ಅಂಗಾಂಗ ದಾನ ಮಾಡಿದ 8 ವರ್ಷದ ಬಾಲಕನಿಗೆ ನಮನ: ಸರ್ಕಾರಿ ಗೌರವದೊಂದಿಗೆ ಅಂತ್ಯಸಂಸ್ಕಾರ

By Anusha KbFirst Published Mar 7, 2024, 12:35 PM IST
Highlights

ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ 8 ವರ್ಷದ ಬಾಲಕನಿಗೆ ಒಡಿಶಾ ಸರ್ಕಾರ ವಿಶೇಷ ಗೌರವ ನೀಡಿದೆ. ಸಂಪೂರ್ಣ ಸರ್ಕಾರಿ ಗೌರವದೊಂದಿಗೆ ಬಾಲಕನ ಅಂತ್ಯಸಂಸ್ಕಾರ ಮಾಡಲಾಗಿದೆ.  

ಒಡಿಶಾ: ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ 8 ವರ್ಷದ ಬಾಲಕನಿಗೆ ಒಡಿಶಾ ಸರ್ಕಾರ ವಿಶೇಷ ಗೌರವ ನೀಡಿದೆ. ಸಂಪೂರ್ಣ ಸರ್ಕಾರಿ ಗೌರವದೊಂದಿಗೆ ಬಾಲಕನ ಅಂತ್ಯಸಂಸ್ಕಾರ ಮಾಡಲಾಗಿದೆ.  ಮೆದುಳು ನಿಷ್ಕ್ರಿಯಗೊಂಡು 8 ವರ್ಷದ ಸುಭಜಿತ್ ಸಾಹು ಎಂಬ ಬಾಲಕ ಸಾವಿಗೀಡಾಗಿದ್ದ. ಈ ಹಿನ್ನೆಲೆಯಲ್ಲಿ ಈತನ ಅಂಗಾಗಗಳನ್ನು ದಾನ ಮಾಡಲಾಗಿತ್ತು. ಹೀಗೆ ಅಂಗಾಗ ದಾನ ಮಾಡಿ ಬೇರೆಯವರ ಬದುಕಿಗೆ ಬೆಳಕಾದ ಸುಭಜಿತ್ ಸಾಹು ಆತ್ಮಕ್ಕೆ ಗೌರವ ಸಲ್ಲಿಸುವ ಸಲುವಾಗಿ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಸಂಸ್ಕಾರ ಮಾಡಲಾಗಿದೆ.  ಸತ್ಯನಗರದ ಶವಾಗಾರದಲ್ಲಿ ನಡೆದ ಈ ಅಂತ್ಯಸಂಸ್ಕಾರದಲ್ಲಿ ರಾಜ್ಯ ಪೊಲೀಸ್ ಕಮೀಷನರ್‌ಗಳಾದ ಸಂಜೀವ್ ಪಂಡಾ ಹಾಗೂ ಡಿಸಿಪಿ ಪ್ರತೀಕ್ ಸಿಂಗ್  ಅವರು ಭಾಗಿಯಾಗಿ ಗೌರವ ಸಲ್ಲಿಸಿದ್ದಾರೆ. 

2ನೇ ತರಗತಿಯಲ್ಲಿ ಓದುತ್ತಿದ್ದ ಸುಭಜಿತ್‌ಗೆ ಕಳೆದ ವಾರ ಪರೀಕ್ಷೆ ಬರೆಯುತ್ತಿದ್ದಾಗಲೇ ಮೆದುಳು ನಿಷ್ಕ್ರಿಯಗೊಂಡಿತ್ತು. ಕೂಡಲೇ ಬಾಲಕನನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಆತ ಕೋಮಾಗೆ ಜಾರಿದ್ದ. ನಮ್ಮ ಎಲ್ಲಾ ಪ್ರಯತ್ನಗಳ ನಂತರವೂ ಆತನನ್ನು ನಮಗೆ ಬದುಕಿಸಿಕೊಳ್ಳಲಾಗಲಿಲ್ಲ, ಹೀಗಾಗಿ ಅವನ ಕಿಡ್ನಿ, ಶ್ವಾಸಕೋಶ, ಯಕೃತ್, ಕಣ್ಣು, ಹೃದಯ, ಮೆಧೋಜಿರಕ ಗ್ರಂಥಿ( pancreas ಪಿತ್ತಕೋಶ) ಸೇರಿದಂತೆ ದೇಹದ ದಾನ ಮಾಡಬಹುದಾದ ಎಲ್ಲ ಅಂಗಾಂಗಗಳನ್ನು ದಾನ ಮಾಡಿದೆವು ಎಂದು ಬಾಲಕನ ತಂದೆ ಬಿಶ್ವಜಿತ್ ಸಾಹು ಹೇಳಿದ್ದಾರೆ. ತನ್ನ ಅಂಗಾಂಗಗಳ ಮೂಲಕ ಅನೇಕರ ಜೀವ ಉಳಿಸಿದ ನನ್ನ ಧೈರ್ಯವಂತ ಮಗನ ಬಗ್ಗೆ ಹೆಮ್ಮೆ ಇದೆ ಎಂದು ಮಗನ ಅಗಲಿಕೆಯ ನೋವಿನಲ್ಲೂ ಬಿಶ್ವಜಿತ್ ಹೇಳಿದ್ದಾರೆ. 

'ಸರ್ಕಾರಿ ಗೌರವದೊಂದಿಗೆ ಅಂಗಾಂಗ ದಾನ ಮಾಡಿದವರ ಅಂತ್ಯಸಂಸ್ಕಾರ..' ಒಡಿಶಾ ಸಿಎಂ ನವೀನ್‌ ಪಟ್ನಾಯಕ್‌ ಘೋಷಣೆ!

ಆತನ ವಯಸ್ಸು 8 ವರ್ಷವಾದರೂ 80 ವರ್ಷವಾದವರೂ ಮಾಡಲಾಗದಂತಹ ಶ್ರೇಷ್ಠವಾದ ಕಾರ್ಯವನ್ನು ಮಾಡಿದ್ದಾನೆ. ಅಂಗಾಂಗ ದಾನದ ಮೂಲಕ ನಮ್ಮ ಮಗ ಬೇರೆಯವರ ದೇಹದಲ್ಲಿ ಜೀವಂತವಾಗಿದ್ದಾನೆ ಎಂದು ಭಾವಿಸುವ ಮೂಲಕ ನಾವು ನಮ್ಮನ್ನು ಸಮಾಧಾನಿಸಿಕೊಳ್ಳುತ್ತಿದ್ದೇವೆ ಎಂದು ಬಾಲಕನ ತಾಯಿ ಶುಭಶ್ರೀ ಹೇಳಿದ್ದಾರೆ. ಒಡಿಶಾ ಸರ್ಕಾರವು ಇತ್ತೀಚೆಗೆ ಅಂಗಾಂಗ ದಾನಕ್ಕೆ ಪ್ರೋತ್ಸಾಹ ನೀಡುವ ಸಲುವಾಗಿ ಸಕಲ ಸರ್ಕಾರಿ ಗೌರವದ ಅಂತ್ಯಸಂಸ್ಕಾರ ನಡೆಸಲು ಕಾನೂನು ತಂದಿದೆ. ಅಂಗಾಂಗ ದಾನಿಗಳ ಅಂತಿಮ ಸಂಸ್ಕಾರವನ್ನು ಸಂಪೂರ್ಣ ಸರ್ಕಾರಿ ಗೌರವಗಳೊಂದಿಗೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಕಳೆದ ತಿಂಗಳು ಘೋಷಿಸಿದ್ದರು. ಅದರಂತೆ ರಾಜ್ಯ ಸರ್ಕಾರ ಈಗ ಬಾಲಕನಿಗೆ ಸರ್ಕಾರಿ ಗೌರವದ ಮೂಲಕ ನಮನ ಸಲ್ಲಿಸಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. 

ಬೆಂಗಳೂರು: ಮೆದುಳು ನಿಷ್ಕ್ರಿಯಗೊಂಡಿದ್ದ ಮಗನ ಅಂಗಾಂಗ ದಾನ ಮಾಡಿದ ಪೋಷಕರು

click me!