ಒಡಿಶಾ ರೈಲು ದುರಂತದ ನೋವಿನಿಂದ ಯಾರೂ ಹೊರಬಂದಿಲ್ಲ. ಭೀಕರ ಅಪಘಾತ ದೇಶವನ್ನೇ ಬೆಚ್ಚಿ ಬೀಳಿಸಿದೆ. ಆದರೆ ಇದೇ ಅಪಘಾತವನ್ನು ಬಳಸಿಕೊಂಡು 17 ಲಕ್ಷ ರೂಪಾಯಿ ಹಣ ವಸೂಲಿ ಮಾಡಲು ಯತ್ನಿಸಿದ ಘಟನೆ ನಡೆದೆ. ತನ್ನ ಪತಿ ರೈಲು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಮೃತದೇಹವೂ ಪತ್ತೆಯಾಗಿದೆ ಎಂದು ಸುಳ್ಳು ಹೇಳಿ ಪರಿಹಾರಕ್ಕೆ ಮುಂದಾಗ ಪತ್ನಿ ವಿರುದ್ಧ ಪತಿ ದೂರು ನೀಡಿದ್ದಾರೆ.
ಒಡಿಶಾ(ಜೂ.07): ಒಡಿಶಾ ರೈಲು ದುರಂತದದಲ್ಲಿ ಮೃತಪಟ್ಟವರ ಆಪ್ತರು, ಕುಟುಂಬಸ್ಥರು, ಗಾಯಗೊಂಡವರ ಪರಿಸ್ಥಿತಿಯನ್ನು ಊಹಿಸಲು ಅಸಾಧ್ಯ. ಒಂದೆಡೆ ಮೃತದೇಹಗಳ ಗುರುತು ಪತ್ತೆ ಕೂಡ ಸಾಧ್ಯವಾಗುತ್ತಿಲ್ಲ. ಈ ಭೀಕರ ಅಪಘಾತದಲ್ಲಿ 288 ಮಂದಿ ಮೃತಪಟ್ಟಿದ್ದಾರೆ. 900ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸರ್ಕಾರ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ವ್ಯವಸ್ಥೆ ಮಾಡಿದೆ. ಇತ್ತ ಮೃತರ ಕುಟುಬಂಕ್ಕೆ ಪರಿಹಾರ ವಿತರಿಸುವ ಕಾರ್ಯವನ್ನು ಮಾಡುತ್ತಿದೆ. ಆದರೆ ಇದೇ ಅಪಘಾತವನ್ನು ಬಳಸಿಕೊಂಡು ಹಣ ವಸೂಲಿಗೆ ದಂಧೆಗೆ ಕೆಲವರು ಇಳಿದಿದ್ದಾರೆ. ತನ್ನ ಪತಿ ಒಡಿಶಾ ರೈಲು ದುರಂತದಲ್ಲಿ ಮೃತಪಟ್ಟಿದ್ದಾರೆ. ಪತಿಯ ಮೃತದೇಹವೂ ಪತ್ತೆಯಾಗಿದೆ ಎಂದು ಪತ್ನಿ ಪರಿಹಾರಕ್ಕೆ ಅರ್ಜಿ ಸಲ್ಲಿಸಿದ ಘಟನೆ ನಡೆದಿದೆ. ಆದರೆ ಪತ್ನಿ ವಿರುದ್ಧ ಪತಿ ದೂರು ನೀಡಿದ್ದು, ಇದೀಗ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.
ಒಡಿಶಾ ರೈಲು ದುರಂತದಲ್ಲಿ ಮಡಿದವರಿಗೆ ರೈಲ್ವೇ ಇಲಾಖೆ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ. ಇನ್ನು ಪ್ರಧಾನಿ ನರೇಂದ್ರ ಮೋದಿ ಕಾರ್ಯಾಲಯ 2 ಲಕ್ಷ ರೂಪಾಯಿ ಘೋಷಿಸಿದರೆ, ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಒಟ್ಟು ರೈಲು ದುರಂತದಲ್ಲಿ ಮೃತರ ಕುಟಂಬಕ್ಕೆ 17 ಲಕ್ಷ ರೂಪಾಯಿ ಪರಿಹಾರ ಸಿಗಲಿದೆ. ಈ ಮೊತ್ತ ನೋಡಿದ ಒಡಿಶಾದ ಕಟಕ್ ಜಿಲ್ಲೆಯ ಗೀತಾಂಜಲಿ ದತ್ತ ಒಡಿಶಾ ರೈಲು ದುರಂತವನ್ನೇ ಬಳಸಿಕೊಂಡು ಸರ್ಕಾರದ ಪರಿಹಾರ ಮೊತ್ತ ಜೇಬಿಗಿಳಿಸಲು ಮುಂದಾಗಿದ್ಧಳು.
ರೈಲು ದುರಂತದಲ್ಲಿ ಸತ್ತವರ ದೇಹಕ್ಕೆ ಎಂಬಾಮಿಂಗ್, ಹೀಗೆ ಮಾಡೋದ್ರಿಂದ ದೇಹ ಕೊಳೆಯೋದೆ ಇಲ್ವಾ?
ಗೀತಾಂಜಲಿ ದತ್ತ, ತನ್ನ ಪತಿ ಬಿಜಯ್ ದತ್ತ ಜೂನ್2 ರಂದು ಸಂಭವಿಸಿದ ಒಡಿಶಾದ ರೈಲು ದುರಂತದಲ್ಲಿ ಮೃತಪಟ್ಟಿದ್ದಾರೆ ಎಂದು ರೈಲ್ವೇ ಇಲಾಖೆ, ಪ್ರಧಾನಿ ಕಾರ್ಯಾಯ ಹಾಗೂ ಸಿಎಂ ಕಾರ್ಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾಳೆ. ಭೀಕರ ಅಪಘಾತದಲ್ಲಿ ತನ್ನ ಪತಿ ಬಿಜಯ್ ದತ್ತ ಮೃತಪಟ್ಟಿದ್ದಾರೆ. ಪತಿಯ ಮೃತದೇಹವೂ ಪತ್ತೆಯಾಗಿದೆ. ಹೀಗಾಗಿ ಪತಿಯ ಪರಿಹಾರ ಮೊತ್ತವನ್ನು ಬಿಡುಗಡೆ ಮಾಡಬೇಕಾಗಿ ಅರ್ಜಿಸಲ್ಲಿಸಿದ್ದಾಳೆ.
ಇತ್ತ ರೈಲ್ವೇ ಇಲಾಖೆ ಬಂದಿರುವ ಅರ್ಜಿಗಳನ್ನು ಹಿಡಿದು ದಾಖಲೆ ಪರಿಶೀಲನೆಗೆ ಮುಂದಾಗಿದೆ. ಈ ವೇಳೆ ಗೀಜಾಂಜಲಿ ದತ್ತ ಸಲ್ಲಿಸಿರುವ ಅರ್ಜಿ ಮೇಲೆ ಅನುಮಾನ ಹೆಚ್ಚಾಗಿದೆ. ಹೀಗಾಗಿ ಒಡಿಶಾ ರಾಜ್ಯ ಅಧಿಕಾರಿಗಳ ಬಳಿ ಮಾಹಿತಿ ಕೋರಿದ್ದಾರೆ. ಇತ್ತ ತನ್ನ ಪತ್ನಿ ಮೋಸದ ಮೂಲಕ ಪರಿಹಾರ ಹಣ ಪಡೆಯಲು ಮುಂದಾಗಿದ್ದಾಳೆ ಅನ್ನೋ ಮಾಹಿತಿ ತಿಳಿದ ಬಿಜಯ್ ದತ್ತ ನೇರವಾಗಿ ಮಣಿಬಂದ ಠಾಣೆಯಲ್ಲಿ ದೂರು ದಾಖಲಿಸಲು ಮುಂದಾಗಿದ್ದಾರೆ. ಠಾಣೆಗೆ ತೆರಳಿ ಘಟನೆ ವಿವರಿಸಿದ ಬಿಜಯ್ ದತ್ತಾಗೆ ಬಾಲಾಸೋರ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಸೂಚಿಸಿದ್ದಾರೆ. ಇದರಂತೆ ಬಿಜಯ್ ದತ್ತ ಪತ್ನಿ ವಿರುದ್ಧ ದೂರು ದಾಖಲಿಸಿದ್ದಾರೆ.
ಒಡಿಶಾ ರೈಲು ದುರಂತ, ಆ್ಯಂಬುಲೆನ್ಸ್‌ನಲ್ಲಿ 230 ಕಿ.ಮೀ ತೆರಳಿ ಶವಗಾರದಲ್ಲಿ ಬಿಸಾಕಿದ್ದ ಮಗನ ಉಳಿಸಿದ ತಂದೆ!
ಸಾರ್ವಜನಿಕ ಹಣವನ್ನು ಮೋಸದ ಮೂಲಕ ಪಡೆಯಲು ಯತ್ನಿಸಿದ ಹಾಗೂ ತಾನು ಬದುಕಿರುವಾಗಲೇ ಮೃತ ಎಂದು ಸುಳ್ಳು ಹೇಳಿದ ಕಾರಣಕ್ಕೆ ಪತ್ನಿಯ ವಿರುದ್ದ ಪತಿ ಬಿಜಯ್ ದತ್ತ ದೂರು ದಾಖಲಿಸಿದ್ದಾರೆ. ಇತ್ತ ರೈಲ್ವೇ ಅದಿಕಾರಿಗಳೂ ಗೀತಾಂಜಲಿ ದತ್ತ ಅರ್ಜಿ ಸುಳ್ಳು ಎಂದು ಪತ್ತೆ ಹಚ್ಚಿದೆ. ಇತ್ತ ಬಾಲಾಸೋರ್ ಪೊಲೀಸರು ಗೀತಾಂಜಲಿ ದತ್ತಾಗೆ ಹುಡುಕಾಟ ಆರಂಭಿಸಿದ್ದಾರೆ.