಯೂಟಿ ಮುಗಿಯಬೇಕಿತ್ತು. ಆದರೆ ರೋಗಿಗಳು ತಪಾಸಣೆ ಸೇರಿದಂತೆ ಸತತ ತಪಾಸಣೆಯಿಂದ ಓಂಕಾರ್ ಡ್ಯೂಟಿ ವಿಳಂಬಗೊಂಡಿದೆ.ಸರಿಸುಮಾರು 9.15ರ ವೇಳೆಗೆ ಡ್ಯೂಟಿ ಮುಗಿಸಿಕೊಂಡು ತನ್ನ ಕಾರಿನಲ್ಲಿ ಮನೆಗೆ ಹೊರಟ ಓಂಕಾರ್, ನೇರವಾಗಿ ತಾಯಿಗೆ ಕರೆ ಮಾಡಿದ್ದಾನೆ. ಕಾರು ಡ್ರೈವ್ ಆರಂಭಿಸುವ ಮೊದಲು ತಾಯಿಗೆ ಕರೆ ಮಾಡಿ ಊಟಕ್ಕೆ ಬರುತ್ತಿದ್ದೇನೆ ಎಂದು ಹೇಳಿದ್ದಾನೆ.
ಅಟಲ್ ಸೇತುವೆಯಿಂದ ಜಿಗಿದ ವೈದ್ಯ
ವೈದ್ಯ ಓಂಕಾರ್ ಕಾರು ಹತ್ತಿ ಮನೆಯತ್ತ ಹೊರಟಿದ್ದ ಮುಂಬೈ ಹಾಗೂ ನವಿ ಮುಂಬೈ ಸಂಪರ್ಕಿಸುವ ಅಟಲ್ ಸೇತು ಹಾರ್ಬರ್ ಲಿಂಕ್ ರೋಡ್ ಅತ್ಯಂತ ಜನಪ್ರಿಯ ಸೇತುವೆ. ಈ ಸೇತುವೆ ಮೂಲಕ ಸಾಗಿದ ವೈದ್ಯ ಕಾರು ನಿಲ್ಲಿಸಿ ನೇರವಾಗಿ ಜಿಗಿದಿದ್ದಾನೆ. ಕಾರು ಸೇತುವೆ ಬದಿಯಲ್ಲೇ ಪಾರ್ಕ್ ಮಾಡಿ ಜಿಗಿದಿದ್ದಾನೆ.
9.43ಕ್ಕೆ ಪೊಲೀಸರಿಗೆ ಬಂತು ಕರೆ
ರಾತ್ರಿ 9.43ರ ವೇಳೆಗೆ ಮುಂಬೈ ಪೊಲೀಸರಿಗೆ ಕರೆಯೊಂದು ಬಂದಿತ್ತು. ವ್ಯಕ್ತಿಯೊಬ್ಬರು ಅಟಲ್ ಸೇತುವೆಯಿಂದ ಜಿಗಿದಿದ್ದಾರೆ ಅನ್ನೋ ಮಾಹಿತಿ ಸಿಕ್ಕದ ತಕ್ಷಣ ಪೊಲೀಸರು ಸಿಸಿಟಿವಿ ಪರಿಶೀಲಿಸಿದ್ದಾರೆ. ಈ ವೇಳೆ ವ್ಯಕ್ತಿಯೊಬ್ಬರು ಸೇತುವೆಯಿಂದ ಜಿಗಿದಿರುವುದು ಸ್ಪಷ್ಟವಾಗಿದೆ. ಅಷ್ಟೊತ್ತಿಗೆ ಮತ್ತೊಂದು ಪೊಲೀಸರು ತಂಡ ಸ್ಥಳಕ್ಕೆ ಧಾವಿಸಿತ್ತು. ಪಾರ್ಕ್ ಮಾಡಿದ ಕಾರು, ಕಾರಿನಲ್ಲಿ ಐಫೋನ್ ಸೇರಿದಂತೆ ವೈದ್ಯರ ಇತರ ವಸ್ತುಗಳಿತ್ತು. ಕೊನೆಯ ಕರೆ ತಾಯಿಗೆ ಮಾಡಲಾಗಿತ್ತು. ಪೊಲೀಸರು ಈ ನಂಬರ್‌ಗೆ ಕರೆ ಮಾಡಿದಾಗ ಮಾಹಿತಿ ಸ್ಪಷ್ಟವಾಗಿತ್ತು. ಬಳಿಕ ಪೊಲೀಸರು ತಾಯಿಗೆ ಮಾಹಿತಿ ನೀಡಿದ್ದಾರೆ.
ಕೋಸ್ಟಲ್ ಗಾರ್ಡ್ ತಂಡ ಹುಡುಕಾಟ
ಜುಲೈ 7 ರಂದು ಈ ಘಟನೆ ನಡೆದಿದೆ. ಕಳೆದ 2 ದಿನಗಳಿಂದ ಕೋಸ್ಟಲ್ ಗಾರ್ಡ್ ಸಿಬ್ಬಂದಿಗಳು ಹುಡುಕಾಡುತ್ತಿದ್ದಾರೆ. ಆದರೆ ಇದುವರೆಗೂ ವೈದ್ಯ ಓಂಕಾರ್ ಸುಳಿವಿಲ್ಲ. ಕಳೆದೆರಡು ದಿನದಿಂದ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಪತ್ತೆಯಾಗದ ಕಾರಣ ಇದೀಗ ಪೊಲೀಸರು ಈ ಕುರಿತು ಮಾಹಿತಿ ಸಿಕ್ಕರೆ ಹಂಚಿಕೊಳ್ಳುವತೆ ಮನವಿ ಮಾಡಿದ್ದಾರೆ.
ತಾಯಿ ಆಕ್ರಂದನ
ಮಗ ಊಟಕ್ಕ ಬರುತ್ತಿದ್ದಾನೆ ಎಂದು ತಾಯಿ ಮಗನ ಇಷ್ಟದ ಖಾದ್ಯಗಳನ್ನು ತಯಾರಿಸಿದ್ದಾರೆ. ಸಾಮಾನ್ಯವಾಗಿ ಡ್ಯೂಟಿ ವಿಳಂಬವಾಗುತ್ತೆ ಎಂದಾಗ ಆಸ್ಪತ್ರೆ ಕ್ಯಾಂಟಿನ್‌ನಲ್ಲೇ ಊಟ ಮಾಡುತ್ತಿದ್ದ ಓಂಕಾರ್, ಈ ಬಾರಿ ಮನೆಯಲ್ಲಿ ಊಟಕ್ಕೆ ಬರುವುದಾಗಿ ಹೇಳಿದ್ದಾನೆ. ಹೀಗಾಗಿ ತಾಯಿ ಕೂಡ ಮಗನಿಗೆ ಆಹಾರ ತಯಾರಿಸಿ ಕಾಯುತ್ತಿದ್ದರೆ, ಮಗ ಬರಲೇ ಇಲ್ಲ. ಬಳಿಕ ಪೊಲೀಸರು ಕರೆ ಮಾಡಿದಾಗಲೇ ಮಾಹಿತಿ ತಿಳಿದಿದೆ. ಇದೀಗ ತಾಯಿ ಹಾಗೂ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ. ಇದೀಗ ಮಗನ ಮೃತದೇಹಕ್ಕಾಗಿ ಕುಟುಂಬ ಕಾಯುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ