
ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
ಜೂನ್ 25, 2025ರಂದು, ಭಾರತೀಯ ಕಾಲಮಾನ ಬೆಳಗ್ಗೆ 11:51ಕ್ಕೆ ಭಾರತ ಇತಿಹಾಸದಲ್ಲಿ ತನ್ನ ಹೆಸರನ್ನು ಛಾಪಿಸಿತು. 'ಶುಕ್ಸ್' ಎಂಬ ಪ್ರೀತಿಯ ಅಡ್ಡ ಹೆಸರು ಹೊಂದಿರುವ ಶುಭಾಂಶು ಶುಕ್ಲಾ, 40 ವರ್ಷಗಳ ಬಳಿಕ ಬಾಹ್ಯಾಕಾಶಕ್ಕೆ ತೆರಳಿದ ಭಾರತೀಯ ಎನಿಸಿಕೊಂಡು, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ಐಎಸ್ಎಸ್) ವಾಸ್ತವ್ಯ ಹೂಡಿ, ಕಾರ್ಯಾಚರಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅವರು ಆಕ್ಸಿಯಮ್ ಮಿಷನ್ 4 (ಎಎಕ್ಸ್-4) ಯೋಜನೆಯ ಪೈಲಟ್ ಆಗಿ ಬಾಹ್ಯಾಕಾಶಕ್ಕೆ ತೆರಳಿದ್ದು, ಈ ಅಸಾಧಾರಣ ಪ್ರಯಾಣ ಅವರನ್ನು ಭೂಮಿಯ ಪರಿಭ್ರಮಣೆ ನಡೆಸಿದ 634ನೇ ವ್ಯಕ್ತಿ ಎನಿಸುವಂತೆ ಮಾಡಿದೆ.
ಫ್ಲೋರಿಡಾದ ಕೆನೆಡಿ ಬಾಹ್ಯಾಕಾಶ ಕೇಂದ್ರದಿಂದ, 'ಗ್ರೇಸ್' ಎಂಬ ಹೆಸರಿನ ಸ್ಪೇಸ್ಎಕ್ಸ್ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯ ಮೂಲಕ ಎಎಕ್ಸ್-4 ಯೋಜನೆ ಬಾಹ್ಯಾಕಾಶಕ್ಕೆ ನೆಗೆಯಿತು. ಶುಕ್ಲಾ ಅವರೊಡನೆ, ಅಮೆರಿಕಾದ ಕಮಾಂಡರ್ ಪೆಗ್ಗಿ ವ್ಹಿಟ್ಸನ್, ಮತ್ತು ಪೋಲೆಂಡ್ ಮತ್ತು ಹಂಗರಿಗಳ ತಲಾ ಒಬ್ಬ ಯೋಜನಾ ತಜ್ಞರು ಸೇರ್ಪಡೆಯಾದರು. ಅವರನ್ನು ಹೊತ್ತ ಬಾಹ್ಯಾಕಾಶ ನೌಕೆ ಅಂದಾಜು 28 ಗಂಟೆಗಳ ಕಾಲ ಹಾರಾಟ ನಡೆಸಿ, ಜೂನ್ 26ರ ಸಂಜೆ 4:01ಕ್ಕೆ ಸರಿಯಾಗಿ, ಉತ್ತರ ಅಟ್ಲಾಂಟಿಕ್ ಮಹಾಸಾಗರದ ಮೇಲೆ ಹಾರಾಡುತ್ತಿದ್ದ ಐಎಸ್ಎಸ್‌ಗೆ ಯಶಸ್ವಿಯಾಗಿ ಡಾಕಿಂಗ್ ನಡೆಸಿತು. ಅದೇ ದಿನ ಸಂಜೆ 5:53ರ ವೇಳೆಗೆ ಗಗನಯಾತ್ರಿಗಳು ಪರಿಭ್ರಮಣೆ ನಡೆಸುತ್ತಿರುವ ಪ್ರಯೋಗಾಲಯದಂತಿರುವ ಬಾಹ್ಯಾಕಾಶ ನಿಲ್ದಾಣವನ್ನು ಪ್ರವೇಶಿಸಿದರು. ಅವರನ್ನು ನಾಸಾದ ಎಕ್ಸ್‌ಪೆಡಿಷನ್ 73 ತಂಡದ ಸಿಬ್ಬಂದಿಗಳು ಸ್ವಾಗತಿಸಿದರು.
ಬಾಹ್ಯಾಕಾಶದಲ್ಲಿ ಶುಭಾಂಶು ಶುಕ್ಲಾ ಕಾರ್ಯಗಳು: ಸೂಕ್ಷ್ಮ ಗುರುತ್ವಾಕರ್ಷಣೆಯ ರಹಸ್ಯಗಳ ಅನಾವರಣ
ಐಎಸ್ಎಸ್ ಒಳಗೆ, ಶುಭಾಂಶು ಶುಕ್ಲಾ ವಿವಿಧ ರೀತಿಯ, ಹಲವಾರು ವೈಜ್ಞಾನಿಕ ಪ್ರಯೋಗಗಳಲ್ಲಿ ತೊಡಗಿಕೊಂಡರು. ಅವರ ಪ್ರಯೋಗಗಳು ಮೂಲತಃ ಬಹುತೇಕ ಶೂನ್ಯ ಗುರುತ್ವಾಕರ್ಷಣೆಯ ವಾತಾವರಣದಲ್ಲಿ ಜೀವಿಗಳು ಹೇಗೆ ಹೊಂದಿಕೊಳ್ಳುತ್ತವೆ ಎನ್ನುವುದರತ್ತ ಗಮನ ಕೇಂದ್ರೀಕರಿಸಿದ್ದವು.
ಶುಭಾಂಶು ಶುಕ್ಲಾರ ಸಂಶೋಧನೆ ಮುಖ್ಯವಾಗಿ ಮೈಕ್ರೋ ಆಲ್ಗೇಗಳತ್ತ (ಸೂಕ್ಷ್ಮ ಪಾಚಿ) ಗಮನ ಹರಿಸಿದೆ. ಈ ಸೂಕ್ಷ್ಮ ಪಾಚಿಗಳು ಆಹಾರ, ಆಮ್ಲಜನಕ, ಅಷ್ಟೇ ಏಕೆ, ಇಂಧನವನ್ನೂ ಉತ್ಪಾದಿಸುವ ಸಾಮರ್ಥ್ಯ ಹೊಂದಿವೆ. ಇದು ಭವಿಷ್ಯದಲ್ಲಿ ಮಂಗಳ ಗ್ರಹ ಅಥವಾ ಚಂದ್ರನಂತಹ ದೀರ್ಘ ಬಾಹ್ಯಾಕಾಶ ಯೋಜನೆಗಳಿಗೆ ನೆರವಾಗಲಿದೆ. ಸೂಕ್ಷ್ಮ ಗುರುತ್ವಾಕರ್ಷಣೆಯಲ್ಲಿ ಅವುಗಳ ವರ್ತನೆಯನ್ನು ಅಧ್ಯಯನ ನಡೆಸುವ ಮೂಲಕ, ವಿಜ್ಞಾನಿಗಳು ಇನ್ನೂ ಉತ್ತಮವಾದ ಜೀವ ಬೆಂಬಲ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸುವ ಗುರಿ ಹೊಂದಿದ್ದಾರೆ.
ಶುಭಾಂಶು ಶುಕ್ಲಾ ಬಾಹ್ಯಾಕಾಶದಲ್ಲಿ ತಲೆದೋರುವ ಕ್ಷಿಪ್ರ ಸ್ನಾಯು ನಷ್ಟದ (ಮಸಲ್ ಅಟ್ರಫಿ ಎನ್ನುವ ಸಮಸ್ಯೆ) ಕುರಿತು ಅಧ್ಯಯನ ನಡೆಸಲು ಆರಂಭಿಸಿದರು. ವಿಶೇಷವಾದ 'ಲೈಫ್ ಸೈನ್ಸಸ್ ಗ್ಲೋವ್ ಬಾಕ್ಸ್' ಎಂಬ ವ್ಯವಸ್ಥೆಯ ಮೂಲಕ ಶುಭಾಂಶು ಶುಕ್ಲಾ ಅವರು ಸ್ನಾಯುಗಳ ಜೀವಕೋಶಗಳ ಅಧ್ಯಯನ ನಡೆಸಿ, ಸ್ನಾಯುಗಳು ದುರ್ಬಲವಾಗುವುದನ್ನು ಎದುರಿಸಲು ಸೂಕ್ತವಾದ ಸಂಭಾವ್ಯ ಕ್ರಮಗಳನ್ನೂ ಪರೀಕ್ಷಿಸಿದರು. ಅವರ ಸಂಶೋಧನೆಯ ಫಲಿತಾಂಶಗಳು ಗಗನಯಾತ್ರಿಗಳು ಮತ್ತು ಭೂಮಿಯಲ್ಲಿ ಸ್ನಾಯು ಸಂಬಂಧಿ ಸಮಸ್ಯೆಗಳನ್ನು ಎದುರಿಸುವವರಿಗೆ ನೆರವಾಗಲಿವೆ.
ಇನ್ನೊಂದು ಆಸಕ್ತಿಕರ ಸಂಶೋಧನೆ 'ಟಾರ್ಡಿಗ್ರೇಡ್' ಎಂಬ, ಸಾಮಾನ್ಯವಾಗಿ 'ಜಲ ಕರಡಿ' ಎಂದು ಕರೆಯಲ್ಪಡುವ ಸೂಕ್ಷ್ಮಾಣುಗಳ ಕುರಿತು ನಡೆದಿದೆ. ಈ ಸೂಕ್ಷ್ಮ ಜೀವಿಗಳು ತಮ್ಮ ಅಸಾಧಾರಣ ಸಾಮರ್ಥ್ಯಕ್ಕೆ ಹೆಸರಾಗಿದ್ದು, ಬಾಹ್ಯಾಕಾಶದ ನಿರ್ವಾತದಂತಹ ಕಠಿಣ ಸನ್ನಿವೇಶದಲ್ಲೂ ಬದುಕುಳಿಯಬಲ್ಲವು. ಇಂತಹ ಸೂಕ್ಷ್ಮ ಜೀವಿಗಳ ವೈಶಿಷ್ಟ್ಯವನ್ನು ಅಧ್ಯಯನ ಮಾಡುವುದರಿಂದ, ವಿಜ್ಞಾನಿಗಳು ದೀರ್ಘಾವಧಿಯ ಬಾಹ್ಯಾಕಾಶ ಪ್ರಯಾಣದಲ್ಲಿ ಮಾನವ ಜೀವಕೋಶಗಳನ್ನು ರಕ್ಷಿಸುವ ಹೊಸ ಕಾರ್ಯತಂತ್ರಗಳನ್ನು ಕಂಡುಹಿಡಿಯುವ ಉದ್ದೇಶ ಹೊಂದಿದ್ದಾರೆ.
ಅದರೊಡನೆ, ಶುಭಾಂಶು ಶುಕ್ಲಾ ಅವರು ಬಾಹ್ಯಾಕಾಶ ಕೃಷಿ ಕ್ಷೇತ್ರಕ್ಕೂ ಕೊಡುಗೆ ನೀಡುತ್ತಿದ್ದಾರೆ. ಅವರು ಆರು ವಿವಿಧ ರೀತಿಯ ಸಸ್ಯಗಳ ಬೀಜಗಳನ್ನು ಬಾಹ್ಯಾಕಾಶಕ್ಕೆ ಒಯ್ದಿದ್ದು, ಅಲ್ಲಿ ಅವುಗಳ ಬೆಳವಣಿಗೆಯ ರೀತಿಯನ್ನು ಅಧ್ಯಯನ ಮಾಡಲಿದ್ದಾರೆ. ಅದರೊಡನೆ, ಶುಕ್ಲಾ ಅವರು ಮೊಳಕೆಗಳು ಮತ್ತು ಸೂಕ್ಷ್ಮ ಪಾಚಿಗಳಂತಹ ಪೋಷಕಾಂಶ ಭರಿತ ಸಣ್ಣ ಸಸ್ಯಗಳನ್ನೂ ಬೆಳೆಸಿದ್ದಾರೆ. ಈ ಸಂಶೋಧನೆ ಬಾಹ್ಯಾಕಾಶದಲ್ಲೂ ಸುಸ್ಥಿರ ಕೃಷಿಯ ಭರವಸೆ ಮೂಡಿಸಿದ್ದು, ಭವಿಷ್ಯದಲ್ಲಿ ನಗರಗಳಲ್ಲಿ ಮತ್ತು ಭೂಮಿಯ ಕಠಿಣ ವಾತಾವರಣದ ಸ್ಥಳಗಳಲ್ಲೂ ಕೃಷಿ ನಡೆಸಲು ನೆರವಾಗಲಿವೆ.
ಬಾಹ್ಯಾಕಾಶದಲ್ಲಿ ಬೆಳೆಯುತ್ತಿರುವ ಭಾರತದ ಪಾತ್ರ: ಸಹಭಾಗಿತ್ವಗಳ ಹೊಸ ಯುಗ
ಶುಭಾಂಶು ಶುಕ್ಲಾರ ಯೋಜನೆ ಭಾರತದ ಸ್ಥಾನವನ್ನು ಜಾಗತಿಕ ಬಾಹ್ಯಾಕಾಶ ಅನ್ವೇಷಣೆಯ ನಕ್ಷೆಯಲ್ಲಿ ಮೂಡಿಸಿದೆ. ಜೂನ್ 28ರಂದು, ಒಂದು ಮಹತ್ವದ ಘಟನೆಯಲ್ಲಿ ಶುಭಾಂಶು ಶುಕ್ಲಾ ಅವರು ಬಾಹ್ಯಾಕಾಶದಿಂದ ನೇರವಾಗಿ ಪ್ರಧಾನಿ ನರೇಂದ್ರ ಮೋದಿಯವರೊಡನೆ ಸಮಾಲೋಚನೆ ನಡೆಸಿದರು. ಇದು 1984ರಲ್ಲಿ ಮೊದಲ ಭಾರತೀಯನನ್ನು ಬಾಹ್ಯಾಕಾಶಕ್ಕೆ ಕಳುಹಿಸುವುದರಿಂದ, ಇಂದು ಓರ್ವ ಭಾರತೀಯ ಐಎಸ್ಎಸ್‌ನಲ್ಲಿ ವಾಸಿಸಿ, ಕಾರ್ಯ ನಿರ್ವಹಿಸುವ ತನಕ ಭಾರತ ಸಾಗಿಬಂದ ಹಾದಿಯನ್ನು ಪ್ರತಿನಿಧಿಸುವ ಭಾವನಾತ್ಮಕ, ಹೆಮ್ಮೆಯ ಕ್ಷಣವಾಗಿತ್ತು.
ಈ ಯೋಜನೆ, ಜಾಗತಿಕ ಬಾಹ್ಯಾಕಾಶ ಸಹಭಾಗಿತ್ವದಲ್ಲಿ ಭಾರತದ ಸಕ್ರಿಯ ಪಾಲ್ಗೊಳ್ಳುವಿಕೆ ಮತ್ತು ಶಾಂತಿಯುತ ಅಂತಾರಾಷ್ಟ್ರೀಯ ಸಹಕಾರದ ಕುರಿತು ಭಾರತದ ಬದ್ಧತೆಯನ್ನು ಪ್ರದರ್ಶಿಸಿದೆ.
ಬಾಹ್ಯಾಕಾಶದಲ್ಲಿ ಜೀವನ: ಹೊಸ ಸವಾಲುಗಳಿಗೆ ಹೊಂದಿಕೊಳ್ಳುವುದು
ಬಾಹ್ಯಾಕಾಶ ನಿಲ್ದಾಣದಲ್ಲಿನ ಜೀವನ ಹಲವಾರು ಸವಾಲುಗಳನ್ನು ಒಡ್ಡುತ್ತದೆ. ಊಟ, ನಿದ್ದೆ, ಮತ್ತು ನಡೆದಾಡುವಂತಹ ದೈನಂದಿನ ಚಟುವಟಿಕೆಗಳಿಗೂ ಹೊಸ ವಿಧಾನವನ್ನು ಅನುಸರಿಸಬೇಕಾಗುತ್ತದೆ. ಶುಭಾಂಶು ಶುಕ್ಲಾ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯೊಳಗೇ ನಿದ್ರಿಸುವುದಕ್ಕೆ ಹೊಂದಿಕೊಂಡರೆ, ಅವರ ಸಹಯೋಗಿಗಳು ಐಎಸ್ಎಸ್ ಒಳಗಿನ ವಿವಿಧ ಮಲಗುವ ತಾಣಗಳನ್ನು ಬಳಸಿಕೊಂಡಿದ್ದಾರೆ.
ಎಎಕ್ಸ್-4 ತಂಡ ದಿನವೂ ಬಿಡುವಿಲ್ಲದ ಚಟುವಟಿಕೆಗಳಲ್ಲಿ ತೊಡಗಿಕೊಂಡಿದೆ. ವೈಜ್ಞಾನಿಕ ಪ್ರಯೋಗಗಳು, ಬಾಹ್ಯಾಕಾಶ ನಿಲ್ದಾಣದ ನಿರ್ವಹಣೆ, ವ್ಯಾಯಾಮ, ಮತ್ತು ಶೈಕ್ಷಣಿಕ ವಿಸ್ತರಣಾ ಕಾರ್ಯಕ್ರಮಗಳಲ್ಲಿ ಅವರು ಭಾಗವಹಿಸುತ್ತಿದ್ದಾರೆ. ಸೂಕ್ಷ್ಮ ಗುರುತ್ವಾಕರ್ಷಣೆಯ ಪ್ರಭಾವವನ್ನು ಎದುರಿಸಲು, ಅವರು ಅವಶ್ಯಕ ವಿರೋಧ ಒದಗಿಸುವಂತಹ ವಿಶೇಷ ವ್ಯಾಯಾಮ ಉಪಕರಣಗಳನ್ನು ಬಳಸಿಕೊಂಡಿದ್ದಾರೆ.
ಗಗನಯಾತ್ರಿಗಳು ಎದುರಿಸುವ ಒಂದು ಪ್ರಮುಖ ಸವಾಲೆಂದರೆ, ಬಾಹ್ಯಾಕಾಶ ವಿಕಿರಣಗಳು. ಭೂಮಿಯ ರಕ್ಷಣಾತ್ಮಕ ವಾತಾವರಣದ ಹೊದಿಕೆಯಿಲ್ಲದ್ದರಿಂದ, ಗಗನಯಾತ್ರಿಗಳು ವಿಕಿರಣವನ್ನು ಗಮನಿಸುವ ಉಪಕರಣಗಳನ್ನು ಧರಿಸಿಕೊಳ್ಳುತ್ತಾರೆ. ಇವು ಭವಿಷ್ಯದಲ್ಲಿ ಭೂಮಿಯ ಕಕ್ಷೆಯನ್ನು ಮೀರಿ ಸಾಗುವ, ಆಳವಾದ ಬಾಹ್ಯಾಕಾಶ ಯೋಜನೆಗಳಿಗೆ ಅವಶ್ಯಕ ಮಾಹಿತಿಗಳನ್ನು ಒದಗಿಸುತ್ತವೆ.
ಭಾರತೀಯ ವಿದ್ಯಾರ್ಥಿಗಳಿಗೆ ಸ್ಫೂರ್ತಿ: ಬಾಹ್ಯಾಕಾಶಕ್ಕೆ ಹೊಸ ಹಾದಿ
ಶುಭಾಂಶು ಶುಕ್ಲಾ ಅವರು ಬಾಹ್ಯಾಕಾಶದಿಂದಲೇ ಶೈಕ್ಷಣಿಕ ವೀಡಿಯೋಗಳಲ್ಲಿ ತೊಡಗಿಕೊಂಡಿದ್ದು, ಸೂಕ್ಷ್ಮ ಗುರುತ್ವಾಕರ್ಷಣೆಯಲ್ಲಿ ವಿಜ್ಞಾನದ ತತ್ವಗಳು ಹೇಗೆ ಭಿನ್ನವಾಗಿರುತ್ತವೆ ಎನ್ನುವುದನ್ನು ವಿವರಿಸಿದ್ದಾರೆ. ಅವರು ದ್ರವ ಪದಾರ್ಥಗಳ ವರ್ತನೆ, ಸಸ್ಯಗಳ ಬೆಳವಣಿಗೆಯ ಜಟಿಲತೆಗಳು ಮತ್ತು ಬಾಹ್ಯಾಕಾಶದಲ್ಲಿ ಮಾನವ ದೇಹ ಎದುರಿಸುವ ಭೌತಿಕ ಬದಲಾವಣೆಗಳನ್ನು ವಿದ್ಯಾರ್ಥಿಗಳಿಗೆ ಪ್ರದರ್ಶಿಸಿದ್ದಾರೆ.
ಇಂತಹ ಆಸಕ್ತಿಕರ ಪಾಠಗಳು ಭಾರತೀಯ ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಕುರಿತು ಆಸಕ್ತಿ ಮೂಡಿಸಿದ್ದು, ಅವರನ್ನು ಬಾಹ್ಯಾಕಾಶದೊಡನೆ ಸಂಪರ್ಕಿಸುವ ನೈಜ ಅವಕಾಶವಾಗಿದೆ. ಎಎಕ್ಸ್-4 ಯೋಜನೆ ಜಾಗತಿಕ ತಂಡಗಳು ಜೊತೆಯಾಗಿ ಹೇಗೆ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬಹುದು ಎನ್ನುವುದನ್ನೂ ಪ್ರದರ್ಶಿಸಿದ್ದು, ಶುಕ್ಲಾ ಸುಲಭವಾಗಿ ಅಮೆರಿಕಾ, ಹಂಗರಿ ಮತ್ತು ಪೋಲೆಂಡ್‌ಗಳ ಗಗನಯಾತ್ರಿಗಳ ಜೊತೆ ಕಾರ್ಯಾಚರಿಸಿದ್ದಾರೆ.
ವೈಜ್ಞಾನಿಕ ಪ್ರಯೋಜನಗಳ ವಿವರ: ಕಕ್ಷೆಯನ್ನೂ ಮೀರಿದ ಪರಿಣಾಮಗಳು
ಎಎಕ್ಸ್-4 ಯೋಜನೆಯ ಪ್ರಯೋಗಗಳು ವಿಶಾಲ ವ್ಯಾಪ್ತಿಯನ್ನು ಹೊಂದಿವೆ. ಕ್ಯಾನ್ಸರ್ ಕುರಿತಾದ ಸಂಶೋಧನೆಯಲ್ಲಿ, ಕ್ಯಾನ್ಸರ್ ಕೋಶಗಳು ಬಾಹ್ಯಾಕಾಶದಲ್ಲಿ ಹೇಗೆ ಕಾರ್ಯಾಚರಿಸುತ್ತವೆ ಎನ್ನುವುದರ ತನಿಖೆ ನಡೆಸುವುದರಿಂದ, ಭೂಮಿಯಲ್ಲೂ ಪರಿಣಾಮಕಾರಿ ಚಿಕಿತ್ಸಾ ಕ್ರಮಗಳನ್ನು ಅಭಿವೃದ್ಧಿಪಡಿಸಲು ಸಾಧ್ಯ.
ಸ್ನಾಯು ಮತ್ತು ಮೂಳೆಗಳ ನಷ್ಟದ ಕುರಿತಾದ ಶುಭಾಂಶು ಶುಕ್ಲಾ ಅಧ್ಯಯನಗಳು ಗಗನಯಾತ್ರಿಗಳಿಗೆ ಮಾತ್ರ ಮೌಲ್ಯಯುತವಾದವಲ್ಲ. ಬದಲಿಗೆ, ಭೂಮಿಯಲ್ಲೂ ಮೂಳೆ ಮತ್ತು ಸ್ನಾಯುಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಿರುವ ರೋಗಿಗಳಿಗೂ ನೆರವಾಗಬಲ್ಲವು. ಶುಕ್ಲಾ ಅವರ ಸಸ್ಯಗಳ ಕುರಿತ ಪ್ರಯೋಗಗಳು ಭಾರತದಲ್ಲಿ, ಅದರಲ್ಲೂ ನಗರ ಪ್ರದೇಶಗಳು ಮತ್ತು ಸಂಪನ್ಮೂಲಗಳ ಕೊರತೆ ಇರುವ ಪ್ರದೇಶಗಳಲ್ಲಿ ಆಹಾರ ಉತ್ಪಾದನೆಯನ್ನು ಉತ್ತಮಪಡಿಸಲಿವೆ.
ಇನ್ನು ಬಾಹ್ಯಾಕಾಶ ವಿಕಿರಣಗಳ ಕುರಿತು ಕಲೆಹಾಕುವ ಮಾಹಿತಿಗಳು ಭಾರತದ ಭವಿಷ್ಯದ ಚಂದ್ರ ಅನ್ವೇಷಣೆ ಮತ್ತು ಅದರಾಚೆಗಿನ ಯೋಜನೆಗಳನ್ನು ರೂಪಿಸಲು ಬಹಳ ಪ್ರಯೋಜನಕಾರಿಯಾಗಲಿದೆ.
ಜುಲೈ 9ರ ವೇಳೆಗೆ ಯೋಜನಾ ಸ್ಥಿತಿ
ಇಂದು ಎಎಕ್ಸ್-4 ಯೋಜನೆ ತನ್ನ 14ನೇ ದಿನಕ್ಕೆ ಕಾಲಿಟ್ಟಿದೆ. ಶುಭಾಂಶು ಶುಕ್ಲಾ ಮತ್ತವರ ಸಹೋದ್ಯೋಗಿಗಳು ಈಗಾಗಲೇ 60ಕ್ಕೂ ಹೆಚ್ಚು ವೈಜ್ಞಾನಿಕ ಪ್ರಯೋಗಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಅವರು 200ಕ್ಕೂ ಹೆಚ್ಚು ಬಾರಿ ಭೂಮಿಯ ಪರಿಭ್ರಮಣೆ ನಡೆಸಿದ್ದು, 8 ಮಿಲಿಯನ್ ಕಿಲೋಮೀಟರ್‌ಗೂ ಹೆಚ್ಚು ಪ್ರಯಾಣ ನಡೆಸಿದ್ದಾರೆ. ಇದು ಭೂಮಿಯಿಂದ ಚಂದ್ರನಲ್ಲಿಗೆ 20 ಬಾರಿ ಹೋಗಿ ಬರುವುದಕ್ಕೆ ಸಮನಾಗಿದೆ. ಈ ಅಸಾಧಾರಣ ಪ್ರಯಾಣದಲ್ಲಿ ಗಗನಯಾತ್ರಿಗಳು ತಮ್ಮ ವಿಶಿಷ್ಟ ವಾಂಟೇಜ್ ಬಿಂದುವಿನಿಂದ 200ಕ್ಕೂ ಹೆಚ್ಚು ಸೂರ್ಯೋದಯ ಮತ್ತು ಸೂರ್ಯಾಸ್ತಗಳನ್ನು ವೀಕ್ಷಿಸಿದ್ದಾರೆ.
ಅವರ ಒಟ್ಟು ಕಾರ್ಯಾಚರಣೆಗಳು 31 ದೇಶಗಳ ವೈಜ್ಞಾನಿಕ ಪ್ರಗತಿಗೆ ನೆರವಾಗಲಿದ್ದು, ಎಎಕ್ಸ್-4 ಯೋಜನೆ ಅತ್ಯಂತ ಹೆಚ್ಚಿನ ದೇಶಗಳ ಸಹಯೋಗ ಹೊಂದಿರುವ ಬಾಹ್ಯಾಕಾಶ ಯೋಜನೆ ಎಂಬ ಹೆಸರು ಸಂಪಾದಿಸಿದೆ.
ಮುಂದಿನ ಹಾದಿ: ಬೆಳೆಯುತ್ತಿದೆ ಭಾರತದ ಬಾಹ್ಯಾಕಾಶ ಭವಿಷ್ಯ
ಗಗನಯಾತ್ರಿಗಳು ಇನ್ನೂ ಬಾಹ್ಯಾಕಾಶ ನಿಲ್ದಾಣದಲ್ಲಿ ಇದ್ದರೂ, ಭೂಮಿಗೆ ಬಹು ನಿರೀಕ್ಷಿತವಾದ ಅವರ ಪುನರಾಗಮನ ಸದ್ಯದಲ್ಲೇ ನೆರವೇರಲಿದೆ. ಅವರ ಪುನರಾಗಮನದ ದಿನಾಂಕ ಮತ್ತು ಸಮಯವನ್ನು ಇನ್ನೂ ಅಧಿಕೃತವಾಗಿ ಘೋಷಿಸಲಾಗಿಲ್ಲ. ಆದರೆ, ಅವರ ಸುರಕ್ಷಿತ ಪ್ರಯಾಣಕ್ಕಾಗಿ ಸಿದ್ಧತೆಗಳನ್ನು ನಡೆಸಲಾಗುತ್ತಿದೆ. ಭೂಮಿಗೆ ಮರಳುವಾಗ, ಗಗನಯಾತ್ರಿಗಳು ತಮ್ಮೊಡನೆ ಬೆಲೆಬಾಳುವ ಮಾದರಿಗಳು ಮತ್ತು ಮಾಹಿತಿಗಳನ್ನು ತರಲಿದ್ದು, ಅವುಗಳನ್ನು ಮುಂದಿನ ಹಲವು ವರ್ಷಗಳ ಕಾಲ ಕೂಲಂಕಷವಾಗಿ ಅಧ್ಯಯನ ನಡೆಸಲಾಗುತ್ತದೆ.
ಎಎಕ್ಸ್-4 ಯೋಜನೆ ಮಾನವ ಸಹಿತ ಬಾಹ್ಯಾಕಾಶ ಯೋಜನೆಯ ಕುರಿತು ಭಾರತದ ಬದ್ಧತೆಯನ್ನು ಮತ್ತೊಮ್ಮೆ ಬಲಪಡಿಸಿದೆ. ಭಾರತದ ಸ್ವಂತ ಮಾನವ ಸಹಿತ ಬಾಹ್ಯಾಕಾಶ ಯೋಜನೆಯಾದ, ಇಸ್ರೋದ 'ಗಗನಯಾನ' ಯೋಜನೆ ಮುಂದೆ ನೆರವೇರಲಿದ್ದು, ಶುಭಾಂಶು ಶುಕ್ಲಾರ ಅನುಭವ ಅದರ ಯಶಸ್ಸಿಗೆ ಬಹುಮುಖ್ಯ ಕೊಡುಗೆ ನೀಡಲಿದೆ.
ಈ ಯೋಜನೆಯ ಹಿಂದಿನ ಶಕ್ತಿಯಾದ ಆಕ್ಸಿಯಮ್ ಸ್ಪೇಸ್ ಸಂಸ್ಥೆ ಈಗಾಗಲೇ ಜಗತ್ತಿನ ಪ್ರಥಮ ಖಾಸಗಿ ಬಾಹ್ಯಾಕಾಶ ನಿಲ್ದಾಣವನ್ನು ನಿರ್ಮಿಸಲು ತೊಡಗಿಕೊಂಡಿದೆ. ಈ ಯೋಜನೆಯೂ ಭಾರತೀಯ ಗಗನಯಾತ್ರಿಗಳು ಮತ್ತು ಸಂಶೋಧಕರಿಗೆ ಭವಿಷ್ಯದಲ್ಲಿ ಹೊಸ ಅವಕಾಶಗಳನ್ನು ತೆರೆದಿಡಲಿವೆ.
ಶುಭಾಂಶು ಶುಕ್ಲಾರ ಎಎಕ್ಸ್-4 ಯೋಜನೆ ಸಮಸ್ತ ಭಾರತಕ್ಕೆ ಹೆಮ್ಮೆ ತಂದಿದೆ. ಇದು ಸಮಸ್ತ ಭಾರತೀಯರಲ್ಲಿ ಹೊಸ ನಿರೀಕ್ಷೆಗಳನ್ನು ಮೂಡಿಸಿದೆ. ಶುಭಾಂಶು ಶುಕ್ಲಾ ವಿದ್ಯಾರ್ಥಿಗಳಲ್ಲಿ ಹೊಸ ಕಲ್ಪನೆಗಳನ್ನು ಮೂಡಿಸಿದ್ದು, ದೇಶಾದ್ಯಂತ ಅಸಂಖ್ಯಾತ ಜನರಲ್ಲಿ ಹೊಸ ಕನಸುಗಳನ್ನು ಮೂಡಿಸಿದೆ, ವಿಜ್ಞಾನಿಗಳಿಗೆ ಸ್ಫೂರ್ತಿ ತುಂಬಿದೆ. ಶುಭಾಂಶು ಶುಕ್ಲಾ ಪ್ರಯಾಣ ಭಾರತ ಇಂದು ಬಾಹ್ಯಾಕಾಶ ಅನ್ವೇಷಣೆಗಳಲ್ಲಿ ಕೇವಲ ಪ್ರೇಕ್ಷಕನಾಗಿ, ಸದಸ್ಯನಾಗಿ ಮಾತ್ರವಲ್ಲದೆ, ನಾಯಕತ್ವವನ್ನು ವಹಿಸಿಕೊಳ್ಳಲೂ ಸಿದ್ಧವಾಗಿದೆ ಎಂಬ ಪ್ರಬಲ ಸಂದೇಶ ರವಾನಿಸಿದೆ.
(ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: girishlinganna@gmail.com)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ